ಕರೋನ 4ನೇ ಅಲೆ ಹಾಗೂ ರಾಜಕೀಯ ಅಸ್ಥಿರತೆ ನಿವಾರಣೆಗೆ, ಬೆಂಗಳೂರಿನ ಯಶವಂತಪುರದಲ್ಲಿರುವ ಸುಪ್ರಸಿದ್ಧ ಶ್ರೀ ಮಹಾಯಾಗ ಕ್ಷೇತ್ರ ಶ್ರೀ ಗಾಯತ್ರೀ ದೇವಸ್ಥಾನದ ಆವರಣದಲ್ಲಿ ವಿಶಿಷ್ಟವೂ, ಅಪರೂಪವೂ ಆಗಿರುವ ಶ್ರೀ ಪವಮಾನ ಮಹಾಯಾಗ ಸಪ್ತಾಹವನ್ನು ಜುಲೈ 4 ರಿಂದ ಜುಲೈ 10 ರವರೆಗೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಗುವುದು.
ಸಮಸ್ತ ಜೀವರಾಶಿಗೆ ಒಳಿತಾಗಲಿ ಎಂದು ಕಳೆದ ಮೂರು ವರ್ಷಗಳಿಂದ ದೇಶ-ವಿದೇಶಗಳ ಕೋಟ್ಯಂತರ ಜನರಿಗೆ ಕೋವಿಡ್-19 ವೈರಾಣುವಿನಿಂದ ಸಂಭವಿಸಿದ ಸಾವು-ನೋವು, ದುರಂತ ಮತ್ತೆ ಪುನರಾವರ್ತನೆಯಾಗದಿರಲಿ, ವೈರಾಣು ನಾಶವಾಗಲಿ, ಎಲ್ಲರಿಗೂ ಉತ್ತಮ ಆರೋಗ್ಯ ಭಾಗ್ಯ ಲಭಿಸಲಿ-ಎಂಬ ಸದಾಶಯದೊಂದಿಗೆ ಶ್ರೀ ಪವಮಾನ ಮಹಾಯಾಗವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಸಕ್ತ ಶ್ರೀ ಶುಭಕೃತುನಾಮ ಸಂವತ್ಸರದಲ್ಲಿ ಶ್ರೀ ಶನಿಗ್ರಹವು ರಾಜನಾಗಿ, ಶ್ರೀ ಗುರುಗ್ರಹವು ಮಂತ್ರಿಯಾಗಿರುವ ಪರಿಣಾಮ ರಾಜಕೀಯ ಅಸ್ಥಿರತೆ, ಆರ್ಥಿಕ ಸಂಕಷ್ಟ, ಯುದ್ಧ ಭೀತಿ, ಅಗ್ನಿ ಅವಘಡ, ಭಯೋತ್ಪಾದಕ ಕೃತ್ಯಗಳ ಉಲ್ಬಣ, ಜಲ ಪ್ರಳಯ, ಅತೀವೃಷ್ಟಿ ಹಾಗೂ ಅನಾವೃಷ್ಟಿ, ಭೂಕಂಪನ ಮುಂತಾದ ಪ್ರಕೃತಿ ವಿಕೋಪಗಳು ಹೆಚ್ಚುವುದನ್ನು ತಡೆಯಲು-ನಿಯಂತ್ರಿಸಲು ಶ್ರೀ ಪವಮಾನ ಮಹಾಯಾಗ ವೇದೋಕ್ತವಾಗಿ ನೆರವೇರಿಸುವುದು ಅತ್ಯಂತ ಸೂಕ್ತವಾಗಿದೆ.
ಶ್ರೀ ಪವಮಾನ ಮಹಾಯಾಗವೂ ಸೇರಿದಂತೆ ಶ್ರೀ ಮಹಾ ಗಣಪತಿ ಹೋಮ, ಶ್ರೀ ನವಗ್ರಹ ಶಾಂತಿ ಹೋಮ, ಶ್ರೀ ಅರುಣ ಹೋಮ, ಶ್ರೀ ರುದ್ರ ಹೋಮ, ಶ್ರೀ ಸೂರ್ಯ ನಮಸ್ಕಾರ, ಚತುರ್ವೇದ ಪಾರಾಯಣ, ಶ್ರೀ ಸುದರ್ಶನ ಹೋಮ, ಶ್ರೀ ಧನ್ವಂತರಿ ಹೋಮ, ಶ್ರೀ ಮೇಧಾ ದಕ್ಷಿಣಾಮೂರ್ತಿ, ಶ್ರೀ ಮಹಾಲಕ್ಷ್ಮೀ ಹೋಮ, ಶ್ರೀ ಲಕ್ಷ್ಮೀನಾರಾಯಣ ಹೋಮ, ಶ್ರೀ ಚಂಡಿಕಾ ಹೋಮ, ಶ್ರೀ ವನದುರ್ಗಾ ಹೋಮ, ಶ್ರೀ ಶನಿ ಶಾಂತಿ ಹೋಮ, ನಕ್ಷತ್ರ ಹೋಮ, ಶ್ರೀ ಆಂಜನೇಯ ಮೂಲಮಂತ್ರ ಹೋಮ, ಶ್ರೀ ರಾಮ ತಾರಕನಾಮ ಹೋಮ, ಕಾಳಸರ್ಪ ಶಾಂತಿ ಹೋಮ ಹಾಗೂ ಮಹಾ ಮೃತ್ಯುಂಜಯ ಹೋಮವನ್ನು ಏರ್ಪಡಿಸಲಾಗಿದೆ.
ಜುಲೈ 8 ಶುಕ್ರವಾರ ಬೆಳಿಗ್ಗೆ 10ಕ್ಕೆ ಶ್ರೀ ಗಾಯತ್ರೀ ಬ್ರಹ್ಮ ರಥೋತ್ಸವ ಹಾಗೂ ಸಂಜೆ 6ಕ್ಕೆ ಪಲ್ಲಕ್ಕಿ ಉತ್ಸವವಿದೆ.
ಜುಲೈ 10 ಭಾನುವಾರ ಶ್ರೀ ರುದ್ರ ಹೋಮ ಹಾಗೂ ಶ್ರೀ ಗಾಯತ್ರೀ ಹೋಮವಿದ್ದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ನೆರವೇರಲಿದೆ.
ಮಹಾಯಾಗ ಸಪ್ತಾಹ ಸಂದರ್ಭದಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವಿರುತ್ತದೆ.
ಶ್ರೀ ಪವಮಾನ ಮಹಾಯಾಗಕ್ಕೆ ಹೋಮದ್ರವ್ಯಗಳು :
ಶ್ರೀ ಪವಮಾನ ಮಹಾಯಾಗಕ್ಕೆ ಹಯಗ್ರೀವ ಪ್ರಧಾನ ಚೆರು ಆಹುತಿ, ಕರಿಎಳ್ಳು, ಬಿಳಿ ಸಾಸಿವೆ, ಉತ್ತರಾಣಿ ಸಮಿತ್ತು ವಿಶೇಷವಾಗಿ ಹವಿಸ್ಸಾಗಿ ಸಮರ್ಪಿಸಲಾಗುವುದು.
ಶ್ರೀ ಧನ್ವಂತರಿ ಹೋಮಕ್ಕೆ 108 ಆಯುರ್ವೇದೀಯ ಗಿಡಮೂಲಿಕೆಗಳನ್ನೇ ಹೋಮದ್ರವ್ಯವಾಗಿ ಅರ್ಪಿಸಲಾಗುವುದು.
ಇದರಿಂದ ಪ್ರಕೃತಿಯ ವಾತಾವರಣ ಪರಿಶುದ್ಧವಾಗುತ್ತದೆ. ವೈರಾಣು-ರೋಗಾಣು ವಿನಾಶವಾಗುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣವಾಗುತ್ತದೆ.
ಶ್ರೀ ಶ್ರೀ ಚಿದಂಬರದೀಕ್ಷಿತ ಸ್ವಾಮೀಜಿ, ಸಂಸ್ಥಾಪನಾಚಾರ್ಯರು
ಶ್ರೀ ಮಹಾಯಾಗಕ್ಷೇತ್ರ ಶ್ರೀ ಗಾಯತ್ರೀ ದೇವಸ್ಥಾನ ಟ್ರಸ್ಟ್(ರಿ.)










0 Comments