"ದಿನಾಂಕ : 10.05.2020 ಮಂಗಳವಾರ ಶ್ರೀ ಶ್ಯಾಮಸುಂದರದಾಸರ ಆರಾಧನಾ ಮಹೋತ್ಸವ "
ಜಗನ್ನಾಥ ಗುರೋರ್ದಾಸಂ
ಜಗದಾನಂದಕಾರಕಂ ।
ಶ್ಯಾಮಸುಂದರದಾಸಾರ್ಯಂ
ವಂದೇ ಸುಜ್ಞಾನದಾಯಕಮ್ ।
" ಶ್ರೀ ಶ್ಯಾಮಸುಂದರದಾಸರ ವಂಶ "
ಶ್ರೀ ಹರಿ ನಾರಾಯಣ
ಶ್ರೀ ಮಹಾಲಕ್ಷ್ಮೀ
ಶ್ರೀ ಬ್ರಹ್ಮ - ಶ್ರೀ ವಾಯುದೇವರು
ಶ್ರೀ ಶ್ರೀಪಾದರಾಜರು
ಶ್ರೀ ವ್ಯಾಸರಾಜರು
ಶ್ರೀ ಪುರಂದರದಾಸರು
ಶ್ರೀ ವಿಜಯರಾಯರು
ಶ್ರೀ ಗೋಪಾಲದಾಸರು
ಶ್ರೀ ಜಗನ್ನಾಥದಾಸರು
ಶ್ರೀ ಶ್ಯಾಮಸುಂದರದಾಸರು
" ಶ್ರೀ ಶ್ಯಾಮಸುಂದರದಾಸರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಗುಂಡಾಚಾರ್ಯರು
ತಂದೆ : ಶ್ರೀ ಶ್ಯಾಮಾಚಾರ್ಯರು
ತಾಯಿ : ಸಾಧ್ವೀ ಕೊಪ್ರಮ್ಮ
ಕಾಲ : ಕ್ರಿ ಶ 1896 - 1956ಕುಲ
ಕುಲ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಸ್ವರೂಪೋದ್ಧಾರಕ ಗುರುಗಳು : ಶ್ರೀ ಜಗನ್ನಾಥದಾಸರು
ಗುರುಗಳು :
ಶ್ರೀ ಐಕೋರು ನರಸಿಂಹಾಚಾರ್ಯರು, ಶ್ರೀ ಅಸ್ಕಿಹಾಳ ಗೋವಿಂದದಾಸರು
ಅಂಕಿತ : ಶ್ರೀ ಜಗನ್ನಾಥದಾಸರಿಂದ ಸ್ವಪ್ನಾಂಕಿತ " ಶ್ಯಾಮಸುಂದರವಿಠ್ಠಲ
ಸಮಕಾಲೀನ ಯತಿಗಳು :
ಶ್ರೀ ಸುಶೀಲೇಂದ್ರತೀರ್ಥರು; ಶ್ರೀ ಸುವ್ರತೀಂದ್ರತೀರ್ಥರು; ಶ್ರೀ ಸುಯಮೀಂದ್ರತೀರ್ಥರು
ಶಿಷ್ಯರು :
ಶ್ರೀ ವಿಜಯಸಾರಥಿವಿಠಲ; ಶ್ರೀ ಲಕುಮೀಶದಾಸರು ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ), ಶ್ರೀ ಅಭಿನವ ಪ್ರಾಣೇಶದಾಸರು; ಶ್ರೀ ಶ್ರೀಕರವಿಠಲ; ಶ್ರೀ ಪದ್ಮನಾಭವಿಠಲ ಮತ್ತು ಶ್ರೀ ಗುರು ಶ್ಯಾಮಸುಂದರದಾಸರು ( ಶ್ರೀ ಸುಶೀಲೇಂದ್ರಾಚಾರ್ಯರು ),
ಉಪದೇಶ ಪಡೆದ ಶಿಷ್ಯರು :
ಮರತೇಡ್ ಶ್ರೀನಿವಾಸರಾಯರು, ಚೀಲಕಪರವೀ ಶ್ರೀ ನರಸಿಂಹದಾಸರು, ದಡದಲ ಶ್ರೀ ನರಸಿಂಗರಾಯರು ಮತ್ತು ದಡದಲ ಶ್ರೀ ಭೀಮಸೇನದಾಸರು ( ಶ್ರೀ ಮೋತಿದಾಸರು )
" ಶ್ರೀ ದಾಮೋದರದಾಸರೇ ಶ್ರೀ ಶ್ಯಾಮಸುಂದರದಾಸರು "
ಶ್ಯಾಮಸುಂದರದಾಸರು ಹಿಂದಿನ ಜನ್ಮದಲಿ ರಂಗ ಒಲಿದ ದಾಸರಾಯರಾದ ಶ್ರೀ ಜಗನ್ನಾಥದಾಸರ ಪುತ್ರರಾದ ಶ್ರೀ ದಾಮೋದರದಾಸರಾಗಿ ಅವತರಿಸಿ ಶ್ರೀ ಜಗನ್ನಾಥದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ " ಹರಿಕಥಾಮೃತಸಾರ " ದ ಕೆಲವು ಸಂಧಿಗಳನ್ನು ಶ್ರೀ ದಾಸಾರ್ಯರ ಪರಮಾನುಗ್ರಹ ಬಲದಿಂದ ಬರೆದಿದ್ದರ ಫಲದಿಂದ ಶ್ರೀ ಶ್ಯಾಮಸುಂದರದಾಸರಾಗಿ ಅವತರಿಸಿದ್ದಾರೆ ಎಂಬುದನ್ನು ಈ ಕೆಳಗಿನ ಪ್ರಮಾಣಗಳು ಖಚಿತ ಪಡಿಸಿವೆ.
ಶ್ರೀ ವಿಜಯಸಾರಥಿ ವಿಠಲರು....
ಹರಿಕಥಾಮೃತ ವಕ್ತಾರಃ ।
ಪರಮಾನುಗ್ರಹ ಸೂನುವೇ ।
ವರ ಕವಿ ಪಂಡಿತಾಚಾರ್ಯ
ನಮೋ ನಮಃ ।।
ಶ್ರೀ ಶ್ರೀಕರ ವಿಠಲರು...
ಮಾನವಿಯಧಾಮರಾ
ಪ್ರೇಮದಾ ಸೂನೂ ।
ನೀನೆಂದು ಭಾವಿಸಿ
ಸ್ತುತಿಪ ಜನರನ್ನು ತಾನೇ ।
ಶ್ರೀಕರವಿಠ್ಠಲ ಪೊರೆಯುವನು
ವರ ಕಾಮಧೇನು ।।
ಶ್ರೀ ತಂದೆ ವೆಂಕಟೇಶ ವಿಠಲರು...
ಮಾನವೀ ಗುರುವ ಪ್ರಸೂನ
ಷಟ್ಟರಣ ಕವಿ ।
ಭಾನು ಹೃದ್ಯಾನವದ್ಯಾಭಿಮನ್ಯು
ಪ್ರಾಣ ಪ್ರಿಯ ತಂದೆ
ವೆಂಕಟೇಶವಿಠಲನ್ನ ಪದ ।
ರೇಣಿನವನಿವನೆಂದು
ಸುಮುಖನಾಗೋ ।।
ಶ್ರೀ ಶ್ಯಾಮ ಸುಂದರ ದಾಸರೇ ತಾವು ಶ್ರೀ ಜಗನ್ನಾಥದಾಸರ ಪುತ್ರರೆಂದು ಈ ಕೆಳಕಂಡ ಪ್ರಮಾಣಗಳಿಂದ ಸ್ಪಷ್ಟ ಪಡಿಸಿದ್ದಾರೆ.
ಭೋ ದಾತಾ ಬಾರೋ
ಗುರುವರ್ಯ ।। ಪಲ್ಲವಿ ।।
ನಂಬಿದೆ ನಾ ನಿನ್ನ ಪಾದ
ಭೂನಾಥ ದಾಸಾಗ್ರಣೀ ।। ಅ. ಪ ।।
... ಪೋತನೋಳೀಪರಿ
ಯಾತಕೆ ನಿರ್ದಯ ।
ತಾತನೆ ನಿಮಗಿದು
ರೀತಿಯೇ ನೋಡೈ ।
ಸುತನಪರಾಧವ
ಹಿತದಲಿ ಮನ್ನಿಸಿ ।
ಪಾತಕ ಬಿಡಿಸೋ
ಮತಿ ಬೀರೋ ।।
ಇನ್ನೊಂದು ಪದದಲ್ಲಿ.....
ಕರವ ಪಿಡಿ ಗುರುರಾಯಾ ।
ಶಿರ ಬಾಗಿ ಬೇಡುವೇ ।
ಪೊರೆಯೋ ಸತ್ಕವಿಗೇಯ ।।
ನೆರೆ ನಂಬಿದೆನೋ ನೀ ।
ಮರೆಯದಿರು ಶುಭ ಕಾಯ ಹೇ
ಸೂರಿವರ್ಯ ।। ಪಲ್ಲವಿ ।।
... ಮಂದ ನಾ ನಿಜವಯ್ಯಾ ।
ಸಂದೇಹವಿಲ್ಲದೇ ।
ಕುಂದು ಎಣಿಸದೆ ಜೀಯಾ ।
ಬಂದೆನ್ನ ಮನದಲಿ ।
ನಿಂದು ನೀ ಸಲಹಯ್ಯಾ ।
ವಂದಿಪೆನು । ಶ್ರೀ ಪು ।।
ರಂದರಾರ್ಯರ ಪ್ರಿಯಾ ।
ಆನಂದ ನಿಲಯಾ ।
ಅಂದು ಸ್ವಪ್ನದಿ ।
ವಚನವು ತಂದೆಯೇ ।
ಇಂದಿಲ್ಲಿ ಪೋಯಿತು ।
ನಂದ ನಂದನನಾದ ।
ಶ್ರೀ ಗೋ ।
ವಿಂದ ಶ್ಯಾಮಸುಂದರನ
ವಿಧೇಯಾ ।।
ಮತ್ತೊಂದು ಕೃತಿಯಲ್ಲಿ....
ಮಾನಿತ ನಿನಗನು ।
ಮಾನವ್ಯಾತಕೆ ತವ ।
ಸೋನು ನಾನಲ್ಲವೇ ।
ಮಾನವಿ ನಿಲಯನೇ ।।
" ಶ್ರೀ ರಾಘವೇಂದ್ರತೀರ್ಥರ ಕಾರುಣ್ಯ "
ಅಂದಿನ ಸಮಾಜದಲ್ಲಿ ಸುಪ್ರಸಿದ್ಧರು ಶ್ರೀ ಪ್ರಹ್ಲಾದಾವತಾರಿಗಳಾದ ಶ್ರೀ ರಾಘವೇಂದ್ರತೀರ್ಥರ ಅತ್ಯಂತ ಪ್ರಿಯರಾದವರು
ಶ್ರೀ ಅಹ್ಲಾದಾಂಶ ಶ್ರೀ ಗುರು ಜಗನ್ನಾಥದಾಸರು. ಶ್ರೀ ವಿಜಯರಾಯರ ಪರಂಪರೆಗೆ ಸೇರಿದ ಶ್ರೀ ಜಗನ್ನಾಥದಾಸರ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀ ಗುರು ಜಗನ್ನಾಥದಾಸಾರ್ಯರು
" ಕೋಸಿಗಿ ಮುತ್ಯಾ " ಯೆಂಬ ಹೆಸರಿನಲ್ಲಿ ಎಲ್ಲಾ ಸಾತ್ವಿಕ ಜನ ಮಾನಸದಲ್ಲಿ ಗುರು ಸ್ಥಾನವನ್ನು ಪಡೆದಿದ್ದರು.
" ಹರಿಕಥಾಮೃತಸಾರ " ವನ್ನು ತಮ್ಮ ಪ್ರತಿ ರಕ್ತದ ಕಣದಲ್ಲೂ ತುಂಬಿಕೊಂಡ ಕೋಸಿಗಿ ಮುತ್ಯಾ ಅವರು ಶ್ರೀ ಜಗನ್ನಾಥದಾಸರ ದರ್ಶನಾಕಾಂಕ್ಷಿಗಳಾಗಿ ಮಾನವಿಗೆ ಬಂದರು.
ಶ್ರೀ ದಾಸಾರ್ಯರ ಆಗಮನವನ್ನರಿತ ಶ್ರೀ ಶ್ಯಾಮಾಚಾರ್ಯ ದಂಪತಿಗಳು ತಮ್ಮ ಮಗನ ಕರೆತಂದು ಅವರ ಅಡಿದಾವರೆಗಳಲ್ಲಿಟ್ಟು ದುಃಖವನ್ನು ತೋಡಿಕೊಂಡರು.
ಶ್ರೀ ಗುರು ಜಗನ್ನಾಥದಾಸರು ಮಮತೆಯಿಂದ ಮಗುವಿನ ತಲೆಯ ಮೇಲೆ ಕೈಯಾಡಿಸುತ್ತಾ...
ಶ್ಯಾಮಾಚಾರ್ಯರೇ! ನಿಮ್ಮ ಮಗನು ಭಗವದನುಗ್ರಹದಿಂದ ನಿರಂತರ ಆಧ್ಯಾತ್ಮಿಕ ತತ್ತ್ವಗಳನ್ನಾಡಬಲ್ಲ ವರ ಕವಿಯಾಗುವನು.
ಇವನು ಬೂದಿ ಮುಚ್ಚಿದ ಕೆಂಡ " ಎಂದು ಹರಿಸಿದರು.ಶ್ರೀ ಗುರು ಜಗನ್ನಾಥದಾಸರ ಪರಮಾನುಗ್ರಹದಿಂದ ಗುಂಡಾಚಾರ್ಯರು ಕೆಲವೇ ತಿಂಗಳಗಳಲ್ಲಿ ಸ್ವಚ್ಛವಾಗಿ ಮಾತನಾಡಲು ಪ್ರಾರಂಭಿಸಿದನು .
" ಮೂಕೋಪಿಯತ್ಪ್ರಸಾದೇನ
ಮುಕುಂದ ಶಯನಾಯತೇ.... "
ಎಂಬಂತೆ ಶ್ರೀ ರಾಘವೇಂದ್ರತೀರ್ಥರು ಹಾಗೂ ಶ್ರೀ ಜಗನ್ನಾಥದಾಸರು ಶ್ರೀ ಗುರು ಜಗನ್ನಾಥದಾಸರನ್ನು ಮಾಧ್ಯಮವನ್ನಾಗಿಟ್ಟುಕೊಂಡು ಗುಂಡಾಚರ್ಯರ ಮೇಲೆ ತೋರಿದ ಕಾರುಣ್ಯ.
ಕಾರಣ ಶ್ರೀ ಪ್ರಹ್ಲಾದರಾಜರೇ ಶ್ರೀ ರಾಘವೇಂದ್ರತೀರ್ಥರು - ಶ್ರೀ ಸಹ್ಲಾದರಾಜರೇ ಶ್ರೀ ಜಗನ್ನಾಥದಾಸರು - ಶ್ರೀ ಆಹ್ಲಾದರಾಜರೇ ಶ್ರೀ ಗುರು ಜಗನ್ನಾಥದಾಸರು ಮತ್ತು ಶ್ರೀ ಜಗನ್ನಾಥದಾಸರ ಪುತ್ರರಾದ ಶ್ರೀ ದಾಮೋದರದಾಸರೇ ಶ್ರೀ ಶ್ಯಾಮಸುಂದರದಾಸರಾಗಿ ಅವತಾರ ಮಾಡಿದ್ದಾರೆಂದ ಮೇಲೆ ಜ್ಞಾನಿತ್ರಯರ ಕಾರುಣ್ಯಕ್ಕೆ ವಿಶೇಷವಾಗಿ ಪಾತ್ರರಾದವರು ಶ್ರೀ ಗುಂಡಾಚಾರ್ಯರು!!
" ಅಂಕಿತ ಪ್ರದಾನ "
ಅದೊಂದು ಶುಭ ಸಮಯ.
ಶ್ರೀ ಗುಂಡಾಚಾರ್ಯರ ಸ್ವಪ್ನದಲ್ಲಿ ಶ್ರೀ ಜಗನ್ನಾಥದಾಸರು ಕಾಣಿಸಿಕೊಂಡು " ಶ್ಯಾಮಸುಂದರವಿಠಲ " ಎಂಬ ಅಂಕಿತ ನಾಮವನ್ನು ಕರುಣಿಸಿ ಅನುಗ್ರಹಿಸಿದರು.
ಶ್ರೀ ಗುಂಡಾಚಾರ್ಯರ ವದನಾರವಿಂದದಿಂದ ಭಗವನ್ಮಹಿಮಾ ಪ್ರತಿಪಾದಕವಾದ; ವೇದಾಂತ ರಹಸ್ಯಗಳಿಂದ ಕೂಡಿದ ಕವಿತಾ ತರಂಗಿಣಿಯು ಹೊರಹೊಮ್ಮಿತು.
ಅಂದಿನಿಂದ ಶ್ರೀ ಗುಂಡಾಚಾರ್ಯರು " ಶ್ರೀ ಶ್ಯಾಮಸುಂದರವಿಠಲ " ರೆಂದು ಪ್ರಸಿದ್ಧಿಯಾದರು.
" ವರ ಕವಿಗಳಿಂದ ವರ ಕವಿಗಳಿಗೆ ಸ್ವಾಗತ "
ಕವಿ ದ ರಾ ಬೇಂದ್ರೆಯವರನ್ನು ಕುರಿತ ಹಾಡು ಸುಂದರವಾಗಿದೆ.
ಮಾನವಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನಕ್ಕೆ ಬರುವಂತೆ ವ್ಯವಸ್ಥಾಪಕರು ಮಾಡಿಕೊಂಡ ಮನವಿಯನ್ನು ಕವಿ ಬೇಂದ್ರೆಯವರು ಮನ್ನಿಸದಿದ್ದುದಕ್ಕೆ ಇಡೀ ಸಮ್ಮೇಳನದ ಉತ್ಸಾಹವು ಕುಗ್ಗಿದ್ದನ್ನರಿತ ಶ್ರೀ ಶ್ಯಾಮಸುಂದರದಾಸರು ಕವಿ ಬೇಂದ್ರೆಯವರಿಗೆ ಮಾನವಿಗೆ ಬರುವಂತೆ ಆಹ್ವಾನಿಸಿ ಒಂದು ಸ್ವಾಗತ ಪದವನ್ನು ಬರೆದು ಧಾರವಾಡಕ್ಕೆ ಕಳುಹಿಸಿದರು.
ಸ್ವಾಗತ ಪದದಲ್ಲಿ ನಿರೂಪಿತ ಸಾಹಿತ್ಯ ಸತ್ವವನ್ನು ಓದಿದ ಕವಿ ಬೇಂದ್ರೆಯವರು ಕೂಡಲೇ ಮಾನವಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸತ್ಕವೀಂದ್ರ ಬಾ ಬೇಂದ್ರೆ
ಸುಗುಣ ಸಾಂದ್ರ ।। ಪಲ್ಲವಿ ।।
ನಮ್ಮ ಮಾನವಿ ಸ್ಥಳದಿ
ಅಚ್ಛಗನ್ನಡದ ನುಡಿಯ ।
ಸಮ್ಮಿಲನ ಸಾಗಿಸಲು
ನಿಶ್ಚಯಿಸಿದೆ ।
ನಿಮ್ಮ ಬರುವಿಕೆ ಬಯಕೆ ।।
ಇಮ್ಮಡಿಸಿಹುದೆಮಗೆ ।
ಸಮ್ಮತಿಸಿ । ಬಾರ ।
ಯ್ಯ ಸತ್ಕವೀಂದ್ರ ಶ್ರೀ
ಬೇಂದ್ರೆ ಸುಗುಣೇಂದ್ರ ।। ಚರಣ
... ಪ್ರೇಮದಿಂದಲಿ ನಿನ್ನ
ಕಾಮಿತಾರ್ಥವಗರೆದು ।
ಶ್ಯಾಮಸುಂದರವಿಠಲ
ಸಲಹೋ ಎಂದು ।
ನಾಮದಡಿ ಪ್ರಾರ್ಥಿಸುವೆ
ನೀ ಮಾಡ್ವ ಉಪಕಾರ ।।
" ಶ್ರೀ ಜಗನ್ನಾಥದಾಸರೇ ಸಾರಸರ್ವಸ್ವ "
ಅನೇಕ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದ ಇವರಿಗೆ ಮಾನವಿಯಲ್ಲಿ ಎಲ್ಲಿಲ್ಲದ ಅಭಿಮಾನ. ಅದೇ ಅವರ ಪಾಲಿಗೆ ಸಕಲ ತೀರ್ಥ ಕ್ಷೇತ್ರಗಳ ಪವಿತ್ರ ನಿಲಯ. ಇದಕ್ಕೆ ಒಡೆಯರಾದ ಶ್ರೀ ಜಗನ್ನಾಥದಾಸರೇ ಇವರ ಪಾಲಿಗೆ ತಂದೆ, ತಾಯಿ, ಬಂಧು, ಬಳಗ, ಗುರು, ದೈವ ಎಲ್ಲವೂ ಆಗಿದ್ದಾರೆ.
ಶ್ಯಾಮಸುಂದರದಾಸರು ತಮ್ಮ ಒಂದು ಸುಳಾದಿಯಲ್ಲಿ....
ಇವರ ಸಂದರುಶನ ಭಾವ ಬಂಧ ಮೋಚನ । ಇವರ ಚರಣ ಧ್ಯಾನ ಗಂಗಾ ಸ್ನಾನ । ಇವರನ್ನ ಸಾರಿದರೆ ಜವಾನ ಅಂಜಿಕೆಯುಯಿಲ್ಲ । ಇವರ ಕವನ ಸ್ತವನ ಶ್ರವಣದಿಂದ । ಪವನ ಸಚ್ಛಾಸ್ತ್ರದ ಪವಚನ ಫಲವಕ್ಕು ।ಇವರಿಪ್ಪ ಸ್ಥಳ ಕಾಶೀ ರಾಮೇಶ್ವರ । ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು । ಇವರಿಂದ ವಚನವ ನಡೆಸುವರು । ಇವರಿಲ್ಲಿರಲು ಬಿಟ್ಟು ಅವನಿ ಸುತ್ತಿದವರಿಗೆ । ಆವಲೇಶವಾದರೂ ಪುಣ್ಯವಿಲ್ಲ । ಇವರನುಗ್ರಹವಾಗೆ ಶ್ರೀ ಶ್ಯಾಮಸುಂದರನು । ತವಕದಿಂದ ಕರ ಪಿಡಿದು ಸಲಹುವ ಸರ್ವದಾ ।।
" ನಿರ್ಯಾಣ "
ಪೂರ್ಣವಾದ ಹರಿದಾಸ ಸಾಹಿತ್ಯದ ಭಾಂಡಾಗಾರವನ್ನು ತಮ್ಮ ಕೃತಿ ರತ್ನಗಳಿಂದ ಪೂರ್ಣ ಮಾಡಿದ ಮಹನೀಯರು.
ನಿಗೂಢವಾದ ಸಾಧನೆಯನ್ನು ಮಾಡಿ ಕಾರಣ ಜನ್ಮರಾದ ಶ್ರೀ ಶ್ಯಾಮಸುಂದರದಾಸರು ದುರ್ಮುಖಿ ನಾಮ ಸಂವತ್ಸರದ ವೈಶಾಖ ಶುದ್ಧ ನವಮೀ ಶುಕ್ರವಾರ ವೈಕುಂಠಕ್ಕೆ ತೆರಳಿದರು.
ರಾಗ : ಭೈರವಿ ತಾಳ : ಆದಿ
ತೆರಳಿದರು ತೆರಳಿದರು
ಹರಿಯ ಪುರಕೆ ।
ಪುರ ಬಲ್ಲಟಗಿಯ
ವರಕವಿ ಶ್ಯಾಮಸುಂದರರು ।। ಪಲ್ಲವಿ ।।
ವೀರ ವೈಷ್ಣವರಲ್ಲಿ
ಜನಿಸುತಲಿ ಮಾನವಿಯ ।
ಧಾರುಣಿಪ ದಾಸರ
ಒಲಿಮೆ ಪಡೆದು ।
ಈರ ಮತ ತತ್ತ್ವಗಳ ।
ಪಾರ ಮಹಿಮೆಗಳ
ಚಾರು ಪದ ಪದ್ಯದಿಂ ।
ಸಾರಿ ನಲಿದವರು ।। ಚರಣ ।।
ಮೂಕ ಬಧಿರರ ತೆರದಿ ।
ಲೋಕಕ್ಕೆ ತೋರುತಲಿ ।
ಕಾಕು ವ್ರುತ್ತಿಗಳನು ನೂಕಿ ಮೆಟ್ಟಿ
ಈ ಕುಂಭಿಣಿಯೊಳು ।
ಸಾಕೆಂದು ತ್ವರಿತದಲಿ ।
ಕಾಕೋದರಾಗ್ರಾಜನ
ನಾಮ ಘರ್ಜನೆಗೈದು ।। ಚರಣ
ದುರ್ಮುಖ ಸಂವತ್ಸರದಿ । ವೃಷ
ಭ ಮಾಸದ । ಶು ।
ಕ್ಲ ಮೂರು ತಿಥಿ
ಶುಕ್ರವಾರ ಹಗಲು ।
ನಿರ್ಮಲಾನಂದದಿ
ಲಯವನ್ನು ಚಿಂತಿಸುತ ।
ಭರ್ಮಪಿತ ಅಭಿನವ
ಪ್ರಾಣೇಶವಿಠಲನ್ನ ನೆನೆಯುತ ।। ಚರಣ ।।
ಶ್ರೀಮಧ್ವೇಶಾರ್ಪಣಮಸ್ತು

0 Comments