ಮಧುಗಿರಿ : ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸಕಾಲಕ್ಕೆ ಸರಿಯಾಗಿ ತಲುಪಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ರೈತರಿಗೆ ವಿತರಿಸಿ ಮಾತನಾಡಿದ ಅವರು, ಈ ಬಾರಿ ವಾಡಿಕೆಯಂತೆ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗುತ್ತಿವೆ. ಈ ಸಂದರ್ಭದಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ಅನುಕೂಲ ವಾಗುವಂತೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ವಿತರಣೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯಗಳು ಸಿಗಬೇಕು ಎಂದರು.
ಮಳೆಗಾಲ ಪ್ರಾರಂಭವಾಗಿದ್ದು, ಟಾರ್ಪಾಲ್ ಗಳ ವಿತರಣೆ, ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯಲ್ಲಿ ಯಾವುದೇ ದೂರುಗಳು ಬರಬಾರದು. ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ನಿಮ್ಮ ಕೆಳಹಂತದ ಅಧಿಕಾರಿಗಳಿಂದ ಸರಿಯಾಗಿ ರೈತರ ಕೆಲಸ ಮಾಡಿಸಿ, ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಟಾರ್ಪಲ್ ವಿಚಾರಣೆಯಲ್ಲಿ ಅವ್ಯವಹಾರವಾದರೆ ತನಿಖೆಗೆ ಒಳಪಡಿಸಲಾಗುವುದು ಮತ್ತು ನಿಮ್ಮನ್ನು ಗುರಿಪಡಿಸಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪಗೆ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಣ್ಣ ರೈತರಿಂದ ಮಾತ್ರ ರಾಗಿ ಖರೀದಿ ಮಾಡುತ್ತಿದ್ದು, ಹೆಚ್ಚು ಜಮೀನು ಹೊಂದಿರುವ ದೊಡ್ಡ ರೈತರಿಂದ ರಾಗಿ ಖರೀದಿ ಮಾಡುತ್ತಿಲ್ಲ ಎಂದು ರೈತರು ಗಮನಕ್ಕೆ ತಂದಾಗ ಈ ಬಗ್ಗೆ ಮಾತನಾಡಿ ಕೃಷಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸದ್ಯ ಸಣ್ಣಹಿಡುವಳಿದಾರರಿಂದ ಮಾತ್ರ ಖರೀದಿಸಲಾಗುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಕೃಷಿ ನಿರ್ದೇಶಕಿ ದಿವ್ಯಾ ಶ್ರೀ, ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್, ಎಡಿಎ ಹನುಮಂತರಾಯಪ್ಪ, ಕವಿತ, ಎಪಿಎಂಸಿ ಕಾರ್ಯದರ್ಶಿ ಆಶಾ, ತಿಮ್ಮಣ್ಣ, ಚನ್ನಲಿಂಗಪ್ಪ, ಗುಂಡುಗಲ್ ಶಿವಣ್ಣ, ವೆಂಕಟಾಪುರ ಗೋವಿಂದರಾಜು, ಕೀರ್ತಿಶ್ರೀ, ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು, ರೈತರು ಹಾಜರಿದ್ದರು.
ವರದಿ:ನಾಗೇಶ್ ಜೀವಾ ಹೆಚ್ ಟಿ ಹಳ್ಳಿ.

0 Comments