ಬೆಂಗಳೂರು, ಸೆಪ್ಟೆಂಬರ್ 05: ನಿನ್ನೆ ರಾತ್ರಿ ನಗರದಲ್ಲಿ ಸುರಿದ ಮಳೆಗೆ ಕಾವೇರಿ ನೀರು ನಿರ್ವಹಿಸುವ ಬೆಂಗಳೂರು ಜಲ ಮಂಡಳಿ ಟಿ. ಕೆ.ಹಳ್ಳಿ ಘಟಕದಲ್ಲಿ ಹೆಚ್ಚು ನೀರು ನುಗ್ಗಿ ತೊಂದರೆಯಾಗಿದ್ದು, ಶಿಕ್ಷಕರ ದಿನಾಚರಣೆ ಮುಗಿದ ಕೂಡಲೇ ಟಿ. ಕೆ.ಹಳ್ಳಿಗೆ ಭೇಟಿ ನೀಡಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಬೆಂಗಳೂರು ಜಲ ಮಂಡಳಿ ಅಧಕ್ಷರು, ಇಂಜಿನಿಯರ್ ಗಳು ಹಾಗೂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳನ್ನು ಈಗಾಗಲೇ ಅಲ್ಲಿಗೆ ಕಳುಹಿಸಲಾಗಿದೆ. ಮಂಡ್ಯ ಜಿಲ್ಲೆಯ ಅಧಿಕಾರಿಗಳು ಇದ್ದು ನೀರು ತೆಗೆಯುವ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಬಹುತೇಕ ಸಂಜೆಯೊಳಗೆ ಪರಿಸ್ಥಿತಿ ತಹಬಂದಿಗೆ ಬರಲಿದೆ.ಕೂಡಲೇ ಯಂತ್ರೋಪಕರಣಗಳ ಚಾಲನೆ ಮಾಡಲು ತಾಂತ್ರಿಕ ಬೆಂಬಲ ನೀಡಿ ತುರ್ತು ಕೆಲಸ ಮಾಡಲಾಗುತ್ತಿದೆ. ಮಧ್ಯಾಹ್ನ ಭೇಟಿ ನೀಡಿ ಅಗತ್ಯ ಸೂಚನೆ ನೀಡಲಾಗುವುದು ಎಂದರು.
2 ಎಸ್.ಡಿ.ಆರ್.ಎಫ್.ತಂಡ
ಬೆಂಗಳೂರಿನಲ್ಲಿಯೂ ಹೆಚ್ಚಿನ ಮಳೆಯಾಗಿದ್ದು, ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯದಲ್ಲಿ 30 ಕ್ಕೂ ಹೆಚ್ಚು ಕಡೆ ಹಾನಿಯಾಗಿದೆ. ತಲಾ 30 ಜನರುಳ್ಳ ಎರಡು ಎಸ್.ಡಿ.ಆರ್.ಎಫ್.ತಂಡವನ್ನು ಅಲ್ಲಿಗೆ ಕಳುಹಿಸಲು ಸೂಚನೆ ನೀಡಲಾಗಿದೆ. ರಸ್ತೆಗಳ ಮೇಲೆ ನೀರು ನಿಂತಿರುವುದನ್ನು ತೆಗೆಯಲು ಸೂಚಿಸಿದ್ದು, ಈಗಾಗಲೇ ಯೋಜಿಸಿದಂತೆ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಲಾಗುವುದು ಎಂದರು.
0 Comments