Ticker

6/recent/ticker-posts

Ad Code

Responsive Advertisement

ಕೃಷಿ ಪದವೀಧರರು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೊಡುಗೆಗಳನ್ನು ನೀಡಲಿ ; ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್

ಬೆಂಗಳೂರು, ಜೂನ್ 07 (ಕರ್ನಾಟಕ ವಾರ್ತೆ) : ಕೃಷಿ ಪ್ರಧಾನವಾಗಿರುವ ಭಾರತವನ್ನು ಆತ್ಮನಿರ್ಭರ ದೇಶವಾಗಿ ನಿರ್ಮಿಸಲು ಕೃಷಿ ಪದವೀಧರರು ಮಹತ್ವದ ಕೊಡುಗೆಗಳನ್ನು ನೀಡಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿಂದು ಜರುಗಿದ 35 ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾರವಾಡದ ಕೃಷಿ ವಿವಿಯು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಶಯದ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೃಷಿ ಪದವೀಧರರು ಹೆಚ್ಚು ಕೊಡುಗೆಗಳನ್ನು ನೀಡಬೇಕು. ದೇಶದ ಜನತೆ ಕೃಷಿಯನ್ನು ಅಧಿಕವಾಗಿ ಅವಲಂಬಿಸಿದ್ದಾರೆ. ಕೃಷಿ ಕ್ಷೇತ್ರ ಸಂಪೂರ್ಣ ಸ್ವಾವಲಂಬನೆಯಾದರೆ ದೇಶದ ಅಭಿವೃದ್ಧಿ ವೇಗ ತೀವ್ರವಾಗುತ್ತದೆ. ಪದವಿ ಪಡೆದವರು,ತಾವಿರುವ ಊರು, ಪ್ರದೇಶಗಳಲ್ಲಿ ಕೃಷಿ ಮೂಲಕ ಸ್ವಾವಲಂಬನೆ ಸಾಧಿಸಲು ಶ್ರಮಿಸಬೇಕು. ಪರಿಸರ ಸಂರಕ್ಷಣೆ, ಜಾಗತಿಕ ತಾಪಮಾನ ಹೆಚ್ಚಳ, ಜಲಮೂಲಗಳ ಸಂರಕ್ಷಣೆ ಕಾರ್ಯಗಳು ಮುಖ್ಯವಾಗಿವೆ. ಗೌರವಾನ್ವಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೊಂದಿಗೆ ಇಸ್ರೇಲ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅಲ್ಲಿನ ಕೃಷಿ ತಂತ್ರಜ್ಞಾನ ವೀಕ್ಷಿಸುವ ಅವಕಾಶ ಸಿಕ್ಕಿತ್ತು. ಶೇ 9-10 ರಷ್ಟು ಮಳೆಯಾಗುವ ಆ ದೇಶದಲ್ಲಿ ಹನಿ ಹನಿ ನೀರಿನ ಸದ್ಬಳಕೆಯಾಗುತ್ತಿದೆ. ಸಾವಯವ ಪದ್ಧತಿ ಮೂಲಕ ಭೂಮಿಯ ಫಲವತ್ತತೆ ಕಾಪಾಡಲು ಒತ್ತು ನೀಡಬೇಕು ಎಂದರು.


ಐಸಿಎಆರ್ ರಾಷ್ಟ್ರೀಯ ಕೃಷಿ ಉನ್ನತ ಶಿಕ್ಷಣ ಯೋಜನೆಯ ನಿರ್ದೇಶಕ ಹಾಗೂ ಕೃಷಿ ಶಿಕ್ಷಣದ ಉಪ ಮಹಾನಿರ್ದೇಶಕ ಡಾ.ರಾಕೇಶಚಂದ್ರ ಅಗ್ರವಾಲ ಘಟಿಕೋತ್ಸವ ಭಾಷಣ ಮಾಡಿ, ಪದವಿ ಪಡೆದ ವಿದ್ಯಾರ್ಥಿಗಳ ಮೇಲೆ ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಜವಾಬ್ದಾರಿ ಇದೆ.ಕಳೆದ ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿಕದ ಸಂಕಷ್ಟ ಕಾಲದಲ್ಲಿ ಕೃಷಿ ಉತ್ಪನ್ನಗಳು, ಹಾಲು,ತರಕಾರಿಗಳನ್ನು ಜನಸಾಮಾನ್ಯರಿಗೆ ಯಾವುದೇ ವ್ಯತ್ಯಯವಾಗದಂತೆ ಪೂರೈಸಿದ ಶ್ರೇಯಸ್ಸು ಕೃಷಿಕರಿಗೆ ಸಲ್ಲುತ್ತದೆ. ಜಲಮೂಲ, ಹವಾಮಾನ ಬದಲಾವಣೆ,ಜನಸಂಖ್ಯೆಯ ತೀವ್ರ ಹೆಚ್ಚಳ,ಸಾಂಕ್ರಾಮಿಕ ಖಾಯಿಲೆಗಳು  ಸೇರಿದಂತೆ ಅನೇಕ ಸವಾಲುಗಳು ಇಂದು ನಮ್ಮೆದುರಿಗೆ ಇವೆ.ರಾಷ್ಟ್ರದ ಹಿತಕ್ಕಾಗಿ ಇವುಗಳಿಗೆ ಪರಿಹಾರ ಒದಗಿಸುವ ಬದ್ಧತೆ ಬೆಳೆಸಿಕೊಳ್ಳಬೇಕು. ಹಸಿರು ಕ್ರಾಂತಿ, ಕ್ಷೀರಕ್ರಾಂತಿ, ನೀಲಿಕ್ರಾಂತಿಗಳು ನಮ್ಮನ್ನು ಸ್ವಾವಲಂಬಿಯಾಗಿಸಿವೆ. ಸಿರಿಧಾನ್ಯಗಳು, ಸುಸ್ಥಿರ ಕೃಷಿ ಇಂದಿನ ಅಗತ್ಯಗಳಾಗಿವೆ. ಜಾಗತಿಕ ಹಸಿವು ಸೂಚ್ಯಂಕದ 17 ಸುಸ್ಥಿರ ಗುರಿಗಳನ್ನು ತಲುಪಲು ಕೃಷಿ ವಿದ್ಯಾರ್ಥಿಗಳ ಮೇಲೆ ಹೆಚ್ಚು ಹೊಣೆಗಾರಿಕೆಯಿದೆ. ಬಡತನ,ಹಸಿವು ನೀಗಿಸಿ,ಉತ್ತಮ ಜೀವನ ನಿರ್ಮಿಸಿಕೊಳ್ಳಲು ಕೃಷಿ ವಿದ್ಯಾರ್ಥಿಗಳು ಪ್ರಮುಖ ಆಧಾರ ಸ್ತಂಭವಾಗಿದ್ದಾರೆ. ಶಿಕ್ಷಣವೆಂದರೆ ಸರ್ವಾಂಗೀಣ, ಸರ್ವತೋಮುಖ ವಿಕಾಸ. ಶಿಕ್ಷಕರು,ಕುಟುಂಬ, ಸಮಾಜ ಹೀಗೆ ಎಲ್ಲರಿಂದ ಕಲಿತು,ತಿಳಿದುಕೊಳ್ಳುವುದು ನಿರಂತರವಾಗಿರುತ್ತದೆ. ಕಲಿಕೆಗೆ ಕೊನೆಯೆಂಬುದು ಇಲ್ಲ. ಹೆಚ್ಚು ಹೆಚ್ಚು ಸಂವಾದಕ್ಕೆ ನಾವು ಒಳಪಡಬೇಕು. ಬರುವ ಜೂನ್ 14 ರಂದು ನವದೆಹಲಿಯಲ್ಲಿ ಸಿಬಿಎಸ್ಇ, ಎನ್ಸಿಇಆರ್ಟಿ ಮೊದಲಾದ ಅಕಾಡೆಮಿಕ್ ಸದಸ್ಯರೊಂದಿಗೆ ಸಭೆ ನಡೆಸಿ ಕೃಷಿ ಶಿಕ್ಷಣವನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಶಾಲಾ ಹಂತದಿಂದಲೇ ಅಳವಡಿಸಿಕೊಳ್ಳಲು ಕ್ರಮವಹಿಸಲಾಗುತ್ತಿದೆ ಎಂದರು.


Post a Comment

0 Comments

Ad Code

Responsive Advertisement