ಬಳ್ಳಾರಿ,ಜೂ.13: ಶಿಕ್ಷಣ ಎಂಬುದು ಪ್ರತಿಯೊಂದು ಮಗುವಿನ ಹಕ್ಕು; ಪ್ರತಿಯೊಂದು ಮಗುವಿಗೂ ಕೂಡ ಶಿಕ್ಷಣ ಒದಗಿಸಬೇಕು. ಪ್ರತಿಯೊಂದು ಮಗುವನ್ನು ತಮ್ಮ ಮಗುವೆಂದು ಪರಿಭಾವಿಸಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ವಕೀಲರ ಸಂಘ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ,ವಿವಿಧ ಇಲಾಖೆಗಳ ಮತ್ತು ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಹಾಗೂ ಅಜಾದಿ ಕಾ ಅಮೃತ್ ಮಹೋತ್ಸವ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನಾ ಕಾರಣಗಳಿಂದ ಮಕ್ಕಳು ಶಾಲೆ ಬಿಡುತ್ತಿದ್ದು,ಮಕ್ಕಳು ಹಾಗೂ ಅವರ ಪೋಷಕರನ್ನು ಮನವೋಲಿಸಿ ಮುಂದಾಗುವ ಅನಾಹುತಗಳ ಕುರಿತು ಜಾಗೃತಿ ಮೂಡಿಸಿ ಅವರನ್ನು ಶಾಲೆಗೆ ತರಿಸಿ ಗುಣಮಟ್ಟದ ಶಿಕ್ಷಣ ಕೊಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ಬಿಸಿಯೂಟ,ಹಾಲು,ಮೊಟ್ಟೆ,ಸ್ಮಾರ್ಟ್ ಕ್ಲಾಸ್,ಕಂಪ್ಯೂಟರ್ ಸೌಲಭ್ಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿದೆ. ತಂದೆ-ತಾಯಿಯಂದಿರು ಬಹಳ ಕಷ್ಟಪಟ್ಟು ತಮ್ಮನ್ನು ಓದಿಸುತ್ತಿದ್ದು,ಮುಂದೆ ಬಹಳಷ್ಟು ಅವಕಾಶಗಳಿದ್ದು,ಚೆನ್ನಾಗಿ ಓದಿ ಉನ್ನತ ಸ್ಥಾನಕ್ಕೇರುವಂತೆ ನೆರೆದಿದ್ದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಳೆದ ತಿಂಗಳು 11 ಬಾಲಕಾರ್ಮಿಕ ಪ್ರಕರಣಗಳನ್ನು ದಾಖಲಿಸಿದ್ದು,ಮಕ್ಕಳನ್ನು ರಕ್ಷಿಸಲಾಗಿದೆ ಮತ್ತು ಸಂಬಂಧಿಸಿದ ಮಾಲೀಕರ ಮೇಲೆ ಕ್ರಮಕೈಗೊಳ್ಳಲಾಗಿದೆ ಎಂದರು.
ಎಸ್ಪಿ ಸೈದುಲು ಅಡಾವತ್ ಅವರು ತಪ್ಪು ನಡಿತಾ ಇದ್ದಾಗ ಸುಮ್ಮನೆ ಕುಳಿತುಕೊಳ್ಳದೇ ಬಾಲಕಾರ್ಮಿಕರಾಗಿ ಮಕ್ಕಳು ದುಡಿಯುತ್ತಿದ್ದು ಕಂಡುಬಂದಲ್ಲಿ ಕೂಡಲೇ ತಾವು 1098ಗೆ ಕರೆ ಮಾಡಿ ವಿಷಯ ತಿಳಿಸುವ ಕೆಲಸ ಮಾಡಬೇಕು. ಶಾಲೆ ಬಿಟ್ಟ ಸ್ನೇಹಿತರಿಗೂ ಶಿಕ್ಷಣದ ಮಹತ್ವ ತಿಳಿಸಿದ ಶಾಲೆಗೆ ಕರೆತರುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಹಾಗೂ ಅಜಾದಿ ಕಾ ಅಮೃತ್ ಮಹೋತ್ಸವ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸತೀಶ್ ಜೆ.ಬಾಳಿ ಅವರು ಸಮಾಜದಲ್ಲಿ ಬಾಲಕಾರ್ಮಿಕ ಪದ್ದತಿ ಕೊನೆಗಾಣಿಸಲು ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕಾರ ನೀಡಬೇಕು.ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ 14 ವರ್ಷದೊಳಗಿನ ಮಕ್ಕಳು ಕಂಡು ಬಂದರೆ ಕೊಡಲೇ 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಶಾಲೆಗೆ ಸೇರಿಸಲು ಸಹಕಾರ ನೀಡಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎರ್ರಿಗೌಡ, ಡಿಡಿಪಿಐ ಅಂದಾನಪ್ಪ ವಡಿಗೇರ್ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಮೈದುರ್, ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ, ತಹಸೀಲ್ದಾರ್ ವಿಶ್ವನಾಥ್, ಕಾರ್ಮಿಕ ಅಧಿಕಾರಿಗಳಾದ ಕಮಲ್ ಅಲ್ತಾಫ್, ಮಾರಿಕಾಂಬಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ದುರುಗೇಶ್. ಎಸ್. ಮಾಚನೂರು, ರಾಷ್ಟೀಯ ಬಾಲ ಕಾರ್ಮಿಕ ಯೋಜನೆ ಯೋಜನಾ ನಿರ್ದೇಶಕ ಮೌನೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜಾನಾಯ್ಕ, ಡಿವೈಎಸ್ಪಿ ರಮೇಶಕುಮಾರ,ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರವೀಂದ್ರನಾಥ ಸೇರಿದಂತೆ ಅನೇಕರು ಇದ್ದರು.

0 Comments