*ಅವಾಸ್ತವಿಕ ಮತ್ತು ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿರುವ ಆಯೋಗದ ವರದಿಯನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು :
ಪ್ರಕಾಶ್ ಕೆ. ರಾಠೋಡ್*
ಬೆಳಗಾವಿ : ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನ ಸೌಧದಲ್ಲಿ ಬುಧವಾರ ಬೆಳಿಗ್ಗೆ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ,ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿರುವ ಪ್ರಕಾಶ್ ಕೆ. ರಾಠೋಡ್ ಹಾಗೂ ಶಾಸಕರು ಮತ್ತು ಮಾಜಿ ಸಚಿವರಾಗಿರುವ ಪಿ.ಟಿ. ಪರಮೇಶ್ವರ್ ನಾಯ್ಕ್ ರವರುಗಳು... ಅವಾಸ್ತವಿಕ ಮತ್ತು ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿರುವ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸದೆ ಕೇಂದ್ರ ಸರ್ಕಾರಕ್ಕೆ ಏಕಮುಖವಾಗಿ ಶಿಫಾರಸ್ಸು ಮಾಡಲು ಹೊರಟಿರುವುದು ಖಂಡನೀಯ ಎಂಬ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ರಾಜ್ಯದ ಭೋವಿ, ಲಂಬಾಣಿ (ಬಂಜಾರ ಛಲವಾದಿ, ಅಲೆಮಾರಿ ಜಾತಿಗಳಾದ ಕೊರಚ, ಕೊರಮ, ಚನ್ನದಾಸ, ಕುಳುವ, ಬುಡಜಂಗಮ, ಸಿಳ್ಳೆಕ್ಯಾತಾಸ್, ದೊಂಬರು ಸೇರಿದಂತೆ ಪರಿಶಿಷ್ಟ ಸಮುದಾಯಗಳಿಗೆ ಸೇರಿದ ನಾವುಗಳು, ನಾ ಎ. ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಬಲವಾಗಿ ವಿರೋಧಿಸುವುದಾಗಿ,
ಡಾ. ಬಿ. ಆರ್. ಅಂಬೇಡ್ಕರ್ ರವರು ಭಾರತದ ಸಂವಿಧಾನದ ಅಡಿಯಲ್ಲಿ ನಮಗೆ ಕೊಟ್ಟ ಹಕ್ಕುಗಳೊಂದಿಗೆ ಸಮುದಾಯದ ಸಂಘಟನೆ, ಹಿತರಕ್ಷಣೆ ಜಾಗೃತಿ ಕಾರ್ಯಗಳಲ್ಲಿ ತೊಡಗಿಸಿಕೊಂಡು. ಮೀಸಲಾತಿಯ ಮೂಲಕ ನೀಡಿರುವ ಸಾಮಾಜಿಕ ನ್ಯಾಯ ಎಲ್ಲಾ ದಮನಿತ, ವಂಚಿತ ಜನ ಸಮುದಾಯಗಳಿಗೆ ತಲುವಲಿ ಎಂಬ ಸದಾಶಯ ನಮ್ಮದಾಗಿದ್ದು, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಸಮುದಾಯಗಳ ಒಗ್ಗಟ್ಟು ಮತ್ತು ಅಭಿವೃದ್ಧಿಗಾಗಿ ಸರ್ಕಾರಗಳು ಮತ್ತಮ್ಮ ಅಗತ್ಯ ಕಾರ್ಯಕ್ರಮ ರೂಪಿಸಲಿ ಎಂದು ಆಶಿಸುತ್ತೇವೆ.
ರಾಜ್ಯದ ಪರಿಶಿಷ್ಟ ಜಾತಿಗಳ ಸ್ಥಿತಿಗತಿ, ಸರ್ಕಾರಿ ಸೌಲಭ್ಯಗಳ ಹಂಚಿಕೆ ಮತ್ತು ವಿತರಣೆಯ ಅಧ್ಯಯನದ ಉದ್ದೇಶಕ್ಕಾಗಿ 2005 ರಲ್ಲಿ ಶ್ರೀಮಾನ್ ಎಸ್.ಎಂ.ಕೃಷ್ಣಾ ರವರು ಮುಖ್ಯಮಂತ್ರಿಗಳಾಗಿದ್ದಾಗ, ನ್ಯಾ. ಎ.ಜೆ. ಸದಾಶಿವರವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚನೆಯನ್ನು ಮಾಡಲಾಗಿತ್ತು. ಈ ರೀತಿಯಲ್ಲಿ ರಚಿಸಿದ ಆಯೋಗಕ್ಕೆ ತಿಂಗಳುಗಳವರೆಗೂ ಅಯೋಗಕ್ಕೆ ಮೂಲಭೂತ ಸೌಲಭ್ಯಗಳು, ಅಗತ್ಯ ಅನುದಾನವನ್ನು ರಾಜ್ಯ ಸರ್ಕಾರ, ಒದಗಿಸಿರಲಿಲ್ಲ. ಆದಾಗ್ಯೂ 2012 ರಲ್ಲಿ ಆಯೋಗವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.
ಪರಿಶಿಷ್ಟರ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕಿದ್ದ ಈ ಆಯೋಗವು ರಾಜ್ಯ ಸರ್ಕಾರಕ್ಕೆ, ಅಪೂರ್ಣವಾದ ವರದಿಯನ್ನು ಸಲ್ಲಿಸಿತು. ಸರ್ಕಾರಿ ಆದೇಶದ ಉದ್ದೇಶ ಮತ್ತು ಸಮುದಾಯಗಳ ನಿರೀಕ್ಷೆಯಂತೆ ಆಯೋಗ ಕಾರ್ಯನಿರ್ವಹಿಸಲಿಲ್ಲ. ಸೋರಿಕೆಯಾಗಿರುವ ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿನ ಕೆಲ ಅಂಶಗಳು ಮೀಸಲಾತಿಯ ಮೂಲ ಆಶಯಗಳಿಗೆ ವಿರುದ್ಧವಾಗಿವೆ ಎಂಬುದು ಸತ್ಯ. ಸದರಿ ಆಯೋಗದ ವರದಿಯಲ್ಲಿ ಪರಿಶಿಷ್ಟ ಸಮುದಾಯಗಳ ಬಗ್ಗೆ, ವ್ಯಾಖ್ಯಾನ, ವಸ್ತುಸ್ಥಿತಿ, ಗ್ರಹಿಕ ಸ್ಥಿತಿಗಳ ಅಂಕಿ-ಅಂಶಗಳು ಅಸ್ಪಷ್ಟತೆಯಿಂದ ಕೂಡಿವೆ.
ಕೆಲ ಮಾಹಿತಿಗಳು ಗೊಂದಲಮಯ ಹಾಗೂ ಸತ್ಯಕ್ಕೆ ದೂರವಾಗಿವೆ. ಸಾಮಾಜಿಕ ತಾರತಮ್ಯವನ್ನು ಕಡೆಗಣಿಸಿದಂತೆ ಪರಿಶಿಷ್ಯರ ಮೀಸಲಾತಿಗೆ ಕೆನೆಪದರ, ನೌಕರರು ಮತ್ತು ಅಧಿಕಾರಿಗಳ ಮಕ್ಕಳನ್ನು ಮೀಸಲಾತಿಯಿಂದ ಹೊರಗೆ ಇಡುವಂತೆ ಪುಸ್ತಾಪಿಸಿದೆ. ಈ ವರದಿಯಲ್ಲಿ ಕಾರ್ಯಸಾಧುವಲ್ಲದ, ಅಸಂವಿಧಾನ್ವಿಕ ಶಿಫಾರಸ್ಸುಗಳು ಸಹ ಇರುವುದರ ಜೊತೆಗೆ ಸಂವಿಧಾನದ 341 (2) ರಲ್ಲಿ ತಿದ್ದುಪಡಿ ತಂದು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಉಪ ಜಾತಿಗಳಲ್ಲಿ ಕೆಲವು ಉಪ ಜಾತಿಗಳನ್ನು ಕೈಬಿಡಬಹುದು ಎಂಬ ಆತಂಕವನ್ನು ಹುಟ್ಟು ಹಾಕಿದೆ. ಪರಿಶಿಷ್ಟರ ಅಭಿವೃದ್ಧಿಗಾಗಿ ಶಿಫಾರಸ್ಸುಗಳನ್ನು ನೀಡುವ ಬದಲಾಗಿ ಸಹೋದರ ಸಮುದಾಯಗಳ ಮಧ್ಯೆ ವೈಮನಸ್ಸು ಹೆಚ್ಚಾಗಲು ಅನಗತ್ಯ ಅಂಶಗಳನ್ನು ಚರ್ಚಿಸಿದ್ದು. ಈ ವರದಿಯಲ್ಲಿ ಕಂಡು ಬಂದಿದೆ. ಎಲ್ಲಾ ಪರಿಶಿಷ್ಟರ ಹಾಗೂ ದಮನಿತ ಸಮುದಾಯಗಳ ಐಕ್ಯತೆಯನ್ನು ಬಯಸುತ್ತೇವೆ.
1. ನ್ಯಾ. ಸದಾಶಿವ ಆಯೋಗದ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು. ಕೂಡಲೇ ಈ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು.
2: ನ್ಯಾ. ಸದಾಶಿವ ಆಯೋಗದ ವರದಿಯ ದೃಢೀಕೃತ ಪ್ರತಿಯನ್ನು 101 ಪರಿಶಿಷ್ಟ ಜಾತಿಗಳಿಗೆ, ಸಂಘಟನೆಗಳು ಮತ್ತು ಆಸಕ್ತರಿಗೆ ನೀಡಬೇಕು ಭಾದಿತ ಸಮುದಾಯಗಳ
ಅಭಿಪ್ರಾಯ, ಲಿಖಿತ ಆಕ್ಷೇಪಣೆ, ಸ್ವೀಕರಿಸಿ ಅಂತಹ ಸಮುದಾಯಗಳನ್ನು
ಸಂವಾದಗಳಿಗೆ ಆಹ್ವಾನಿಸಬೇಕು.
3. ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣದ ಕುರಿತು ಪರಿಶೀಲಿಸಿ ಸೂಕ್ತ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ಉಪಸಮಿತಿ ರಚನೆಯಾಗಿರುವುದು ಸ್ವಾಗತಾರ್ಹ. ಈ ಉಪಸಮಿತಿಯು ಪರಿಶಿಷ್ಟ ಜಾತಿ-ಪಂಗಡಗಳ ಶೈಕ್ಷಣಿಕ, ಔದ್ಯೋಗಿಕ ಮತ್ತಿತರ ಸ್ಥಿತಿಗತಿಗಳ ಅಧ್ಯಯನ ಮಾಡಲು ಅಗತ್ಯ ಪ್ರಸ್ತಾವನೆಯ ಮೂಲಕ ಪರಿಶಿಷ್ಟರ 101 ಜಾತಿಗಳ ಮನೆ ಮನೆ ಸಮೀಕ್ಷೆ, ಇಲಾಖಾವಾರು ಮಾಹಿತಿ, ಅವಲೋಕನದ ಮೂಲಕ ವಸ್ತುನಿಷ್ಠ ಅಧ್ಯಯನಕ್ಕೆ ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು, ಆ ಮೂಲಕ ಸಮಾಜದಲ್ಲಿ ನಿರ್ಲಕ್ಷಿತ ಜಾತಿ ಮತ್ತು ವ್ಯಕ್ತಿಗಳಿಗೆ ಸಮಾನ ಪ್ರಾತಿನಿಧ್ಯ ಹಾಗೂ ಅಗತ್ಯ ಅವಕಾಶಗಳು ಸಿಗುವಂತಾಗಲು ಶಿಫಾರಸ್ಸು, ಮಾಡಬೇಕು.
4. ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ (NCSC) ದಿಂದ 2020 ಸಾಲಿನಲ್ಲಿ ರಾಜ್ಯ ಸರ್ಕಾರಕ್ಕೆ ಬಂದಿರುವ ಪತ್ರಕ್ಕೆ ಉತ್ತರವಾಗಿ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಯಾವುದೇ ಜಾತಿಗಳನ್ನು ಕೈಬಿಡುವ ಪ್ರಸ್ತಾಪ ಕರ್ನಾಟಕ ಸರ್ಕಾರದ ಎದುರು ಇರುವುದಿಲ್ಲ ಎಂಬ ಖಚಿತವಾದ ನಿಲುವನ್ನು ರಾಷ್ಟ್ರೀಯ ಆಯೋಗಕ್ಕೆ ತಕ್ಷಣ ಕಳುಹಿಸಬೇಕು.
5. ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಸ್ಥಿತಿಯ ವಾಸ್ತವ ಅರಿಯುವಂತಾಗಲು ಜಾತಿವಾರು ಜನಗಣತಿ ಮಾಡಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಮಾನ್ಯ ಕಾಂತರಾಜುರವರು ಸಲ್ಲಿಸಿರುವ ವರದಿಯನ್ನು ಪ್ರಕಟಿಸಬೇಕು. ಆ ಮೂಲಕ ಪರಿಶಿಷ್ಟ ಸಮುದಾಯಗಳ ಹಿಂದುಳಿದಿರುವಿಕೆಯನ್ನು ಆಧರಿಸಿ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಬೇಕು.
6. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ನಕಲಿ ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.
7. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯನ್ನು ಹೆಚ್ಚಿಸಿ: ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಇದು ರಾಜ್ಯದಲ್ಲಿ ನೇಮಕಾತಿ, ಬಡ್ತಿ ಪ್ರಕ್ರಿಯೆಗಳಿಗೆ ಅನ್ವಯವಾಗುವಂತೆ ತಕ್ಷಣ ಕಾರ್ಯಕಾರಿ ಆದೇಶವನ್ನು ಹೊರಡಿಸಬೇಕು. ಸದರಿ ಮೀಸಲಾತಿ ಪ್ರಸ್ತಾವನೆಯನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಲು ಸರ್ಕಾರ ಈ ಕೂಡಲೇ ಕ್ರಮವಹಿಸಬೇಕು. ಈ ಮೀಸಲಾತಿಯ ಕೇವಲ ಚುನಾವಣೆಗಳಲ್ಲಿ ಮತಗಳನ್ನು ಸೆಳೆಯುವ ತಂತ್ರಗಾರಿಕೆಯಾಗಬಾರದು.ಇದು ನಮ್ಮ ಸಹೋದರ, ಸಮುದಾಯವನ್ನು ಅಣಕಿಸುವ, ಅವಮಾನಿಸುವ ಹೋರಾಟವಲ್ಲ, ನಮ್ಮ ಸಾಂವಿಧಾನಿಕ ಮೀಸಲಾತಿ ಹಕ್ಕುಗಳ ಸಂರಕ್ಷಣಾ ಹೋರಾಟ, ಸದಾಶಿವ ಆಯೋಗ ನೀಡಿರುವ ವರದಿಯನ್ನು ಸರ್ಕಾರ ತಿರಸ್ಕಾರ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸುತ್ತಿರುವುದಾಗಯೂ, ಜೊತೆಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರ ಪರಿಗಣಿಸದೆ ಹೀಗೆ ನಿರ್ಲಕ್ಷ್ಯ ತೋರುವುದನ್ನು ಮುಂದುವರೆಸಿದರೆ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಈ ವಿಚಾರ ಮುಳುವಾಗಿ ಪರಿಣಮಿಸಲಿದೆ ಎಂಬ ಎಚ್ಚರಿಕೆಯ ಸಂದೇಶವಿದು ಎಂದು ಇವರೀರ್ವ ನಾಯಕರುಗಳು ಈ ಪತ್ರಿಕಾ ಗೋಷ್ಠಿಯ ಮೂಲಕ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದರು.

0 Comments