ಬೆಂಗಳೂರು, ಜುಲೈ 27 (ಕರ್ನಾಟಕ ವಾರ್ತೆ) :ರಾಜ್ಯದಲ್ಲಿ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ “ರೈತ ಶಕ್ತಿ” ಎಂಬ ಹೊಸ ಯೋಜನೆಯನ್ನು 2022-23 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿರುತ್ತದೆ. ಈ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಪ್ರತಿ ಎಕರೆಗೆ ರೂ.250/- ಗಳಂತೆ ಗರಿಷ್ಟ ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸೆಲ್ ಸಹಾಯಧನವನ್ನು ನೇರವಾಗಿ ರೈತ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಯೋಜನೆಯನ್ನು ಅನುಷ್ಠಾನ ಮಾಡಲು ಸರ್ಕಾರಿ ಆದೇಶವಾಗಿರುತ್ತದೆ.
2022-23ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಗೆ ರೂ.400.00 ಕೋಟಿಗಳ ಅನುದಾನವನ್ನು ಒದಗಿಸಲಾಗಿದೆ. ಈಗಾಗಲೇ ಈ ಯೋಜನೆಯಡಿ ಮಾರ್ಗಸೂಚಿಗಳು ಅನುಮೋದಿತಗೊಂಡಿದ್ದು, ಡಿಬಿಟಿ ಮುಖಾಂತರ ರೈತರ ಖಾತೆಗೆ ಡೀಜಲ್ ಸಹಾಯಧನವನ್ನು ವರ್ಗಾಯಿಸಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ವಿವಿಧ ಕೃಷಿ ಸಂಬಂಧಿತ ಇಲಾಖೆಗಳಲ್ಲಿ ಸೌಲಭ್ಯವನ್ನು ಪಡೆಯಲು ರೈತರು ನೋಂದವಣಿಯಾಗುವ ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ರೈತರು ಹೊಂದಿದ ವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ ರೂ.250/- ರಂತೆ ಗರಿಷ್ಠ 5 ಎಕರೆಗೆ ರೂ.1250/- ಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments