ಮಾನ್ಯರೇ,
ಕಾಲಗರ್ಭದಲ್ಲಿ ಲೀನವಾದ ತಬಸ್ಸುಮ್
ಹಲವಾರು ಹಿಂದಿ ಕ್ಲಾಸಿಕ್‌ಗಳಲ್ಲಿ ಬಾಲ ಕಲಾವಿದೆಯಾಗಿ ಮತ್ತು ಜನಪ್ರಿಯ ದೂರದರ್ಶನ ಟಾಕ್ ಶೋ "ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್" ನಿರೂಪಕಿಯಾಗಿ ಹೆಸರುವಾಸಿಯಾದ ಹಿರಿಯ ನಟಿ ತಬಸ್ಸುಮ್ (78 ವರ್ಷ) ಇತ್ತೀಚಿಗೆ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದು ಅತೀವ ದುಃಖಕರ ಸಂಗತಿ.1944 ರಲ್ಲಿ ಮುಂಬೈನಲ್ಲಿ ಅಯೋಧ್ಯಾನಾಥ್ ಸಚ್‌ದೇವ್ ಮತ್ತು ಅಸ್ಗರಿ ಬೇಗಂ ದಂಪತಿಗೆ ಜನಿಸಿದ ತಬಸ್ಸುಮ್ 1947 ರ ಚಲನಚಿತ್ರ "ನರ್ಗೀಸ್" ಮೂಲಕ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ಆ ಸಮಯದಲ್ಲಿ, ಇವರು ಉದ್ಯಮದಲ್ಲಿ 'ಬೇಬಿ ತಬಸ್ಸುಮ್' ಎಂದೇ ಪ್ರಖ್ಯಾತಿ ಹೊಂದಿದ್ದರು ಇವರು "ಮೇರಾ ಸುಹಾಗ್" (1947), "ಮಂಜಧರ್" (1947) , "ಬರಿ ಬೆಹೆನ್" (1949) ಮತ್ತು 1950 ರ ದಶಕದಲ್ಲಿ, "ಸರ್ಗಮ್", "ಸಂಗ್ರಾಮ್", "ದೀದರ್" ಮತ್ತು "ಬೈಜು ಬಾವ್ರಾ" ಮುಂತಾದ ಅನೇಕ ಜನಪ್ರಿಯ ಚಲನಚಿತ್ರಗಳಲ್ಲಿ ನಟಿಸಿದ್ದರು.ಪೃಥ್ವಿರಾಜ್ ಕಪೂರ್, ದಿಲೀಪ್ ಕುಮಾರ್ ಮತ್ತು ಮಧುಬಾಲಾ ನಟಿಸಿದ 1960 ರ ಐತಿಹಾಸಿಕ ಮಹಾಕಾವ್ಯ "ಮೊಘಲ್-ಎ-ಆಜಮ್" ನಲ್ಲಿ ಸಣ್ಣ ಪಾತ್ರ ಒಂದು ಇವರಿಗೆ ಅತೀ ಜನಪ್ರಿಯತೆ ತಂದುಕೊಟ್ಟಿತು.ಇನ್ನೂ ಕೆಲವು ಚಲನಚಿತ್ರಗಳ ನಂತರ, ತಬಸ್ಸುಮ್
"ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್" ಎಂಬ ದೂರದರ್ಶನದ ಜನಪ್ರಿಯ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸವನ್ನು ವಹಿಸಿಕೊಂಡರು, ಇದು ಭಾರತೀಯ ದೂರದರ್ಶನದ ಮೊದಲ ಟಾಕ್ ಶೋ ಆಗಿತ್ತು.1972 ರಿಂದ 1993 ರವರೆಗೆ ಇವರ ಈ ಕಾರ್ಯಕ್ರಮ ಇಪ್ಪತ್ತೊಂದು ವರ್ಷಗಳ ಕಾಲ
ನಿರಂತರ ಪ್ರದರ್ಶನವನ್ನು ಪಡೆದು ವಿಶ್ವವಿಖ್ಯಾತಿ ಹೊಂದಿತು.ಈ ಕಾರ್ಯಕ್ರಮದಲ್ಲಿ ತಬಸ್ಸುಮ್ ಬಹುತೇಕ ಬಾಲಿವುಡ್ ನ ಎಲ್ಲಾ ನಟ ನಟಿಯರನ್ನು ಸಂದರ್ಶಿಸಿದದು ಒಂದು ಇತಿಹಾಸವೇ ಸರಿ.
"ಫೂಲ್ ಖಿಲೆ ಹೇ ಗುಲ್ಶನ್ ಗುಲ್ಶನ್" ನ ನಿರೂಪಕಿಯಾಗಿದ್ದಾಗ, ತಬಸ್ಸುಮ್ ಕೆಲವೊಮ್ಮೆ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ಮುಂದುವರೆಸಿದರು. ಇವರು 1985 ರ "ತುಮ್ ಪರ್ ಹಮ್ ಕುರ್ಬಾನ್" ಎಂಬ ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಇವರ ಕೊನೆಯ ಚಿತ್ರ ರಾಜೇಶ್ ಖನ್ನಾ ಮತ್ತು ಗೋವಿಂದ-ನಟಿಸಿದ "ಸ್ವರ್ಗ" 1990 ರಲ್ಲಿ ತೆರೆಕಂಡ ಚಿತ್ರ.ಇದರಲ್ಲಿ ಇವರು ಅತಿಥಿ ಪಾತ್ರವನ್ನು ಮಾಡಿದ್ದರು.2000 ರ ದಶಕದಲ್ಲಿ, ಇವರು ದೈನಂದಿನ ಸೀರಿಯಲ್ ಆದ "ಪ್ಯಾರ್ ಕೆ ದೋ ನಾಮ್: ಏಕ್ ರಾಧಾ, ಏಕ್ ಶ್ಯಾಮ್" ನಲ್ಲಿ ಕಾಣಿಸಿಕೊಂಡರು.ಬದಲಾಗುತ್ತಿರುವ ಪ್ರಪಂಚದೊಂದಿಗೆ ಮುಂದುವರಿಯುತ್ತಾ, ಇವರು ಯೂಟ್ಯೂಬ್‌ನಲ್ಲಿ ತಮ್ಮದೇ ಆದ ಚಾನೆಲ್ ಅನ್ನು ಪ್ರಾರಂಭಿಸಿದರು, "ತಬಸ್ಸುಮ್ ಟಾಕೀಸ್" ಎಂಬ ಯೂಟ್ಯೂಬ್ ಚಾನೆಲ್ ಕೋಟ್ಯಂತರ ಫಾಲೋವರ್ಸ್ ಹೊಂದಿದೆ.ಈ ಚಾನೆಲ್ ನಲ್ಲಿ ಇವರು ಹಿರಿಯ ನಟ ನಟಿಯರ ಜೀವನ ಹಾಗೂ ಹಿಂದಿನ ಕಾಲದ ಅನೇಕ ಸಿನಿಮಾಗಳ ಸ್ವಾರಸ್ಯಕರ ಘಟನೆಗಳು ಮನಮುಟ್ಟುವಂತೆ ಅಚ್ಚುಕಟ್ಟಾಗಿ ವಿವರಿಸಿದ್ದು ಗಮನಾರ್ಹ.2021 ರಲ್ಲಿ, ತಬಸ್ಸುಮ್
ಕೋವಿಡ್ ಸೋಂಕಿಗೆ ಒಳಗಾದ ನಂತರ ಇವರ ಆರೋಗ್ಯ ಕುಗ್ಗಿತ್ತು.ತಬಸ್ಸುಮ್ ಅವರ ಪತಿ ವಿಜಯ್ ಗೋವಿಲ್, (ಹಿರಿಯ ಟಿವಿ ತಾರೆ ಅರುಣ್ ಗೋವಿಲ್ ಅವರ ಹಿರಿಯ ಸಹೋದರ) ಮತ್ತು ಮಗ ಹೋಶಾಂಗ್ ಅವರನ್ನು ಅಗಲಿದ್ದಾರೆ.ತಬಸ್ಸುಮ್ ಅವರಂತಹ ಮಹಾನ್ ಕಲಾವಿದೆಯನ್ನು ಹಿಂದಿ ಚಲನಚಿತ್ರರಂಗ ಕಳೆದುಕೊಂಡಿದ್ದು ತುಂಬಲಾಗದ ನಷ್ಟವೇ ಸರಿ.
ಇವರು ಕಾಲಗರ್ಭದಲ್ಲಿ ಲೀನವಾದರೂ ಹಿಂದಿ ಚಲನಚಿತ್ರರಂಗ ರಸಿಕರ ಹೃದಯದಲಿ ಎಂದೆಂದಿಗೂ ಚಿರಸ್ಥಾಯಿ.
****************************** ************
ವಿಜಯಕುಮಾರ್ ಎಚ್.ಕೆ. ರಾಯಚೂರು
0 Comments