ಬಳ್ಳಾರಿ ನಗರ ಅಭಿವೃದ್ಧಿಗೆ ವಾರ್ಡ್ ಸಮಿತಿ ಅತ್ಯಗತ್ಯ:ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್
ಬಳ್ಳಾರಿ,ಮೇ 12: ಬಳ್ಳಾರಿಯ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಸ್ವಚ್ಛ-ಸ್ವಸ್ಥ ಬಳ್ಳಾರಿಯನ್ನಾಗಿಸುವ ನಿಟ್ಟಿನಲ್ಲಿ ನಗರದ ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯವಾಗಿದೆ. ಬಳ್ಳಾರಿ ನಗರದ ಅಭಿವೃದ್ಧಿಗೆ ವಾರ್ಡ್ ಸಮಿತಿ ಅತ್ಯಗತ್ಯ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಅವರು ಹೇಳಿದರು.
ಬಳ್ಳಾರಿ ಮಹಾನಗರ ಪಾಲಿಕೆ ಮತ್ತು ಜನಾಗ್ರಹ ಸಂಸ್ಥೆಯ ಸಹಯೋಗದೊಂದಿಗೆ ನಗರದ ಬಿಡಿಎಎ ಮೈದಾನದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಬಳ್ಳಾರಿ ನಗರದ ನಾಗರಿಕರಿಗೆ ವಾರ್ಡ್ ಸಮಿತಿ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜನಾಗ್ರಹ ಸಂಸ್ಥೆಯ ಮುಖ್ಯಸ್ಥರಾದ ಸಂತೋಷ್ ನರಗುಂದ ರವರು ಬಳ್ಳಾರಿಯ ನಾಗರಿಕರೊಂದಿಗೆ ಸಂವಾದ ನಡೆಸಿ, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಕಾಯ್ದೆಯನ್ವಯ ವಾರ್ಡ್ ಸಮಿತಿ ರಚನೆಯ ಹಿನ್ನೆಲೆ, ಉದ್ದೇಶಗಳು, ಗುರಿಗಳು ಹಾಗೂ ಜವಾಬ್ದಾರಿಗಳನ್ನು ಚರ್ಚೆಯ ಮುಖಾಂತರ ವಿವರಿಸಿದರು.
ಪ್ರತಿಯೊಂದು ವಾರ್ಡ್ ಸಮಿತಿಯಲ್ಲೂ 10 ಸ್ಥಳೀಯ ನಾಗರಿಕರು ಸದಸ್ಯರಾಗಿದ್ದು, ಆ ವಾರ್ಡ್‍ನ ಕಾರ್ಪೋರೇಟರ್‍ಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ, ಈ 10 ಸ್ಥಾನಗಳ ಪೈಕಿ, 3 ಮಹಿಳೆಯರಿಗಾಗಿ, 2 ಸ್ಥಾನಗಳು ಪರಿಶಿಷ್ಟ ಜಾತಿ/ಪ.ಪಂಗಡದವರಿಗೆ ಮತ್ತು 2 ಸ್ಥಾನಗಳು ನೋಂದಾಯಿತ ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳಿಗೆ ಮೀಸಲಿರಿಸಲಾಗಿರುತ್ತವೆ. ಉಳಿದ 3 ಸ್ಥಾನಗಳು ಸಾಮಾನ್ಯ ವರ್ಗದ ನಾಗರೀಕರಿಗೆ ಲಭ್ಯವಿರುತ್ತವೆ ಹಾಗೂ ಆಯಾ ವಾರ್ಡ್‍ನಲ್ಲಿ ಕೈಗೊಳ್ಳಬೇಕಾದ ವಿವಿಧ ಕಾಮಗಾರಿಗಳನ್ನು ಗುರುತಿಸುವುದು ಹಾಗೂ ನಗರದ ಅಭಿವೃದ್ಧಿಗಾಗಿ ನಾಗರೀಕರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಅನುವುಮಾಡಿಕೊಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.
ವಾರ್ಡ್ ಕಮಿಟಿ ಸದಸ್ಯರಾಗಲು ಉಪಸ್ಥಿತರಿದ್ದ, ಎಲ್ಲಾ ನಾಗರಿಕರು ಹಾಗೂ ಸಂಘ ಸಂಸ್ಥೆಯವರು ವಾರ್ಡ್ ಕಮಿಟಿಯ ಬಗ್ಗೆ ತುಂಬ ಆಸಕ್ತಿಯಿಂದ ತಮ್ಮ ಸಲಹೆಗಳನ್ನು ಆಯುಕ್ತರಿಗೆ ಪ್ರಶ್ನೆಗಳ ಮೂಲಕ ತಿಳಿಸಿ ವಿವರಣೆ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾಗರಿಕರು ಸಂತೋಷದಿಂದ ಎಲ್ಲಾ ವಾರ್ಡ್‍ಗಳಲ್ಲಿ ಸದಸ್ಯರಾಗಲು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸಿ ಅರ್ಜಿ ನಮೂನೆ ಹಾಗೂ ಕರ ಪತ್ರಗಳನ್ನು ಎಲ್ಲರೂ ಪಡೆದುಕೊಂಡರು.
ಈ ಸಂದರ್ಭದಲ್ಲಿ ಡೆ-ನಲ್ಮ್ ಯೋಜನೆಯ ವ್ಯವಸ್ಥಾಪಕರಾದ ದೇವರಾಜ್ ಸೇರಿದಂತೆ ಇತರರು ಇದ್ದರು.

0 Comments