Ticker

6/recent/ticker-posts

Ad Code

Responsive Advertisement

ಖ್ಯಾತ ಸಂಶೋಧಕ ಡಾ. ಆರ್. ಶೇಷಶಾಸ್ತ್ರಿಗೆ ತೆಲುಗಿನ ಪ್ರತಿಷ್ಠಿತ ‘ಸುರವರಂ ಪ್ರತಾಪರೆಡ್ಡಿ ಪುರಸ್ಕಾರ’

ಕನ್ನಡದ ಖ್ಯಾತ ಸಂಶೋಧಕ, ಶಾಸನ ತಜ್ಞ, ಬಹುಭಾಷಾ ಪಂಡಿತ ಡಾ. ಆರ್. ಶೇಷಶಾಸ್ತ್ರಿ ಅವರಿಗೆ ತೆಲುಗಿನ ಪ್ರತಿಷ್ಠಿತ ‘ಸುರವರಂ ಪ್ರತಾಪರೆಡ್ಡಿ ಪುರಸ್ಕಾರ’ ದೊರೆತಿದೆ. 28-05-2022ರಂದು ಹೈದರಾಬಾದಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್‍ರಾವ್‍ರವರು ಉಧ್ಘಾಟಿಸಲಿರುವ ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವ ಜಿ ಕಿಷನ್‍ರೆಡ್ಡಿ, ಹೈದರಾಬಾದ್ ಮೇಯರ್ ಗದ್ವಾಲ್ ವಿಜಯಲಕ್ಷ್ಮಿ ಅವರುಗಳು ಪಾಲ್ಗೊಳ್ಳುವ ಈ ಸಮಾರಂಭದಲ್ಲಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು. 


ತೆಲುಗಿನ ಪ್ರತಿಷ್ಠಿತ ‘ಸುರವರಂ ಪ್ರತಾಪರೆಡ್ಡಿ ಪುರಸ್ಕಾರ’ಕ್ಕೆ ಪಾತ್ರರಾಗಿರುವ ಶೇಷಶಾಸ್ತ್ರಿಯವರಿಗೆ ಕನ್ನಡ ಗೆಳೆಯರ ಬಳಗ  ಮತ್ತು ಕರ್ನಾಟಕ ವಿಕಾಸ ರಂಗ, ಸಂಘಟನೆಗಳು ಹಾರ್ದಿಕ ಅಭಿನಂದನೆಯನ್ನು ಸಲ್ಲಿಸುತ್ತವೆ. 

ಶೇಷಶಾಸ್ತ್ರಿಯವರ ‘ಕರ್ನಾಟಕದ ವೀರಗಲ್ಲುಗಳು’ ಮಾದರಿಯ ಸಂಶೋಧನ ಗ್ರಂಥ ದೇಶದ ಇನ್ನಾವ ಭಾಷೆಯಲ್ಲೂ ಬಂದಿಲ್ಲ. ಅವರ ಶಾಸನ ಶಾಸ್ತ್ರ ಪರಿಚಯ ಒಂದು ಅಪೂರ್ವ ಕೃತಿ. ಶಾಸ್ತ್ರಿಗಳು ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ ಹಲವು ಶ್ರೇಷ್ಠ ಕೃತಿಗಳನ್ನು ಅನುವಾದ ಮಾಡಿದ್ದಾರೆ. ದ.ರಾ.ಬೇಂದ್ರೆ ಅವರ ‘ಅರಳು ಮರಳು’ ಕವನ ಸಂಕಲನವನ್ನು ‘ಮಲಿಪೂತ’ ಎಂಬ ಹೆಸರಿನಿಂದ, ಕನಕದಾಸರ ಎಲ್ಲ ಕನ್ನಡ ಕೀರ್ತನೆಗಳನ್ನು ಮೂಲ ರಾಗ ಮತ್ತು ತಾಳಗಳೊಂದಿಗೆ ತೆಲುಗಿಗೆ ಅನುವಾದಿಸಿದ್ದಾರೆ. ತೆಲುಗಿನಿಂದ ಕನ್ನಡಕ್ಕೆ  ‘ಹಂಪಿನುಂಚಿ ಹರಪ್ಪಾವರಕು’ ಎಂಬ ಕೃತಿಯನ್ನು ‘ಹಂಪಿಯಿಂದ ಹರಪ್ಪಾವರೆಗೆ’ ಎಂದು, ‘ಕಲಾಪೂರ್ಣೋದಯಂ’ ಕೃತಿಯನ್ನು ‘ಕಲಾಪೂರ್ಣೋದಯ’ ಎಂದು, ‘ಆಂಧ್ರುಲ ಸಾಂಘಿಕ ಚರಿತ್ರಂ’ ಕೃತಿಯನ್ನು ‘ಆಂಧ್ರದ ಸಾಮಾಜಿಕ ಚರಿತ್ರೆ’ ಎಂದು ಪಾರಮಾರ್ಥಿಕ ಪದಕೋಶ ಮತ್ತು  ವಿಶ್ವಪ್ರಸಿದ್ಧ ‘ಲಲಿತ ವಿಸ್ತರ’ ಎಂಬ ಪ್ರಾಚೀನ ಬುದ್ಧನ ಜೀವನಚರಿತ್ರೆಯನ್ನು ಕನ್ನಡಕ್ಕೂ ಅನುವಾದಿಸಿದ್ದಾರೆ. ಇನ್ನೂ ಹಲವು ಕೃತಿಗಳನ್ನು ರಚಿಸಿದ್ದಾರೆ.

 ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಶಾಸ್ತ್ರಿಯವರನ್ನು ಕರ್ನಾಟಕ ಸರ್ಕಾರವಾಗಲಿ, ಅಕಾಡೆಮಿಗಳಾಗಲಿ ಗುರುತಿಸದಿರುವುದು ಒಂದು ಅಪಚಾರ. ಈಗಲಾದರೂ ಅವರನ್ನು ಗೌರವಿಸುವ ಕೆಲಸವಾಗಲಿ ಎಂದು ಒತ್ತಾಯಿಸುತ್ತೇವೆ.



Post a Comment

0 Comments

Ad Code

Responsive Advertisement