ಬೆಂಗಳೂರು : ಕನ್ನಡ ಭಾಷೆ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ದೇಶಗಳೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುವ ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ೧೦೭ ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ಹಿನ್ನೆಲೆಯಲ್ಲಿ ‘ತತ್ವ ರಸಾಯನ’ ಎನ್ನುವ ಶೀರ್ಷಿಕೆಯಲ್ಲಿ ಸಂತ ಶಿಶುನಾಳ ಶರೀಫರ ತತ್ವಪದಗಳ ಆಧಾರಿತ ಸಂಗೀತ-ನೃತ್ಯ ಕಾರ್ಯಕ್ರಮವನ್ನು ಭಾನುವಾರ ಜುಲೈ ೩ ರಂದು ಸಂಜೆ ೪ ರಿಂದ ೭ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ ೩ ಸಂತ ಶಿಶುನಾಳ ಶರೀಫರು ಹುಟ್ಟಿದ ದಿನ ಹಾಗೂ ಅವರು ದೇಹಬಿಟ್ಟ ದಿನವೂ ಹೌದು. ಈ ದಿನವನ್ನು ಭಾವೈಕ್ಯತೆಯ ದಿನ ಎಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂತ ಶಿಶುನಾಳ ಶರೀಫರ ತತ್ವಪದಗಳ ಆಧಾರಿತ ಸಂಗೀತ, ನೃತ್ಯಗಳನ್ನೊಳಗೊಂಡ ಅರ್ಥಪೂರ್ಣ ಕಾಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮದ ಮೂಲ ಉದ್ದೇಶ ಭ್ರಾತೃತ್ವ ಭಾವನೆಯನ್ನು, ಬಂಧುತ್ವ, ಸಮಾನತೆ ಮತ್ತು ಸೌಹಾರ್ದತೆಯನ್ನು ಬಿತ್ತರಿಸುವುದಾಗಿದೆ. ಕನ್ನಡ ನಾಡಿನಲ್ಲಿ ಶಾಂತಿ, ಸೌಹಾರ್ದತೆಗೆ ಪೂರಕವಾಗುವ ವಾತಾವರಣ ಸೃಷ್ಟಿಸಿ ಹಾಗೂ ಸಹೋದರತ್ವದ ಭಾವ ಬೆಳೆಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಉದ್ದೇಶ ಹೊಂದಿದೆ.
ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಯುಷ್ ಟಿ.ವಿ. ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ, ಭಾರತೀಯ ವಿದ್ಯಾಭವನ, ಆರ್.ವಿ. ದೇವರಾಜ್ ಸೇವಾ ಪ್ರತಿಷ್ಠಾನ, ಶ್ರೀ ಶಾರದ ವಿದ್ಯಾಪೀಠ, ಆರ್ಯಭಟ ಅಂತರರಾಷ್ಟ್ರೀಯ ಸಾಂಸ್ಕೃತಿಕ ಸಂಸ್ಥೆಗಳು ಕೈಜೋಡಿಸಿವೆ. ಎಲ್ಲರ ಸಹಕಾರ ಹಾಗೂ ಸಹಯೋಗದೊಂದಿಗೆ ತತ್ವ ರಸಾಯನ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದೆ.
ಈ ಸಮಾರಂಭದಲ್ಲಿ ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಎಂ.ಎನ್. ವೆಂಕಟಾಚಲಯ್ಯ, ಮಾನ್ಯ ಮುಖ್ಯಮಂತ್ರಿಗಳನ್ನು ಪ್ರತಿನಿಧಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ವಿ. ಸುನೀಲ್ ಕುಮಾರ್ ಮತ್ತು ಮಾನ್ಯ ಕಾರ್ಮಿಕ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಶ್ರೀ ಶಿವರಾಮ್ ಹೆಬ್ಬಾರ್ ಸೇರಿದಂತೆ ಮಠಾಧೀಶರುಗಳು, ವಿವಿಧ ಧರ್ಮದ ಧರ್ಮಾಧಿಕಾರಿಗಳು ಹಾಗೂ ಇನ್ನಿತರ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.
ನಾಡಿನ ಹೆಸರಾಂತ ಹಾಗೂ ಉದಯೋನ್ಮುಖ ಕಲಾವಿದರು ಈ ಶರೀಫರ ತತ್ವ ಪದಗಳ ಆಧಾರಿತ ತತ್ವ ರಸಾಯನ ಕಾರ್ಯಕ್ರಮದಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಎಲ್ಲರ ಸಮಯಕ್ಕೆ ಗೌರವ ಕೊಟ್ಟು ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕೋರಿದ್ದಾರೆ.
0 Comments