ಟೆಂಡರ್ ಪರಿಶೀಲನಾ ಸಮಿತಿ ರಚಿಸುವ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿಯವರು ತಮ್ಮ ಸಚಿವ ಸಂಪುಟ ಸದಸ್ಯರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ಟೆಂಡರ್ ಕಾಮಗಾರಿಗಳಲ್ಲಿ 40% ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯು ಹಲವು ತಿಂಗಳಿನಿಂದ ಹೇಳುತ್ತಿದೆ. ಗುತ್ತಿಗೆದಾರರ ಸಂಘಗಳು, ನಿವೃತ್ತ ಅಧಿಕಾರಿಗಳು ಕೂಡ ಇದನ್ನೇ ಹೇಳುತ್ತಿದ್ದಾರೆ. ಇದನ್ನು ಅಲ್ಲಗೆಳೆಯುತ್ತಿದ್ದ ಸಿಎಂ ಬೊಮ್ಮಾಯಿಯವರು ಈಗ 50 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಟೆಂಡರ್‌ಗಳ ಪರಿಶೀಲನೆಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರತ್ನಪ್ರಭಾರವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ತಮ್ಮದೇ ಸಚಿವರ ಮೇಲೆ ಬೊಮ್ಮಾಯಿಯವರಿಗೆ ನಂಬಿಕೆಯಿಲ್ಲ ಎಂಬುದು ಇದರಿಂದಲೇ ತಿಳಿಯುತ್ತದೆ” ಎಂದು ಹೇಳಿದರು.
“ಸಚಿವರು ನಡೆಸುವ ಕಾಮಗಾರಿಗಳ ಮೇಲೆ ಕಣ್ಣಿಡಲು ಪರಿಶೀಲನಾ ಸಮಿತಿ ರಚಿಸಬೇಕಾದ ಸ್ಥಿತಿ ಬಂದಿರುವುದು ನಾಚಿಕೆಗೇಡಿನ ಸಂಗತಿ. ಇದರ ಬದಲು, ಭ್ರಷ್ಟ ಸಚಿವರನ್ನು ಸಚಿವರ ಸಂಪುಟದಿಂದ ಉಚ್ಚಾಟಿಸಿ, ಪ್ರಾಮಾಣಿಕರನ್ನು ಸೇರಿಸಿಕೊಳ್ಳಬಹುದಿತ್ತು. ಈಗಲಾದರೂ ಸಂಪುಟ ಪುನಾರಚನೆ ಮಾಡಿ, ನಂಬಿಕೆ ಕಳೆದುಕೊಂಡಿರುವ ಸಚಿವರನ್ನು ಕೈಬಿಡಲಿ” ಎಂದು ಆಗ್ರಹಿಸಿದರು.
“ಕೆಐಎಡಿಬಿಗೆ ಸಂಬಂಧಿಸಿದ ರಾಜ್ಯದ 188 ಕೈಗಾರಿಕಾ ಪ್ರದೇಶಗಳ ನೂರಾರು ಎಕರೆ ಜಮೀನು ಅತಿಕ್ರಮಣಗೊಂಡಿರುವುದು ಹಾಗೂ ಖಾಲಿ ಇರುವುದರ ತನಿಖೆಯನ್ನು ರಾಜ್ಯ ಸರ್ಕಾರವು ವಿದೇಶಿ ತನಿಖಾ ಸಂಸ್ಥೆಗೆ ವಹಿಸುತ್ತಿದೆ. ಲೋಕಾಯುಕ್ತ, ಸಿಐಡಿ, ಸಿಬಿಐ ಮುಂತಾದ ಭಾರತೀಯ ಸಂಸ್ಥೆಗಳ ಮೇಲೆ ರಾಜ್ಯ ಸರ್ಕಾರ ನಂಬಿಕೆ ಕಳೆದುಕೊಂಡಿರುವುದು ಇದರಿಂದಲೇ ತಿಳಿಯುತ್ತದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮಾತನಾಡಿ, “50 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಕಾಮಗಾರಿಗಳಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಹೀಗಿರುವಾಗ ಕೇವಲ 50 ಕೋಟಿ ರೂಪಾಯಿಗಿಂದ ಅಧಿಕ ಮೊತ್ತದ ಕಾಮಗಾರಿಗಳನ್ನು ಮಾತ್ರ ಸಮಿತಿಯ ಪರಿಶೀಲನೆಗೆ ಒಪ್ಪಿಸುವ ಹಿಂದಿನ ಉದ್ದೇಶವೇನು? ಸರ್ಕಾರದ ಈ ನಿರ್ಧಾರದ ಹಿಂದೆ, ಸಣ್ಣ ಕಾಮಗಾರಿಗಳಲ್ಲಿನ ಅಕ್ರಮಕ್ಕೆ ಅನುವು ಮಾಡಿಕೊಡುವ ದುರುದ್ದೇಶವಿದೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡರಾದ ಚನ್ನಪ್ಪಗೌಡ ನೆಲ್ಲೂರು, ಗೋಪಿನಾಥ್, ಮತ್ತಿತರರು ಭಾಗವಹಿಸಿದ್ದರು.

0 Comments