ಬಿಜೆಪಿ ಶಾಸಕ ಬಸವರಾಜ ಪಾಟೀಲ ಯತ್ನಾಳ್ ತಮ್ಮನ್ನು ಸಿಎಂ ಮಾಡಲು 2500 ಕೋಟಿ ರೂಪಾಯಿಗಳನ್ನು ಕೇಂದ್ರ ಬಿಜೆಪಿ ನಾಯಕರು ಕೇಳಿದ್ದಾರೆ ಎಂಬ ಆರೋಪದ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ.ಕೃಷ್ಣ ಮೂರ್ತಿ ಆಗ್ರಹಿಸಿದ್ದಾರೆ.
ಇದೊಂದು ಗಂಭೀರ ಆರೋಪವಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಾಸಕ ಬಸವರಾಜ ಪಾಟೀಲ ಯತ್ನಾಳ್ ಬಿಜೆಪಿಯ ಹಿರಿಯ ನಾಯಕ ಅಷ್ಟೇ ಅಲ್ಲ ಮಾಜಿ ಕೇಂದ್ರ ಮಂತ್ರಿ. ತಮ್ಮ ಪಕ್ಷದ ವಿರುದ್ಧವೇ ಆರೋಪ ಮಾಡಿರುವುದರಿಂದ ಈ ಬಗ್ಗೆ ರಾಜ್ಯದ ಜನತೆ ಸ್ಪಷ್ಟನೆ ಬಯಸುತ್ತದೆ.
ಅದರಲ್ಲೂ ಪಿಎಸ್ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸೇರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನ ಕೆಲವರ ಹೆಸರಿನ ಜೊತೆಗೆ ಸಚಿವ ಅಶ್ವಥ್ ನಾರಾಯಣ ಪರೋಕ್ಷವಾಗಿ ಹೆಸರೂ ಕೇಳಿಬರುತ್ತಿವೆ.
ಮಂತ್ರಿಗಳು, ಅಧಿಕಾರಿಗಳು ಮತ್ತು ಕೆಲವು ದಂಧೆಕೋರರು ಸೇರಿ ಹೇಗೆಲ್ಲಾ ಹಗರಣಗಳನ್ನು ನಡೆಸಬಹುದು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ 40 ಪರ್ಸೆಂಟ್ ಕಮಿಷನ್ ಆರೋಪದ ಮೇಲೆ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಗುತ್ತಿಗೆದಾರರ ಸಂಘ ಪ್ರಧಾನಿಗೆ ಮತ್ತು ರಾಜ್ಯಪಾಲರಿಗೆ ಈ ಬಗ್ಗೆ ಪತ್ರ ಬರೆದಾಗ ಕ್ರಮ ಕೈಗೊಂಡಿದ್ದರೆ ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಜೀವ ಉಳಿಯುತ್ತಿತ್ತು.
ಇದರ ಜೊತೆಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಅಡಿಯಲ್ಲಿ ಇಬ್ಬರ ಬಂಧನವಾಗಿದೆ. ಈ ಬಗ್ಗೆಯೂ ಸಮಗ್ರ ತನಿಖೆ ಆದರೆ ಮತ್ತಷ್ಟು ಅಕ್ರಮ ಬೆಳಕಿಗೆ ಬರುವುದರಲ್ಲಿ ಸಂಶಯವೇ ಇಲ್ಲ ಎಂದಿದ್ದಾರೆ.
ಎರಡೂವರೆ ವರ್ಷಗಳ ಹಿಂದೆ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ, ಕಾಂಗ್ರೆಸ್-ಜೆಡಿಎಸ್ ಮುಂತಾದ ಶಾಸಕರುಗಳನ್ನು ಖರೀದಿಸಿ ಸರ್ಕಾರ ರಚಿಸಿದ ಬಿಜೆಪಿ, ಭ್ರಷ್ಟಾಚಾರದಲ್ಲಿ ಚರಮ ಸೀಮೆಯನ್ನು ಮುಟ್ಟಿದೆ .
ಕೋರೋನ ಸಂದರ್ಭದಲ್ಲೂ ಸಹ ಹಾಸಿಗೆ, ವೆಂಟಿಲೇಟರ್, ಪಿಪಿಈ ಕಿಟ್, ಮಾಸ್ಕ್ ಮತ್ತು ಔಷಧಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದೆ ಎಂಬ ಆರೋಪದ ಬಗ್ಗೆ ಸದನದಲ್ಲಿ ಚರ್ಚೆ ಆಯಿತು.
ಇನ್ನು ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ್ ಬೊಮ್ಮಾಯಿ, ಗೃಹ ಮಂತ್ರಿಯಾಗಿದ್ದಾಗ 52 ಸಾವಿರ ಕೋಟಿ ರೂಪಾಯಿಗಳ ಬೀಟ್ ಕಾಯಿನ್ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಕರ್ನಾಟಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರದ ಹಗರಣಗಳ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮೌನವಾಗಿದ್ದಾರೆ. ಇದನ್ನು ನೋಡಿದರೆ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಅವರು ಅಸಹಾಯಕರಾಗಿದ್ದಾರೆ ಅಥವಾ ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಪಾಲುದಾರರಾಗಿ ಕುಮ್ಮಕ್ಕು ಕೊಡುತ್ತಿದ್ದಾರೆ ಎನಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ನಾನು ತಿನ್ನುವುದಿಲ್ಲ, ಇತರರನ್ನು ತಿನ್ನಲು ಬಿಡುವುದಿಲ್ಲ ಎಂಬ ಪ್ರಧಾನಿಯವರ ಘೋಷಣೆ ಕರ್ನಾಟಕದಲ್ಲಿ ನಗೆಪಾಟಲಿಗೀಡಾಗಿದೆ.
ಕೇಂದ್ರ ಬಿಜೆಪಿ ಸರ್ಕಾರ ಮತ್ತು ನಾಯಕತ್ವಕ್ಕೆ ನೈತಿಕತೆ ಇದ್ದರೆ ಕರ್ನಾಟಕದ ಸರ್ಕಾರವನ್ನು ವಿಸರ್ಜಿಸಬೇಕು. ಕರ್ನಾಟಕದಲ್ಲಿ ಬೆಳಕಿಗೆ ಬಂದಿರುವ ಎಲ್ಲಾ ಭ್ರಷ್ಟಾಚಾರಗಳ ಸಮಗ್ರ ತನಿಖೆ ನಡೆಸಿ ತಮ್ಮದೇ ಪಕ್ಷದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಬಿಎಸ್ಪಿ ಆಗ್ರಹಿಸುತ್ತದೆ ಎಂದಿದ್ದಾರೆ.
ಇಲ್ಲದಿದ್ದರೆ ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿಯಲ್ಲ, ಭ್ರಷ್ಟಾಚಾರಿಗಳ ಜನತಾ ಪಾರ್ಟಿ ಹೆಸರು ಬದಲಾಯಿಸಿಕೊಳ್ಳಲಿ ಎಂದಿದ್ದಾರೆ.
0 Comments