ದಿನಾಂಕ 01-06-2022 ರಂದು ಬೆಳಿಗ್ಗೆ 9-00 ಗಂಟೆಗೆ ಶ್ರೀ ನಾರಾಯಣ್, ಪಿಎಸ್‍ಐ, ಯಶವಂತಪುರ ಪೊಲೀಸ್ ಠಾಣೆ ರವರು ಠಾಣೆಯಲ್ಲಿದ್ದಾಗ ಭಾತ್ಮೀದಾರರಿಂದ ಬಂದ ಮಾಹಿತಿ ಏನೆಂದರೆ, ಒಬ್ಬ ಆಸಾಮಿಯು ಯಶವಂತಪುರ ಠಾಣಾ ವ್ಯಾಪ್ತಿಯ ಜಯರಾಮ್ ಕಾಲೋನಿಯಲ್ಲಿ ಮಾದಕ ವಸ್ತು ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ರವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ 1 ಕೆ.ಜಿ. 590 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಬಂದು ನೀಡಿದ ವರದಿ ಮೇರೆಗೆ ಒಬ್ಬ ಆರೋಪಿಯ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣದ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ದಸ್ತಗಿರಿಯಾಗಿದ್ದ ಆರೋಪಿಯ ಮಾಹಿತಿ ಮೇರೆಗೆ ಅದೇ ದಿನ ಬೆಳಿಗ್ಗೆ 11-40 ಗಂಟೆಗೆ ಶ್ರೀ ವಿನೋದ್ ರಾಠೋಡ್ ಪಿಎಸ್‍ಐ, ಯಶವಂತಪುರ ಠಾಣಾ ವ್ಯಾಪ್ತಿಯ ಕೆನರಾ ಯೂನಿಯನ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶ ರಾಜ್ಯ ತಿರುಪತಿ ಮೂಲದ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ 7 ಕೆ.ಜಿ. 50 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಯನ್ನು ಶ್ರೀ ರಾಜು ಪಿಎಸ್‍ಐ ರವರು ಪೊಲೀಸ್ ಅಭಿರಕ್ಷೆಗೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆತನ ಮಾಹಿತಿ ಮೇರೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣದ ಕಾಕಿನಾಡದ ತನ್ನ ಸ್ನೇಹಿತನಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಈತನ ಮಾಹಿತಿ ಮೇರೆಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎ1) ಆರೋಪಿಗೆ ಗಾಂಜಾವನ್ನು ನೀಡಲು ಬಂದಾಗ ಎ2 ಆರೋಪಿಯನ್ನು ದಸ್ತಗಿರಿಪಡಿಸಿ ಆತನಿಂದ 40 ಕೆಜಿ 700 ಗ್ರಾಂ ಗಾಂಜಾ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ವಶದಿಂದ 47.75 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶವಂತಪುರ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಮೇಲ್ಕಂಡ ಆರೋಪಿಗಳ ಮಾಹಿತಿ ಮೇರೆಗೆ ಮತ್ತೇರಡು ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಅವರುಗಳ ವಶದಿಂದ 5.3 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮೇಲ್ಕಂಡ 4 ಪ್ರಕರಣಗಳಲ್ಲಿ ಸ್ಥಳೀಯ ಇಬ್ಬರು ಆರೋಪಿಗಳು ಮತ್ತು ಅಂತರ ರಾಜ್ಯ 3 ಜನ ಆರೋಪಿಗಳು ಸೇರಿದಂತೆ ಒಟ್ಟು 5 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ 53.05 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ 3 ಜನ ಆರೋಪಿಗಳು ಮೂಲತಃ ಆಂದ್ರಪ್ರದೇಶದ ರಾಜ್ಯದವರಾಗಿದ್ದು, ಸದರಿಯವರುಗಳು ಆಂಧ್ರಪ್ರದೇಶದ ಕಾಕಿನಾಡ ಮೂಲದ ವ್ಯಕ್ತಿಯೊಬ್ಬನಿಂದ ಕಡಿಮೆ ಬೆಲೆ ಖರೀದಿಸಿ, ಆರೋಪಿಗಳು ಅದನ್ನು ಚಿಕ್ಕ ಚಿಕ್ಚ ಪ್ಯಾಕ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾಗಿ ಹಾಗೂ ಆರೋಪಿಗಳು ಆಂಧ್ರಪ್ರದೇಶ ರಾಜ್ಯದಿಂದ ಗಾಂಜಾ ತರುವಾಗ ಯಾರಿಗೂ ಅನುಮಾನ ಬರದಂತೆ ಪ್ಯಾಕ್ ಮಾಡಿ ದೊಡ್ಡ ಬ್ಯಾಗ್‍ನಲ್ಲಿ ಕೆಳಭಾಗದಲ್ಲಿ ಇಟ್ಟು ಮೇಲ್ಭಾಗದಲ್ಲಿ ಸೀರೆಗಳನ್ನು ತುಂಬಿಕೊಂಡು ಸೀರೆಗಳನ್ನು ಮಾರಾಟ ಮಾಡಲು ಹೋಗುತ್ತಿದ್ದೇವೆಂದು ತಿಳಿಸಿ, ಖಾಸಗಿ ಬಸ್‍ಗಳಲ್ಲಿ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಪ್ರಕರಣದಲ್ಲಿ ಶ್ರೀ ಅರುಣ್ ನಾಗೇಗೌಡ, ಎಸಿಪಿ, ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಸುರೇಶ ಕೆÉ., ಪೊಲೀಸ್ ಇನ್ಸ್‍ಪೆಕ್ಟರ್, ಯಶವಂತಪುರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್‍ಐ ರವರುಗಳಾದ ಶ್ರೀ ವಿನೋದ್ ರಾಠೋಡ್, ಶ್ರೀ ರಾಜು ಸಿ, ಶ್ರೀ ನಾರಾಯಣ ರವರು ಮತ್ತು ಸಿಬ್ಬಂದಿಯವರಾದ ಶ್ರೀ ರಾಚಪ್ಪ ಹಕ್ಕಿ ಪಿಸಿ-14234, ಶ್ರೀ ದತ್ತಾತ್ರೇಯ ಬಡಿಗೇರ ಪಿಸಿ 14144, ಶ್ರೀ ರಘುರಾಮ ರೆಡ್ಡಿ ಪಿಸಿ 20764, ಶ್ರೀ ಮೊಟ್ಲಾ ನಾಯಕ್ ಪಿಸಿ 19241, ಶ್ರೀ ಗೋಪಾಲ ರಾಹುತ್ ಪಿಸಿ 19312, ಶ್ರೀ ಮುತ್ತಪ್ಪ ಭಜಂತ್ರಿ ಪಿಸಿ 14236, ಶ್ರೀ ಲೋಕೇಶ ಸನಾದಿ ಪಿಸಿ 18892 ಮತ್ತು ಶ್ರೀ ಈರೇಶ್ ಪಿಸಿ-20763 ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
~~ ** ~~

0 Comments