ಬಿಬಿಎಂಪಿ ನೀಡುವ ಸೇವೆಗಳನ್ನು ನಾಗರಿಕರು ಸುಲಭವಾಗಿ ಪಡೆಯುವಂತಾಗಬೇಕು. ಎಲ್ಲರೂ ಒಂದು ಸೇನೆಯಾಗಿ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರವರು ತಿಳಿಸಿದರು.
ಇದೇ ಪ್ರಥಮ ಬಾರಿಗೆ ಪಾಲಿಕೆ ಕೇಂದ್ರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿಭಾಗದ ಅಧಿಕಾರಿಸಿಬ್ಬಂದಿಗಳ(ಸುಮಾರು 1000 ಕ್ಕೂ ಹೆಚ್ಚು) ಜೊತೆ ಪಾಲಿಕೆಯ ಕಾರ್ಯದಕ್ಷತೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳು ನಾಗರಿಕರ ಜೊತೆ ನಿಕಟವಾದ ಸಂಬಂಧವಿಟ್ಟುಕೊಂಡು ಉತ್ತಮ ರೀತಿಯಲ್ಲಿ ಸ್ಪಂದಿಸಿದಾಗ ಪಾಲಿಕೆಯ ಮೇಲೆ ಉತ್ತಮ ಅಭಿಪ್ರಾಯ ಬೀರಲು ಸಾಧ್ಯ. ಅಧಿಕಾರಿಗಳ ಮನೋಭಾವ ಬದಲಾದರೆ ಸಮಾಜದಲ್ಲಿ ನಾಗರಿಕರು ಕೂಡ ಸ್ಪಂದಿಸಿ ಅದಕ್ಕೆ ತಕ್ಕಂತೆ ಬದಲಾಗುತ್ತಾರೆ ಎಂದು ತಿಳಿಸಿದರು.
ಇಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳು ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಇಲ್ಲಿನ ವ್ಯವಸ್ಥೆಯ ಬಗ್ಗೆ ನಿಮಗೆ ಹೆಚ್ಚಿನ ಹರಿವಿರುತ್ತದೆ. ಸಮಸ್ಯೆ ಎಂದು ಬಂದವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಅಧಿಕಾರಿಗಳೆಲ್ಲರೂ ತಮ್ಮ ಜವಾಬ್ದಾರಿಯನ್ನು ಅರಿತು ನಿಷ್ಠೆಯಿಂದ ಕೆಲಸ ಮಾಡಿದರೆ ನಾಗರಿಕರು ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಹೇಳಿದರು.
ಪಾಲಿಕೆಯಿಂದ ನಾಗರಿಕರಿಗೆ ಎಲ್ಲಾ ರೀತಿಯಲ್ಲಿ ಸೇವೆ ನೀಡುವ ಅವಕಾಶವಿದ್ದು, ಖಾತಾ ಪ್ರಮಾಣ ಪತ್ರ, ಉದ್ದಿಮೆ ಪರವಾನಗಿ, ಕಟ್ಟಡ ನಕ್ಷೆ ಮಂಜೂರಾತಿ, ಘನತ್ಯಾಜ್ಯ ಸಂಗ್ರಹಣೆ , ರಸ್ತೆ ಅಭಿವೃದ್ಧಿ, ಜನನ ಮತ್ತು ಮರಣ ಪತ್ರಗಳು ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತೇವೆ. ಆ ಎಲ್ಲಾ ಸೇವೆಗಳು ನಾಗರಿಕರಿಗೆ ಸುಲಭವಾಗಿ ಸಿಗುವಂತಾಗಬೇಕು ಎಂದು ಆಶಿಸಿದರು.
ಬಿಬಿಎಂಪಿ ಅಧಿಕಾರಿ/ನೌಕರರ ಸಮಸ್ಯೆಗಳಿದ್ದರೆ ತಿಳಿಸಿ ಎಂದು ಹೇಳಿದರು. ಈ ವೇಳೆ ಬಿಬಿಎಂಪಿ ಅಧಿಕಾರಿ ನೌಕರರ ಸಮಸ್ಯೆಗಳನ್ನು ಮುಖ್ಯ ಆಯುಕ್ತರು ರವರಲ್ಲಿ ಉನ್ನತ ತರಬೇತಿ/ಕಾರ್ಯಾಗಾರ, ನೌಕರರ ಮುಂಬಡ್ತಿ, ಅಭಿಯಂತರ ನೇಮಕಾತಿ, ಅಧಿಕಾರಿ/ಸಿಬ್ಬಂದಿಗಳಿಗೆ ಆರೋಗ್ಯ ಸೇವೆಯ ಚಿಕಿತ್ಸೆ ಬಗ್ಗೆ ತಮ್ಮ ಅಹವಾಲುಗಳನ್ನು ಹೇಳಿಕೊಂಡರು. ಇದಕ್ಕೆ ತಕ್ಷಣವೇ ಸ್ಪಂದಿಸಿ ತಮ್ಮ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಬಗೆಹರಿಸುವಂತೆ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.
ಸಭೆಯಲ್ಲಿ ವಿಶೇಷ ಆಯುಕ್ತರುಗಳು, ಉಪ ಆಯುಕ್ತರುಗಳು, ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.



0 Comments