Ticker

6/recent/ticker-posts

Ad Code

Responsive Advertisement

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ಕ್ಕೆ ಸಮಗ್ರ ಪರಿಷ್ಕರಣೆ ಅಗತ್ಯ

ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಿಶೇಷ ಚಿಂತನಾ ಗೋಷ್ಠಿಯಲ್ಲಿ ಒಕ್ಕೊರಲ ಅಭಿಪ್ರಾಯ

ಬೆಂಗಳೂರು: ಕರ್ನಾಟಕ ವಿಧಾನ ಸಭೆಯಲ್ಲಿ ಮಂಡನೆಯಾಗಿರುವ ಕನ್ನಡಿಗರ ಬಹುನಿರೀಕ್ಷಿತ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”ದ ಸಮಗ್ರ ಪರಿಷ್ಕರಣೆ ಅಗತ್ಯ ಎಂದು ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಿಶೇಷ ಚಿಂತನಾ ಗೋಷ್ಠಿಯಲ್ಲಿ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು. ನಾಡೋಜ ಡಾ. ಮಹೇಶ ಜೋ಼ಶಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಚಿಂತನಾಗೋಷ್ಠಿ ನಡೆಯಿತು. 

ನಿಡುಮಾಮಿಡಿ ಮಠದ ಶ್ರೀ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಗಳು, ಬೇಲಿಮಠದ ಶ್ರೀ ಶ್ರೀ ಶಿವರುದ್ರ ಸ್ವಾಮೀಜಿಗಳು, ಕಾನೂನು ಮತ್ತು ಸಂಸದೀಯ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿ, ಮಾಜಿ ಕಾನೂನು ಸಚಿವ ಶ್ರಿ ಎಚ್.ಕೆ. ಪಾಟೀಲ್, ವಿಶ್ರಾಂತ ನ್ಯಾಯಮೂರ್ತಿ ಶ್ರೀ ಅರಳಿ ನಾಗರಾಜ್, ವಿಶ್ರಾಂತ ನ್ಯಾಯಾದೀಶ ಶ್ರೀ ಶಿವಲಿಂಗೇಗೌಡ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ ಶ್ರೀ ಎಸ್.ಎಲ್. ಭೈರಪ್ಪ, ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ದೊಡ್ಡರಂಗೇಗೌಡ, ಹಿರಿಯ ಸಾಹಿತಿ ಡಾ. ಪ್ರಧಾನ ಗುರದತ್ತ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀ ಟಿ.ಎಸ್. ನಾಗಾಭರಣ, ಮಾಜಿ ಅಡ್ವೋಕೇಟ್ ಜನರಲ್ ಶ್ರೀ ಆಶೋಕ ಹಾರನಹಳ್ಳಿ ಅವರು ಸೇರಿದಂತೆ, ಅನೇಕ ಕನ್ನಡ ಪರ ಚಿಂತಕರು, ಹೋರಾಟಗಾರರು, ಹಲವು ಕ್ಷೇತ್ರದ ಗಣ್ಯರು ಈ ಚಿಂತನಗೋಷ್ಠಿಯಲ್ಲಿ ಭಾಗವಹಿಸಿದ್ದರು. 

ಪ್ರಾಸ್ತಾವಿಕ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋ಼ಶಿ ಅವರು, ಈ ವಿಧೇಯಕದಲ್ಲಿ ಎಲ್ಲ ಕನ್ನಡಿಗರನ್ನು ಪ್ರತಿನಿಧಿಸುವ ಅಂಶಗಳು ಕಂಡುಬರುತ್ತಿಲ್ಲ, ವಿಧೇಯಕದಲ್ಲಿ ʻಕನ್ನಡಿಗʼ ಎನ್ನುವ ಪರಿಕಲ್ಪನೆ ಸಮರ್ಪಕವಾಗಿಲ್ಲ. ಅದು ಭೌಗೋಳಿಕ ವ್ಯಾಪ್ತಿಯನ್ನು ಮಾತ್ರ ಪರಿಗಣಿಸಿದ್ದು, ಇದರಿಂದ ಹೊರನಾಡು, ಗಡಿನಾಡು ಹಾಗೂ ಹೊರ ದೇಶದ ಕನ್ನಡಿಗರಿಗೆ ತಾವು ಕನ್ನಡಿಗರು  ಅಲ್ಲ ಎಂಬ ಭಾವನೆ ಬರುತ್ತದೆ. ಅನುಷ್ಠಾನ ಕಾರ್ಯವ್ಯವಸ್ಥೆಯಲ್ಲಿ ಅಧಿಕಾರಿಗಳದ್ದೇ ಪಾರುಪತ್ಯ ಕಂಡುಬರುತ್ತಿದೆ. ಬರಿ ಅಧಿಕಾರಿಗಳಿಂದ ಸಮಗ್ರ ಕನ್ನಡ ಅಭಿವೃದ್ಧಿಯಾಗುವುದಿದ್ದರೆ ಇಷ್ಟೆಲ್ಲಾ ಕಾನೂನು ಹಾಗೂ ನೂರಾರು ಸುತ್ತೋಲೆಗಳು ಬಂದಿದ್ದರೂ ಇಲ್ಲಿಯವರೆಗೆ  ಏಕೆ ಕನ್ನಡದ ಅಭಿವೃದ್ಧಿಯಾಗಲಿಲ್ಲ ಎಂದು ಪ್ರಶ್ನಿಸಿದ ಅವರು ಈ ಹಿನ್ನೆಲೆಯಲ್ಲಿ ವಿಧೇಯಕದ ಕುರಿತು ಕೂಲಂಕಷವಾಗಿ ಚರ್ಚೆ ನಡೆಯಬೇಕಿದೆ ಎಂದು ಹೇಳಿದರು. 

ಕಾನೂನು ಮತ್ತು ಸಂಸದೀಯ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿ ಅವರು ಮಾತನಾಡಿ, ವಿಧೇಯಕ ಮಂಡನೆಯಾಗಿದೆ ಅಷ್ಟೇ. ಕಾನೂನು ಆಯೋಗವು ನೀಡಿದ ಕರಡು ಪ್ರತಿಯಲ್ಲಿ ಸಂವಿಧಾನದ ಚೌಕಟ್ಟಿಗೆ ಅನುಗುಣವಾಗುವಂತೆ ತಿದ್ದುಪಡಿ ಮಾಡಲಾಗಿದೆ. ಉದಾಹರಣೆಗೆ ರಾಜ್ಯಪಾಲರಿಗೆ ಸಲ್ಲಿಕೆಯಾಗುವ ಸುಗ್ರಿವಾಜ್ಞೆಗಳು ಕನ್ನಡದಲ್ಲೇ ಇದ್ದರೆ ರಾಜ್ಯಪಾಲರು ಬೇರೆ ಭಾಷೆಯವರಾಗಿರುತ್ತಾರೆ  ಅವರಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದರಿಂದ ಅದು ಇಂಗ್ಲೀಷ್ನಲ್ಲಿಯೇ ಇರುವುದು ಅನಿವಾರ್ಯ ಎಂದು ಹೇಳಿದ ಅವರು ಸರ್ಕಾರ ಮಂಡಿಸಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ವನ್ನು ಸಮರ್ಥಿಸಿಕೊಂಡರು. 

ನಿಡುಮಾಮಿಡಿ ಮಠದ ಶ್ರೀ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ವಿಧೇಯಕದಲ್ಲಿ ಮೇಲ್ನೋಟಕ್ಕೆ ಸಾಕಷ್ಟು ಕೊರತೆಗಳು ಕಂಡುಬಂದಿವೆ. ಮುಖ್ಯವಾಗಿ ಕನ್ನಡಿಗರನ್ನು ಪ್ರತಿನಿಧಿಸುವ ಯಾವುದೇ ಸಂಸ್ಥೆಗಳನ್ನು ಅನುಷ್ಠಾನ ಕಾರ್ಯ ವ್ಯವಸ್ಥೆಯಲ್ಲಿ ಸೇರಿಸಿಲ್ಲ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ, ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರನ್ನು ಆಯಾ ಕಾರ್ಯಕ್ರಮ ಅನುಷ್ಠಾನ ಸಮಿತಿಗಳಲ್ಲಿ ಸೇರಿಸಬೇಕು, ಇಲ್ಲದಿದ್ದರೆ ಈ ಕಾಯ್ದೆಗೆ ಸ್ಪಷ್ಟತೆ ಇರುವುದಿಲ್ಲ. ನಿಶ್ಯಕ್ತ ಕಾಯಿದೆ ಆಗಬಾರದು, ಸಶಕ್ತ ಕಾಯಿದೆ ಆಗಬೇಕು ಎಂದರು. 

ಮಾಜಿ ಕಾನೂನು ಸಚಿವ ಶ್ರಿ ಎಚ್.ಕೆ. ಪಾಟೀಲ್ ಅವರು ಮಾತನಾಡಿ, ಈ ವಿಧೇಯಕದ ಕುರಿತು ವ್ಯಾಪಕ ಚರ್ಚೆ ನಡೆಯಬೇಕು, ಯಾವುದೇ ಸರ್ಕಾರ ತನ್ನ ಅವಧಿಯ ಕೊನೆಯ ಭಾಗದಲ್ಲಿ ಕಾನೂನು ರೂಪಿಸುವ ಬದಲು, ಆರಂಭಿಕ ಹಂತದಲ್ಲೇ ವಿಧೇಯಕ ಮಂಡಿಸಿ ಕಾಯ್ದೆಯಾಗಿ ಅನುಷ್ಠಾನಗೊಳಿಸಬೇಕು ಎಂದರು. 

ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರು ಮಾತನಾಡಿ, ಪ್ರಸ್ತುತ ವಿಧೇಯಕವು ಅಧಿಕಾರಿಗಳ ಮೂಲಕ ಆಡಳಿತ ನಡೆಸಲು ಹೊರಟಿದೆ. ಇದು ಪರಿಣಾಮಕಾರಿಯಾಗುವುದು ಸಾಧ್ಯವಿಲ್ಲ. ಸ್ವಾಯತ್ತತೆ ಇರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯವ್ಯವಸ್ಥೆಯಲ್ಲಿ ಇರಲೇ ಬೇಕು ಎಂದು ಹೇಳಿದರು.  

ಮಾಜಿ ಅಡ್ವೋಕೇಟ್ ಜನರಲ್ ಶ್ರೀ ಆಶೋಕ ಹಾರನಹಳ್ಳಿ ಅವರು ಮಾತನಾಡಿ, ಈ ವಿಧೇಯಕವು ಅಸ್ತಿತ್ವದಲ್ಲಿರುವ ಅನೇಕ ಕಾನೂನುಗಳೊಂದಿಗೆ  ಸಂಘರ್ಷವನ್ನು ಹೊಂದಿದ್ದು ಜಾರಿಗೊಳಿಸುವಾಗ ಇದು ತೊಡಕಾಗುತ್ತದೆ ಎಂದು ಎಚ್ಚರಿಸಿದರು. ಇದರಲ್ಲಿನ ʻಕನ್ನಡಿಗʼ ಎನ್ನುವ ವ್ಯಾಖ್ಯಾನ ಸರಿಯಾಗಿಲ್ಲ. ರಾಜಭಾಷಾ ಆಯೋಗ ಎನ್ನುವ ಸೂಚನೆ ಇದ್ದರೂ ಅದು ಕೇವಲ ಭಾಷಾಂತರಕ್ಕೆ ಸೀಮಿತವಾಗಿ ಅಸ್ಪಷ್ಟವಾಗಿದೆ.  ಜಾರಿ ಮತ್ತು ನಿಯಂತ್ರಣ ಇವೆರಡರ ವ್ಯತ್ಯಾಸ ವಿಧೇಯಕದಲ್ಲಿ ಸ್ಪಷ್ಟವಾಗಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಸಮಿತಿಯಲ್ಲಿ ಸೇರಿಸಲು ಯಾವ ಕಾನೂನು ತೊಡಕೂ ಇಲ್ಲ. ಉದ್ಯೋಗ ಪೋರ್ಟಲ್ ಪ್ರಸ್ತಾಪ ವಿಧೇಯಕದಲ್ಲಿದ್ದು, ಅದರ ಉದ್ದೇಶ ಅಸ್ಪಷ್ಟವಾಗಿದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ವಿಧೇಯಕವನ್ನು ಪರಿಷ್ಕರಿಸಬೇಕು ಎಂದರು. 

ಕನ್ನಡಪರ ಹೋರಾಟಗಾರ, ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶ್ರೀ ಸಾ.ರಾ. ಗೋವಿಂದು, ಕನ್ನಡ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು, ಈ ವಿಧೇಯಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸೇರಿಸಿಕೊಳ್ಳಬೇಕು  ಎಂದರು. ಉದಯಭಾನು ಕಲಾಸಂಘದ ಅಧ್ಯಕ್ಷರಾದ ಮ. ನರಸಿಂಹ ಅವರು, ಕನ್ನಡ ಅನುಷ್ಠಾನಕ್ಕೆ ತ್ರೈವಾರ್ಷಿಕ, ಪಂಚವಾರ್ಷಿಕ ಯೋಜನೆಗಳನ್ನು ಅಳವಡಿಸಬೇಕು. ವರದಿಗಳ ಅನುಷ್ಠಾನಕ್ಕೆ ಕಾಲಮಿತಿಯನ್ನು ಯೋಜಿಸಬೇಕು, ಭಾಷಾಭಿವೃದ್ಧಿ ನಿರ್ದೇಶನಾಲಯ ಸ್ವಾಯತ್ತ ಸಂಸ್ಥೆಯಾಗಬೇಕು, ಶಿಕ್ಷಣದ ವಿವಿಧ ಹಂತಗಳಲ್ಲಿ ಕನ್ನಡ ಜಾರಿಗೆ ಸ್ಪಷ್ಟ ನಿಯಮಗಳನ್ನು ರೂಪಿಸಬೇಕು. ಜಾಹೀರಾತು ಫಲಕದ ವಿಷಯದಲ್ಲೂ ತ್ರಿಭಾಷಾ ಸೂತ್ರ ಅಳವಡಿಸಬೇಕು ಎಂದರು. 

 ಬನವಾಸಿ ಬಳಗದ ಶ್ರೀ ಆನಂದ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತನ್ನು ಬಿಟ್ಟ ವಿಧೇಯಕ ಸಮಗ್ರವಾಗುವುದು ಸಾಧ್ಯವಿಲ್ಲ, ವಿಧೇಯಕದ ಪರಿಷ್ಕರಣೆಯಲ್ಲಿ ನಾವು ಸರ್ಕಾರಕ್ಕೆ ಸಲಹೆ ನೀಡಲು ಸಿದ್ದ ಎಂದು ಹೇಳಿದರು. 

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ಕನ್ನಡ ಅನುಷ್ಠಾನ ಎಲ್ಲಿ ಹೇಗಿರಬೇಕು ಎಂಬುವುದರ ಬಗ್ಗೆ ಸ್ಪಷ್ಟ ನಿಲುವು ಪಡೆದುಕೊಳ್ಳುವ ಅಗತ್ಯವಿದೆ. ಕನ್ನಡ ಸಾಹಿತ್ಯ ಪರಿಷತ್ತು ಬಿಟ್ಟು ಸಮಗ್ರ ಭಾಷಾ ವಿಧೇಯಕವನ್ನು ರೂಪಿಸಿರುವುದು ತಿರುಕನ ಕನಸು ಕಂಡತಾಗಿದೆ ಎಂದರು.

ಬೇಲಿಮಠದ ಶ್ರೀ ಶ್ರೀ ಶಿವರುದ್ರ ಸ್ವಾಮೀಜಿಗಳು ಮಾತನಾಡಿ ಕನ್ನಡ ಪ್ರಜ್ಞೆಯನ್ನು ಮಕ್ಕಳಲ್ಲಿ ಬೆಳೆಸುವ ಕೆಲಸ ಆಗಬೇಕಿದೆ. ವಿಧೇಯಕದ ಅನುಷ್ಠಾನ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೂಕ್ತ ಮನ್ನಣೆ ನೀಡಬೇಕು. ಸ್ಥಾನ ನಿಮಿತ್ತ ಅಧಿಕಾರಿಗಳು ಸರ್ವಾಧಿಕಾರಿಗಳಾಗುವುದಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು. 

ಹಿರಿಯ ಬರಹಗಾರರಾದ ಡಾ. ಪ್ರಧಾನ ಗುರುದತ್ತ ಅವರು ಮಾತನಾಡಿ, ಕನ್ನಡ ನಿತ್ಯದ ಭಾಷೆಯಾಗಬೇಕು, ಹೊರಗಿನಿಂದ ಬಂದ ಅಧಿಕಾರಿಗಳು ಕನ್ನಡದ ಮೇಲೆ ಸವಾರಿ ಮಾಡಲು ಅವಕಾಶ ನೀಡಬಾರದು, ಇಂಗ್ಲಿಷ್ ಶಿಕ್ಷಣವನ್ನು ಜನಸಾಮಾನ್ಯರನ್ನು ವಂಚಿಸಲು ಬಳಸುತ್ತಿದ್ದು, ಇದರ ತಡೆಯಾಗಬೇಕು ಎಂದು ಹೇಳಿದರು. 

ಮಾಜಿ ಮೇಯರ್, ಕನ್ನಡಪರ ಚಿಂತಕ ಶ್ರೀರಾಮೇಗೌಡ ಅವರು ಮಾತನಾಡಿ, ಸಭೆಯನ್ನು ಕರೆದಿರುವುದು ಅರ್ಥಪೂರ್ಣವಾಗಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತನ್ನು ವಿಧೇಯಕದ ಅನುಷ್ಠಾನ ಮಂಡಳಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು. 

ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀ ಷಡಕ್ಷರಿ ಅವರು ಮಾತನಾಡಿ, ವಿಧೇಯಕದಲ್ಲಿ ಅಧಿಕಾರಿಗಳಿಗೆ ಮಾತ್ರ ಶಿಸ್ತು ಕ್ರಮದ ವ್ಯಾಪ್ತಿ ಇದ್ದು, ನೌಕರರನ್ನೂ ವ್ಯಾಪ್ತಿಗೆ ಒಳಪಡಿಸಬೇಕು. ಕನ್ನಡ ಬಳಸುವಲ್ಲಿ ಆಗುವ ಲೋಪಕ್ಕೆ ವಿಧಿಸುವ ದಂಡದ ಪ್ರಮಾಣದ ತೀರಾ ಕಡಿಮೆಯಾಗಿದ್ದು, ಹೆಚ್ಚಿಸಬೇಕೆಂದು ಒತ್ತಾಯಿಸಿದರು. 

ವಿಶ್ರಾಂತ ನ್ಯಾಯಮೂರ್ತಿ ಶ್ರೀ ಶಿವಲಿಂಗೇಗೌಡ ಅವರು ಮಾತನಾಡಿ, ವಿಧೇಯಕದ ಸಮಗ್ರ ಪರಿಷ್ಕರಣೆ ನಡೆಯಬೇಕು, ಇಚ್ಛಾಶಕ್ತಿಯ ಕೊರತೆ ನಿವಾರಿಸಿಕೊಂಡು ಪ್ರಬಲವಾದ ಕಾನೂನು ರಚನೆಯಾಗ ಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಟಿ.ಎಸ್. ನಾಗಾಭರಣ  ಅವರು ಮಾತನಾಡಿ, ಕನ್ನಡ ಭವಿಷ್ಯದ ಭಾಷೆಯಾಗಬೇಕು ಎನ್ನುವ ಆಶಯದೊಂದಿಗೆ ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ ಪ್ರಾಧಿಕಾರವು ಶ್ರಮ ವಹಿಸಿ ಈ ವಿಧೇಯಕವನ್ನು ಸಿದ್ಧಪಡಿಸಿದ್ದು ಇದಕ್ಕೆ ಕಾನೂನು ಆಯೋಗ ಸಹ ಆರು ತಿಂಗಳ ಪರಿಶ್ರಮವನ್ನು ವಹಿಸಿದೆ. ಕಾನೂನನ್ನು ಯಾವಾಗಲೂ ಭಾವನಾತ್ಮಕವಾಗಿ ನೋಡಬಾರದು, ಬದಲಾಗಿ ಕಾನೂನಾತ್ಮಕವಾಗಿ ನೋಡಬೇಕು. ಭಾಷೆಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಇದುವರೆಗೂ ಕೇವಲ ಎರಡೇ ತಿದ್ದುಪಡಿಗಳು ನಡೆದಿದ್ದು ಇದು ಹಿಂದಿಗೆ ಅನುಕೂಲವಾಗುವಂತಿದೆ. ಶಿಕ್ಷಣದಂತೆ ಉದ್ಯೋಗ, ವ್ಯಾಪಾರ ಮತ್ತು ನ್ಯಾಯಾಲಯಗಳಲ್ಲಿ ಕೂಡ ಕನ್ನಡ ಸಮಗ್ರವಾಗಿ ಜಾರಿಗೆ ಬರಬೇಕು ಎನ್ನುವುದು ನಮ್ಮ ಸಂಕಲ್ಪ. ಈ ವಿಧೇಯಕಕ್ಕೆ ಸಮಗ್ರತೆ ತಂದು ಕೊಡುವ ಕೆಲಸ ಆಗಬೇಕಿದೆ ಎಂದು ಹೇಳಿದರು. 

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ವು ದೋಷಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟ  ವಿಶ್ರಾಂತ ನ್ಯಾಯಮೂರ್ತಿ ಶ್ರೀ ಅರಳಿ ನಾಗರಾಜ್ ಅವರು, ಕನ್ನಡದ ಜಾರಿಗೆ ʻಪ್ರಾಮುಖ್ಯತೆʼ ಎಂಬ ಪದ ವಿಧೇಯಕದಲ್ಲಿದ್ದು, ಅದು ʻಕಡ್ಡಾಯʼ ಎಂದಾಗಬೇಕು. ನ್ಯಾಯಾಲಯದಲ್ಲಿ ಕನ್ನಡ ಬಳಕೆಯ ಪ್ರಸ್ತಾಪ ವಿಧೇಯಕದಲ್ಲಿದ್ದರೂ ಅದು ಕೇವಲ ಜಿಲ್ಲಾ ನ್ಯಾಯಾಲಯಗಳಿಗೆ ಸೀಮಿತವಾಗಿದೆ. ಅದನ್ನು ಉಚ್ಚ ನ್ಯಾಯಾಲಯಗಳಿಗೂ ವಿಸ್ತರಿಸಬೇಕಿದೆ. ಸಂವಿಧಾನದ ೩೪೮ನೇ ವಿಧಿಗೆ ತಿದ್ದುಪಡಿಯಾದರೆ ಮಾತ್ರವೇ ವಿಧೇಯಕ ಪರಿಣಾಮಕಾರಿಯಾಗಲು ಸಾಧ್ಯ. ಹೀಗಾಗಿ ರಾಜ್ಯ ಸರ್ಕಾರ ಮಾತ್ರವಲ್ಲದೆ ಕೇಂದ್ರ ಸರ್ಕಾರ ಕೂಡ ಈ ಕುರಿತು ಆಸಕ್ತಿ ವಹಿಸಬೇಕು ಎಂದು ಸೂಚಿಸಿದರು. 

ಚಿಂತನಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಶ್ರೀ ಸುಂದರರಾಜ್, ಐಟಿ ಹಾಗೂ ಸಮಾನ ಶಿಕ್ಷಣ ತಜ್ಞ ಪ್ರಕಾಶ್ ಹೆಬ್ಬಳ್ಳಿ, ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ,  ಸೇರಿದಂತೆ ಹಲವರು ಮಾತನಾಡಿದರು. ವಿಜಯವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ಚನ್ನೇಗೌಡ, ವಿಸ್ತಾರ ಟಿವಿ ಪ್ರಧಾನ ಸಂಪಾದಕರಾದ ಶ್ರೀ ಹರಿಪ್ರಕಾಶ್ ಕೋಣೆಮನೆ, ವಿಜಯಕರ್ನಾಟಕ ಸಂಪಾದಕರಾದ ಸುದರ್ಶನ್ ಚೆನ್ನಂಗಿಹಳ್ಳಿ, ಹೊಸದಿಗಂತ ಸಮೂಹ ಸಂಪಾದಕರಾದ ವಿನಾಯಕ ಭಟ್ ಮೂರೂರು, ಕೋಲಾರವಾಣಿ ಸಂಪಾದಕರಾದ ಶ್ರೀ ಮುರಳಿಪ್ರಸಾದ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ವಿ. ಗೋಪಾಲರೆಡ್ಡಿ, ಹೊಟೇಲ್ ಮಾಲಿಕರ ಸಂಘ ಅಧ್ಯಕ್ಷರಾದ ಶ್ರೀ ಪಿ.ಸಿ. ರಾವ್, ಮಾಲಿ ದೇಶದ ರಾಯಭಾರಿ ಶ್ರೀ ಎಚ್.ವಿ.ಎಸ್. ಕೃಷ್ಣ, ಚಲನಚಿತ್ರ ನಿರ್ದೇಶಕ ಶ್ರೀ ಎಸ್.ವಿ. ರಾಜೇಂದ್ರಸಿಂಗ್ ಬಾಬು, ಕನ್ನಡಪರ ಚಿಂತಕ ಶ್ರೀ ಹಾ.ವಿ. ಹರೀಶ್, ಹಲ್ಮೀಡಿ ಕೂಟದ ಶ್ರೀ ಜ್ಞಾನೇಶ್ವರ, ಕರವೇ ಪತ್ರಿಕಾ ಕಾರ್ಯದರ್ಶಿ ಶ್ರೀ ಗೋಮೂರ್ತಿ ಯಾದವ್, ಪ್ರಾಧ್ಯಾಪಕ ಪ್ರೊ. ಎ. ನಾರಾಯಣ್, ಕನ್ನಡ ಗಣಕ ಪರಿಷತ್ ಕಾರ್ಯದರ್ಶಿ ಶ್ರೀ ಜಿ.ಎಂ.ನರಸಿಂಹಮೂರ್ತಿ, ಬರಹಗಾರ ಪ್ರೊ. ಜಿ. ಅಶ್ವತ್ಥನಾರಾಯಣ ಮುಂತಾದವರು ಉಪಸ್ಥಿತರಿದ್ದರು. 

  ಡಾ.ಬರಗೂರು ರಾಮಚಂದ್ರಪ್ಪ, ರಾ.ನಂ ಚಂದ್ರಶೇಖರ್, ನಿರಂಜನ ಆರಾಧ್ಯ, ಜಿ.ಎಸ್.ಜಯದೇವ, ಮೊದಲಾದ ಅನೇಕ ಗಣ್ಯರು ಪತ್ರದ ಮೂಲಕ ತಮ್ಮ ಅಭಿಪ್ರಾಯಗಳನ್ನು ಸೂಚಿಸಿದ್ದರು. ಇವೆಲ್ಲವುಗಳನ್ನೂ ಕ್ರೊಢಿಕರಿಸಿ ನಿರ್ಣಯಗಳನ್ನು ಸಿದ್ದಪಡಿಸಿ ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ವಿರೋಧ ಪಕ್ಷದ ನಾಯಕರು, ಉಭಯ ಸದನಗಳ ಸಭಾಪತಿಗಳಿಗೆ ನೀಡಲು ಚಿಂತನಾ ಗೋಷ್ಠಿಯಲ್ಲಿ ತೀರ್ಮಾನಿಸಲಾಯಿತು.  

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗಶೆಟ್ಟಿ, ಶ್ರೀ ಕೆ. ಮಹಾಲಿಂಗಯ್ಯ ಉಪಸ್ಥಿತರಿದ್ದರು.  ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್ಪಾಂಡು ಕಾರ್ಯಕ್ರಮ ನಿರ್ವಹಿಸಿದರು.  


ಛಾಯಾಚಿತ್ರ.: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”ದ ಸಮಗ್ರ ಪರಿಷ್ಕರಣೆ ಅಗತ್ಯ ಎಂದು ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ವಿಶೇಷ ಚಿಂತನಾ ಗೋಷ್ಠಿಯ ಉದ್ಘಾಟನೆ


ಶ್ರೀನಾಥ್.ಜೆ.

ಮಾಧ್ಯಮ ಸಲಹೆಗಾರರು

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು

Post a Comment

0 Comments

Ad Code

Responsive Advertisement