ಬೆಂಗಳೂರು : ಹುಟ್ಟು ಹಬ್ಬದಂದು ಕುಟುಂಬಸ್ಥರೊಂದಿಗೆ ಸೇರಿ ಸಂಭ್ರಮದಿಂದ ಆಚರಿಸಿ ನೆಂಟರು ಮಿತ್ರರಿಗೆ ಔತಣ ನೀಡಿ ಆ ದಿನವನ್ನು ಸ್ಮರಣೀಯವನ್ನಾಗಿಸಿಕೊಳ್ಳುವ ಜನರ ನಡುವೆ, ಅದೇ ದಿನದ ಸಂಭ್ರಮಾಚರಣೆಯನ್ನು ಸಮಾಜದಲ್ಲಿ ಕುಟುಂಬದ ಪ್ರೀತಿಯಿಂದ ವಂಚಿತರಾಗಿರುವ, ಅನ್ಯರ ಆಶ್ರಯದಲ್ಲಿ ಜೀವನ ಸಾಗಿಸುತ್ತಿರುವ ಜೀವಗಳ ಜೊತೆ ತಮ್ಮ ಹುಟ್ಟು ಹಬ್ಬದ ಸಂತಸವನ್ನು ಹಂಚಿಕೊಳ್ಳಲು ಮುಂದೆ ಬರುತ್ತಿರುವುದು ಸಮಾಜದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವುದು ಸಮಾಧಾನಕರ. ಸಾಮಾನ್ಯವಾಗಿ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿರುವ ರಾಜಕೀಯ, ಸಿನಿಮಾ, ಕ್ರೀಡಾ ರಂಗಗಳಲ್ಲಿ ಹೆಸರು ಮಾಡಿರುವ/ಮಾಡಬಯಸುವವರು, ವ್ಯಾಪಾರ ವಹಿವಾಟು ನಡೆಸುವ ಉದ್ಯಮಿಗಳಲ್ಲಿ ಹೆಚ್ಚಾಗಿ ಕಾಣುವುದು ಸಾಮಾನ್ಯವಾಗಿದೆ. ಉಳ್ಳವರು ದೊಡ್ಡ ಮಟ್ಟದಲ್ಲಿ ಮಾಡಬಹುದು, ಆದರೆ ಸಾಮಾನ್ಯ ಜೀವನ ಸಾಗಿಸುವ ಖಾಸಗಿ ಉದ್ಯೋಗಸ್ಥರಾಗಿದ್ದುಕೊಂಡು ಸಮಾಜ ಸೇವೆಯ ಕನಸನ್ನು ಕಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವವರು ವಿಶೇಷವಾಗಿ ಕಾಣಸಿಗುತ್ತಾರೆ.
ಸಮಾಜ ಸೇವೆಯ ಆಕಾಂಕ್ಷೆಯೊಂದಿಗೆ, ಲಯನ್ಸ್ ಸಂಸ್ಥೆ ಜೊತೆ ಕೈಜೋಡಿಸಿ, ತಾವು ಖಾಸಗಿ ಉದ್ಯೋಗಿ ಆಗಿದ್ದರೂ, ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯವರಾಗಿದ್ದುಕೊಂಡು ತಮ್ಮ ಜನ್ಮದಿನದ ಅಂಗವಾಗಿ ರಾಮಯ್ಯ ಕಾಲೇಜ್ ಬಳಿಯಿರುವ ಅಂಧರ ಸೇವಾಶ್ರಮ ಐಡಿಎಲ್ ಬ್ಲೈಂಡ್ ಸ್ಕೂಲ್ ನಲ್ಲಿನ ಆಶ್ರಿತರೊಂದಿಗೆ ಕೇಕ್ ಕತ್ತರಿಸಿ ಅಲ್ಲಿನ ಎಲ್ಲರಿಗೂ ಆ ದಿನದ ಒಂದೊತ್ತಿನ ಊಟಕ್ಕೆ ವ್ಯವಸ್ಥೆ ಕಲ್ಪಿಸಿ ಜನ್ಮ ದಿನವನ್ನು ಆಚರಿಸಿಕೊಂಡು, ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ ಲಯನ್ ಸಿ.ಮಂಜುನಾಥ್ ರವರ ಈ ಕಾರ್ಯ ಎಲ್ಲರಿಗೂ ಆದರ್ಶನೀಯವಾಗಿ ಮೆಚ್ಚುಗೆ ಪಡೆಯಿತು. ಈ ಸಂದರ್ಭದಲ್ಲಿ ಝೆಡ್ ಸಿ ಲಯನ್ ಡಾ.ಜಿ.ಎಸ್.ಚೌಧರಿ, ಲಯನ್ಸ್ ಕ್ಲಬ್ ಕಾವೇರಿ ಅಧ್ಯಕ್ಷ ಲಯನ್ ಎನ್.ಆರ್. ಪರಮೇಶ್ವರಯ್ಯ, ಲಯನ್ ಮಾರುತಿ ರೆಡ್ಡಿ, ಲಯನ್ ಹರಿ ರೆಡ್ಡಿ, ಲಯನ್ ಯುವರಾಜ್, ಐಡಿಎಲ್ ಬ್ಲೈಂಡ್ ಸ್ಕೂಲ್ ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಶೈನಿ ಗ್ರೇಸ್ ಪೌಲ್ ಮುಂತಾದವರು ಉಪಸ್ಥಿತರಿದ್ದರು.

0 Comments