ಹಾವೇರಿಯಲ್ಲಿ ಆಯೋಜಿಸಲಾಗುತ್ತಿರುವ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಮೂಲೆ ಮೂಲೆಯಿಂದ ಹಾಗೂ ದೇಶದ ವಿವಿಧ ಭಾಗಗಳಿಂದ, ವಿದೇಶಗಳಿಂದಲೂ ಸೇರಿದಂತೆ ಲಕ್ಷಾಂತರ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಭಾವೈಕ್ಯತೆ, ಸಂಸ್ಕೃತಿ ಮತ್ತು ಪರಂಪರೆಗೆ ಹೆಸರುವಾಸಿಯಾದ ಹಾವೇರಿಯಲ್ಲಿ ಜರುಗಲಿರುವ ಈ ಅಕ್ಷರಜಾತ್ರೆಯನ್ನು ಐತಿಹಾಸಿಕ ದಾಖಲೆಯಾಗಿ ಉಳಿಯುವಂತೆ ಮಾಡುವ ಉದ್ದೇಶವನ್ನು ಪರಿಷತ್ತು ಹೊಂದಿದೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಹಾಗೂ ಕನ್ನಡ-ಕನ್ನಡಿಗ-ಕರ್ನಾಟಕದ ಹಿನ್ನೆಲೆಯಲ್ಲಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ರೂಪಿಸುವ ಉದ್ದೇಶದಿಂದ ಮನೆ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಅಭಿಯಾನವನ್ನು ಪ್ರಾರಂಭಿಸಿ, ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ರಾಜ್ಯಾದ್ಯಂತ ಜನಸಾಮಾನ್ಯರ, ಗಣ್ಯರ, ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಮಹನೀಯರುಗಳ ಮನೆಗೆ ಭೇಟಿ ನೀಡಲಿದ್ದಾರೆ.
ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರ ಮಾತ್ರ ಆಚರಿಸುವುದಲ್ಲ, ಸಮಸ್ತ ಕನ್ನಡಿಗರೂ ಸೇರಿ ಕನ್ನಡಿಗರ ಹಬ್ಬ ಎಂಬ ಭಾವನೆಯಿಂದ ಒಗ್ಗಟ್ಟಾಗಿ ಆಚರಿಸಬೇಕೆಂಬ ಅಪೇಕ್ಷೆಯಿಂದ ಹಾಗೂ ಅರ್ಥಪೂರ್ಣ ಗೋಷ್ಠಿಗಳು, ಔಚಿತ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡದ ನುಡಿಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಆಚರಿಸಲು, ಎಲ್ಲರ ಅಭಿಪ್ರಾಯಗಳು, ಸಲಹೆ-ಸೂಚನೆಗಳನ್ನು ಸ್ವೀಕರಿಸಲು ಹಾಗೂ ಸಹಕಾರವನ್ನು ಪಡೆಯಲು ಸ್ವತಃ ಅಧ್ಯಕ್ಷರೇ ಮನೆ ಮನೆಗೆ ಭೇಟಿ ನೀಡಲಿದ್ದಾರೆ.
ಆಸಕ್ತ ಕನ್ನಡಾಭಿಮಾನಿಗಳು, ಇಚ್ಛೆಯುಳ್ಳವರು ತಮ್ಮ ಮನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಆಗಮನಕ್ಕಾಗಿ ಹಾಗೂ ಭೇಟಿಗಾಗಿ ತಮ್ಮ ಹೆಸರು, ಮನೆ ವಿಳಾಸ, ಸಂಪರ್ಕ ದೂರವಾಣಿಯನ್ನು ಜೂನ್ 30 (ಮೂವತ್ತು) ರೊಳಗಾಗಿ, ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018 ಇಲ್ಲಿ ನೋಂದಾಯಿಸಿಕೊಳ್ಳಲು ಕೋರಿದೆ. ಸಂಪರ್ಕಕ್ಕಾಗಿ : ಕಚೇರಿ ದೂರವಾಣಿ 080-26612991, 26623584, 22423867, 26672992, ಇ-ಮೇಲ್ :kannadaparishattu@gmail.com, ವೆಬ್ಸೈಟ್ : www.kasapa.in, ಯೂಟ್ಯೂಬ್: http://www.youtube.com/c/KannadaParishattu, ಫೇಸ್ಬುಕ್: ಕ.ಸಾ.ಪ. ಬೆಂಗಳೂರು
0 Comments