Ticker

6/recent/ticker-posts

Ad Code

Responsive Advertisement

ಲಾಸ್ಯ-ಲಾಲಿತ್ಯ ಪ್ರಧಾನ ಸಂಜನಾ ಕೂಚಿಪುಡಿ ನರ್ತನ

ಕುಚಿಪುಡಿ ನೃತ್ಯಶೈಲಿ ವಿಶಿಷ್ಟ ಆಯಾಮಗಳನ್ನುಳ್ಳ ಲಾಸ್ಯಭರಿತ ಆಂಗಿಕ ಚಲನೆ-ಮನಮೋಹಕ ಭಂಗಿಗಳ ಆಗರ. ಕುಚಿಪುಡಿ ನೃತ್ಯವನ್ನು ಕಲಿಯುವವರು ಭರತನಾಟ್ಯಕ್ಕೆ ಹೋಲಿಸಿದರೆ ಕಡಿಮೆ ಸಂಖ್ಯೆಯಲ್ಲಿದ್ದರೂ ಅದು ರಮ್ಯಭರಿತ ನೃತ್ಯಶೈಲಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಭರತನಾಟ್ಯಕ್ಕೆ ಹೋಲಿಸಿದರೆ ಕುಚಿಪುಡಿ ನೃತ್ಯ ರಂಗಪ್ರವೇಶಗಳು ವಿರಳ ಎಂದೇ ಹೇಳಬಹುದು. ಈ ನಿಟ್ಟಿನಲ್ಲಿ ಭರತನಾಟ್ಯ ನೃತ್ಯಶೈಲಿ ಹೆಚ್ಚು ಜನಪ್ರಿಯ. 

ಶುದ್ಧ ಕುಚಿಪುಡಿ ಶೈಲಿಯ ಉಗಮಸ್ಥಳವಾದ ಕುಚಿಪುಡಿ ಗ್ರಾಮದಲ್ಲಿ ಅನೇಕ ಹಿರಿಯ-ನುರಿತ ಗುರುಗಳಿಂದ ನಾಟ್ಯ ಕಲಿತ ‘ಲಾಸ್ಯ ಲಹರಿ ಸಾಂಸ್ಕೃತಿಕ ಕಲಾಸಂಸ್ಥೆ’ಯ ನಿರ್ದೇಶಕಿಯಾದ ಅಂತರರಾಷ್ಟ್ರೀಯ ಖ್ಯಾತ ಕೂಚಿಪುಡಿ ನೃತ್ಯಕಲಾವಿದೆ-ಗುರು ರಾಜಶ್ರೀ ಹೊಳ್ಳ, ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಸ್ನಾತಕೋತ್ತರ ಪದವಿಯಲ್ಲಿ ಎರಡು ಸ್ವರ್ಣ ಪದಕಗಳನ್ನು ಗಳಿಸಿದ ಪ್ರತಿಭಾವಂತೆ. ಇಂಥ ಗುರುಗಳ ಮಾರ್ಗದರ್ಶನದಲ್ಲಿ ಅವರ ಶಿಷ್ಯೆಯಾದ ಸಂಜನಾ, ಇತ್ತೀಚಿಗೆ, ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಕೂಚಿಪುಡಿ ರಂಗಪ್ರವೇಶ ಅತ್ಯಂತ ವಿಶೇಷ ರೀತಿಯಲ್ಲಿ ಯಶಸ್ವಿಯಾಗಿ ನೆರವೇರಿತು. ಅಂದವಳು, ಸಾಂಪ್ರದಾಯಕ ಕೃತಿಗಳನ್ನು ಅಂಗಶುದ್ಧ ನರ್ತನದ ಸೌಂದರ್ಯದಿಂದ ಸಾಕ್ಷಾತ್ಕರಿಸಿದಳು. ಭಾವಪೂರಿತ ಅಭಿನಯದ ಹಲವು ಕೃತಿಗಳನ್ನು ಸೊಗಸಾಗಿ ನಿರೂಪಿಸಿ ತನ್ನ ಮನೋಜ್ಞ ಭಂಗಿಗಳಿಂದ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದಳು. 

ರಂಗದ ಮೇಲೆ ಧೀಮಂತವಾಗಿ ಪ್ರವೇಶಿಸಿದ ಸಂಜನಾ, ಶುಭಾರಂಭಕ್ಕೆ ಸಾಂಪ್ರದಾಯಕ ಕೃತಿ- ನಾಟ್ಯಾಧಿಪತಿ ನಟರಾಜನಿಗೆ ಭಕ್ತಿಪೂರ್ವಕವಾಗಿ ಸ್ತುತಿಸುತ್ತ, ನಟುವಾಂಗದ ಜತಿಗಳೊಂದಿಗೆ ಆಕರ್ಷಕ ಅಡವುಗಳನ್ನು ಹೆಣೆಯುತ್ತ, ರಂಗದ ತುಂಬಾ ತನ್ನ ಮಿಂಚಿನ ಸಂಚಾರದ ಹೆಜ್ಜೆಗಳ ಝೇಂಕಾರವನ್ನು ಪಸರಿಸಿದಳು. ಗುರು ರಾಜಶ್ರೀ ಅವರ ಮಧುರ ಕಂಠದ ಲಯಬದ್ಧ ನಟುವಾಂಗದ ಅಲೆಗೆ ಕಲಾವಿದೆ ಅನುಗುಣವಾಗಿ ಪಾದಭೇದದ ಸುಂದರ ನೃತ್ತಗಳನ್ನು ಪರಿಣಾಮಕಾರಿಯಾಗಿ ನಿರೂಪಿಸಿದಳು. ಪ್ರಥಮ ಪ್ರವೇಶದಲ್ಲಿಯೇ ಕಲಾವಿದೆ ತನ್ನ ಅಂಗಶುದ್ಧ ನೃತ್ತ ಪ್ರಾವೀಣ್ಯದ ಸೊಗಡನ್ನು ತೋರಿದಳು. ಬಾಗು-ಬಳುಕುಗಳೊಂದಿಗೆ ಜಾರಡವು, ಲಾಸ್ಯಭರಿತ ನಡೆ, ವಯ್ಯಾರದ ಚಲನೆಗಳು ಸುಮನೋಹರ ಭಂಗಿಗಳು ಕಣ್ಮನ ತುಂಬಿದವು. ಬಾಯಲ್ಲಿ ಕೃತಿಯ ಸಾಲುಗಳನ್ನು ಹಾಡಿಕೊಳ್ಳುತ್ತ ಅಭಿನಯಿಸುವ ಕುಚಿಪುಡಿ ಶೈಲಿಯ ಧಾಟಿ ಅಪ್ಯಾಯಮಾನವೆನಿಸಿತು. ರಂಗಾಕ್ರಮಣದ ಸೊಗಸು, ಸೊಂಟದ ಮೇಲೆ ಕೈಯಿಟ್ಟುಕೊಂಡು ನಿಷ್ಕ್ರಮಿಸುವ ಪರಿ ನಯನ ಮನೋಹರ.  

ಅನಂತರ-ಸಂಜನಾ, ‘ರಾಮಾಯಣ ಶಬ್ದ’ವನ್ನು ಕಣ್ಣಿಗೆ ಕಟ್ಟುವಂತೆ ನಾಟಕೀಯ ಆಯಾಮಗಳಿಂದ ವಿವಿಧ ಸಂಚಾರಿಗಳ ಮೂಲಕ ಕಟ್ಟಿಕೊಟ್ಟಳು. ಶ್ರೀರಾಮನ ಜನನದಿಂದ ಆರಂಭವಾದ ಕಥಾಸಲಿಲ ಪಟ್ಟಾಭಿಷೇಕದವರೆಗೂ ಲವಲವಿಕೆಯಿಂದ ಸಂಪೂರ್ಣ ರಾಮಾಯಣದ ಚಿತ್ರಣವನ್ನು ಸಂಕ್ಷಿಪ್ತವಾಗಿ ನೀಡಿತು. ಹದವಾದ ಅಂಗಸೌಷ್ಟವವುಳ್ಳ ಸುಂದರ ರೂಪಿನ ಕಲಾವಿದೆ, ಚೈತನ್ಯ ಚಿಮ್ಮುವ ವೇಗವನ್ನು ಕರಗತ ಮಾಡಿಕೊಂಡು, ಮೋಹಕಭಾವದಲ್ಲಿ ನರ್ತಿಸಿದ್ದು ಅತ್ಯಂತ ವಿಶೇಷವಾಗಿತ್ತು. ರಾಜಶ್ರೀ ಅವರ ಸ್ಫುಟವಾದ ನಟುವಾಂಗದ ಭೋರ್ಗರೆತದ ಓಘ ಕೇಳಲೇ ಅತಿ ಚೆಂದ. 

ಕೂಚಿಪುಡಿ ಪಾರಂಪರಿಕ ಬಂಧ ‘ತರಂಗ’ ವೀಕ್ಷಿಸಲು ಕುತೂಹಲಕರ ಮತ್ತು ಅಷ್ಟೇ ವಿಸ್ಮಯಕಾರಕ. ಬಾಲಕೃಷ್ಣನ ಗೋಕುಲದ ಆಟಗಳು, ವಿನೋದಾವಳಿ, ಬಾಲಲೀಲೆಗಳಿಂದ ಆರಂಭವಾಗಿ ಯುವಕೃಷ್ಣ  ಗೋಪಿಕೆಯರ ವಸ್ತ್ರಾಪಹರಣ ಮಾಡಿ ಅವರನ್ನು ಗೋಳುಹೊಯ್ದುಕೊಳ್ಳುವ ರಸಮಯ ಕ್ಷಣಗಳು ಮುದ್ದು ಕೃಷ್ಣನ ಸುಮನೋಹರ ವೈವಿಧ್ಯಪೂರ್ಣವಾದ ವ್ಯಕ್ತಿತ್ವದ ಆಯಾಮವನ್ನು ಪ್ರದರ್ಶಿಸಿತು. ‘ಗೋವರ್ಧನ ಗಿರಿಧಾರ’ನನ್ನು ಸಾಕ್ಷಾತ್ಕರಿಸಿದ ಸಂಜನಾ, ತನ್ನ ರಮ್ಯಾಭಿನಯದೊಂದಿಗೆ ಮುದನೀಡಿ, ಹಿತ್ತಾಳೆಯ ಪರಾತದ ಅಂಚಿನ ಮೇಲೆ ನಿಂತು, ಹಲವಾರು ಲಯಪ್ರದವಾದ ನೃತ್ತ-ವಿನ್ಯಾಸಗಳನ್ನು ಕಲಾಕೌಶಲವನ್ನು ರೋಮಾಂಚಕಾರಿಯಾಗಿ ಪ್ರದರ್ಶಿಸಿದಳು.

ಮುಂದೆ- ಶ್ರೀ ಶಂಕರಾಚಾರ್ಯರು ರಚಿಸಿದ ‘ಅಳಗಿರಿ ನಂದಿನಿ...’ ( ನೃ. ಸಂ. ರಾಜಶ್ರೀ ಹೊಳ್ಳ) ದೇವೀಸ್ತುತಿಯನ್ನು ಸಂಜನಾ, ಶರನ್ನವರಾತ್ರಿಯ ಪ್ರಶಸ್ತ ಸಂದರ್ಭದಲ್ಲಿ ಶೋಭಾಯಮಾನವಾಗಿ ಪ್ರಸ್ತುತಿಗೊಳಿಸಿದಳು. ಮಹಿಷಾಸುರ ಮರ್ಧಿನಿಯ ಕಥಾಚಿತ್ರಣವನ್ನು ಸಾಕ್ಷಾತ್ಕರಿಸಿ, ತನ್ನ ವೀರಾವೇಶದ ಪ್ರಭಾವಶಾಲಿ ಅಭಿನಯದೊಂದಿಗೆ ತೇಜಃಪುಂಜವಾಗಿ ಕಂಗೊಳಿಸಿದಳು. ಕಲಾವಿದೆಯ ರೌದ್ರಾವೇಶದ ಭಾವಾಭಿನಯ, ಮಂಡಿ ಅಡವುಗಳು, ಬೆರಗುಗೊಳಿಸಿದ ಜತಿಗಳ ಜೋಷ್ ಕಣ್ಮನ ತುಂಬಿದವು ಎಂದರೆ ಅತಿಶಯೋಕ್ತಿಯಲ್ಲ. 

ಅನಂತರ- ಉಷಾ ಪರಿಣಯ ಪ್ರಸಂಗದ ‘ಪ್ರವೇಶಧರು’ವು -ಮೋಹಕ ಭ್ರಮರಿಗಳು, ಆಕಾಶಚಾರಿಗಳ ರಮ್ಯತೆ, ನಿರಾಯಾಸದ ನಗುಮೊಗದ ಹಸ್ತಮುದ್ರೆ-ಚಲನೆಗಳ ಲಾಲಿತ್ಯದಲ್ಲಿ ಕೊಂಡೊಯ್ದಿತು. ಲಯಪ್ರಧಾನ ನೃತ್ತಬಂಧ ‘ತಿಲ್ಲಾನ’ -ಶೊಲ್ಲುಕಟ್ಟುಗಳ ಸೌಂದರ್ಯ- ಮಿಂಚಿನ ಗೊಂಚಲ ನೃತ್ತಧಾರೆಯಿಂದ ಸಂತಸ-ಸಂಭ್ರಮವನ್ನು ಚೆಲ್ಲುತ್ತ ಮನತಣಿಸಿತು. 

                                  ವೈ.ಕೆ.ಸಂಧ್ಯಾ ಶರ್ಮ

Post a Comment

0 Comments

Ad Code

Responsive Advertisement