ಬೆಂಗಳೂರು : ನಗರದಲ್ಲಿರುವ ಕೇರಳ ಮೂಲದ ಜನರೆಲ್ಲರನ್ನೂ ಒಗ್ಗೂಡಿಸಿ ಪ್ರತಿ ವರ್ಷ ಓಣಂ ಹಬ್ಬದ ನಂತರ ಸಮನ್ವಯ ಎಜುಕೇಷನಲ್ & ಚಾರೀಟೇಬಲ್ ಟ್ರಸ್ಟ್ ನ ವತಿಯಿಂದ ಕೇರಳ ರಾಜ್ಯದ ಸಾಂಸ್ಕೃತಿಕ ಕಲೆಗಳ ಕಾರ್ಯಕ್ರಮವನ್ನು ಕಳೆದ ಸುಮಾರು ಮೂವತ್ತು ವರ್ಷಗಳಿಂದ (ಕೋವಿಡ್ 19 ರ ಅವಧಿಯ ಎರಡು ವರ್ಷಗಳನ್ನು ಹೊರತುಪಡಿಸಿ) ಆಯೋಜನೆ ಮಾಡುತ್ತಿದ್ದು, ಈ ಬಾರಿ 'ಓಣವರ್ಣಂಗಲ್ 2022' ಶೀರ್ಷಿಕೆಯಡಿಯಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಆವರಣದಲ್ಲಿರುವ ದ್ವಾರಕ ಹಾಲ್ ನಲ್ಲಿ ವಿವಿಧ ಕಲೆ ಹಾಗೂ ಸಾಂಸ್ಕೃತಿಕ ಕಲಾ ಮಹೋತ್ಸವವನ್ನು ಸಮನ್ವಯ ಹೆಬ್ಬಾಳ ಭಾಗದ ಮೇಲುಸ್ತುವಾರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮನ್ವಯ ಹೆಬ್ಬಾಳ ಭಾಗದ ಅಧ್ಯಕ್ಷ ಎಂ.ಡಿ.ವಿಶ್ವನಾಥನ್ ನಾಯರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ರೈಲ್ವೆಯಲ್ಲಿ ಪ್ಯಾಸೆಂಜರ್ ಅಮೆನಿಟೀಸ್ ಸಮಿತಿಯ ಅಧ್ಯಕ್ಷರಾಗಿರುವ ಪಿ.ಕೆ.ಕೃಷ್ಣದಾಸ್ ಪಾಲ್ಗೊಂಡು ದೀಪವನ್ನು ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಮಯ್ಯ ಇಂದಿಕ್ ಸ್ಪೆಷ್ಯಾಲಿಟಿ ಆಯುರ್ವೇದ ಪುನಶ್ಚೇತನ ಆಸ್ಪತ್ರೆಯ ನಿರ್ದೇಶಕರು ಹಾಗೂ ಸಮನ್ವಯ ಟ್ರಸ್ಟ್ ಅಧ್ಯಕ್ಷರಾಗಿರುವ ಪ್ರೋ. ಡಾ. ಜಿ.ಜಿ.ಗಂಗಾಧರನ್, ಸಮನ್ವಯ ಟ್ರಸ್ಟ್ ನ ಪೋಷಕರಾದ ಪ್ರೋ ಕೆ.ಐ.ವಾಸು, ಕಾರ್ಯದರ್ಶಿ ಪಿ.ಎಂ.ಧನರಾಜ್, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಉಪಸ್ಥಿತರಿದ್ದರು. ಬೆಂಗಳೂರಿನ ನಾನಾ ಕಡೆಗಳಿಂದ ಸಂಘದ ಸದಸ್ಯರು ಹಾಗೂ ಕುಟುಂಬ ವರ್ಗದವರು ಪಾಲ್ಗೊಂಡಿದ್ದ ಕಾರ್ಯಕ್ರಮ ದಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪೂಕಳಂ (ಕೇರಳಿಗರ ವಿಶಿಷ್ಟ ಹೂವಿನ ರಂಗೋಲಿ ಬಿಡಿಸುವುದು) ಸ್ಪರ್ಧೆಯನ್ನು ಸಹ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ 'ಓಣಂಸದ್ಯ' (ಓಣಂ ಹಬ್ಬದಲ್ಲಿ ತಯಾರಿಸಲಾಗುವ ವೈವಿಧ್ಯಮಯ ಅಡುಗೆ) ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇರಳಿಯರು ಭಾಗವಹಿಸಿದ್ದರು.
0 Comments