ಬೆಂಗಳೂರು : ಇಂದು ಪ್ರಪಂಚಾದ್ಯಂತ ಹೆಚ್ಚಾಗುತ್ತಿರುವ ಹಲವು ಮಾಲಿನ್ಯಗಳ ಆತಂಕದ ನಡುವೆ, ಇತ್ತೀಚಿಗಿನ ಹವಾಮಾನ ವೈಪರೀತ್ಯಗಳು ಹಾಗೂ ಅದರ ದುಶ್ಪರಿಣಾಮಗಳು ಅದರ ಜೊತೆಯಲ್ಲಿ ಕೊಸರೆಂಬಂತೆ ಸಮಾಜವು ತನಗರಿವಿದ್ದೂ, ಅರಿವಿಲ್ಲದಂತೆ ಅನಿವಾರ್ಯವಾಗಿ ಅಳವಡಿಸಿಕೊಂಡಿರುವ ಅಸಮರ್ಪಕವಾದ ಜೀವನಶೈಲಿಯಿಂದಾಗಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಆಬಾಲವೃದ್ಧರಾದಿಯಾಗಿ ಎಲ್ಲರೂ ತಮ್ಮ ಸ್ವಾಸ್ಥ್ಯವನ್ನು ನಿರ್ಲಕ್ಷ್ಯ ಮಾಡಿರುವ ಪರಿಣಾಮವಾಗಿ ಇಂದು ಆಹಾರಕ್ಕಿಂತ ಔಷಧಿಗಳ ಮೇಲೆ ಅವಲಂಭಿಸಿದ ಬದುಕು ಎಂಬಂತಾಗಿದೆ.
ಜಾಗತಿಕ ಮಟ್ಟದಲ್ಲಿ ಅನೇಕ ವಿಚಾರಗಳಲ್ಲಿ ಹೆಸರು ಮಾಡಿರುವ ನಮ್ಮ ಬೆಂಗಳೂರು ಹಾಗೂ ಇಲ್ಲಿನ ಗುಣವಿಶೇಷತೆಯು, ಸಮಾಜಮುಖಿ ಚಿಂತನೆಯಲ್ಲೂ ಮುಂದು ಎನ್ನುವ ಸಾಧನೆಯೆಡೆಗೆ ಪ್ರಯತ್ನಶೀಲ ಹೆಜ್ಜೆಯನ್ನು ಹಾಕಲು ಸೈಕಲ್ ಮಾರಾಟದಿಂದಾಗಿ ಬದುಕನ್ನು ಕಟ್ಟಿಕೊಂಡಿರುವ ವರ್ಗದವರು ಒಗ್ಗೂಡಿ, ಸಮಾಜಕ್ಕೆ ಆರೋಗ್ಯಪೂರ್ಣ ಬದುಕನ್ನು ಕಟ್ಟಿಕೊಡುವ ಮಹತ್ವಾಕಾಂಕ್ಷೆಯ ಆಶಯವನ್ನು ಸಾಕಾರಗೊಳಿಸಲು ಭಾನುವಾರ ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತು ಆವರಣದಲ್ಲಿ ಅಧಿಕೃತವಾಗಿ ಕರ್ನಾಟಕ ಬೈಸಿಕಲ್ ಡೀಲರ್ಸ್ ಅಸೋಸಿಯೇಷನ್ (ರಿ) ನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭಾನುವಾರದ ಮುಂಜಾನೆ, ತಂಪಾದ ವಾತಾವರಣದಲ್ಲಿ ಸಾಂಕೇತಿಕವಾಗಿ ಚಿತ್ರಕಲಾ ಪರಿಷತ್ತಿನ ಅಂಗಳದಿಂದ ಹೊರಟು 6 ಕಿ.ಮೀ. ಸುತ್ತಿಬರುವ ಸೈಕಲ್ ರ್ಯಾ ಲಿಯಲ್ಲಿ ನಗರದ ನಾನಾಭಾಗಗಳಿಂದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸೈಕಲ್ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಸೈಕಲ್ ರ್ಯಾ ಲಿಯನ್ನು ಅಧ್ಯಕ್ಷರಾದ ನೀಲೇಶ್ ಎಸ್ ಶಾ ರವರು ಕೆಬಿಡಿಎ ಪತಾಕೆಯನ್ನು ಬೀಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಸಂಘದ ಉಪಾಧ್ಯಕ್ಷ ಗೌತಮ್ ಶಾ, ಕಾರ್ಯದರ್ಶಿ ಕಮಲೇಶ್ ಹೆಚ್ ಸಂಘ್ವಿ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಳದಿ ಬಣ್ಣದ 'ಜಾಯಿನ್ ದಿ ರೆವೆಲ್ಯೂಷನ್' ಎಂದು ಕರೆ ಕೊಡುವ ಆಕರ್ಷಣೀಯ ಸಂದೇಶವನ್ನು ಸಾರುವ ಸಂಸ್ಥೆಯ ಪ್ರಾಯೋಜಿತ ಟೀ ಶರ್ಟ್ ಗಳನ್ನು ಧರಿಸಿದ್ದ, ಉತ್ಸಾಹಿ ಯುವಕ-ಯುವತಿಯರ ನಡುವೆ ಹಿರಿಯ ನಾಗರೀಕರು, ಶಾಲಾ ಬಾಲಕಿ ಹಾಗೂ ಅದರಲ್ಲೂ ವಿಶೇಷವಾಗಿ ಜರ್ಮನ್ ಮಹಿಳೆಯೋರ್ವರು ತಮ್ಮ 23 ತಿಂಗಳ ಪುಟಾಣಿ ಮಗುವನ್ನು ಸಹ ತಮ್ಮ ಸೈಕಲ್‌ನ ಹಿಂಭಾಗದ ಬೇಬಿ ಸೀಟ್ ನಲ್ಲಿ ಕೂರಿಸಿಕೊಂಡು ಹೊರಟು ಕ್ರಿಸೆಂಟ್ ರಸ್ತೆ, ವಿಧಾನ ಸೌಧ, ರಾಜಭವನ ರಸ್ತೆ, ಗಾಲ್ಫ್ ಗ್ರೌಂಡ್ ರಸ್ತೆಗಳಲ್ಲಿ ಸುತ್ತಿ ಹಿಂತಿರುಗಿದ ಈ ಸೈಕಲ್ ಸವಾರಿಯು ವಿಶೇಷವಾಗಿ ನೋಡುಗರೆಲ್ಲರ ಗಮನ ಸೆಳೆಯಿತು.
ನಗರದಲ್ಲಿ ತಲೆಮಾರುಗಳ ಕಾಲದಿಂದಲೂ ತಾತ ಮಗ ಮೊಮ್ಮಕ್ಕಳು ಎಂಬಂತೆ, ಇಂದಿಗೂ ಸೈಕಲ್ ವ್ಯಾಪಾರದಲ್ಲಿಯೇ ಬದುಕು ಕಟ್ಟಿಕೊಂಡ ನೂರಾರು ಕುಟುಂಬಗಳು, ರಾಜ್ಯ ಮಟ್ಟದಲ್ಲಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಕೋವಿಡ್ 19 ಮಹಾಮಾರಿ 2020 ರಲ್ಲಿ ಇಡೀ ಪ್ರಪಂಚವನ್ನು ಮೊಣಕಾಲು ಊರುವಂತೆ ಮಾಡಿದ ಕರಾಳತೆಯ ಆ ದುರ್ಭರ ಕಾಲಘಟ್ಟದಲ್ಲಿ, ಅನೇಕ ರೀತಿಯಲ್ಲಿ ನಮ್ಮ ಸಮಾಜದ ಎಲ್ಲಾ ರಂಗಗಳ ಮೇಲು ಆದ ಹಾಗೆಯೇ ದುಶ್ಪರಿಣಾಮಗಳನ್ನು ಈ ಉದ್ಯಮವನ್ನು ಅವಲಂಭಿಸಿದ ಜನರು ಅನುಭವಿಸಲೇಬೇಕಾಯಿತು, ಅಂತಹ ಪರಿಸ್ಥಿತಿಯಲ್ಲಿ ವೃತ್ತಿಬಾಂಧವರ ಜೊತೆಗೆ ಸಂಕಷ್ಟದಲ್ಲಿದ್ದ ಸಮಾಜವನ್ನು ಆಧರಿಸುವ, ನೆರವನ್ನು ಒದಗಿಸುವ ಇಚ್ಛೆ ಹಾಗೂ ಸಾಮರ್ಥ್ಯವನ್ನು ಹೊಂದಿದ್ದಾಗ್ಯೂ, ಅಸಹಾಯಕರಾಗಿ ಕೈಕಟ್ಟಿ ಕೂರುವಂತಹ ಪರಿಸ್ಥಿತಿಯಿಂದ ಬೇಸರಗೊಂಡು, ಅಗತ್ಯ ಸಮಯದಲ್ಲಿ ಸಮಾಜಕ್ಕೆ ನಿರುಪಯುಕ್ತರಾದೆವಲ್ಲ ಎಂಬ ಹಪಹಪಿಯಿಂದ ತಲ್ಲಣಿಸಿ ಮಿಡಿದ ಸಮಾನ ಮನಸ್ಕರೆಲ್ಲರೂ ಕೂಡಿ, ಅಸಂಘಟಿತರಾಗಿದ್ದ ಉದ್ಯಮನಿರತರೆಲ್ಲರ ಸಹಕಾರದಿಂದ, ಸರ್ಕಾರದ ನೀತಿ ನಿಯಮಾನುಸಾರ ಕಾನೂನುಬದ್ಧ ನೋಂದಾಯಿತ ಅಸೋಸಿಯೇಷನ್ ಆಗಿ ಕೆಬಿಡಿಎ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲು ಕಾರಣವಾಯಿತೆಂದು ಅಧ್ಯಕ್ಷರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಶಿವಾಜನಗರ ವಿಧಾನ ಸಭಾ ಕ್ಷೇತ್ರದ ಶಾಸಕ ರಿಜ಼್ವಾನ್ ಹರ್ಷದ್ ರವರು ಅಸೋಸಿಯೇಷನ್ ನ ಲಾಂಛನದ ಬಿಡುಗಡೆ ಹಾಗೂ ಡಿ.ಯು.ಎಲ್.ಟಿ. ಆಯುಕ್ತರಾದ ಶ್ರೀಮತಿ ಮಂಜುಳ ವಿ. ರವರು ಅಸೋಸಿಯೇಷನ್ ವೆಬ್‌ಸೈಟ್ ನ್ನು ಅನಾವರಣಗೊಳಿಸಿದರು. ಈ ವೇಳೆ ಎಫ್ ಕೆ ಸಿ ಸಿ ಐ ನಿರ್ದೇಶಕರಾದ ಪಿ.ಹೆಚ್.ರಾಜ್ ಪುರೋಹಿತ್, ಪ್ರಕಾಶ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿಯ ಪರಿಧಿಯಲ್ಲಿ ನಗರದಲ್ಲಿ ಸೈಕಲ್ ಸವಾರರಿಗೆ ಅನುಕೂಲಕರವಾಗುವಂತೆ ರಸ್ತೆಗಳಲ್ಲಿ ವೈಜ್ಞಾನಿಕ ತಳಹದಿಯ ಆಧಾರಿತವಾಗಿ ಎಲ್ಲಾ ಬಗೆಯ ಮಾನದಂಡವನ್ನು ಪರಿಗಣಿಸಿ ಅಗತ್ಯ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿ ಅವರ ಸಮಕ್ಷಮದಲ್ಲಿ ಸರ್ಕಾರದೊಂದಿಗೆ ವಿವಿಧ ವಿಚಾರವಾಗಿ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಈ ವೇಳೆ ಕೆಬಿಡಿಎ ಹಾಗೂ ಸರ್ಕಾರದ ನಡುವೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಯಿತು. ಸೈಕಲ್ ಸವಾರಿಯನ್ನು ಪ್ರಚುರ ಪಡಿಸಿ ಉತ್ತೇಜಿಸುವುದ ರೊಂದಿಗೆ ಅಸೋಸಿಯೇಷನ್ ವತಿಯಿಂದ ಸೈಕಲ್ ರೈಡಿಂಗ್ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆಯೋಜಿಸುವ ಉದ್ದೇಶವು ಸೇರಿದೆ.
ಸಾರ್ವಜನಿಕವಾಗಿ ಎಲ್ಲರೂ ಒಪ್ಪುವ, ವೈಜ್ಞಾನಿಕವಾಗಿಯೂ ಆರೋಗ್ಯಕ್ಕೆ ಪೂರಕವಾದ ವ್ಯಾಯಾಮಗಳ ಪೈಕಿ ಮುಂಚೂಣಿಯಲ್ಲಿ ಕೇಳಿಬರುವುದು ಈಜುಗಾರಿಕೆ (ಸ್ವಿಮ್ಮಿಂಗ್) ಹಾಗೂ ಸೈಕಲ್ ತುಳಿಯುವುದು (ಸೈಕ್ಲಿಂಗ್) ಇವೆರಡೂ ದೇಹಕ್ಕೆ ಉತ್ತಮ ವ್ಯಾಯಾಮವನ್ನು ಒದಗಿಸುವಲ್ಲಿ ಪೈಪೋಟಿಯನ್ನು ನೀಡುವಂತಹ ಚಟುವಟಿಕೆಗಳಾಗಿದ್ದು, ಜನರು ಅತಿ ಸುಲಭವಾಗಿ ಬಳಸಲು ಎಲ್ಲಾ ಸಮಯಗಳಲ್ಲಿಯೂ ಉಪಯೋಗಕ್ಕೆ ಬರುವುದರಲ್ಲಿ ಸೈಕ್ಲಿಂಗ್ ಗೆ ಮಹತ್ವದ ಪಾತ್ರವನ್ನು ನಿಭಾಯಿಸುವ ಅವಕಾಶ ಹೆಚ್ಚು. ಕೆಲಸ ಕಾರ್ಯಗಳ ನಿಮಿತ್ತ, ಉದಾಹರಿಸುವುದಾದರೆ ಅತ್ಯವಸರ ಪರಿಸ್ಥಿತಿಯನ್ನು ಹೊರತುಪಡಿಸಿ, ಒಂದೆರಡ್ಮೂರು ಫರ್ಲಾಂಗ್ ಸಂಚರಿಸುವ ಸಲುವಾಗಿ ದ್ವಿಚಕ್ರ ಮೊಟಾರು ವಾಹನಗಳ ಬಳಕೆಯು ದುಬಾರಿಯಾಗಿರುವ ಪೆಟ್ರೋಲ್ ಬೆಲೆಯ ಉದಾಹರಣೆ ನೀಡುವ ಜೊತೆಗೆ ಪರಿಸರ ಹಾಗೂ ವಾತಾವರಣದ ಮೇಲೆ ಇಂಧನ ಪ್ರದೂಷಣೆಯ ಕಾರಣದಿಂದಾಗಿ ಈಗಾಗಲೇ ಆಗಿರುವ ವ್ಯತಿರೇಕ ಪರಿಣಾಮ ನಮ್ಮೆಲ್ಲರ ಗಮನಕ್ಕೂ ಬಂದಿದೆ ಅಲ್ಲವೇ ? ಎಂದ ಅಧ್ಯಕ್ಷರು, ರಾಜ್ಯದಲ್ಲಿ ಈಗ ಶೇ 32 % ಜನರು ಸೈಕಲ್ ಹೊಂದಿದ್ದಾರೆ, ಇಡೀ ರಾಜ್ಯದಲ್ಲಿ ಮುಂದಿನ ಒಂದೆರಡು ವರ್ಷಗಳಲ್ಲಿ 5 ಕೋಟಿ ಜನರು ಸೈಕಲ್‌ಗಳನ್ನು ಬಳಸುವಂತಾಗುವ ಗುರಿಯನ್ನು ಅಸೋಸಿಯೇಷನ್ ಹೊಂದಿದ್ದು ಅದಕ್ಕೆ ಪೂರಕ ಪ್ರೇರಕ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಹಮ್ಮಿಕೊಂಡು, ನಮ್ಮ ಬೆಂಗಳೂರು ನಗರವನ್ನು ಭಾರತ ದೇಶದ ಸೈಕಲ್‌ಗಳ ರಾಜಧಾನಿಯನ್ನಾಗಿ ಪರಿವರ್ತಿಸುವ ಜೊತೆಗೆ ಜನರ ಆರೋಗ್ಯ ವೃದ್ಧಿಸಲು ಹಾಗೂ ಪರಿಸರ ಮಾಲಿನ್ಯ, ವಾಯು ಮಾಲಿನ್ಯ ಸಮಸ್ಯೆಯಿಂದ ಮುಕ್ತಿಯ ಸಂಕಲ್ಪದೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಕೆಬಿಡಿಎ ತನ್ನ ಆಶಯವನ್ನು ನೆರವೇರಿಸುವುದರೊಂದಿಗೆ ಶತಮಾನೋತ್ಸವವನ್ನು ಆಚರಿಸಲಿ ಎಂದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪರಿಸರ ಪ್ರೇಮಿಗಳು ಹಾಗೂ ಸೈಕ್ಲಿಂಗ್ ಆಸಕ್ತರು ಹಾರೈಸಿದರು.

.jpeg)

.jpeg)

0 Comments