ವಾರ್ತಾ ಜಾಲ ಸುದ್ದಿ ಮಧುಗಿರಿ:- ಪಟ್ಟಣದಲ್ಲಿ ಮತ್ತು ತಾಲ್ಲೂಕಿನಲ್ಲಿ ಗಣಪತಿ ವಿಗ್ರಹ ಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಮುನ್ನಾ ಎಲ್ಲಾ ಇಲಾಖೆಗಳಿಂದ ಪರವಾನಿಗೆ ಪಡೆದು ಪ್ರತಿಷ್ಠಾಪಿಸಿ ಎಂದು ಸಿಪಿಐ ಎಂ. ಎಸ್. ಸರ್ದಾರ್ ತಿಳಿಸಿದರು.
ಮಧುಗಿರಿ ಪೊಲೀಸ್ ಠಾಣಾ ಆವರಣದಲ್ಲಿ ಬುಧವಾರದಂದು ಗಣಪತಿ ಪ್ರತಿಷ್ಠಾಪಿಸುವ ಮಂಡಳಿಗಳ ಅಧ್ಯಕ್ಷರು ,ಸದಸ್ಯರುಗಳು ಹಾಗೂ ಯುವಕರ ಸಮೂಹದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರದ ಆದೇಶದಂತೆ ಸ್ಥಳೀಯ ಸಂಸ್ಥೆಗಳಾದ ಪಟ್ಟಣಗಳಲ್ಲಾದರೆ ಪುರಸಭೆ, ಗ್ರಾಮಗಳಲ್ಲಾದರೆ ಗ್ರಾಮ ಪಂಚಾಯಿತಿ, ಬೆಸ್ಕಾಂ,ಅಗ್ನಿಶಾಮಕ ಠಾಣೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ವತಿಯಿಂದ ಅನುಮತಿ ಪಡೆದು ಪ್ರತಿಷ್ಠಾಪಿಸಬೇಕು ಎಂದು ತಿಳಿಸಿದರು.
ಪ್ರತಿಷ್ಠಾಪಿಸುವ ಸ್ಥಳವು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಖಾಸಗಿ ಸ್ಥಳವಾದರೆ ಖಾಸಗಿಯವರಿಂದ ಅನುಮತಿ ಪಡೆಯಲೇಬೇಕು. ಈ ಬಾರಿ ಕೆರೆ ಕಟ್ಟೆಗಳಲ್ಲಿ ನೀರು ತುಂಬಿರುವುದರಿಂದ ಯಾವುದೇ ಕಾರಣಕ್ಕೂ ಗಣೇಶ ವಿಸರ್ಜನೆ ಯನ್ನು ಕೆರೆಕಟ್ಟೆಗಳಲ್ಲಿ ಮಾಡಿ ಪರಿಸರವನ್ನು ಹಾಳು ಮಾಡಬೇಡಿ. ಪುರಸಭೆ ವತಿಯಿಂದ ತಾತ್ಕಾಲಿಕವಾಗಿ ನಿರ್ಮಿಸಿರುವ ಹೊಂಡಗಳಲ್ಲಿ ಗಣೇಶ ವಿಸರ್ಜನೆ ಮಾಡಿ ಎಂದರು.
ಮೆರವಣಿಗೆ ಸಂದರ್ಭದಲ್ಲಿ ಡಿಜೆ ಯನ್ನು ಯಾವುದೇ ಕಾರಣಕ್ಕೂ ಉಪಯೋಗಿಸುವಂತಿಲ್ಲ, ಪರಿಸರಕ್ಕೆ ಹಾನಿಕರ ಗಣೇಶಗಳನ್ನು ಪ್ರತಿಷ್ಠಾಪಿಸದೆ ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾಪಿಸಬೇಕು. ಕಳೆದೆರಡು ವರ್ಷಗಳಿಂದ ಕರೋನಾ ಕಾರಣದಿಂದಾಗಿ ಗಣೇಶೋತ್ಸವಗಳು ನಡೆದಿರಲಿಲ್ಲ, ಈ ಬಾರಿ ಯುವಕರು ಉತ್ಸಾಹ ಭರದಲ್ಲಿ ಕಾನೂನು ಪಾಲಿಸಬೇಕೆಂದರು.
ಈ ವೇಳೆ ಬೆಸ್ಕಾಂ ಇಲಾಖೆ ಎಇಇ ನಾಯಕ್ , ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಅಣ್ಣಪ್ಪ ಗಡಿಗೆರೆ, ಪುರಸಭೆಯ ಆರೋಗ್ಯ ನಿರೀಕ್ಷಕ ಬಾಲಾಜಿ, ಪುರಸಭಾ ಸದಸ್ಯ ಲಾಲಾಪೇಟೆ ಮಂಜುನಾಥ್, ಮಾಜಿ ಸದಸ್ಯ ಅರ್ ಎಲ್ ಎಸ್ ರಮೇಶ ಪತ್ರಕರ್ತರುಗಳಾದ ಜಿ. ನಾರಾಯಣ ರಾಜು, ಜಲಾಲ್ ಪಾಷಾ ಹಾಗೂ ಮಂಡಲಿ ಗಣಪತಿ ಪ್ರತಿಷ್ಠಾಪಿಸುವ ಮಂಡಳಿಯವರು ಹಾಜರಿದ್ದರು.
0 Comments