ಪಿರ್ಯಾದುದಾರರು ಸೋಲದೇವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಸೋಮಶೆಟ್ಟಿಹಳ್ಳಿಯಲ್ಲಿ ಜಡ್‍ಎಂಆರ್ ಎಂಟರ್ ಪ್ರೈಸಸ್ ಇಟ್ಟುಕೊಂಡಿದ್ದು, ಪಿರ್ಯಾದಿಯು ವಿವಿಧ ಪ್ರತಿಷ್ಠಿತ ಕಂಪನಿಯಲ್ಲಿ ಉಪಯೋಗಿಸಿರುವ ವಿವಿಧ ಕಂಪನಿಯ ಲ್ಯಾಪ್‍ಟಾಪ್‍ಗಳನ್ನು ಟೆಂಡರ್ ಮೂಲಕ ಖರೀದಿಸಿ, ಅವುಗಳನ್ನು ರಿಪೇರಿ ಮತ್ತು ಸರ್ವೀಸ್ ಮಾಡಿಸಿ, ಮರು ಮಾರಾಟ ಮಾಡುತ್ತಿದ್ದರು. ದಿನಾಂಕ 16-06-2022 ರಂದು ರಾತ್ರಿ 9-00 ಗಂಟೆಯಲ್ಲಿ ವ್ಯಾಪಾರ ಮುಗಿಸಿಕೊಂಡು ತಮ್ಮ ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು, ಮರು ದಿನ ಮುಂಜಾನೆ ಅಂಗಡಿಯ ಅಕ್ಕಪಕ್ಕದವರು ಪಿರ್ಯಾದಿಗೆ ಕರೆ ಮಾಡಿ, ತಮ್ಮ ಅಂಗಡಿಯ ಬಾಗಿಲು ತೆರೆದಿರುತ್ತದೆಂದು ತಿಳಿಸಿದಾಗ ಬಂದು ನೋಡಲಾಗಿ ಯಾರೋ ಅಂಗಡಿ ಬೀಗ ಮುರಿದು ಅಂಗಡಿಯಲ್ಲಿದ್ದ ವಿವಿಧ ಕಂಪನಿಯ 120 ಲ್ಯಾಪ್ ಟಾಪ್‍ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಕನ್ನಾ ಕಳವು ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ 4 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಯು ನೀಡಿದ ಮಾಹಿತಿ ಮೇರೆಗೆ ಸುಮಾರು 5 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 110 ಬಳಕೆ ಮಾಡಿರುವ ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಸೋಲದೇವನಹಳ್ಳಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಎ1) ಆರೋಪಿಯು ಗುಜರಿ ಸಂಗ್ರಹಿಸುವ ಕೆಲಸ ಮಾಡಿಕೊಂಡಿದ್ದು ಆ ಸಮಯದಲ್ಲಿ ಎ2) ಆರೋಪಿ ಪರಿಚಯವಾಗಿರುತ್ತದೆ. ಎ2) ಆರೋಪಿಯೊಂದಿಗೆ ಕೆಲಸ ಮಾಡುತಿದ್ದ ಎ3) ಮತ್ತು ಎ4) ಆರೋಪಿಗಳನ್ನು ಜೊತೆಯಲ್ಲಿ ಸೇರಿಸಿಕೊಂಡು ಈ ಕೃತ್ಯವೆಸಗಿರುವುದು ತಿಳಿದು ಬಂದಿರುತ್ತದೆ. ಎ1) ಆರೋಪಿಯು ಗುಜರಿ ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ, ಪಿರ್ಯಾದಿಯನ್ನು ಪರಿಚಯ ಮಾಡಿಕೊಂಡು ಸೆಕೆಂಡ್ ಹ್ಯಾಂಡ್ ಲ್ಯಾಪ್‍ಟಾಪ್‍ಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಮಾರಾಟ ಮಾಡಿದರೆ ಹಣ ಸಿಗುತ್ತದೆಂದು ತಿಳಿದುಕೊಂಡು, ಎ1) ಆರೋಪಿಯು ಈ ಹಿಂದೆ ಪಿರ್ಯಾದಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಹೋಗಿ ಉಪಯೋಗಿಸಿದ ಲ್ಯಾಪ್‍ಟಾಪ್‍ಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಯಲ್ಲಿ ಹೆಚ್ಚಿನ ಲ್ಯಾಪ್‍ಟಾಪ್‍ಗಳು ಇರುವುದನ್ನು ಗಮನಿಸಿಕೊಂಡು ಬಂದು ಪಿರ್ಯಾದಿಯೊಂದಿಗೆ ಸ್ನೇಹದಿಂದ ವರ್ತಿಸಿ, ವ್ಯವಹಾರ ಸರಿ ಹೊಂದದ ಕಾರಣದಿಂದ ಪಿರ್ಯಾದಿಯೊಂದಿಗೆ ಮನಸ್ತಾಪ ಮಾಡಿಕೊಂಡು ಹೋಗಿ, ಇತರೆ ಆರೋಪಿಗಳೊಂದಿಗೆ ಸಂಚು ರೂಪಿಸಿ ರಾತ್ರಿ ಸಮಯದಲ್ಲಿ ಬಂದು ಅಂಗಡಿಯ ಬೀಗ ಒಡೆದು ಲ್ಯಾಪ್‍ಟಾಪ್‍ಗಳನ್ನು ಕಳ್ಳತನ ಮಾಡಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಪ್ರಕರಣದಲ್ಲಿ ಅರುಣ್ ನಾಗೇಗೌಡ, ಎಸಿಪಿ, ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಗೌತಮ್ ಜೆ., ಪೊಲೀಸ್ ಇನ್ಸ್‍ಪೆಕ್ಟರ್, ಸೋಲದೇವನಹಳ್ಳಿ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್‍ಐ ರವರುಗಳಾದ ಶಿವರಾಜ್ ಎಂ.ಜೆ, ಅರುಣ್ ಕುಮಾರ್ ಆರ್.ಎ. ಸಂಗಪ್ಪ ಮರಬದ, ಸಾಗರ್ ಸಿ ಉಸ್ಕೆ, ರವರುಗಳು ಮತ್ತು ಸಿಬ್ಬಂದಿಯವರಾದ ಶ್ರೀಧರ್ ನಿರ್ವಾಣಿ, ಸಾದಿಕ್ ಮುಲ್ಲಾ, ಸುರೇಶ್ ಮಾರನೂರು, ಧನರಾಜ್, ಮಲ್ಲಿಕಾರ್ಜುನ ಬಂಡೆ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
0 Comments