Ticker

6/recent/ticker-posts

Ad Code

Responsive Advertisement

"ಮಾತಾಪಿತರ ಜ್ಞಾನ ಸಾಗರದ ಪ್ರೀತಿಯ ಅಮೃತದಲ್ಲಿ ಮಿಂದೆದ್ದ ಪ್ರತಿಭಾನ್ವಿತ ಶ್ರೀ ಚರಿತಾಳ ಯಶಸ್ವಿ ರಂಗಪ್ರವೇಶ ಕಾರ್ಯಕ್ರಮ"


" ತಾಯಿ ಇದ್ದರೆ ಮಮಕಾರ, ಇಲ್ಲದಿದ್ದರೆ ಹಾ ಹಾ ಕಾರ "

" ಅಪ್ಪ ಇದ್ದರೆ ವಿಶ್ವಾಸ, ಇಲ್ಲದಿದ್ದರೆ ವನವಾಸ "

" ಅಮ್ಮನ ಮಡಿಲು, ಅಪ್ಪನ ಹೆಗಲು, ಸ್ವರ್ಗಕ್ಕೂ ಮಿಗಿಲು "

" ಅಮ್ಮನ ತುತ್ತು,, ಅಪ್ಪನ ಮುತ್ತು ಅಮೃತಕ್ಕೂ ಮಿಗಿಲು "

ಬುದ್ಧ ಹೇಳುತ್ತಾನೆ - ಪ್ರೀತಿ ಮತ್ತು ಶಾಂತಿ

ಏಕಲವ್ಯ ಹೇಳುತ್ತಾನೆ- ಗುರಿ

ಭೀಷ್ಮ ಹೇಳುತ್ತಾನೆ - ಪ್ರತಿಜ್ಞೆ

ದುರ್ಯೋಧನ ಹೇಳುತ್ತಾನೆ- ಹಠ ಮತ್ತು ಛಲ

ತಾಯಿ ತಂದೆ ಹೇಳುತ್ತಾರೆ - ಸತ್ಯ ಮತ್ತು ಜ್ಞಾನ


ಈ ಮೇಲೆ ಹೇಳಿದ ಎಲ್ಲಾ ನಾಣ್ನುಡಿಗಳು ಸತ್ಯವೆಂದು ಮತ್ತೊಮ್ಮೆ ತಿಳಿಯುವಂತೆ ಮಾಡಿದ ದಿನವೇ 14 ಅಕ್ಟೋಬರ್ 2022. ಮಕ್ಕಳ ಭವಿಷ್ಯ ಉಜ್ವಲವಾಗುವಂತೆ ಪ್ರತಿಯೊಬ್ಬ ಮಾತಾಪಿತರು ತಮ್ಮ ಶಕ್ತಿಮೀರಿ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ವಾಡಿಕೆತಮ್ಮ ಜೀವಿತಾವಧಿಯಲ್ಲಿ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂಬ ಸತ್ಯವನ್ನು ತಿಳಿಸುತ್ತಾ ಇನ್ನು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲು ಶಾಲೆ ಮತ್ತು ಮುಂತಾದ ವಿದ್ಯೆಗಳನ್ನು ಕಲಿಸುವ ಸಂಘ ಸಂಸ್ಥೆಗಳಲ್ಲಿ ತಮ್ಮ 
ಮಕ್ಕಳುಗಳನ್ನು ಸೇರಿಸಿ ವಿದ್ಯಾರ್ಜನೆ ಮಾಡಿಸುತ್ತಾ ಬಂದಿರುವುದು ನಮ್ಮ ಪುರಾತನ ಸಂಸ್ಕೃತಿ.

ಈ ದಿಕ್ಕಿನಲ್ಲಿ ನಮ್ಮ ನಾಡು ಕಂಡ ಪ್ರತಿಭಾವಂತ ನೃತ್ಯ ಯುವ ದಂಪತಿಗಳಾದ ವಿದ್ವಾನ್ ಶ್ರೀ ಚೇತನ್ ಗಂಗಟ್ಕಾರ್ ಮತ್ತು ವಿದುಷಿ ಶ್ರೀಮತಿ ಚಂದ್ರಪ್ರಭ ಸ್ವತಹ ಭರತನಾಟ್ಯ ಹಾಗೂ ಕುಚುಪುಡಿ ನೃತ್ಯ ಕಲಾವಿದರಾಗಿದ್ದುಇವರ ಏಕೈಕ ಪುತ್ರಿಯಾದ ಕುಮಾರಿ ಶ್ರೀಚರಿತ ಇವಳಿಗೆ ತಮಗೆ ತಿಳಿದ ಮಟ್ಟಿಗೆ ಎಷ್ಟು ವಿದ್ಯೆಗಳಲ್ಲಿ ಅವಳಿಗೆ ತರಬೇತಿಯನ್ನು ಕೊಡಬಹುದೋಕೊಡಿಸಬಹುದು ಎರಡು ಕಾರ್ಯಗಳನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿ ಯಶಸ್ವಿಯಾಗಿದ್ದಾರೆ.

ಎಷ್ಟೋ ಬಾರಿ ತಂದೆ ತಾಯಿಗಳು ಮಕ್ಕಳಿಗೆ ಸಕಲಕಲಾವಲ್ಲಭರನ್ನಾಗಿ ಮಾಡಬೇಕೆಂಬ ಆಸೆ ಇದ್ದರೂ ಅಂತಹ ಮಕ್ಕಳು ದೊರಕುವುದು ದುರ್ಲಭಅದೇ ರೀತಿ ಎಷ್ಟೋ ಮಕ್ಕಳಿಗೆ ಎಲ್ಲ ವಿದ್ಯೆಗಳನ್ನು ತಿಳಿದುಕೊಳ್ಳಬೇಕೆಂಬ ಹಂಬಲವಿದ್ದರೂ ಅವುಗಳನ್ನ ಕೊಡಿಸಿ ಪೋಷಿಸುವ ತಂದೆ ತಾಯಿಗಳು ಕೂಡ ಬಹಳ ವಿರಳಆದರೆ ಇಲ್ಲಿ ಅದೃಷ್ಟವಶಾತ್ ತಂದೆ ತಾಯಿಗಳಿಗೆ ಮಗಳು ಪೂರಕಮಗಳಿಗೆ ತಂದೆ-ತಾಯಿಗಳು ಪೂರಕಇದನ್ನು ಇಬ್ಬರು ಸಂಪೂರ್ಣವಾಗಿ ಸದುಪಯೋಗ ಮಾಡಿಕೊಂಡು ಅದನ್ನು ಸಾರ್ವಜನಿಕವಾಗಿ ತಿಳಿಸಲು ಭರತನಾಟ್ಯರಂಗ ಪ್ರವೇಶ ಕಾರ್ಯಕ್ರಮವನ್ನು ಬೆಂಗಳೂರಿನ ಹೆಸರಾಂತ ರಂಗ ಮಂದಿರಗಳಲ್ಲಿ ಒಂದಾದ ಎ ಡಿ ಎ ರಂಗಮಂದಿರದಲ್ಲಿ ದಿನಾಂಕ 14 ಅಕ್ಟೋಬರ್ 2022 ರಂದು ನಾಟ್ಯ ನಿನಾದ ನೃತ್ಯಾಲಯ ಏರ್ಪಡಿಸಿ ರಂಗ ಪ್ರವೇಶ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.



ಅಂದಿನ ಕಾರ್ಯಕ್ರಮಕ್ಕೆ ಶುಭ ಕೋರಲು ಆಗಮಿಸಿದ್ದ ಹಿರಿಯ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ಶ್ರೀಮತಿ ವಿದುಷಿ ಮಂಜುಳಾ ಪರಮೇಶ್ವರ್, ಕರ್ನಾಟಕ ಕಲಾಶ್ರೀ ಡಾ. ಶ್ರೀಮತಿ ಸುಪರ್ಣ ವೆಂಕಟೇಶ್, ಕರ್ನಾಟಕ ಕಲಾಶ್ರೀ ಹಾಗೂ ಪ್ರಾಧ್ಯಾಪಕರು ನೃತ್ಯ ವಿಭಾಗದ ಮುಖ್ಯಸ್ಥರು ಆದ ಡಾ. ವಿದ್ವಾನ್ ಕೆ. ಕುಮಾರ್, ಕರ್ನಾಟಕ ಕಲಾಶ್ರೀ ವಿದುಷಿ ಡಾ. ವೀಣಾ ಮೂರ್ತಿ ವಿಜಯ್, ವಿದ್ವಾನ್ ಡಾ. ಸಂಜಯ್ ಶಾಂತರಾಮ್, ಹಿರಿಯರಾದ ಡಾ. ರೇಖಾ ರೆಡ್ಡಿ, ಶ್ರೀಚರಿತಾಳ ತಾತ,ತಂದೆ ತಾಯಿ, ಬಂಧು ಬಳಗ, ನೃತ್ಯ ನಿನಾದ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಮ್ಮುಖದಲ್ಲಿ ನಟರಾಜ ಮೂರ್ತಿಯ ಪೂಜಾ ಕಾರ್ಯದೊಂದಿಗೆ ದೀಪ ಪ್ರಜ್ವಲನೆ ಮಾಡುವ ಮಂಗಳ ಕಾರ್ಯದೊಂದಿಗೆ ಯಶಸ್ವಿ ರಂಗಪ್ರವೇಶಕ್ಕೆ ಶುಭ ನಾಂದಿ ಹಾಕಿದರು. ಶುಭ ನಾಂದಿಯ ವೇಳೆ ನೆರೆದಿದ್ದ ಗಣ್ಯರ ಸಮೂಹವು ಶ್ರೀ ಪುರಂದರ ದಾಸರ ಪಿಳ್ಳಾರಿ ಗೀತೆಗಳನ್ನು ಹಾಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಶುಭ ಕೋರಿದರು, ಮತ್ತು ರಂಗಮಂದಿರದಲ್ಲಿ ಆಸೀನರಾದರು,

ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದ ವಿದ್ವಾನ್ ಶ್ರೀ ಸುಗ್ಗನಹಳ್ಳಿ ಷಡಕ್ಷರಿ ಯವರು ಕಾರ್ಯಕ್ರಮದ ಪ್ರಾರಂಭವನ್ನು ಹೃದಯಪೂರ್ವಕವಾಗಿ ಎಲ್ಲರನ್ನೂ ಸ್ವಾಗತಿಸುತ್ತಾ ಚಾಲನೆ ನೀಡಿದರು. ಸಾಂಪ್ರದಾಯದಂತೆ ಕಾರ್ಯಕ್ರಮಕ್ಕೆ ಯಾವುದೇ ವಿಘ್ನಗಳು ಬಾರದಂತೆ ವಿಘ್ನೇಶ್ವರನನ್ನು ಪ್ರಾರ್ಥಿಸುವುದು ವಾಡಿಕೆ, ಪುರಂದರದಾಸರಿಂದ ರಚಿತಗೊಂಡಿರುವ ಸುಪ್ರಸಿದ್ಧ ಶರಣು ಸಿದ್ಧಿ ವಿನಾಯಕ ದೇವರ ನಾಮದೊಂದಿಗೆ ಪ್ರಾರಂಭವಾಯಿತು, ಸಾಧಾರಣವಾಗಿ ಸೌರಾಷ್ಟ್ರ ರಾಗದಲ್ಲಿ ಹಾಡುವ ಈ ದೇವರ ನಾಮವನ್ನು ಅಂದು ಹಮೀರ್ ಕಲ್ಯಾಣಿ ರಾಗದಲ್ಲಿ ಹಾಡಿದ್ದು, ವಿಶೇಷವಾಗಿತ್ತು ಮತ್ತು ಶುಭಪ್ರದವಾಗಿತ್ತು,, ಮೈಸೂರು ನೃತ್ಯ ಶೈಲಿಯ ಸಂಪ್ರದಾಯದಲ್ಲಿ ಪ್ರಪ್ರಥಮವಾಗಿ ನರ್ತಿಸಲ್ಪಡುವ ಪುಷ್ಪಾಂಜಲಿಯ ರೂಪದಲ್ಲಿರುವ ಮೈಸೂರು ಜತಿ ನೃತ್ಯ ಬಂಧದೊಂದಿಗೆ ರಂಗಾದಿ ದೇವತೆಗಳಿಗೆ ಮತ್ತು ಸಭೆಗೆ ವಂದಿಸುತ್ತಾ ಶ್ರೀ ಚರಿತ ಯಶಸ್ವಿ ರಂಗಪ್ರವೇಶಕ್ಕೆ ಮುನ್ನುಡಿ ಬರೆದಳು .

ಎರಡನೆಯದಾಗಿ ಶ್ರೇಷ್ಠರಾದ ಸಂತರುಗಳಲ್ಲಿ ಒಬ್ಬರಾದ ಶ್ರೀ ತಾಳಪಾಕಂ ಅಣ್ಣಮ್ಮಚಾರ್ಯರವರು ರಚಿಸಿರುವ ಆದಿತಾಳದ ಭೌಳಿ ರಾಗದ ಶ್ರೀಮನ್ನಾರಾಯಣ ಕೃತಿಯನ್ನು ಆಯ್ಕೆ ಮಾಡಿಕೊಂಡ ದಂಪತಿಗಳು ಉತ್ತಮವಾದ ನೃತ್ಯ ಸಂಯೋಜನೆಯೊಂದಿಗೆ ಮತ್ತು ಮಗಳ ಪ್ರತಿಭೆಗೆ ಕೊಂಕು ಬಾರದ ಹಾಗೆ ಮುನ್ನೆಚ್ಚರಿಕೆ ವಹಿಸಿ ಯಶಸ್ವಿ ರಂಗಪ್ರವೇಶದ ಎರಡನೆಯ ಸೋಪಾನ ಹಾಕುವಲ್ಲಿ ಜಯಶೀಲರಾದರು, ಮೂರನೆಯದಾಗಿ ಮೈಸೂರು ಮಹಾರಾಜರ ಆಸ್ಥಾನದ ಸಂಗೀತ ವಿದ್ವಾಂಸರುಗಳಲ್ಲಿ ಒಬ್ಬರಾದ ಮೂಲತಃ ತಮಿಳುನಾಡಿನವರಾದ ವಿದ್ವಾನ್ ಮುತ್ತಯ್ಯ ಭಾಗವತರ್ ರವರು ಮೈಸೂರು ಮಹಾರಾಜರ ಮತ್ತು ಮೈಸೂರು ಸಂಸ್ಥಾನದ ನಾಡ ದೇವಿಯ ಮೇಲೆ ರಚಿಸಿರುವ ಖಮಾಚ್.ರಾಗದ ಆದಿತಾಳದ ದರುವನ್ನು ಆಯ್ಕೆ ಮಾಡಿಕೊಂಡು ದಂಪತಿಗಳಿಬ್ಬರು ತಮ್ಮ ಪ್ರಬುದ್ಧತೆಯನ್ನು ತೋರಿಸಿದರು. ಇತ್ತಹ ಮಗಳಿನ ವಯಸ್ಸು ಅದರ ಜೊತೆಗೆ ರಂಗ ಪ್ರವೇಶದ ಮೂಲ ಪ್ರಾಣವೆಂದೇ ಕರೆಯಲ್ಪಡುವ ಪದವರ್ಣ,ದರು,ಸ್ವರ ಜತಿ, ಇವುಗಳ ಆಯ್ಕೆಯಲ್ಲಿ ಸ್ವಲ್ಪ ಎಡವಿದ್ದರೂ ಮಗಳಿಗೆ ನ್ಯಾಯ ಸಲ್ಲಿಸುವಲ್ಲಿ ವಂಚಿತರಾಗುತ್ತಿದ್ದರೇನೋ ಎಂಬ ದೋಷದಿಂದ ಮುಕ್ತರಾದರು. ಜೊತೆಗೆ ರಂಗ ಪ್ರವೇಶದ ಯಶಸ್ಸು ಉತ್ತುಂಗಕ್ಕೆ  ಕೊಂಡಯ್ಯುವಲ್ಲಿ ಜಯದ ಮೂರನೇ ಸೋಪಾನವನ್ನು ಹಾಕಿ ಸಂಪೂರ್ಣ ಯಶಸ್ವಿಯಾದರು.

ಉತ್ತರಾರ್ಧದಲ್ಲಿ ವಿಭಿನ್ನವಾದ ಅಭಿನಯ ಬಂಧಗಳನ್ನು ಆಯ್ಕೆ ಮಾಡಿಕೊಂಡಿದ್ದ ದಂಪತಿಗಳು ಕೇವಲ ಶ್ರೀ ಚರಿತಾಳನ್ನು ಗಮನದಲ್ಲಿಟ್ಟುಕೊಳ್ಳುವುದರ ಜೊತೆಗೆ ಪ್ರೇಕ್ಷಕ ವರ್ಗದವರನ್ನು ಕೂಡ ಗಮನದಲ್ಲಿಟ್ಟುಕೊಂಡು ಅಭಿನಯ ಬಂಧಗಳ ಆಯ್ಕೆಗಳಲ್ಲಿ ಜಾಣ್ಮೆ ಯನ್ನು ಮೆರೆದರು. ಉತ್ತರಾರ್ಧದ ಮೊದಲಲ್ಲಿ ಆನಂದ ಭೈರವಿರಾಗದ ಕೊರವಂಜಿ , ಶ್ರೀ ಪ್ರಸನ್ನ ರವರಿಂದ ರಚಿತಗೊಂಡಿರುವ ಜಾವಳಿ, ಮತ್ತು ಪೇರಣಿ ಬಂಧಗಳನ್ನು ಶ್ರೀ ಚರಿತಾಳು ತನ್ನ ವಯಸ್ಸಿಗೆ ಮೀರಿದ ಕೌಶಲ್ಯ ಮತ್ತು ಪ್ರೌಢಿಮೆಯಿಂದ ನರ್ತಿಸಿ ನೃತ್ಯ ಗುರುಗಳ, ಕಲಾ ರಸಿಕರ ಮನೆಗೆಲ್ಲುವಲ್ಲಿ , ಸಂಪೂರ್ಣವಾಗಿ ಯಶಸ್ವಿಯಾಗಿ ಸದಾಕಾಲ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತ ಅದ್ಭುತ ರಂಗ ಪ್ರವೇಶವನ್ನು ನಡೆಸಿಕೊಟ್ಟು ನಟರಾಜನ ಪಾದಾರವಿಂದಗಳಿಗೆ ತನ್ನನ್ನು ಸಮರ್ಪಿಸಿಕೊಂಡಳು.

ಈ ಯಶಸ್ವಿ ರಂಗ ಪ್ರವೇಶದ ಕೆಲವು ಮುಖ್ಯ ಅಂಶಗಳು :

                ರಂಗ ಪ್ರವೇಶ ನಡೆದ ಆ ದಿನ ಶುಕ್ರವಾರವಾಗಿದ್ದು ಅಂದು ತಾಯಿ ಚಾಮುಂಡೇಶ್ವರಿಯ ಮುಡಿಯ ಉತ್ಸವದ ದಿನವಾಗಿತ್ತು. ಫಲ ಪದವಾದ,ಶುಭಪ್ರದ ವಾದ ದಿನದಂದು ರಂಗ ಪ್ರವೇಶ ಮಾಡಿ ತಾಯಿಯ ಆಶೀರ್ವಾದಕ್ಕೆ ಸಂಪೂರ್ಣ ಪಾತ್ರರಾದರು ಇಡಿ ಕುಟುಂಬ ವರ್ಗದವರು. ಎ ಡಿ ಎ ರಂಗಮಂದಿರವು ಚಿಕ್ಕದಾಗಿದ್ದರೂ ಚೊಕ್ಕ ವಾಗಿರುವ ನೃತ್ಯ ಕಾರ್ಯಕ್ರಮಗಳಿಗೆ ಅತ್ಯಂತ ಸೂಕ್ತವಾದ ಸುಂದರವಾದ ರಂಗಮಂದಿರವಾಗಿದ್ದು ವೇದಿಕೆಯು ಸರಳವಾಗಿ ಸುಂದರವಾಗಿ ಅಲಂಕೃತ ಗೊಂಡಿತ್ತು, ಸುಂದರವಾದ ನಟರಾಜನ ವಿಗ್ರಹವು ರಂಗಮಂದಿರಕ್ಕೆ ಕಳಶಪ್ರಾಯವಾಗಿತ್ತು,,

ರಂಗ ಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗುರು ಹಿರಿಯರನ್ನು, ಅತಿಥಿವರೇಣ್ಯರನ್ನು, ಕಲಾ ರಸಿಕರನ್ನು ದಂಪತಿಗಳು ತೆರೆದ ಹೃದಯದಿಂದ ಸ್ವಾಗತಿಸಿದರು.ರಂಗ ಪ್ರವೇಶ ಕಾರ್ಯಕ್ರಮಕ್ಕೆ ಧ್ವನಿ, ಬೆಳಕು,ಛಾಯಾ ಚಿತ್ರಗ್ರಹಣ, ವಿಡಿಯೋ ಚಿತ್ರೀಕರಣ, ಎಲ್ಲವೂ ಸರಿಯಾದ ಸಮಯಕ್ಕೆ ಸುಸಜ್ಜಿತವಾಗಿ ವ್ಯವಸ್ಥಿತಗೊಂಡಿದ್ದವು. ಅಂದಿನ ಶ್ರೀಚರಿತಾಳ ರಂಗ ಪ್ರವೇಶದ ಮುಖ್ಯ ಕೇಂದ್ರ ಬಿಂದುವಾಗಿದ್ದವರು ಹಿಮ್ಮೇಳದ ಕಲಾವಿದರು, ಇವರು ಕೇವಲ ನಮ್ಮ ನಾಡಿನಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ವೆತ್ತ ಕಲಾವಿದರು, ಈ ರಂಗ ಪ್ರವೇಶದ ಯಶಸ್ಸಿಗೆ ಇವರ ಕೊಡುಗೆಯು ಕೂಡ ಮಹತ್ತರದಾಗಿತ್ತು.

ವಿದ್ವಾಂಸರುಗಳಾದ ಹಾಡುಗಾರಿಕೆಯಲ್ಲಿ ಶ್ರೀ ರೋಹಿತ್ ಭಟ್ ಉಪ್ಪೂರು , ಮೃದಂಗದಲ್ಲಿ ಶ್ರೀ ನಾಗರಾಜ್ ಜಿ ಎಸ್, ಕೊಳಲಿನಲ್ಲಿ ಶ್ರೀ ಗಣೇಶ್, ಪಿಟೀಲಿನಲ್ಲಿ ಶ್ರೀ ಹೇಮಂತ್ ಕುಮಾರ್ , ರಿದಮ್ ಪ್ಯಾಡಿನಲ್ಲಿ ಶ್ರೀ ಲಕ್ಷ್ಮೀನಾರಾಯಣ್ ಇವರುಗಳ ವಿದ್ವತ್ ಪೂರ್ಣ ಹಿಮ್ಮೇಳದೊಂದಿಗೆ ಶ್ರೀ ಚರಿತಾಳ ರಂಗ ಪ್ರವೇಶದ ಯಶಸ್ಸು ಉತ್ತುಂಗ ಕೇರಿತು.ಇನ್ನು ಪ್ರಸಾದನ, ವೇಷ ಭೂಷಣ, ವಸ್ತ್ರ ವಿನ್ಯಾಸ, ಇವೆಲ್ಲವೂ ಶ್ರೀ ಚರಿತಾಳ ಸೌಂದರ್ಯವನ್ನು ವರ್ಧಿಸುವಲ್ಲಿ ಸಫಲತೆಯನ್ನು ಪಡೆದವು.ಶ್ರೀ ಮಧುಸೂದನ್ ರವರ ಕೈಚಳಕದಲ್ಲಿ ಮೂಡಿ ಬಂದ ಸುಂದರ ಭಾವಭಂಗಿಗಳಿಂದ ಕೂಡಿದ ಫೋಟೋಗಳಿಂದ ಮುದ್ರಣಗೊಂಡಿದ್ದ ಆಹ್ವಾನ ಪತ್ರಿಕೆಯು ಜನರನ್ನು ಆಕರ್ಷಿಸುವಲ್ಲಿ ಹಿಂದೆ ಬೀಳಲಿಲ್ಲ.ಇವೆಲ್ಲವುಗಳನ್ನು ದಂಪತಿಗಳು ಬಹಳ ಮುಂದಾಲೋಚನೆಯಿಂದ ನಿರ್ಧರಿಸಿ ಮಣ್ಣಿನಲ್ಲಿ ಚಿನ್ನವನ್ನು ಹೆಕ್ಕಿ ತೆಗೆಯುವಂತೆ ಎಲ್ಲಾ ಶ್ರೇಷ್ಠ ಕಲಾವಿದರಗಳನ್ನು ಹುಡುಕಿ ಹುಡುಕಿ ಈ ಕಲೆಯಲ್ಲಿ ತಮಗೆ ಇರುವ ಅನುಭವವನ್ನು ಸಾಬೀತುಪಡಿಸಿದರು.ಸಹಜವಾಗಿ ದಂಪತಿಗಳಿಬ್ಬರು ನಗುಮುಖದ ಶಾಂತ ಚಿತ್ತ ಪ್ರವೃತ್ತಿಯ ಸರಳ ಸಜ್ಜನಿಕೆಯ ಸ್ವಭಾವದವರು. ಭರತನಾಟ್ಯ ಕುಚುಪುಡಿ ನೃತ್ಯಗಳಲ್ಲಿ ಸರ್ವ ಶ್ರೇಷ್ಠ ಗುರುಗಳಲ್ಲಿ ಅಭ್ಯಾಸ ಮಾಡಿ ಹಲವಾರು ವರ್ಷಗಳ ಪ್ರದರ್ಶನ,ಅನುಭವ,ಶಿಕ್ಷಕರಾಗಿ ಎಲ್ಲವನ್ನು ಸಿದ್ಧಿಪಡಿಸಿಕೊಂಡಿರುವ, ಕಲಾವಿದರುಗಳಿಗೆ ಮಾದರಿಯಾಗಿರುವ ಅಪರೂಪದ ದಂಪತಿಗಳು ಇವರು.

ಬಹುಶಃ ಮಗಳ ಲಾಲನೆ, ಪಾಲನೆ, ಪೋಷಣೆ, ಮಾಡುವ ಸಂದರ್ಭಗಳಲ್ಲಿ ಮಗಳ ಪ್ರತಿಭೆ, ಜಾಣ್ಮೆ, ಕುಶಲತೆ, ಗ್ರಹಿಕೆ, ಇವೆಲ್ಲವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಸೂಕ್ತವಾದ ನಿರ್ಧಾರವನ್ನು ಸರಿಯಾದ ಸಮಯಕ್ಕೆ ತೆಗೆದುಕೊಂಡು ಮಗಳ ಉಜ್ವಲ ಭವಿಷ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕುವಲ್ಲಿ ಸಂಪೂರ್ಣವಾದ ಗೆಲುವನ್ನು ಪಡೆದಿದ್ದಾರೆ. ತಂದೆ ತಾಯಿಗಳ ಪ್ರೀತಿ, ಪ್ರೇಮ,ಒಲವು, ವಿದ್ಯೆ ಎಲ್ಲವನ್ನು ಆಯಸ್ಕಾಂತವು ಕಬ್ಬಿಣವನ್ನು ತನ್ನತ್ತ ಆಕರ್ಷಿಸುವಂತೆ ತಂದೆ ತಾಯಿಗಳ ಮಾತುಗಳನ್ನು ವಿನಯತೆಯಿಂದ, ಶ್ರದ್ಧೆಯಿಂದ, ನಮ್ರತೆಯಿಂದ, ಅವರ ಎಲ್ಲಾ ವಿದ್ಯೆಯನ್ನು ಪಡೆದುಕೊಂಡು ಮುಂದೆ ಪಡೆದುಕೊಳ್ಳುತ್ತಾ ತಾನು ತಂದೆ ತಾಯಿಗಳಿಗೆ ಮತ್ತು ನೃತ್ಯಾದಿ ದೇವತೆ ನಟರಾಜನ ಸೇವೆಗೆ ಅರ್ಹಳು ಎಂಬುದನ್ನು ಲವಲೇಶ ಸಂಶಯಕ್ಕೆ ಎಡೆ ಮಾಡಿಕೊಡದೆ ನೋಡಿದವರು ಹುಬ್ಬೇರಿಸುವಂತೆ ಕಣ್ಣಿನ ತಾರಗಳು ಚಲಿಸದಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸುವಂತೆ ತನ್ನತ್ತ ಸೆಳೆದುಕೊಳ್ಳುವ ಮಾಂತ್ರಿಕ ಶಕ್ತಿ ಉಳ್ಳ ದೈತ್ಯ ಪ್ರತಿಭೆ ಕುಮಾರಿ ಶ್ರೀ ಚರಿತ.

ತನ್ನ ಈ ರಂಗ ಪ್ರವೇಶದಲ್ಲಿ ಪ್ರಸ್ತುತಪಡಿಸಿದ್ದ ಎಲ್ಲಾ ನೃತ್ಯ ಬಂಧಗಳಲ್ಲಿ ಆಡುವುಗಳನ್ನಾಗಲಿ, ಅಭಿನಯದಲ್ಲಾಗಲಿ, ಹಸ್ತ ಮುದ್ರೆ ವಿನ್ಯಾಸಗಳಲ್ಲಾಗಲಿ,ಭಾವ ಭಂಗಿಗಳಲ್ಲಾಗಲಿ, ತಾಳದ ಲಯ ಖಚಿತತೆ, ರಂಗವನ್ನು ಆಕ್ರಮಿಸುವ ವೈಖರಿ, ತಾಂಡವ ಲಾಸ್ಯಗಳ ಆದವರಿತ ಮಿಶ್ರಣ, ಸ್ಪುಟವಾದ ಲವಲವಿಕೆಯ ಪಾದರಸದಂತಹ ಚಲನೆಗಳು,ನಿರ್ದಿಷ್ಟವಾದ ಪೂರೈಕೆ, ಅಂಗ ಶುದ್ಧ ಎಲ್ಲವನ್ನು ಈ ಎಳೆಯ ವಯಸ್ಸಿನಲ್ಲಿ ಕರಗತ ಮಾಡಿಕೊಂಡು 10 ರ ವಯಸ್ಸಿನ ಈ ಪುಟ್ಟ ಕಂದಮ್ಮ ದೇವರ ದಯೆ, ತಂದೆ ತಾಯಿಗಳ, ಗುರುಹಿರಿಯರ, ಬಂಧು ಬಳಗದವರ ಪ್ರೋತ್ಸಾಹ, ಆಶೀರ್ವಾದ,ಹಾರೈಕೆ ಎಲ್ಲವೂ ಲಭಿಸಿದರೆ ತಾನು ಮುಂದಿನ ದಿನಗಳಲ್ಲಿ ತಂದೆ ತಾಯಿಯು ಹೌದು ಗುರುವು ಆದ ಅವರನ್ನು ಮೀರಿಸಬಲ್ಲೆ ಎಂಬ ತೀಕ್ಷ್ಣವಾದ ನೋಟದಲ್ಲಿ ಭರವಸೆಯನ್ನು ನೀಡುತ್ತಾ ಉತ್ತಮ ಕಲಾವಿದೆಯಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ ಎಂಬುದನ್ನು ಒಂದೊಂದು ಬಂಧಗಳಲ್ಲಿ ಪ್ರಸ್ತುತಪಡಿಸುತ್ತಾ ದೃಢಪಡಿಸಿದಳು. ಈ ಕಂದಮ್ಮನಿಗೆ ದೇವರು ಆಯುರಾರೋಗ್ಯ ಭಾಗ್ಯಗಳನ್ನು ಇತ್ತು ಸಲಹಲಿ ಎಂದು ಪ್ರಾರ್ಥಿಸುತ್ತೇನೆ.

ಇಂತಹ ಮಗಳನ್ನು ಪಡೆದ ಅವರು ಧನ್ಯರೋ, ಅಥವಾ ಇಂತಹ ತಂದೆ ತಾಯಿಯನ್ನು ಪಡೆದ ಅವಳು ಧನ್ಯಳೋ, ಅವರೇ ನಿರ್ಧರಿಸಲಿ.ಈ ಕಾರ್ಯಕ್ರಮಕ್ಕೆ ಆಶೀರ್ವದಿಸಲು ಆಗಮಿಸಿದ್ದ ಎಲ್ಲಾ ಹಿರಿಯ ನೃತ್ಯ ಗುರುಗಳು ಈ ದಂಪತಿಗಳ ಮತ್ತು ಅವರ ಕುವರಿಯಾದ ಶ್ರೀ ಚರಿತಾಳ ನ್ನು ಮನತುಂಬಿ ಹರಸಿದರು.ಯಾವುದೇ ಅಬ್ಬರ ಆಡಂಬರಗಳಿಲ್ಲದೆ ಮನಸ್ಸಿಗೆ ಮುದ ನೀಡುವ ಸುಂದರವಾದ ರಂಗ ಪ್ರವೇಶ ಕಾರ್ಯಕ್ರಮವನ್ನು ನಡೆಸಿಕೊಟ್ಟು ದೈವದ ಕೃಪೆಗೆ ಪಾತ್ರರಾದರು.

ಕಲಾ ವಿಮರ್ಶಕರು:

ಕರ್ನಾಟಕ ಕಲಾಶ್ರೀ ಡಾ. ಕೆ. ಕುಮಾರ್ .

ಪ್ರಾಧ್ಯಾಪಕರು ಮತ್ತು ನೃತ್ಯ ವಿಭಾಗದ ಮುಖ್ಯಸ್ಥರು,

ಮೈಸೂರು ವಿಶ್ವವಿದ್ಯಾನಿಲಯ ಲಲಿತ ಕಲಾ ಕಾಲೇಜು,

ಮಾನಸಗಂಗೋತ್ರಿಮೈಸೂರು.


Post a Comment

0 Comments

Ad Code

Responsive Advertisement