ಬೆಂಗಳೂರು : ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಯಶವಂತಪುರದ ಶ್ರೀ ಕರುಮಾರಿಯಮ್ಮ ದೇವಸ್ಥಾನದ ಆವರಣದಲ್ಲಿ ಪ್ರಥಮ ಬಾರಿಗೆ ಶ್ರೀ ವಿಶ್ವಕರ್ಮ ಬಿಹಾರ್ ಸಮಾಜ ಸೇವಾ ಟ್ರಸ್ಟ್ (ರಿ) ನ ವತಿಯಿಂದ ನವರಾತ್ರಿಯ ಅಂಗವಾಗಿ ದುರ್ಗಾ ಪೂಜಾ ಮಹೋತ್ಸವವನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆವಿಗೂ ಒಂಬತ್ತು ದಿನಗಳ ಕಾಲ ಆಯೋಜಿಸಲಾಗಿದೆ.
ಸುತ್ತಮುತ್ತಲಿನ ಪ್ರದೇಶಗಳಾದ ಮತ್ತೀಕೆರೆ, ಎಂ.ಎಸ್.ಆರ್.ನಗರ, ಜಾಲಹಳ್ಳಿ, ಸುಭೇದಾರ ಪಾಳ್ಯ, ಮುತ್ಯಾಲನಗರ, ಮೋಹನ್ ಕುಮಾರ ನಗರ ಹಾಗೂ ಇತರೆ ಭಾಗಗಳಲ್ಲಿ ವಾಸಿಸುತ್ತಿರುವ ಬಿಹಾರ ರಾಜ್ಯ ಮೂಲದ ಸುಮಾರು ನಾಲ್ಕೈದು ಸಾವಿರ ಕುಟುಂಬಗಳನ್ನೊಳಗೊಂಡಿರುವ ಮರಗೆಲಸ, ಪೈಂಟಿಂಗ್ ಮುಂತಾದ ವೃತ್ತಿಯಲ್ಲಿ ನಿರತರಾಗಿ ಒಂದೆರಡು ದಶಕಗಳಿಂದ ಈ ಭಾಗದಲ್ಲಿ ಖಾಯಂ ಆಗಿ ನೆಲೆಸಿರುವ ವಿಶ್ವಕರ್ಮ ಜನಾಂಗದವರ ಪ್ರಮುಖ ಧಾರ್ಮಿಕ ಆಚರಣೆ ಸಂಪ್ರದಾಯಗಳಲ್ಲಿ ಮುಖ್ಯ ವಾಗಿರುವ ದುರ್ಗಾ ದೇವಿಯ ನವರಾತ್ರಿ ಆಚರಣೆ ಈ ಸುತ್ತಮುತ್ತಲಿನ ತಮ್ಮ ಬಂಧುಬಾಂದವರೆಲ್ಲರೂ ಕೂಡಿ ಭಕ್ತಿ ಶ್ರದ್ಧೆಯಿಂದ ಸಂಪ್ರದಾಯದಂತೆ ಆಚರಿಸುತ್ತಿದ್ದು, ಪ್ರತಿದಿನ ಪ್ರಾತಃ ಸಂಜೆ ವಿಶೇಷ ಪೂಜೆ ಹಾಗೂ ದೇವಿಯ ಸ್ತೋತ್ರ ಭಜನೆಗಳನ್ನು ಆಯೋಜಿಸಲಾಗಿದ್ದು ನವಮಿ ದಿನದಂದು (ಅಕ್ಟೋಬರ್ 4) ಸಾರ್ವಜನಿಕ ಅನ್ನ ಸಂತರ್ಪಣೆ, ದಶಮಿಯಂದು (ಅಕ್ಟೋಬರ್ 5) ದೇವಿಯ ವಿಗ್ರಹಗಳನ್ನು ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ಕೊಂಡೊಯ್ದು ಜೆ.ಪಿ.ಪಾರ್ಕ್ ನಲ್ಲಿರುವ ಕಲ್ಯಾಣಿಯಲ್ಲಿ ಸಂಪ್ರದಾಯದಂತೆ ಅಮ್ಮನವರ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುವುದೆಂದು ಅಧ್ಯಕ್ಷ ಬ್ರಿಜೇಶ್ ಶರ್ಮಾ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜನ್ ಕುಮಾರ್ ಶರ್ಮಾ, ಖಜಾಂಚಿ ಪ್ರದೀಪ್ ಕುಮಾರ್ ಶರ್ಮಾ, ಕಾರ್ಯದರ್ಶಿ ಸಂತೋಷ್ ಶರ್ಮಾ, ಅಕೌಂಟೆಂಟ್ ಶಶಿ ಭೂಷಣ್ ಶರ್ಮಾ ಮುಂತಾದವರು ಉಪಸ್ಥಿತರಿದ್ದರು. ಮುಂಬರುವ ಅಕ್ಟೋಬರ್ ತಿಂಗಳ 30 ರಂದು ಬಿಹಾರ ಸಮಾಜದ ಜನರು ಆಚರಿಸುವ ಚತ್ ಪೂಜಾ ಕಾರ್ಯಕ್ರಮವನ್ನು ಜೆ.ಪಿ.ಪಾರ್ಕ್ ನ ಕಲ್ಯಾಣಿಯ ಹತ್ತಿರ ಆಯೋಜಿಸಲಾಗಿದ್ದು, ಮುಂಜಾನೆ 5 ರಿಂದ 8 ಹಾಗೂ ಮುಸ್ಸಂಜೆ 3 ರಿಂದ 6 ಗಂಟೆಯ ವರೆವಿಗೂ ಆಚರಣೆ ಮಾಡುವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.

0 Comments