ಬಳ್ಳಾರಿ ಮೇ 13. ಎ.ಐ.ಡಿ.ವೈ.ಓ ಯುವಜನ ಸಂಘಟನೆ ವತಿಯಿಂದ ನಗರದ ದುರ್ಗಮ್ಮ ದೆವಸ್ಥಾನದಿಂದ ರಾಯಲ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ಭ್ರಷ್ಟಾಚಾರದ ಭೂತದ ಪ್ರತಿಕೃತಿ ದಹನ ಮಾಡಿ ಆಕ್ರೋಷ ವ್ಯಕ್ತಪಡಿಸಿದರು.
ಎ.ಐ.ಡಿ.ವೈ.ಓ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ - ಇತ್ತೀಚೆಗೆ 545 ಪಿಎಸ್‍ಐಗಳ ನೇಮಕಾತಿಗಾಗಿ ರಾಜ್ಯ ಸರ್ಕಾರ ನಡೆಸಿದ ನೇಮಕಾತಿ ಪರೀಕ್ಷೆಯು ಅಕ್ರಮಗಳ ಕೂಪವಾಗಿದೆ. ಈ ನೇಮಕಾತಿಯ ಬಗ್ಗೆ ಅಕ್ರಮದ ಆರೋಪಗಳು ಕೇಳಿಬಂದ ನಂತರ, ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ವೀರೇಶ್ ನಿಡಗುಂದಾ ಎಂಬ ಅಭ್ಯರ್ಥಿಯ ಬಂಧನದೊಂದಿಗೆ ಈ ಪ್ರಕರಣದ ಒಂದೊಂದೇ ಅಕ್ರಮಗಳು ಬಿಚ್ಚಿಕೊಳ್ಳತೊಡಗಿದವು. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಹೆಸರುಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಹೆಸರುಗಳು ಈ ಅಕ್ರಮದೊಂದಿಗೆ ತಳುಕು ಹಾಕಿಕೊಂಡಿರುವುದು ಬಯಲಿಗೆ ಬರತೊಡಗಿತು. ತಿಪ್ಪೆಯನ್ನು ಕೆದಕಿದಂತೆಲ್ಲ ಹೊಲಸು ಹೊರಬರುವಂತೆ, ಈ ಅಕ್ರಮದಲ್ಲಿ ಪ್ರಮುಖರ ಪಾಲ್ಗೊಳ್ಳುವಿಕೆ ಇನ್ನೂ ಬಯಲಾಗುತ್ತಲೇ ಇದೆ. ಏತನ್ಮಧ್ಯೆ ಸರ್ಕಾರ ಇನ್ನೂ ಸಿಐಡಿ ತನಿಖೆ ಪ್ರಗತಿಯಲ್ಲಿರುವಾಗಲೇ ನಡೆದಿರುವ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಪ್ರಕಟಿಸಿದೆ. ತನಿಖೆ ಪೂರ್ಣಗೊಳ್ಳದೇ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಮತ್ತಷ್ಟು ಅನುಮಾನಕ್ಕೆ ಆಸ್ಪದ ನೀಡುತ್ತಿದೆ ಎಂದರು.
ಎ.ಐ.ಡಿ.ವೈ.ಓ ಜಿಲ್ಲಾ ಅದ್ಯಕ್ಷರಾದ ಪಂಪಾಪತಿ.ಎ ಮಾತನಾಡಿ - ಇಂದು ಯುವಜನತೆ ನಿರುದ್ಯೋಗದಿಂದ ತತ್ತರಿಸಿದ್ದಾರೆ. ಇಡೀ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಸತತವಾಗಿ ಹೆಚ್ಚುತ್ತಲೇ ಇದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಯು ಕಳೆದ ಆರು ತಿಂಗಳಲ್ಲಿ ದೇಶದ ಸರಾಸರಿ ನಿರುದ್ಯೋಗದ ಪ್ರಮಾಣ 7.48 ಎಂದು ವರದಿಮಾಡಿದೆ. ದೇಶದಲ್ಲಿ 45ಕೋಟಿ ಯುವಜನರು ನಿರುದ್ಯೋಗದಿಂದ ಬೇಸತ್ತು ಉದ್ಯೋಗದ ಹುಡುಕಾಟವನ್ನೇ ನಿಲ್ಲಿಸಿದ್ದಾರೆ. ರಾಜ್ಯದ ಪರಿಸ್ಥಿತಿಯೇನೂ ಇದಕ್ಕಿಂತ ಭಿನ್ನವಾಗಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳಿದ್ದರೂ ಸಹ ನೇಮಕಾತಿಗಳು ನಡೆಯುತ್ತಿಲ್ಲ. ಹೀಗೆ ಯುವಜನರು ನಿರುದ್ಯೋಗದಿಂದ ತತ್ತರಿಸುತ್ತಿರುವಾಗ ಇಷ್ಟು ಅಲ್ಪ ಪ್ರಮಾಣದ ನೇಮಕಾತಿಯಲ್ಲೇ ಈ ಭಾರೀ ಪ್ರಮಾಣದ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ ನಡೆದಿರುವುದು ಸರ್ಕಾರದ ವಿಶ್ವಾಸನೀಯತೆಯ ಬಗ್ಗೆಯೇ ಬಹುದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದರು.
ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಮಗ್ರವಾಗಿ ಮತ್ತು ತ್ವರಿತವಾಗಿ ಪೂರ್ಣಗೊಳಿಸಬೇಕು. ಸರ್ಕಾರದ ಹಿಡಿತದಲ್ಲೇ ಕೆಲಸ ನಿರ್ವಹಿಸುವ ಸಿಐಡಿಯಿಂದ ಈ ಅಕ್ರಮದ ಸಮಗ್ರ ತನಿಖೆ ನಡೆಯುವ ಸಾಧ್ಯತೆಯಿಲ್ಲ. ಆದ್ದರಿಂದ ಹಾಲೀ(ಕರ್ತವ್ಯನಿರತ) ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ನಿಷ್ಪಕ್ಷವಾದ ನ್ಯಾಯಾಂಗ ತನಿಖೆ ನಡೆಸಬೇಕು. ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕೂಡ ಅವರಿಗೆ ನಿದರ್ಶನೀಯ ಶಿಕ್ಷೆಯನ್ನು ವಿಧಿಸಬೇಕು ಮತ್ತು ರಾಜ್ಯದ ಯುಜನತೆಗೆ ನ್ಯಾಯ ಕೊಡಬೇಕೆಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಬಳ್ಳಾರಿ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.

0 Comments