ವಾರ್ತಾಜಾಲ,ಶಿಡ್ಲಘಟ್ಟ : ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದ ಮೂಲಕ ಅಪೌಷ್ಟಿಕತೆ ವಿರುದ್ಧ ಹೋರಾಡಲು ವ್ಯಾಪಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಸಹಕರಿಸಬೇಕು, ಜತೆಗೆ ಇದರ ಉಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೆ ಹನುಮಂತಪ್ಪ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಅಪೌಷ್ಠಿಕತೆಯ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೆಪ್ಟೆಂಬರ್‌ನಲ್ಲಿ ಪೌಷ್ಟಿಕ ಆಹಾರ ಮಾಸಾಚಾರಣೆ ನಿಮಿತ್ತ ಪ್ರತಿವಾರ ನಾನಾ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನಿಷ್ಠ 2 ವರ್ಷಗಳವರೆಗೆ ಎದೆ ಹಾಲು ನೀಡುವುದರಿಂದ ಮಗು ಸಶಕ್ತವಾಗಿ ಮತ್ತು ಆರೋಗ್ಯವಾಗಿ ಬೆಳೆಯಲು ಸಹಾಯಕವಾಗುತ್ತದೆ. ಆರು ತಿಂಗಳಿನಿಂದ ಪೂರಕ ಆಹಾರ ಪಡೆಯುವ ಮಗು ಉತ್ತಮ ಬೆಳವಣಿಗೆ ಹೊಂದುತ್ತದೆ. ಮನೆಯಲ್ಲಿಯೇ ತಯಾರಿಸಿದ ಮಂದವಾದ ಮೃದು ಸಾಂಧ್ರತೆಯಿರುವ ಚಮಚೆಯಲ್ಲಿ ಸುಲಭವಾಗಿ ನಿಲ್ಲುವ ಆಹಾರ ಸುಲಭವಾಗಿ ಜೀರ್ಣಗೊಂಡು ಮಗುವಿನ ಹೊಟ್ಟೆ ತುಂಬಿಸುತ್ತದೆ ಎಂದರು.
ದ್ವಿದಳ ಧಾನ್ಯ-ಬಟಾಣಿ ಬೀನ್ಸ್, ಅವರೆ ಮತ್ತು ಬೇಳೆ ಕಾಳುಗಳು ಪೌಷ್ಟಿಕಾಂಶದ ಉತ್ತಮ ಮೂಲಗಳು. ವಿಟಮಿನ್ ಸಿ ಹೆಚ್ಚಿರುವ ಆಹಾರಗಳು ಕಬ್ಬಿಣಾಂಶದ ಹೀರುವಿಕೆಗೆ ಸಹಕಾರಿ, ದಟ್ಟ ಹಸಿರೆಲೆಗಳು ಮತ್ತು ಕಿತ್ತಳೆ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು ವಿಟಮಿನ್ ಎ ನಿಂದ ಸಂಪದ್ಭರಿತವಾಗಿದೆ. ಬೆಳೆಯುವ ಮಗುವಿಗೆ ಮೇಲಿಂದ ಮೇಲೆ ಅಲ್ಪ ಆಹಾರದ ಅವಶ್ಯಕತೆ ಇರುತ್ತದೆ. ನಾನಾ ರೀತಿಯ ಆಹಾರ ನೀಡಬೇಕು, ಬೆಳೆಯುವ ಮಗುವಿಗೆ ಆಹಾರ ಪ್ರಮಾಣದಲ್ಲಿ ಏರಿಕೆ ಅಗತ್ಯವಿದೆ. ಬೆಳೆಯುತ್ತಿರುವ ಮಗುವಿಗೆ ತಾನೇ ತಿನ್ನಲು ಕಲಿಸಿ ಪ್ರೋತ್ಸಾಹಿಸಿರಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಪೌಷ್ಟಿಕತೆ ವಿರುದ್ಧ ಹೋರಾಡಲು ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಅನಾವರಣಗೊಳಿಸಲಾಯಿತು. ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಸಿಡಿಪಿಒ ನವತಾಜ್, ಎಸಿಡಿಪಿಒ ಬಿ.ವಿ.ಮಹೇಶ್, ಮೇಲ್ವಿಚಾರಕರಾದ ರಾಧಮ್ಮ, ಶಶಿಕಲಾ, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

0 Comments