Ticker

6/recent/ticker-posts

Ad Code

Responsive Advertisement

ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಎಲ್ಲ ಪತ್ರಕರ್ತರಿಗೂ ಉಚಿತ ನಿವೇಶನ

ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 1 ಲಕ್ಷ 10 ಸಾವಿರ ದೇಣಿಗೆ ಘೋಷಿಸಿದ ಶಾಸಕ ಬಿ.ನಾಗೇಂದ್ರ

ಬಳ್ಳಾರಿ,ಜೂ.12-ಪ್ರಜಾಪ್ರಭುತ್ವದ ನಾಲ್ಕನೆ ಆಂಗವಾದ ಪತ್ರಿಕೋದ್ಯಮದಲ್ಲಿ ಅನೇಕ ಪತ್ರಕರ್ತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು, ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ರೂ.1 ಲಕ್ಷ 10 ಸಾವಿರ ನೀಡುವುದಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಘೋಷಿಸಿದರು.





ಇಲ್ಲಿನ ಬಿಡಿಎಎ ಮೈದಾನದ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಹಾಗೂ ಪತ್ರಕರ್ತರ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಬಳ್ಳಾರಿ ಮಹಾನಗರ ಪಾಲಿಕೆಯ ಮುಂದಿನ ಸಭೆಯಲ್ಲಿ ಮಹಾಪೌರರು ಮತ್ತು ಎಲ್ಲ ಸದಸ್ಯರ ಜೊತೆ ಚರ್ಚಿಸಿ ರೂ.50 ಲಕ್ಷ ಹಣವನ್ನು ಪತ್ರಕರ್ತರ ಕ್ಷೇಮಕ್ಕಾಗಿ ಮೀಸಲಿಡುವುದಾಗಿ ಹೇಳಿದರು. ಕೆಲ ಪತ್ರಕರ್ತರು ಮಾತ್ರ ಉತ್ತಮ ಸ್ಥಿತಿಯಲ್ಲಿದ್ದಾರೆ. ಇನ್ನೂ ಕೆಲ ಪತ್ರಕರ್ತರು ತಮ್ಮ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಮಾಡಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಅಂಥಹ ಪತ್ರಕರ್ತರಿಗೆ ಬೇಕಾದ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದರಲ್ಲದೆ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಎಲ್ಲ ಪತ್ರಕರ್ತರಿಗೂ ನಿವೇಶನ ಒದಗಿಸಿಕೊಡುವುದಾಗಿ ಹೇಳಿದರು. ಗ್ರಾಮೀಣ ಭಾಗದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ತಮ್ಮ ಸಮಸ್ಯೆಗಳ ಪಟ್ಟಿ ಮಾಡಿ ಕೊಟ್ಟರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪತ್ರಕರ್ತರಿಗಿರುವ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು. 

*ಹೆಣ್ಣು ಮಕ್ಕಳು ಪತ್ರಿಕೋದ್ಯಮಕ್ಕೆ ಬರಲಿ:* ನನಗಿರುವುದು ಎರಡು ಗಂಡು ಮಕ್ಕಳು. ನನಗೇನಾದರೂ ಹೆಣ್ಣು ಮಗಳು ಇದ್ದಿದ್ದರೆ ನಿಮ್ಮಂತೆಯೇ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡುತ್ತಿದ್ದೆ. ಪತ್ರಕರ್ತರಾದ ನೀವು ಪತ್ರಿಕೋದ್ಯಮದಲ್ಲಿ ಇರುವುದರಿಂದ ನಿಮ್ಮ ಹೆಣ್ಣು ಮಕ್ಕಳನ್ನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಮಾಡಲು ಅನುವು ಮಾಡಿಕೊಡಿ. ನಮ್ಮಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದರು. ರಾಜಕಾರಣಿಗಳಾದ ನಾವು ವಿಧಾನಸೌಧದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಯಾವುದೇ ರಾಗ-ದ್ವೇಷಗಳಿಲ್ಲದೇ ಜನಸೇವೆ ಮಾಡುತ್ತೇವೆಂದು ಘೋಷಿಸಿರುತ್ತೇವೆ. ವಾಸ್ತವವಾಗಿ ರಾಜಕಾರಣಿಗಳಾದ ನಾವು ರಾಗ-ದ್ವೇಷಗಳನ್ನಿಟ್ಟುಕೊಂಡೇ ಅಧಿಕಾರ ಮಾಡುತ್ತಿದ್ದೇವೆ ಎಂದು ಮುಕ್ತವಾಗಿ ತಮ್ಮ ಭಾವನೆಗಳನ್ನು ಹಂಚಿಕೊಂಡ ಶಾಸಕ ಬಿ.ನಾಗೇಂದ್ರ ಅವರು, ಪತ್ರಕರ್ತರು ಕೂಡ ಪ್ರತಿಜ್ಞಾ ವಿಧಿ ಸ್ವೀಕರಿಸಿದಂತೆಯೇ ನಡೆದುಕೊಳ್ಳಿರೆಂದು ಸಲಹೆ ನೀಡಿದರು. 

ಪತ್ರಕರ್ತರಿಗೆ ಸಮಾಜದಲ್ಲಿ ಬಹಳಷ್ಟು ಶಕ್ತಿ ಇದೆ. ನಾನು ಗ್ರಾಮೀಣ ಕ್ಷೇತ್ರದಲ್ಲಿ ಶಾಸಕನಾಗಿ 4 ವರ್ಷ ಪೂರೈಸಿದ್ದೇನೆ. ನನ್ನ ಅವಧಿಯಲ್ಲಿ ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ನಡೆಯದಂತೆ ಜನರ ಸೇವೆ ಮಾಡುತ್ತಿದ್ದೇನೆ. ಇತ್ತೀಚೆಗೆ ಕೌಲ್ ಬಜಾರ್ ವ್ಯಾಪ್ತಿಯೂ ಒಳಗೊಂಡಂತೆ ಗ್ರಾಮೀಣ ಪ್ರದೇಶದ ಯುವಕರ ಮೇಲೆ ವಿನಾಕಾರಣ ಪ್ರಕರಣಗಳನ್ನು ದಾಖಲಿಸಿ ಯುವಕರ ಜಂಘಾ ಬಲ ಕುಸಿಯುವ ಹುನ್ನಾರ ನಡೆಯುತ್ತಿದೆ. ಪತ್ರಕರ್ತರು ಇದನ್ನು ಖಂಡಿಸಬೇಕು. ಸದುದ್ದೇಶವಿಟ್ಟುಕೊಂಡು ರಾಜಕಾರಣಕ್ಕೆ ಬಂದಿರುವ ನಮಗೆ ಇತ್ತೀಚಿನ ದಿನಗಳಲ್ಲಿ  ನಡೆಯುತ್ತಿರುವ ದ್ವೇಷ-ಹಗೆತನದ ವಿದ್ಯಮಾನಗಳಿಂದ ನಿಜಕ್ಕೂ ನೋವಾಗುತ್ತಿದೆ. ತಪ್ಪು ಮಾಡದವರು ಯಾರೂ ಇಲ್ಲ. ಪತ್ರಕರ್ತರು ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು. ಅಭಿವೃದ್ಧಿಯ ವಿಷಯದಲ್ಲಿ ಪತ್ರಕರ್ತರು ಕೈ ಜೋಡಿಸಿದರೆ ನಾವೂ ಕೂಡ ಸಹಕರಿಸುತ್ತೇವೆ ಎಂದರು. 

*ಪತ್ರಕರ್ತರ ಲೇಬಲ್ ಇಟ್ಟುಕೊಂಡು ದಂಧೆ ಮಾಡಬೇಡಿ:*ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪತ್ರಕರ್ತರಿಗೆ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಸುದ್ದಿಮನೆಯಲ್ಲಿರುವ ಪತ್ರಕರ್ತರು ಪತ್ರಕರ್ತರ ಲೇಬಲ್ ಇಟ್ಟುಕೊಂಡು ಬ್ಲಾಕ್ ಮೇಲ್ ಸೇರಿದಂತೆ ವಿವಿಧ ರೀತಿಯ ದಂಧೆ ಮಾಡಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದರು. ನ್ಯಾಯದಾನ ಮಾಡುವಂಥ ನ್ಯಾಯಾಧೀಶರೇ ಇಂದು ಪತ್ರಕರ್ತರ ಬಳಿ ಬರುತ್ತಾರೆ. ಇದರರ್ಥ ಸಮಾಜಕ್ಕೆ ರೋಗ ಬಡಿದಾಗ ಪತ್ರಕರ್ತನಾದವನು ವೈದ್ಯನಾಗಬೇಕೇ ವಿನಾ ಬ್ಲಾಕ್ ಮೇಲರ್ ಆಗಬಾರದು. ಪತ್ರಿಕಾ ಮಾಧ್ಯಮವನ್ನು ಲಘುವಾಗಿ ಪರಿಗಣಿಸಬಾರದು. ಪತ್ರಕರ್ತನೆಂಬ ದೀಕ್ಷೆ ಪಡೆದ ಮೇಲೆ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ನೀಡುವಂತಾಗಬೇಕು. ಪತ್ರಕರ್ತರಾದವರು ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು. ಬೇರೆ ಬೇರೆ ದಂಧೆಗಿಳಿದು ಅಕ್ರಮ ಎಸಗಿದರೆ ಜನರು ಅಂಥ ಪತ್ರಕರ್ತನ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಾರೆ. ಜನರ ನಂಬಿಕೆ ಕಳೆದುಕೊಂಡಮೇಲೆ ಪತ್ರಕರ್ತನಾದವನು ಆ ವೃತ್ತಿಯನ್ನೇ ತೊರೆಯಬೇಕು. ಬ್ಲಾಕ್ ಮೇಲ್ ಮಾಡುವ ಪತ್ರಕರ್ತರನ್ನೂ ಸಹ ಸಂಘದಿಂದ ಮುಲಾಜಿಲ್ಲದೇ ಹೊರ ಹಾಕಲಾಗುತ್ತದೆ. ಪತ್ರಕರ್ತರೇ ಅಪ್ರಮಾಣಿಕರಾಗಿದ್ದರೆ ಅದಕ್ಕೆ ಏನೂ ಅರ್ಥವಿಲ್ಲ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇರುವುದು ಕಾರ್ಯ ಮರೆತ ಪತ್ರಕರ್ತರಿಗಲ್ಲ. ದಂಧೆ ಮಾಡುವವರಿಗಲ್ಲ. ನೀವು ಜಗತ್ತಿನ ಕಣ್ಣಿಗೆ ಗೊತ್ತಾಗದಂತೆ ಬ್ಲಾಕ್ ಮೇಲ್ ಅಥವಾ ದಂಧೆ ಮಾಡಬಹುದು. ಆದರೆ, ಆತ್ಮಸಾಕ್ಷಿಯ ಕಣ್ಣು ತಪ್ಪಿಸಲು ನಿಮ್ಮಿಂದ ಸಾಧ್ಯವಿಲ್ಲ. ಪ್ರಾಮಾಣಿಕ ಪತ್ರಕರ್ತರಿಗೆ ಬೆಂಗಳೂರು, ಮೈಸೂರು, ಮಂಡ್ಯ ಮೊದಲಾದೆಡೆ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಯಿರಿಸಲಾಗಿದೆ. ಇಲ್ಲಿಯೂ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಆ ಮೂಲಕ ಕಷ್ಟದಲ್ಲಿರುವ ಪತ್ರಕರ್ತರು ಇದರಡಿ ನಿಧಿ ಬಳಕೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು. ಇದೇವೇಳೆ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ದೇಣಿಗೆ ಘೋಷಣೆ ಮಾಡಿದ ಶಾಸಕ ಬಿ.ನಾಗೇಂದ್ರ ಅವರನ್ನು ಅಭಿನಂದಿಸಿದರು. 

*ಅಭಿವೃದ್ಧಿ ವಿಷಯದಲ್ಲಿ ಪತ್ರಕರ್ತರ ಸಹಕಾರವಿರಲಿ:* ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ, ಮಹಾಪೌರರಾದ ರಾಜೇಶ್ವರಿ ಸುಬ್ಬಾರಾಯುಡು ಅವರು ಮಾತನಾಡಿ, ಪ್ರಚಲಿತ ವಿಷಯಗಳನ್ನು ಪತ್ರಕರ್ತರು ತ್ವರಿತ ಗತಿಯಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಓದುಗರಲ್ಲಿನ ಜ್ಞಾನ ದಾಹವನ್ನು ನೀಗುತ್ತಾರೆ. ಕ್ರಿಯಾಶೀಲವಾಗಿ ದುಡಿಯುತ್ತಿರುವ ಪತ್ರಕರ್ತರು ನಗರದ ಅಭಿವೃದ್ಧಿ ವಿಷಯದಲ್ಲಿ ಸಹಕಾರ ನೀಡಬೇಕು. ಪತ್ರಕರ್ತರಿಗೂ ನಮ್ಮಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಹೇಳಿದರಲ್ಲದೆ, ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿ ಪತ್ರಕರ್ತರನ್ನು ಅಭಿನಂದಿಸಿ ಶುಭ ಕೋರಿದರು. 

*ಸಂಘ ನಡೆಸುವುದು ಸುಲಭದ ಕೆಲಸವಲ್ಲ:* ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ ಮಾತನಾಡಿ, ಪತ್ರಕರ್ತರ ಸಂಘಟನೆ ನಡೆಸುವುದು ಸುಲಭದ ಕೆಲಸವಲ್ಲ. ಹಲವಾರು ವರ್ಷಗಳಿಂದ ಪತ್ರಕರ್ತರ ಒಡನಾಟದಲ್ಲಿರುವ ನಾನು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಂಚರಿಸಿದ್ದೇನೆ. ಬಳ್ಳಾರಿ ಜಿಲ್ಲೆಯ ಪತ್ರಕರ್ತರು ಜನಸಾಮಾನ್ಯರ ಜೊತೆ ಉತ್ತಮ ಒಡನಾಟ ಇರಿಸಿಕೊಂಡಿದ್ದಾರೆ. ಈಗ ನೂತನ ಪದಾಧಿಕಾರಿಗಳಾಗಿರುವ ಪತ್ರಕರ್ತರು ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಿ ಎನ್ನುವುದೊಂದೇ ನನ್ನ ಕಳಕಳಿಯಾಗಿದೆ ಎಂದರು. 

*ಎಲ್ಲರ ಸಹಕಾರ ಇರಲಿ:* ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಮೋಕ ಮಲ್ಲಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಸಂಘವು ನಡೆದು ಬಂದ ದಾರಿಯ ಅವಲೋಕನ ಮಾಡಿದರು. ಇದೀಗ ಸಂಘದಲ್ಲಿ ಸಾಮರಸ್ಯ ಉಂಟಾಗಿದೆ. ಪರಿಶಿಷ್ಟ ಜಾತಿ ಮತ್ತು ಅಲ್ಪಸಂಖ್ಯಾತರಿಗೆ ಉನ್ನತ ಸ್ಥಾನ ನೀಡಲಾಗಿದೆ. ಈಗ ಇರುವ ಪದಾಧಿಕಾರಿಗಳು ಉತ್ಸಾಹಿಗಳು ಮತ್ತು ದೂರದೃಷ್ಟಿವುಳ್ಳವರಾಗಿದ್ದು ಸಂಘ ಸದೃಢವಾಗಿ ಬೆಳೆಯುವ ಎಲ್ಲ ಲಕ್ಷಣಗಳು ಇವೆ. ಸಂಘ ಬೆಳೆಯುವಲ್ಲಿ ಎಲ್ಲರೂ ಸಹಕಾರ ತೋರಬೇಕೆಂದು ಸಲಹೆ ನೀಡಿದರು. 

*ಸಂಘಟನೆ ಬಲ ಪಡಿಸುವೆ:* ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಬಾಷ ಮಾತನಾಡಿ, ಪತ್ರಿಕೋದ್ಯಮಕ್ಕೆ ಅಡಿಯಿರಿಸಲು ಇಲ್ಲಿನ ಹಿರಿಯ ಪತ್ರಕರ್ತರೇ ನನಗೆ ಪ್ರೇರಣೆಯಾಗಿದ್ದಾರೆ. ಅವರ ಸಹಕಾರ, ಮಾರ್ಗದರ್ಶನದಿಂದ ನಾನು ಪತ್ರಿಕಾ ಕ್ಷೇತ್ರಕ್ಕೆ ಬಂದು ಸಮಾಜ ಸೇವೆ ಮಾಡುತ್ತಿದ್ದೇನೆ.  ನಾನು ಪತ್ರಕರ್ತನಾಗಿ ಬಂದಾಗ ಬಳ್ಳಾರಿಯಲ್ಲಿ ಪತ್ರಕರ್ತರ ಎರಡು ಬಣಗಳಿದ್ದವು. ಆ ಬಣಗಳನ್ನು ಒಗ್ಗೂಡಿಸಿ ಇದೀಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷನಾಗಿದ್ದೇನೆ. ಹಿರಿಯ ಪತ್ರಕರ್ತರ ಸಹಕಾರ ಮತ್ತು ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಮೂರು ವರ್ಷದ ಈ ಅವಧಿಯಲ್ಲಿ ಎಲ್ಲರ ಪ್ರೀತಿ, ವಿಶ್ವಾಸ ಪಡೆದು ಸಂಘಟನೆಯನ್ನು ಬಲಪಡಿಸುತ್ತೇನೆ. ಪತ್ರಕರ್ತರು ಇಂದಿಗೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಮತ್ತು ಪ್ರಜ್ಞಾವಂತರ ನೆರವು ಪಡೆದು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿಯೇ ಮಾದರಿಯಾದ ಸಂಘಟನೆ ಮಾಡುವ ಗುರಿ ನನ್ನಲ್ಲಿದೆ. ಎಲ್ಲರೂ ಸಹಕರಿಸಬೇಕೆಂದು ಕೋರಿದರು. 

*ಸಚಿವ ಬಿ.ಶ್ರೀರಾಮುಲು ಅವರಿಗೆ ಸನ್ಮಾನ:* ಸಮಾರಂಭಕ್ಕೂ ಮುನ್ನ ಸಾರಿಗೆ, ಪರಿಶಿಷ್ಟ ಪಂಗಡ ಇಲಾಖೆ ಕಲ್ಯಾಣಾಭಿವೃದ್ಧಿ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಬಾಷ ಅವರು ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ನೂತನ ಪದಾಧಿಕಾರಿಗಳ ಸನ್ಮಾನ ಸ್ವೀಕರಿಸಿದ ಸಚಿವರು ಶುಭ ಕೋರಿ ಅನ್ಯ ಕಾರ್ಯನಿಮಿತ್ತ ತೆರಳಿದರು. 

ಸಮಾರಂಭದಲ್ಲಿ ಮಹಾನಗರ ಪಾಲಿಕೆಯ ಸಭಾ ನಾಯಕರಾದ ಪಿ.ಗಾದೆಪ್ಪ, ಬಳ್ಳಾರಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಸಿಎಂ ಇಬ್ರಾಹಿಂ ಬಾಬು, ಜೆಡಿಎಸ್(ಜಾತ್ಯಾತೀತ) ಪಕ್ಷದ ಯುವ ಧುರೀಣರಾದ ವಿಜಯಕುಮಾರ್, ಬಿಜೆಪಿ ಮಹಿಳಾ ಧುರೀಣೆ ಸುಮಾ ರೆಡ್ಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ವಿರಭದ್ರಗೌಡ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿ.ರವಿ, ಉಪಾಧ್ಯಕ್ಷರಾದ ಕೆ.ಬಜಾರಪ್ಪ, ಎನ್.ಗುರುಶಾಂತ್, ಕಾರ್ಯದರ್ಶಿಗಳಾದ ಪಿ.ರಘುರಾಂ, ಪಂಪನಗೌಡ,  ಬಸವರಾಜ ಹರನಹಳ್ಳಿ ಮತ್ತು ಮುರಳಿಕಾಂತ,  ಎಂ.ಇ.ಜೋಷಿ, ಬಿ.ಶ್ರೀನಿವಾಸುಲು, ಕೆ.ಅಶೋಕ್, ಇಮಾಮ್ ಗೋಡೆಕಾರ್, ಮಲ್ಲಿಕಾರ್ಜುನ, ಕೆಎಂ ಮಂಜುನಾಥ, ನರಸಿಂಹಮೂರ್ತಿ ಕುಲಕರ್ಣಿ, ಜಂಬುನಾಥ, ರಸೂಲ್, ವೆಂಕಟೇಶ್ ದೇಸಾಯಿ, ರೇಣುಕಾರಾಧ್ಯ, ದ್ಯಾಮನಗೌಡ, ಸುಧಾಕರ್ ಮಣ್ಣೂರ್ ಸಾಥ್ ನೀಡಿದರು. ಖಜಾಂಚಿ ಎಸ್ ನಾಗರಾಜ್ ನಿರೂಪಿಸಿ ವಂದಿಸಿದರು. 

 

Post a Comment

0 Comments

Ad Code

Responsive Advertisement