ಹುಬ್ಬಳ್ಳಿ, ಜೂ.2- ರಾಜ್ಯ ಸರಕಾರದ ಮಹತ್ವದ ಜನೋಪಯೋಗಿ ಯೋಜನೆಯಾದ ಮಹಾನಗರ ಪಾಲಿಕೆಗಳ ವಾರ್ಡ್ ಕಮೀಟಿಯ ಸದಸ್ಯತ್ವವನ್ನು ಸಾರ್ವಜನಿಕರು ಮತ್ತು ನೋಂದಾಯಿತ ಸಂಘ-ಸಂಸ್ಥೆಗಳು ಪಡೆದುಕೊಳ್ಳಬೇಕು ಎಂದು ಸಾತ್ವಿಕ ಭಾರತೀಯ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ವಿನೋದ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಹು-ಧಾ ಅವಳಿ ನಗರದಲ್ಲಿ ಇರುವ ಒಟ್ಟು 12 ಝೋನಲ್ ಕಚೇರಿ ವ್ಯಾಪ್ತಿಯ ಎಲ್ಲ 82 ವಾರ್ಡ್ ಗಳಲ್ಲಿನ ಮತದಾರರಾದವರು ವಾರ್ಡ್ ಕಮೀಟಿಯ ಸದಸ್ಯತ್ವ ಉಚಿತವಾಗಿ ಪಡೆಯಬಹುದಾಗಿದೆ. ವಾರ್ಡ್ ಕಮೀಟಿಯ ಸದಸ್ಯತ್ವದ ಅರ್ಜಿ ಎಲ್ಲ 12 ಝೋನಲ್ ಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಅಲ್ಲಿ ಸಂಬಂಧಪಟ್ಟ ಸಿಬ್ಬಂದಿಯನ್ನು ವಿಚಾರಿಸಿ ಅರ್ಜಿಯನ್ನು ಕೇಳಿ ಪಡೆದುಕೊಳ್ಳಬಹುದು, ಅಥವಾ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕೃತ ಜಾಲತಾಣ (ವೆಬ್ಸೈಟ್) ದಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಆಯಾ ಝೋನಲ್ ಕಚೇರಿಗಳಲ್ಲಿ ಅಥವಾ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಗಳಿಗೆ ತಲುಪಿಸಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕಾಗುತ್ತದೆ. ಮಹಾನಗರ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿಯು ಅರ್ಜಿಗಳನ್ನು ಪರೀಶೀಲಿಸಿ ನಿರ್ಣಯ ಕೈಗೊಳ್ಳಲಿದೆ. ಪ್ರತಿ ತಿಂಗಳು ನಡೆಯುವ ವಾರ್ಡ್ ಅಭಿವೃದ್ಧಿ ಸಭೆಯಲ್ಲಿ ಕಮೀಟಿಗೆ ಆಯ್ಕೆಯಾದ ಸದಸ್ಯರು ಮತ್ತು ಆಯಾ ವಾರ್ಡ್ ಪಾಲಿಕೆ ಸದಸ್ಯ ಹಾಗೂ ಪಾಲಿಕೆಯ ವತಿಯಿಂದ ನಿಯೋಜಿಸಲ್ಪಟ್ಟ ಅಧಿಕಾರಿ ಉಪಸ್ಥಿತರಿರುವರು.
ಪ್ರತಿಯೊಂದು ವಾರ್ಡ್ ಕಮೀಟಿಗೆ 10 ಜನರನ್ನು ಆಯ್ಕೆ ಮಾಡಲಾಗುತ್ತದೆ. ಪಾಲಿಕೆಯ 82 ವಾರ್ಡ್ ಗಳಿಗೆ ಒಟ್ಟು 820 ಜನರು ಸದಸ್ಯರಾಗಬಹುದಾಗಿದೆ. ವಾರ್ಡ್ ಕಮೀಟಿಗೆ ಸದಸ್ಯರಾಗಬಯಸುವವರು ಯಾವುದೇ ರಾಜಕೀಯ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿರಬಾರದು. ಅಲ್ಲದೇ ಕಮೀಟಿಯಲ್ಲಿ ಎಸ್ಸಿ,ಎಸ್ಟಿ ಸಮಾಜದವರಿಗೆ ಮತ್ತು ಮಹಿಳೆಯರಿಗೆ ಮೀಸಲಾತಿ ಇದೆ. ಹಾಗೂ ಬಡಾವಣೆ ನಿವಾಸಿಗಳ ಸಂಘ, ವಿವಿಧ ವರ್ಗದ ಸಮುದಾಯದ ಸಂಘಟನೆಗಳು ಸೇರಿದಂತೆ ಎಲ್ಲರೂ ತಮ್ಮ ತಮ್ಮ ಬಡಾವಣೆಗಳಲ್ಲಿ ಮತ್ತು ಸಂಘಟನಾ ಸದಸ್ಯರಿಗೆ ಜಾಗೃತಿ ಮೂಡಿಸಿದರೆ ಈ ಯೋಜನೆಯು ಸಾಫಲ್ಯ ಹೊಂದುವುದರಲ್ಲಿ ಸಂಶಯವೇ ಇಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರದ ನೌಕರರಾದವರು ಕೂಡ ಪಾಲಿಕೆಯ ಮತದಾರರ ಗುರುತಿನ ಚೀಟಿ ಲಗತ್ತಿಸಿ ಸದಸ್ಯತ್ವ ಪಡೆದುಕೊಳ್ಳಬಹುದು ಎಂದು ಈಗಾಗಲೇ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಆದ್ದರಿಂದ ಮಹಾನಗರದ ಜನತೆ ತಮ್ಮ ವಾರ್ಡ್ ಅಭಿವೃದ್ಧಿಗಾಗಿ ವಾರ್ಡ್ ಕಮೀಟಿಯ ಸದಸ್ಯತ್ವವನ್ನು ಸ್ವಇಚ್ಛೆಯಿಂದ ಪಡೆದುಕೊಂಡು ವಾರ್ಡ್ ಅಭಿವೃದ್ಧಿಗೆ ಕೈಜೋಡಿಸಿ ಅವಳಿನಗರಗಳನ್ನು ರಾಜ್ಯದಲ್ಲಿಯೇ ಮಾದರಿ ನಗರಗಳನ್ನಾಗಿಸಲು ಕೈಜೋಡಿಸಿದಂತಾಗುತ್ತದೆ ಎಂದು ವಿನೋದ ತಿಳಿಸಿದ್ದಾರೆ.
ವಾರ್ಡ್ ಕಮೀಟಿಯ ಸದಸ್ಯತ್ವ ಪಡೆಯುವ ಬಗ್ಗೆ ಹಾಗೂ ಇತರ ಮಾಹಿತಿಗಾಗಿ ಸರ್ಕಾರೇತರ ಸಂಸ್ಥೆ ಜನಾಗ್ರಹದ ಹುಬ್ಬಳ್ಳಿ-ಧಾರವಾಡ ಮಹಾನಗರ ಹಿರಿಯ ಸಂಯೋಜಕ ಶಿವಶಂಕರ ಡಿ. ಐಹೊಳಿ ಅವರನ್ನು ಮೊಬೈಲ್ ಕರೆ ಅಥವಾ ವಾಟ್ಸ್ ಅಪ್ ಸಂದೇಶ ಮೂಲಕ ಪ್ರತಿದಿನ ಸಂಜೆ 7 ರಿಂದ ರಾತ್ರಿ 9 ರವರೆಗೆ ಸಂಪರ್ಕಿಸಿಸಬಹುದು. ಶಿವಶಂಕರ ಡಿ.ಐಹೊಳಿ ಅವರ ಸಂಪರ್ಕ ಸಂಖ್ಯೆ -6363107122.
ಅವಳಿ ನಗರದ ಸಾರ್ವಜನಿಕರು, ನೋಂದಾಯಿತ ಸಂಘ-ಸಂಸ್ಥೆಗಳು, ಮಹಿಳಾ ಮಂಡಳಗಳ ಸದಸ್ಯರು ಈ ಬಗ್ಗೆ ಇತರರಲ್ಲಿ ಜಾಗೃತಿ ಮೂಡಿಸಿ ಸರಕಾರದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದು ಸಾತ್ವಿಕ್ ಸಂಘದ ಕಾರ್ಯದರ್ಶಿ ವಿನೋದ ಪ್ರಕಟಣೆಯಲ್ಲಿ ಹಾರೈಸಿದ್ದಾರೆ.
0 Comments