ಡಿಸೆಂಬರ್ 25ರಂದು ಅಕ್ಷಯ ಬ್ರಾಹ್ಮಣರ ಮಹಾಸಂಘದ ನಾಲ್ಕನೇ ವಾರ್ಷಿಕೋತ್ಸವ
ಬೆಂಗಳೂರು: ಅಕ್ಷಯ ಬ್ರಾಹ್ಮಣರ ಮಹಾಸಂಘದ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮವು ಡಿಸೆಂಬರ್ 25ರಂದು, ನಗರದ ಯಶವಂತಪುರದ ತ್ರಿವೇಣಿರಸ್ತೆಯಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ವಾರ್ತಾ ಮತ್ತು ಮಾಧ್ಯಮ ಉಸ್ತುವಾರಿ ಡಾ|| ಅಂಬರೀಶ್ ಜಿ. ತಿಳಿಸಿದ್ದಾರೆ.ಅಂದು ಬೆಳಿಗ್ಗೆ 9.30ಕ್ಕೆ ಪ್ರಾರ್ಥನೆ, ವೇದಘೋಷ, ಗೀತಾ ಜಯಂತಿಯ ಪ್ರಯುಕ್ತ ಗೀತಾ ಪಠಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭವಾಗಲಿದೆ. ಇದಕ್ಕೂ ಮುಂಚಿತವಾಗಿ ಬೆಳಿಗ್ಗೆ 6.30ಕ್ಕೆ ಸಂಘದ ಆಡಳಿತ ಮಂಡಳಿ ಸದಸ್ಯರಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಸಭಾ ಕಾರ್ಯಕ್ರಮ ಬೆಳಿಗ್ಗೆ 11.30ಕ್ಕೆ ಆರಂಭವಾಗಲಿದೆ. ನಾಡಗೀತೆ, ದೀಪ ಪ್ರಜ್ವಲನೆ, ಸ್ವಾಗತ ಭಾಷಣ, ಸಂಘದ ವರದಿ, ಅಥರ್ವಣವೇದ ಸಾಧಕರ ಸನ್ಮಾನ, ಮುಖ್ಯ ಅತಿಥಿಗಳ ಭಾಷಣ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಧ್ಯಕ್ಷರ ಭಾಷಣ, ವಂದನಾರ್ಪಣೆ ಕಾರ್ಯಕ್ರಮಗಳು ಇರಲಿದೆ ಎಂದು ತಿಳಿಸಿದ್ದಾರೆ.
ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ವೇ. ಬ್ರಂ. ಶ್ರೀ. ರಾಘವೇಂದ್ರ ಭಟ್, ಅಥರ್ವಣವೇದ ವಿದ್ವಾಂಸರು, ಬೆಂಗಳೂರು. ಇವರಿಗೆ ಗೌರವಾರ್ಪಣೆ ನಡೆಲಿದೆ. ಈ ಸಂದರ್ಭದಲ್ಲಿ ಗಣ್ಯರಾದ ವೇ ಬ್ರಂ ಶ್ರೀ ಡಾ ಭಾನುಪ್ರಕಾಶ್ ಶರ್ಮರವರು, ವೇದ ವಿದ್ವಾಂಸರು, ಶಾಶ್ವತಿ ಕೇಂದ್ರ, ಶ್ರೀರಂಗಪಟ್ಟಣ, ನಿರ್ದೇಶಕರು, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ವೇ. ಬ್ರಂ. ಶ್ರೀ ಗಣೇಶ್ ದೀಕ್ಷಿತ್ರವರು, ಸಂಘದ ಗೌರವಾಧ್ಯಕ್ಷರು, ವೇದ ವಿದ್ವಾಂಸರು ಸ್ಥಾಪಕರು ಸುವ್ಯಕ್ತಸಭಾ, ಯಶವಂತಪುರ, ಬೆಂಗಳೂರು. ಕೆ.ಎಸ್. ಸಚ್ಚಿದಾನಂದ ಮೂರ್ತಿಯವರು, ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಬೆಂಗಳೂರು. ಪ್ರಕಾಶ್ ಅಯ್ಯಂಗಾರ್ರವರು, ಅಧ್ಯಕ್ಷರು, ಮಲ್ಲೇಶ್ವರಂ ಬ್ರಾಹ್ಮಣ ಸಭಾ, ಬೆಂಗಳೂರು. ಎಸ್. ರಘುನಾಥ್, ಅಧ್ಯಕ್ಷರು, ವಿಶ್ವ ವಿಪ್ರ ವೃಂದ, ಬೆಂಗಳೂರು. ಆನೂಪ್ ಅಯ್ಯಂಗಾರ್ರವರು, ಯುವ ಸಮಾಜ ಸೇವಕರು, ಬೆಂಗಳೂರು ಇವರು ಉಪಸ್ಥಿತರುವರು.
ವಿಶೇಷ ಆಹ್ವಾನಿತರಾಗಿ ಸಂಘದ ಪ್ರಪ್ರಥಮ ಮಹಾ ಪೋಷಕರಾದ ಶ್ರೀಮತಿ ಮಹಾಲಕ್ಷ್ಮಿ ಭಾಗವಹಿಸಲಿದ್ದಾರೆ ಹಾಗೂ ಗೀತಾ ಪಠಣದ ಮೇಲ್ವಿಚಾರಣೆಯನ್ನು ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿ ನಾಗೇಶ್ವರ ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅಕ್ಷಯ ಬ್ರಾಹ್ಮಣರ ಮಹಾಸಂಘದ ಅಧ್ಯಕ್ಷರಾದ ಕೆ.ಎಸ್. ಶ್ರೀಕಂಠಪ್ರಸಾದ್, ಸಂಘಟನಾ ಕಾರ್ಯದರ್ಶಿ ರಮೇಶ್ ಬಾಬು ಸೇರಿದಂತೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಯುವ ಸಮಿತಿ ಸದಸ್ಯರುಗಳು ಭಾಗವಹಿಸಲಿದ್ದಾರೆ.
ಸಂಘದ ಸಾಧನೆ
ದಕ್ಷಿಣಾಮ್ನಾಯ ಶೃಂಗೇರಿ ಪೀಠದ ಮಹಾಸನ್ನಿಧಾನ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ಸನ್ನಿಧಾನ ಶ್ರೀ ಶ್ರೀ ವಿದುಶೇಖರ ಭಾರತೀ ತೀರ್ಥ ಸ್ವಾಮಿಗಳ ಕೃಪಾಶೀರ್ವಾದ ಮತ್ತು ಸಾನ್ನಿಧ್ಯದಲ್ಲಿ ಅನಾವರಣಗೊಂಡು ಪ್ರಾರಂಭಗೊಂಡ ಅಕ್ಷಯ ಬ್ರಾಹ್ಮಣರ ಮಹಾಸಂಘ ಕಳೆದ ನಾಲ್ಕು ವರ್ಷಗಳಿಂದ ಸನಾತನ ಧರ್ಮದ ಉಳಿವಿಗಾಗಿ, ಬ್ರಾಹ್ಮಣರ ಸಂಘಟನೆ, ಅಭಿವೃದ್ಧಿಗಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.
ಸಂಘವು ಅನೇಕ ಬಡ ಬ್ರಾಹ್ಮಣ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಗ್ರಿಗಳು, ಮಾತ್ರೆ ಔಷಧಿಗಳಿಗೆ ಧನ ಸಹಾಯವನ್ನು ಮಾಡಿದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಮತ್ತು ವಿದ್ಯಾಭ್ಯಾಸಕ್ಕೆ ಬೇಕಾದ ಸಾಮಗ್ರಿಗಳ ವಿತರಣೆ, ಕರ್ನಾಟಕ ರಾಜ್ಯೋತ್ಸವ ಆಚರಣೆ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ನೇತ್ರ ಚಿಕಿತ್ಸೆ, ಸಂಕ್ರಾಂತಿ ಸಂಭ್ರಮ, ಮಾಘಸ್ನಾನ, ನೂತನ ಸಂವತ್ಸರದ ಉಗಾಗಿ ಆಚರಣೆ, ಪಂಚಾಂಗ ಶ್ರವಣ, ಶಂಕರ ಜಯಂತಿ, ರಾಮಾನುಜ ಜಯಂತಿ, ಮಧ್ವ ನವಮಿ, ಶ್ರಾವಣ ಸಂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ನವರಾತ್ರಿ ಪೂಜೆ, ಮಹಾಶಿವರಾತ್ರಿ, ಉಪಾಕರ್ಮ, ಕಾರ್ತೀಕ ದೀಪೋತ್ಸವ, ಅಕ್ಷಯ ಕ್ರೀಡೋತ್ಸವ, ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ನಾಲ್ಕು ಬಡ ವಿಪ್ರ ಕುಟುಂಬಗಳಲ್ಲಿ ಮರಣ ಸಂಭವಿಸಿದ ಸಂದರ್ಭದಲ್ಲಿ ಅಂತ್ಯೇಷ್ಠಿ ಕಾರ್ಯಕ್ರಮದನ್ವಯ ಮೊದಲನೇ ದಿವಸದ ಎಲ್ಲಾ ವ್ಯವಸ್ಥೆಗಳನ್ನು ಸಂಘದ ವತಿಯಿಂದ ಉಚಿತವಾಗಿ ಮಾಡಿದ್ದಾರೆ. ಇದಲ್ಲದೇ ಪಿತೃಪಕ್ಷದಲ್ಲಿ ಪಿತೃತರ್ಪಣ ಕಾರ್ಯಕ್ರಮ, 16 ಹುಣ್ಣಿಮೆಯೆಂದು ನಿಗದಿಪಡಿಸಿದ ಮನೆಗಳಲ್ಲಿ ಸತ್ಯನಾರಾಯಣ ಪೂಜೆ ಹಾಗೂ 11 ತ್ರಯೋದಶಿಯಂದು ಪ್ರದೋಶ ಪೂಜೆಯನ್ನು ಈ ವರ್ಷ ನಡೆಸಿದ್ದಾರೆ. ಸರಕಾರದ ಸವಲತ್ತುಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯ ಮೂಲಕ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬದ ಅರ್ಜಿಯನ್ನು ಸರಕಾರಕ್ಕೆ ರವಾನಿಸಿ ಫಲಾನುಭವಿಗಳಿಗೆ ಸಹಾಯ ಹಸ್ತವನ್ನು ಚಾಚಿದೆ.
ಇವೆಲ್ಲಾ ಕಾರ್ಯಕ್ರಮಗಳ ನಡುವೆ ಅಕ್ಷಯ ಬ್ರಾಹ್ಮಣ ಮಹಾಸಂಘವು ತನ್ನ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ವಿಪ್ರಬಂಧುಗಳು ಆಗಮಿಸಬೇಕೆಂದು ಸಂಘವು ವಿನಂತಿಸಿಕೊಂಡಿದೆ.

0 Comments