Ticker

6/recent/ticker-posts

Ad Code

Responsive Advertisement

ಕಾಂಚನ ಆರ್. ನಾಡಗೌಡರ್ ರಂಗಪ್ರವೇಶ

ರಂಗಪ್ರವೇಶ ನೃತ್ಯ ಕಲಾವಿದರ ಜೀವನದಲ್ಲಿ ಚಿರಸ್ಮರಣೀಯ ರಸ ರೋಮಾಂಚದ ಪ್ರಮುಖ ಘಟ್ಟ. ತಾವು ಪಡೆದ ನೃತ್ಯ ತರಬೇತಿಯನ್ನು ತಮ್ಮ ನಾಟ್ಯ ಪ್ರತಿಭೆಯ ಮೂಲಕ ಕಲಾರಸಿಕರ ಮುಂದೆ ಪ್ರಸ್ತುತಪಡಿಸಲು ಒದಗುವ ಸದವಕಾಶ. ಇಂಥ ವೇದಿಕೆಯನ್ನು ವಿದ್ಯುಕ್ತವಾಗಿ ಪ್ರವೇಶಿಸುತ್ತಿರುವ ಉದಯೋನ್ಮುಖ ನೃತ್ಯ ಕಲಾವಿದೆ ಕಾಂಚನ ಆರ್. ನಾಡಗೌಡರ್. ಇವಳು  ಖ್ಯಾತ ‘ಶಿವಪ್ರಿಯ’ದ ಅಂತರರಾಷ್ಟ್ರೀಯ ನೃತ್ಯ ಕಲಾವಿದ ಹಾಗೂ ಗುರುಗಳಾದ ಡಾ. ಸಂಜಯ್ ಶಾಂತಾರಾಂ ಅವರಲ್ಲಿ ಬದ್ಧತೆಯಿಂದ ನೃತ್ಯಾಭ್ಯಾಸ ಮಾಡುತ್ತಿರುವ ಬಹುಮುಖ ಪ್ರತಿಭೆಯ ಉತ್ತಮ ಕಲಾವಿದೆ. ಕಾಂಚನಾ, ಇದೇ ತಿಂಗಳ 31 ಶನಿವಾರದಂದು ಸಂಜೆ 5.30 ಕ್ಕೆ ವಯ್ಯಾಲಿಕಾವಲ್ ನಲ್ಲಿರುವ  ಚೌಡಯ್ಯ ಮೆಮೋರಿಯಲ್ ಸಭಾಭವನದಲ್ಲಿ ತನ್ನ ಹೆಜ್ಜೆ-ಗೆಜ್ಜೆಯ ನಾದವನ್ನು ಅನುರಣಿಸಲಿದ್ದಾಳೆ.







 ಆಕೆಯ ರಮ್ಯ ಭರತನಾಟ್ಯ ಕಾರ್ಯಕ್ರಮವನ್ನು ವೀಕ್ಷಿಸಲು ಸರ್ವರಿಗೂ ಆದರದ ಸ್ವಾಗತ. 

ಬೆಳಗಾಂ ಜಿಲ್ಲೆಯ ರಾಮದುರ್ಗ ಮೂಲದ ಶ್ರೀ ರವೀಂದ್ರ ಎಂ.ಬಿ.ಎನ್. ಮತ್ತು ಶ್ರೀಮತಿ ಸಂಜನಾ ಎಂ. ಬೂದಿಹಾಳ್ ಅವರ ಪ್ರೀತಿಯ ಪುತ್ರಿ ಹದಿನಾಲ್ಕರ ಪ್ರತಿಭಾವಂತ ಬಾಲೆ ಕಾಂಚನಾ, ಶಿಕ್ಷಾ ನಿಕೇತನ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮೂರುವರ್ಷದ ಮಗುವಾಗಿದ್ದಾಗಲೇ ಕಾಂಚನಾ, ಸಂಗೀತದ ದನಿಗೆ ಹೆಜ್ಜೆ ಹಾಕುತ್ತಿದ್ದವಳು. ನೃತ್ಯದ ಬಗ್ಗೆ ಅವಳಿಗೆ ಅದಮ್ಯ ಒಲವು. ನಾಲ್ಕುವರ್ಷಕ್ಕೆ ವೇದಿಕೆ ಮೇಲೇರಿ ಜಾನಪದ ನೃತ್ಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದವಳು. ಮಗಳ ನೃತ್ಯದ ಒಲವು-ಆಸಕ್ತಿಗಳನ್ನು ಗುರುತಿಸಿದ ಹೆತ್ತವರು ಅವಳ ಆಸೆಗೆ ನೀರೆರೆದರು. ಬೆಳೆಯುವ ಪೈರು ಮೊಳಕೆಯಲ್ಲೇ ತನ್ನ ಲಕ್ಷಣ ತೋರುವಂತೆ, ಕಾಂಚನಾ, ‘ಶರ್ಮ ಇನ್ಸ್ಟಿಟ್ಯುಟ್ ಆಫ್ ಡಾನ್ಸ್ ಸಂಸ್ಥೆ’ಯಲ್ಲಿ ಮೂರುವರ್ಷಗಳ ಕಾಲ ಗಜೇಂದ್ರ ಶರ್ಮ ಅವರ ಮಾರ್ಗದರ್ಶನದಲ್ಲಿ ಬಹಳಷ್ಟು ಕಲಿತಳು. ಅನೇಕ ಕಾರ್ಯಕ್ರಮಗಳನ್ನೂ ನೀಡಿ ಮೆಚ್ಚುಗೆ ಗಳಿಸಿದಳು. ಮುಂದೆ-ಡಾ.ಸಂಜಯ್ ಶಾಂತಾರಾಂ ಅವರ ನುರಿತ ಗರಡಿಯಲ್ಲಿ ಭರತನಾಟ್ಯ ಕಲಿಯಲು ಸೇರ್ಪಡೆಯಾದಳು. 

ಮುಂದೆ- ‘ಶಿವಪ್ರಿಯ’ ವತಿಯಿಂದ ನಡೆಯುವ ಅನೇಕ ನೃತ್ಯೋತ್ಸವ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಕಾಂಚನಾಗೆ ಅವಕಾಶ ದೊರೆಯಿತು. ಅವಳು ಭಾಗವಹಿಸಿದ ಕಾರ್ಯಕ್ರಮಗಳೆಂದರೆ-ಮಹಾಭಾರತ, ನಾಟ್ಯ ಸಂಧ್ಯಾ, ಕೆಂಪೇಗೌಡ, ಅಪೂರ್ವ ಭಾರತಂ ಮುಂತಾದವು.

ಕಾಂಚನಾ ಉತ್ತಮ ನೃತ್ಯ ಕಲಾವಿದೆಯೊಡನೆ ತನ್ನ ಬಹುಮುಖ ಹವ್ಯಾಸಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾಳೆ-ಅದಕ್ಕಾಗಿ ಅನೇಕ ಬಹುಮಾನಗಳನ್ನೂ ಗೆದ್ದಿರುವುದು ಅವಳ ಅಗ್ಗಳಿಕೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯುತ್ತಿರುವ ಇವಳ ಇನ್ನಿತರ ಹವ್ಯಾಸಗಳೆಂದರೆ, ಈಜುವಿಕೆ, ಚಿತ್ರಕಲೆ, ಪೆನ್ಸಿಲ್ ಸ್ಕೆಚ್ ಮತ್ತು ಮಂಡಲ ಕಲೆಯಲ್ಲಿ ಬಹು ಆಸಕ್ತಿ. ಸತತ ನೃತ್ಯಾಭ್ಯಾಸದಲ್ಲಿ ತೊಡಗಿಕೊಂಡಿರುವ ಕಾಂಚನಾ, ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಕನಸನ್ನು ಹೊತ್ತಿದ್ದು, ಭವಿಷ್ಯದಲ್ಲಿ ವೆಟರ್ನರಿ ಮೆಡಿಕಲ್ ರಿಸರ್ಚರ್ ಆಗುವ ಹಂಬಲ ಹೊತ್ತಿದ್ದಾಳೆ. 

                         ವೈ.ಕೆ.ಸಂಧ್ಯಾ ಶರ್ಮ

Post a Comment

0 Comments

Ad Code

Responsive Advertisement