ಬೆಂಗಳೂರು: ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ನಂತರ, ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯಾಗಿ ಎಂಎಲ್ಸಿ ಲೆಹರ್ ಸಿಂಗ್ ಸಿರೋಯಾ ಅವರನ್ನು ಘೋಷಿಸಿದ ಮೇಲೆ ಚುನಾವಣಾ ಕಣ ಮತ್ತಷ್ಟು ರಂಗೇರಿದೆ ಎಂಬುದು ರಾಜಕೀಯ ವಲಯದಲ್ಲಿ ಇರುವಂತಹ ಸುದ್ದಿ.
ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಲಿಖಾನ್ ಸೋಮವಾರ ರಾಜ್ಯಸಭಾ ಚುನಾವಣೆಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದರೂ ಸಹ, ಕಾಂಗ್ರೆಸ್ ಗೆ ಅಡ್ಡ ಮತದಾನದ ಬಗ್ಗೆ ತಲೆನೋವುಂಟಾಗಿದೆ.
ಭಾನುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್ ಅವರನ್ನು ತನ್ನ ಅಭ್ಯರ್ಥಿಗಳನ್ನಾಗಿ ಬಿಜೆಪಿ ಘೋಷಿಸಿದೆ. ಆದರೆ ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಯನ್ನು ಬೆಂಬಲಿಸಿದ ನಂತರ, ಬಿಜೆಪಿಯು ಸೋಮವಾರ ಸಂಜೆ ಲೆಹರ್ ಸಿಂಗ್ ಅವರಿಗೆ ಟಿಕೆಟ್ ಘೋಷಿಸಿತು.
ಬಿಜೆಪಿ 121 ಶಾಸಕರನ್ನು ಹೊಂದಿದ್ದು, ಅದರ ಇಬ್ಬರು ನಾಮನಿರ್ದೇಶಿತರಾದ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಆಯ್ಕೆ ಮಾಡಲು 92 ಮತಗಳು ಬೇಕಾಗುತ್ತವೆ. ಸ್ವತಂತ್ರ ಶಾಸಕ ಮಹೇಶ್ ಅವರ ಬೆಂಬಲದೊAದಿಗೆ ಬಿಜೆಪಿಯ ಮೂರನೇ ಅಭ್ಯರ್ಥಿಗೆ ಕೇವಲ 30 ಮತಗಳು ಉಳಿದು 16 ಮತಗಳ ಕೊರತೆಯಾಗಲಿದೆ.
ಬಿಜೆಪಿ ಹೆಚ್ಚುವರಿ ಮತಗಳನ್ನು ಎಲ್ಲಿಂದ ಪಡೆಯುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಲೆಹರ್ ಸಿಂಗ್, ಮಂಗಳವಾರ ಸಂಪೂರ್ಣ ವಿವರ ನೀಡುವುದಾಗಿ ಹೇಳಿದ್ದಾರೆ, ಇದರೊಂದಿಗೆ ಬಿಜೆಪಿಗೆ ಅಡ್ಡ ಮತದಾನವಾಗಲಿದೆ ಎಂಬ ಕಾಂಗ್ರೆಸ್ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಜೈರಾಮ್ ರಮೇಶ್ ಗೆಲುವು ನಿಶ್ಚಿತವಾಗಿದೆ, ಆದರೆ ಮನ್ಸೂರ್ ಆಲಿ ಖಾನ್ ಅವರ ಭವಿಷ್ಯದ ಬಗ್ಗೆ ಕಾಂಗ್ರೆಸ್ ಗೆ ಖಚಿತವಾಗಿಲ್ಲ. 32 ಶಾಸಕರನ್ನು ಹೊಂದಿರುವ ಜೆಡಿಎಸ್ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಎರಡೂ ಪಕ್ಷಗಳಿಂದ ಹೆಚ್ಚುವರಿ ಮತಗಳನ್ನು ನಿರೀಕ್ಷಿಸಿತ್ತು, ಆದರೆ ಈಗ ಖಾನ್ ಮತ್ತು ಲೆಹರ್ ಸಿಂಗ್ ಕಣಕ್ಕಿಳಿದಿರುವುದರಿಂದ ಜೆಡಿಎಸ್ ಆಸೆಗೆ ತಣ್ಣೀರೆರಚಿದಂತಾಗಿದೆ.
ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಲ್ಲಿ ಎರಡನೇ ಅಭ್ಯರ್ಥಿ ಮುಖ್ಯ ಅಭ್ಯರ್ಥಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದರು. ಇಬ್ಬರೂ ಆಯ್ಕೆಯಾದರು, ಆದರೆ ಈ ಬಾರಿ ಏನು ಬೇಕಾದರೂ ಆಗಬಹುದು ಎಂದು ಹೇಳಲಾಗುತ್ತಿದೆ. ಪಕ್ಷಗಳು ವಿಪ್ ಜಾರಿ ಮಾಡಿವೆ, ಶಾಸಕರು ತಮ್ಮ ಮತಪತ್ರವನ್ನು ಮತಗಟ್ಟೆ ಏಜೆಂಟ್ಗೆ ತೋರಿಸಬೇಕಾದ ಸಾಧ್ಯತೆಯಿದೆ, ಹೀಗಿದ್ದರೂ ಅಡ್ಡ ಮತದಾನದ ಭೀತಿ ಇನ್ನೂ ಇದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ 69 ಶಾಸಕರನ್ನು ಹೊಂದಿದ್ದು, ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಪಕ್ಷವನ್ನು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಸಂಖ್ಯಾಬಲ 70 ಆಗಿದೆ. ಈಗ 46 ಶಾಸಕರು ತಮ್ಮ ಮೊದಲ ಪ್ರಾಶಸ್ತ್ಯದ ಮತಗಳನ್ನು ಜೈ ರಾಮ್ ರಮೇಶ್ಗೆ ಮತ್ತು ಉಳಿದವರು ಮನ್ಸೂರ್ ಅಲಿ ಖಾನ್ಗೆ ಚಲಾಯಿಸಲು ಸೂಚಿಸಲಾಗಿದೆ.
0 Comments