ವಾರ್ತಾಜಾಲ ಸುದ್ದಿ ಮಧುಗಿರಿ : ದೇಶಭಕ್ತರು, ಹೋರಾಟಗಾರರ ತ್ಯಾಗ ಬಲಿದಾನದ ಸಂಕೇತವಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದೆ. ರಕ್ತದ ಕಾಲುವೆಯನ್ನು ಹರಿಸಿ, ಲಕ್ಷಾಂತರ ಜನರ ವೀರ ಮರಣದ ಪ್ರತಿಫಲವೇ ಸ್ವಾತಂತ್ರ್ಯ. ಇಂತಹ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಎಲ್ಲ ಭಾರತೀಯರ ಆದ್ಯ ಕರ್ತವ್ಯ. ಸ್ವಾತಂತ್ರ್ಯ ನಂತರ ಭಾರತ ಎಲ್ಲ ರಂಗಗಳಲ್ಲೂ ಮಂಚೂಣಿಯಾಗಿ ಬೆಳೆದು ನಿಂತಿದೆ. ವಿಶ್ವವೇ ಬೆರಗುಗೊಳ್ಳುವಂತಹ ಅಚ್ಚರಿಯ ಸಾಧನೆ ಮಾಡಿ, ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆದಿದೆ. ಭಾರತದ ಯುವಜನರು ಸ್ವಾತಂತ್ರ್ಯದ ಮಹತ್ವವನ್ನು ಅರಿಯಬೇಕು. ಇಂತಹ ಸ್ವಾತಂತ್ರ್ಯವನ್ನು ವ್ಯರ್ಥ ಮಾಡದಿರಿ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ದಕ್ಷಿಣ ಭಾರತದ ನಿವೃತ್ತ ಪ್ರಾಂತೀಯ ನಿರ್ದೇಶಕರಾದ ಡಾ.ಎಸ್.ವಿ.ವೆಂಕಟೇಶಯ್ಯ ಯುವಜನರಿಗೆ ಕರೆ ನೀಡಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ 76ನೇ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಾ ಪ್ರಾಚೀನ ಭಾರತ ಅಪಾರ ಖನಿಜ ಸಂಪತ್ತು, ನೈಸರ್ಗಿಕ ಸಂಪನ್ಮೂಲಗಳನ್ನು ಒಳಗೊಂಡ ಸಂಪದ್ಬರಿತ ದೇಶವಾಗಿದ್ದು, ಇದರ ಆಕರ್ಷಣೆಗೊಳಗಾದ ಪ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟೀಷರು, ಸುಲ್ತಾನರು ಮತ್ತಿತರ ವಿದೇಶಿಯರು ಭಾರತಕ್ಕೆ ವ್ಯಾಪಾರದ ಉದ್ದೇಶಕ್ಕೆ ಬಂದು, ಇಲ್ಲಿನ ಅನೈಕ್ಯತೆ, ಸ್ಥಳೀಯ ರಾಜರ ದುರಾಡಳಿತ, ಒಳಜಗಳಗಳನ್ನು ಬಳಸಿಕೊಂಡು ಇಡೀ ಭಾರತವನ್ನು ತಮ್ಮ ವಸಾಹತು ಮಾಡಿಕೊಂಡು ನೂರಾರು ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಅದರಲ್ಲಿ ಬ್ರಿಟೀಷರು ಸುಮಾರು 3 ಶತಮಾನಗಳ ಕಾಲ ಭಾರತವನ್ನು ಆಳಿದರು. ಇವರಿಂದ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಬಹು ದೊಡ್ಡ ಹೋರಾಟವನ್ನು ರೂಪಿಸಿದ್ದ, ಮಂದಗಾಮಿಗಳು, ತೀವ್ರಗಾಮಿಗಳು ಮತ್ತು ರಾಷ್ಟ್ರೀಯ ಕ್ರಾಂತಿಕಾರಿಗಳು ಸ್ವಾಂತಂತ್ರ್ಯ ಹೋರಾಟದ ಮಂಚೂಣಿಯಲ್ಲಿದ್ದು, ತೀವ್ರ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದಾರೆ. ಇಂತಹ ಮಹನೀಯರ ಆದರ್ಶ ಮತ್ತು ಜೀವನವನ್ನು ಯುವಜನರು ಮನಗಂಡು, ಭವಿಷ್ಯದಲ್ಲಿ ಸ್ವಾತಂತ್ರ್ಯ ಕೈಜಾರಿ ಹೋಗದಂತೆ ಜಾಗ್ರತೆ ವಹಿಸಬೇಕೆಂದರು.
ಧ್ವಜಾರೋಹಣ ನೆರವೇರಿಸಿದ ಶಾಸಕರಾದ ಎಂ.ವಿ.ವೀರಭದ್ರಯ್ಯ ಮಾತನಾಡಿ ಶತಮಾನಗಳ ಕಾಲ ಪರಕೀಯರ ಆಳ್ವಿಕೆಗೆ ಒಳಪಟ್ಟ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದ್ದು, ದೇಶವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನಮ್ಮ ಯುವಶಕ್ತಿಯಲ್ಲಿದೆ. ಹೀಗಾಗಿ ಯುವಜನರು ತಮ್ಮನ್ನು ತಾವು ಸಧೃಢಗೊಳಿಸುವ ಮೂಲಕ ಭಾರತವನ್ನು ಸಧೃಢಗೊಳಿಸಬೇಕು ಎಂದರು.
ಇತಿಹಾಸ ಪ್ರಾಧ್ಯಾಪಕಿ ಪ್ರೊ.ಜಿ.ವೇದಲಕ್ಷ್ಮೀರವರು ಪ್ರಾಸ್ತಾವಿಕವಾಗಿ ಮಾತನಾಡಿ 1947ರಲ್ಲಿ ಬ್ರಿಟನ್ ಪ್ರಧಾನಿಯಾಗಿದ್ದ ವಿನ್‍ಸ್ಟನ್ ಚರ್ಚಿಲ್ ರವರು ಸ್ವಾತಂತ್ರ್ಯ ಭಾರತವನ್ನುದ್ದೇಶಿಸಿ ಭಾರತ ಒಂದು ಭೂ ಪ್ರದೇಶ ಮಾತ್ರ, ಎಂದಿಗೂ ರಾಷ್ಟ್ರವಾಗಲಾರದು, ಹೋರಾಟದಿಂದ ಪಡೆದ ಸ್ವಾತಂತ್ರ್ಯವನ್ನು ಭಾರತೀಯರು ಉಳಿಸಿಕೊಳ್ಳುವರೇ ಎಂದು ಪ್ರಶ್ನಿಸಿದ್ದರು. ಆದರೆ ವಾಸ್ತವವಾಗಿ ಭಾರತದಲ್ಲಿ ಹಲವಾರು ಜಾತಿ, ಧರ್ಮ, ವಿಭಿನ್ನ ಭಾಷೆ, ಸಂಪ್ರದಾಯಗಳು, ವಿಭಿನ್ನತೆಯಲ್ಲಿ ಏಕತೆಯನ್ನು ಮೂಡಿಸಿ, ಐಕ್ಯತೆಯನ್ನು ಸಾರಿ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಆದುದರಿಂದ ಭಾರತಾಂಬೆಯ ಮಕ್ಕಳು ನಾವೆಲ್ಲ ಒಂದು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಡಿ.ಎಸ್.ಮುನೀಂದ್ರಕುಮಾರ್ ಮಾತನಾಡಿ ಸ್ವಾತಂತ್ರ್ಯ ಚಳುವಳಿಯು ಮಹಾಪಯಣದ ಒಂದು ಪ್ರಮುಖ ದಾಖಲೆಯಾಗಿದ್ದು, ಆರಂಭದಿಂದ ಕೊನೆಯವರೆಗೂ ಭ್ರಾತೃತ್ವ ಮತ್ತು ಜಾತ್ಯಾತೀತ ನಿಲುವುಗಳನ್ನು ಒಟ್ಟುಗೂಡಿಸಿತು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಜ್ವಲಂತವಾಗಿ ಕಾಡುತ್ತಿರುವ ನಿರುದ್ಯೋಗ, ಅನಕ್ಷರತೆ, ಭ್ರಷ್ಟಾಚಾರ, ಹಿಂಸೆ, ಭಯೋತ್ಪಾದನೆ ಮತ್ತಿತರ ಸಾಮಾಜಿಕ ಅನಿಷ್ಟಗಳನ್ನು ಹೊಡೆದೋಡಿಸಿ, ಸ್ವಚ್ಚಂದ ಭಾರತವನ್ನು ನಿರ್ಮಾಣ ಮಾಡಬೇಕು. ಎಲ್ಲರ ಪರಿಶ್ರಮ, ಒಗ್ಗಟ್ಟಿನಿಂದ ಭಾರತವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಬೇಕು ಎಂದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೊರಾಟಗಾರರಾದ ಕೆ.ಗೋವಿಂದರೆಡ್ಡಿ, ಜಿ.ಎಸ್.ತಿಮ್ಮಾರೆಡ್ಡಿ ರವರನ್ನು ಸನ್ಮಾನಿಸಲಾಯಿತು. 75ನೇ ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳಿಂದ ದೇಶಪ್ರೇಮ, ದೇಶಭಕ್ತಿ ಕುರಿತ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಾಂಸ್ಕøತಿಕ ಸಮಿತಿ ಸಂಚಾಲಕರಾದ ಪ್ರೊ.ದಿವಾಕರ್ ಸ್ವಾಗತಿಸಿ, ಪ್ರೊ.ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿ, ಪ್ರೊ.ಬಿ.ಮಂಜುನಾಥ್ ವಂದಿಸಿದರು.
ವರದಿ:ನಾಗೇಶ್ ಜೀವಾ ಮಧುಗಿರಿ.

0 Comments