ಬೆಂಗಳೂರು, ಮೇ, 28; ಜಾಗತಿಕ ವ್ಯಾಪಾರ ವಲಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಜೈನ ಸಮುದಾಯ ಫ್ಲಿಪ್ ಕಾರ್ಟ್, ಅಮೇಜಾನ್ ಮಾದರಿಯಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸರ್ ವೇದಿಕೆಯಡಿ ಜಾಗತಿಕ ಈ ವಾಣಿಜ್ಯ – ವ್ಯಾಪಾರ ಸಂಸ್ಥೆ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಬೆಂಗಳೂರು ಅರಮನೆ ಮೈದಾನದ ಚಾಮರ ವಜ್ರ ಆವರಣದಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ನಿಂದ ಎರಡು ದಿನಗಳ ಜೈನರ ಜಾಗತಿಕ ಶೃಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಮುದಾಯ ವ್ಯಾಪಾರ ವಹಿವಾಟಿನಲ್ಲಿ ವಿಶೇಷ ಪರಿಣಿತಿ ಸಾಧಿಸಿದೆ. ಜಗತ್ತಿನಾದ್ಯಂತ ಅತ್ಯುತ್ತಮ ಸಂಫರ್ಕ ಜಾಲ ಹೊಂದಿದ್ದು, ಇ – ವಾಣಿಜ್ಯ ಮಾರುಕಟ್ಟೆ ಸಂಸ್ಥೆ ಸ್ಥಾಪಿಸಿದರೆ ಅದ್ಭುತ ಯಶಸ್ಸು ಸಾಧಿಸಬಹುದು. ಇದರಿಂದ ಬರುವ ಲಾಭವನ್ನು ಜೀತೋ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.
ಬೇರೆ ಸಮುದಾಯದವರು ವ್ಯಾಪಾರ ಮಾಡಲು ಹಣ ಎಷ್ಟಿದೆ ಎಂದು ನೋಡುತ್ತಾರೆ. ಜೇಬಿನಲ್ಲಿ ಹಣ ಇದ್ದರೆ ಮಾತ್ರ ವ್ಯಾಪಾರ ಮಾಡುತ್ತೇವೆ. ಇಲ್ಲವಾದಲ್ಲಿ ಯಾವುದಾದರೂ ಕೆಲಸ ನೋಡಿಕೊಳ್ಳುತ್ತೇವೆ. ಆದರೆ ಜೈನ ಸಮುದಾಯದವರು ಖಾಲಿ ಕೈಯಲ್ಲಿ ಉದ್ಯಮ, ವ್ಯಾಪಾರ ಆರಂಭಿಸುತ್ತಾರೆ. ತನ್ನ ಚಾಣಾಕ್ಷತನ, ಬದ್ಧತೆಯಿಂದ ಯಶಸ್ಸು ಸಾಧಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದ್ಯಾತ್ಮದಲ್ಲಿ ಪಾಪ, ಪುಣ್ಯ, ವ್ಯಾಪಾರದಲ್ಲಿ ಲಾಭ ನಷ್ಟ ನೋಡುತ್ತೇವೆ. ಆದರೆ ವಾಸ್ತವವಾಗಿ ವ್ಯಾಪಾರದಲ್ಲಿ ಪಾಪ, ಪುಣ್ಯ ನೋಡಬೇಕು. ಆದ್ಯಾತ್ಮದಲ್ಲಿ ಲಾಭ, ನಷ್ಟ ಲೆಕ್ಕ ಹಾಕಬೇಕು. ಬದುಕಿನಲ್ಲಿ ನೈಸರ್ಗಿಕ ಧರ್ಮ ಪರಿಪಾಲನೆಯಾಗಬೇಕು. ನೈಸರ್ಗಿಕ ಧರ್ಮದ ಪರಿಕಲ್ಪನೆ ಅನುಷ್ಠಾನಗೊಳ್ಳುವ ಯಾವುದಾದರೂ ಧರ್ಮ ಇದ್ದರೆ ಅದು ಜೈನ ಧರ್ಮ ಮಾತ್ರ. ಅಹಿಂಸೆಯೇ ಈ ಧರ್ಮದ ಮೂಲ ತಿರುಳು. ಹಿಂಸೆಯಿಂದ ದಾನವ ಧರ್ಮ, ಅಹಿಂಸೆಯಿಂದ ಮಾನವ ಧರ್ಮ ಸ್ಥಾಪನೆಯಾಗುತ್ತದೆ. ಮಾನವೀಯ ಧರ್ಮಕ್ಕೆ ಜೈನ ಸಮುದಾಯ ಮಾದರಿ ಎಂದು ಹೇಳಿದರು.
ಕರ್ನಾಟಕ ಮತ್ತು ಜೈನ ಧರ್ಮದ ನಡುವೆ ಚಾರಿತ್ರಿಕ ಬಾಂಧವ್ಯವಿದೆ. ಮೂರನೇ ಶತಮಾನದ ಕವಿ ಪಂಪ, ರನ್ನ ಮತ್ತಿತರರು ಜೈನ ಧರ್ಮಕ್ಕೆ ಸೇರಿದವರು. ಬಿಹಾರದಿಂದ ಕರ್ನಾಟಕಕ್ಕೆ ಬಂದ ಬಾಹು ಬಲಿ ಶ್ರವಣಬೆಳಗೊಳದಲ್ಲಿ ನೆಲೆ ನಿಲ್ಲುವಂತು ಮೋಕ್ಷ ಕಂಡ. ಹೀಗಾಗಿ ಕರ್ನಾಟಕ ಧರ್ಮ ಭೂಮಿ ಜತೆಗೆ ಮೋಕ್ಷ ಭೂಮಿಯೂ ಆಗಿದೆ ಎಂದರು.
ಜೀತೋ ಸಂಘಟನೆಯಿಂದ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲು ತೀರ್ಮಾನಿಸಿರುವುದು ಉತ್ತಮ ಬೆಳವಣಿಗೆ, ಪದ್ಮಶ್ರೀ ಆಚಾರ್ಯ ಚಂದನಶ್ರೀ ಅವರ ಜತೆ ಚರ್ಚಿಸಿ ಪ್ರಸ್ತಾವನೆ ಸೂಕ್ತ ಸಲ್ಲಿಸಿದರೆ ಸರ್ಕಾರ ಅನುಮತಿ ನೀಡಲಿದೆ. ಜೈನ ಸಮುದಾಯದ ಯಾವುದೇ ರೀತಿಯ ರಚನಾತ್ಮಕ ಕೆಲಸಗಳಿಗೆ ಸರ್ಕಾರ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಜೈನ ಸಮುದಾಯದ ಬೇರುಗಳು ರಾಜ್ಯದಲ್ಲಿ ಹಾಸುಹೊಕ್ಕಾಗಿದೆ. ರಾಜ್ಯದ ಆರ್ಥಿಕತೆಗೆ ಜೈನರು ಮಹತ್ವದ ಕೊಡುಗೆ ನೀಡುತ್ತಿದ್ದು, ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡಲು ಕಾರ್ಯೋನ್ಮುಖರಾಗಿದ್ದಾರೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷನಾಗಿ ದೇಶಾದ್ಯಂತ ಪ್ರವಾಸ ಕೈಗೊಂಡಿದ್ದು, ಎಲ್ಲೆಡೆ ಜೈನ ಸಮುದಾಯದಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಜೈನರು ಉತ್ತಮವಾಗಿ ಸಂಘಟಿತರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಲೇ ಸಂಸದೀಯ ನಿಯೋಗದ ಜತೆ ಇಂದು ಆಸ್ಟ್ರೇಲಿಯಾಗೆ ತೆರಳಬೇಕಿದ್ದ ತಾವು ತಮ್ಮ ಪ್ರವಾಸವನ್ನು ಒಂದು ದಿನ ಮುಂದೂಡಿರುವುದಾಗಿ ಹೇಳೀದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಅವರು ವ್ಯಾಪಾರ ಮತ್ತು ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು. ಈ ಶೃಂಗ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪದ್ಮಶ್ರೀ ಆಚಾರ್ಯ ಚಂದನಶ್ರೀ ಪಾಲ್ಗೊಂಡರು.
ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ಜಾಗತಿಕ ಸಂಸ್ಥೆಯಾಗಿದ್ದು, ವಿಶ್ವದಾದ್ಯಂತ ಉದ್ಯಮಿಗಳು, ವ್ಯಾಪಾರಿಗಳು, ವೃತ್ತಿಪರರು ಈ ಶೃಂಗ ಸಭೆಯಲ್ಲಿ ಭಾಗವಹಿಸಿದ್ದಾರೆ. ಆರ್ಥಿಕ ಸಬಲೀಕರಣ, ಜ್ಞಾನ, ಸೇವೆ ಮತ್ತು ಹಿಂದುಳಿದಿರುವವರನ್ನು ಮೇಲೆತ್ತುವ ಮಹತ್ವದ ಕಾರ್ಯದಲ್ಲಿ ಜೆ.ಐ.ಟಿ.ಓ ಸಂಘಟನೆ ಕಾರ್ಯೋನ್ಮುಖವಾಗಿದೆ.
ಜ್ಞಾನಾಧಾರಿತ ಸಂಸ್ಥೆಗಳನ್ನು ನಿರ್ಮಿಸಿ ಮೌಲ್ಯಾಧಾರಿತ ಶಿಕ್ಷಣ ನೀಡುವ, ಟೀಕೆ ಟಿಪ್ಪಣೆ ಮಾಡದೇ ಪರಸ್ಪರ ಸಹಕಾರದ ಮೂಲಕ ಬೆಳವಣಿಗೆ ಸಾಧಿಸುವ, ಯುವ ಉದ್ಯಮ ಸಮೂಹಕ್ಕೆ ವ್ಯಾಪಾರ ವಹಿವಾಟಿಗಾಗಿ ಸೂಕ್ತ ವೇದಿಕೆ ಕಲ್ಪಿಸುವ, ಸಕಾರಾತ್ಮವಾಗಿ ಪಾಲ್ಗೊಂಡು ರಾಜಕೀಯ, ಕಾನೂನಾತ್ಮ ಹಾಗೂ ಆಡಳಿತಾತ್ಮಕವಾಗಿ ಕೊಡುಗೆ ನೀಡುವ, ಯುವ ಸಮೂಹಕ್ಕೆ ಉಜ್ವಲ ಭವಿಷ್ಯ ರೂಪಿಸುವ, ಯಶಸ್ವಿ ಉದ್ದಿಮೆದಾರರೊಂದಿಗೆ ಪರಸ್ಪರ ಜ್ಞಾನ ಹಂಚಿಕೆಗೆ ಸೂಕ್ತ ವಾತಾವರಣ ಕಲ್ಪಿಸುವ ಉದ್ದೇಶವನ್ನು ಸಂಘಟನೆ ಹೊಂದಿದೆ.
ಅರಮನೆ ಆವರಣದಲ್ಲಿ 1.25 ಲಕ್ಷ ಚದರ ಅಡಿ ಪ್ರದೇಶದಲ್ಲಿ ಸುಮಾರು 250ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಜೈನಧರ್ಮದ ಸರಳ ಮತ್ತು ಚಿಂತನಶೀಲ ತತ್ವಾದರ್ಶನಗಳನ್ನು ಈ ಪ್ರದೇಶದಲ್ಲಿ ಅನಾವರಣಗೊಳಿಸಲಾಗಿದೆ.
ಜೀತೋ ಸಂಸ್ಥೆಯ ಅಪೆಕ್ಸ್ ಅಧ್ಯಕ್ಷ ಸುರೇಶ್ ಮುಥ, ಅಫೆಕ್ಸ್ ಉಪಾಧ್ಯಕ್ಷ ಪರಾಸ್ ಜೈನ್, ಜಿತೋ ಬೆಂಗಳೂರು ಘಟಕದ ಅಧ್ಯಕ್ಷ ಅಶೋಕ್ ನಗೋರಿ, ಜೀತೋ ಮುಖ‍್ಯ ಕಾರ್ಯದರ್ಶಿ ಮಹೇಶ್ ನಹಾರ್, ಸಮಾಜ್ ಸೇವಕ್ ಮಹೇಂದ್ರ ಸಿಂಘ್ವಿ, ಮಾಧ್ಯಮ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಬೋಹ್ರಾ ಮತ್ತಿತರರು ಉಪಸ್ಥಿತರಿದ್ದರು.
0 Comments