Ticker

6/recent/ticker-posts

Ad Code

Responsive Advertisement

ಬಳ್ಳಾರಿಯಲ್ಲಿ ಮೆಣಸಿನಕಾಯಿ ಬೆಳೆ ವಿಚಾರಸಂಕಿರಣ *ಸಂಸ್ಕರಣ,ಮೌಲ್ಯವರ್ಧನೆಗೆ ಆಲದಹಳ್ಳಿಯಲ್ಲಿ 10 ಎಕರೆ ಜಾಗ ಗುರುತು

 ಬಳ್ಳಾರಿಯಲ್ಲಿಯೇ ಸುಸಜ್ಜಿತ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆ 26 ಎಕರೆ ಜಮೀನು ಮಂಜೂರು:ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು

ಬಳ್ಳಾರಿ,ಮೇ 20: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಮಾದರಿಯಲ್ಲಿಯೇ ಬಳ್ಳಾರಿಯಲ್ಲಿ ಸುಸಜ್ಜಿತವಾದ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಲು ಹೊಸಪೇಟೆ ಬೈಪಾಸ್ ನಲ್ಲಿ 26 ಎಕರೆ ಜಮೀನನ್ನ  ಮಂಜೂರು ಮಾಡಲಾಗಿದೆ ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.

ಜಿಲ್ಲಾಡಳಿತ,ಜಿಪಂ,ತೋಟಗಾರಿಕೆ ಇಲಾಖೆ,ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಕಿಸಾನ್ ಭಾಗಿದಾರಿ ಪ್ರಾಥಮಿಕ್ತ ಹಮಾರಿ ಆಂದೋಲನದ ಅಂಗವಾಗಿ ನಗರದ ರಾಘವ ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೆಣಸಿನಕಾಯಿ ಬೆಳೆ ವಿಚಾರ ಸಂಕಿರಣಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಜಿಲ್ಲೆಯ ಗುಣಮಟ್ಟದ ಮೆಣಸಿನಕಾಯಿ ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೇ ನಾವು ಮೆಣಸಿನಕಾಯಿ ಬೆಳೆದರೂ ಮಾರುಕಟ್ಟೆಗೆ ಬ್ಯಾಡಗಿ ಸೇರಿದಂತೆ ದೂರದ ಊರುಗಳಿಗೆ ಹೋಗಬೇಕಿದೆ;ಅದನ್ನು ತಪ್ಪಿಸುವ ದೃಷ್ಟಿಯಿಂದ ಹೊಸಪೇಟೆ ರಸ್ತೆಯ ಬೈಪಾಸ್‍ನಲ್ಲಿ ಸುಸಜ್ಜಿತ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಲಾಗುವುದು ಎಂದರು.

ಇದರ ಜೊತೆಗೆ ಸಂಸ್ಕರಣ ಮತ್ತು ಮೌಲ್ಯವರ್ಧನೆ ಸಲುವಾಗಿ ಆಲದಹಳ್ಳಿಯಲ್ಲಿ 10 ಎಕರೆ ಜಾಗವನ್ನ ಸಹ ಗುರುತಿಸಲಾಗಿದ್ದು, ಈ ಪ್ರದೇಶವನ್ನ ಕೃಷಿ ಸಂಸ್ಕರಣಾ ಕ್ಲಸ್ಟರ್ ಆಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.

ಮೆಣಸಿನಕಾಯಿ ಬೆಳೆ ಸಂಬಂಧಿತ ಚಟುಕಟಿಕೆಗಳಿಗೆ ಉದ್ದಿಮೆಯ ರೂಪ ನೀಡಿ, ಸಣ್ಣ ಉದ್ದಿಮೆಗಳನ್ನು ಸದೃಢಗೊಳಿಸುವ ಮೂಲಕ ಜಿಲ್ಲೆಯ ಆರ್ಥಿಕತೆ ಬಲಗೊಳಿಸುವ ಉದ್ದೇಶ ಇದೆ ಎಂದು ವಿವರಿಸಿದ ಅವರು ಇದರಡಿ ಬೆಳೆ ಬೆಳೆಯುವುದು, ಸಂಸ್ಕರಣೆ,ಪ್ಯಾಕಿಂಗ್,ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಹಂತಗಳಲ್ಲಿ ಸರ್ಕಾರ ರೈತರಿಗೆ ಬಲ ತುಂಬುವ ಮೂಲಕ, ಬೆಳೆಗೆ ತಕ್ಕ ಬೆಲೆ ಹಾಗೂ ಲಾಭ ಕಲ್ಪಿಸುವ ಉದ್ದೇಶ ಇದೆ. ಹೀಗೆ ಜಿಲ್ಲೆಯ ಮೆಣಸಿನಕಾಯಿ ಸೇರಿದಂತೆ ಎಲ್ಲಾ ರೈತರ ಹಿತ ಕಾಪಾಡುವ ಜೊತೆಗೆ ಬಲ ತುಂಬಲು ಸರ್ಕಾರ ಬದ್ಧವಾಗಿದೆ ಎಂದರು.

ಜಿಲ್ಲೆಯಲ್ಲಿ 2021-22 ಸಾಲಿನಲ್ಲಿ 66 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು.ಅಕಾಲಿಕ ಮಳೆಯಿಂದಾಗಿ, ಕೀಟದ ಹಾವಳಿಯಿಂದ ಮೆಣಸಿನಕಾಯಿ ಬೆಳೆ ಹಾನಿಯಾಗಿ ರೈತರಿಗೆ ತುಂಬಲಾರದ ನಷ್ಟವೂ ಆಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ-ಕೇಂದ್ರ ಸರ್ಕಾರಗಳು ಕೈಜೋಡಿಸಿ, ಹೆಕ್ಟೇರ್‍ಗೆ 25 ಸಾವಿರ ಪರಿಹಾರ ನೀಡಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 52.50 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಅವರು ವಿವರಿಸಿದರು.

*ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ 33,700 ಕೋಟಿ ಅನುದಾನ: ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ 33,700 ಕೋಟಿ ರೂ. ಅನುದಾನ ಈ ಬಜೆಟ್‍ನಲ್ಲಿ ನಮ್ಮ ರಾಜ್ಯ ಸರ್ಕಾರ ಕಾಯ್ದಿರಿಸಿದೆ. ಇವತ್ತು 33 ಲಕ್ಷ ರೈತರ ಕೃಷಿ ಚಟುವಟಿಕೆಗಳಿಗೆ ಶಕ್ತಿ ತುಂಬಲು 24 ಸಾವಿರ ಕೋಟಿ ಬಡ್ಡಿ ರಹಿತ ಕೃಷಿ ಸಾಲವನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ವಿವರಿಸಿದರು.

ರೈತರ ಕಲ್ಯಾಣವೇ ನಮ್ಮ ಸರಕಾರಗಳ ಆದ್ಯತೆಯಾಗಿದ್ದು,ಕೃಷಿಗೆ ಹಿಂದೆಂದೂ ನೀಡದ ಮಹತ್ವ ಇಂದು ನೀಡುತ್ತಿದೆ ಎಂದು ತಿಳಿಸಿದ ಅವರು ಇಡೀ ಜಗತ್ತಿನಲ್ಲಿ ಆಹಾರ ಸಮಸ್ಯೆಯ ಭೀತಿ ಎದುರಾಗುತ್ತಿರೋ ಈ ಸಂದರ್ಭದಲ್ಲಿ ನಮ್ಮ ದೇಶ ತನ್ನ ಗೋಧಿ ದಾಸ್ತಾನಿನಿಂದ ಉತ್ತಮ ಸ್ಥಿತಿಯಲ್ಲಿದೆ;ಇದಕ್ಕೆ ಕಾರಣ ನಮ್ಮ ರೈತರು ಎಂದರು.

ಸಂಸದ ವೈ.ದೇವೇಂದ್ರಪ್ಪ ಅವರು ಮಾತನಾಡಿ, ಒಂದೇ ಬೆಳೆ ಬೆಳೆಯುವುದಕ್ಕೆ ಜೋತುಬಿಳದೇ ಯಾವ ಬೆಳೆಗಳು ಈ ಪ್ರದೇಶದಲ್ಲಿ ಬೆಳೆದರೇ ಅನುಕೂಲವೆಂಬುದನ್ನು ಅಧಿಕಾರಿಗಳು ಮತ್ತು ವಿಜ್ಞಾನಿಗಳಿಂದ ತಿಳಿದುಕೊಂಡು ಬೆಳೆಯಲು ಮುಂದಾಗಬೇಕು ಎಂದರು.

ಕಳೆದ ವರ್ಷ ಮೆಣಸಿನಕಾಯಿ ಬೆಳೆಬೆಳೆದು ನಷ್ಟಕ್ಕೊಳಗಾದ ರೈತರಿಗೆ 68ಕೋಟಿ ರೂ.ಗಳನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ವಿವರಿಸಿದ ಅವರು ಬ್ಯಾಡಗಿ ಮಾರುಕಟ್ಟೆ ಮಾದರಿಯಲ್ಲಿಯೇ ಬಳ್ಳಾರಿಯಲ್ಲಿಯೂ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ ಎಂದರು.

ಸಂಸದರಾದ ಕರಡಿ ಸಂಗಣ್ಣ ಅವರು ಮಾತನಾಡಿ, ಇಡೀ ಜಗತ್ತಿಗೆ ಅನ್ನ ನೀಡುವ ರೈತ ಇಂದು ಹವಾಮಾನ ವೈಪರಿತ್ಯದಿಂದ ಅನೇಕ ಸಮಸ್ಯೆಗಳನ್ನ ಅನುಭವಿಸುತ್ತಿದ್ದಾನೆ. ಬಳ್ಳಾರಿ,ಕೊಪ್ಪಳ,ರಾಯಚೂರು ಜಿಲ್ಲೆಗಳಲ್ಲಿ ಭತ್ತವನ್ನೇ ಪ್ರಧಾನ ಬೆಳೆಯಾಗಿ ಬೆಳೆಯಲಾಗುತ್ತಿದೆ;2 ಬೆಳೆಗೆ ನೀರು ಪಡೆದುಕೊಂಡರೂ ಸಹ ರೈತರು ಲಾಭದಾಯಕರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ 1.56ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದ್ದು,ಅದರಲ್ಲಿ ಮೆಣಸಿನಕಾಯಿ ಬೆಳೆ ಪ್ರಧಾನವಾಗಿದೆ ಎಂದು ವಿವರಿಸಿದ ಅವರು ಈ ರೀತಿಯ ವಿಚಾರ ಸಂಕಿರಣಗಳು ರೈತರಲ್ಲಿ ಅರಿವು ಮೂಡಿಸುವಲ್ಲಿ ಸಹಕಾರಿಯಾಗಲಿದ್ದು, ಮೇಲಿಂದ ಮೇಲೆ ರೈತ ಶಿಬಿರಗಳು ಏರ್ಪಡಿಸಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ತಮ್ಮ ಬದುಕಿನ ಜೊತೆಗೆ ರಾಷ್ಟ್ರವನ್ನು ಕಟ್ಟುವ ಕೆಲಸವನ್ನು ರೈತರು ಮಾಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಮಾತನಾಡಿ, ರೈತರು ಚೆನ್ನಾಗಿದ್ದರೇ ಇಡೀ ದೇಶವೇ ಚೆನ್ನಾಗಿರುತ್ತದೆ; ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ 26 ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಲಾಗುತ್ತಿದ್ದು,100 ಕೋಟಿ ಅನುದಾನವನ್ನು ನಮ್ಮ ಸರಕಾರ ಬಿಡುಗಡೆ ಮಾಡುತ್ತಿದೆ ಎಂದರು.

ರೈತರು ಒಂದೇ ಬೆಳೆಗೆ ಮೊರೆ ಹೋಗದೇ ಅಧಿಕಾರಿಗಳು ಮತ್ತು ವಿಜ್ಞಾನಿಗಳ ಅಭಿಪ್ರಾಯಗಳನ್ನು ಆಲಿಸಿ ಬೆಳೆ ಬೆಳೆಯುವುದು ಸೂಕ್ತ ಎಂದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಸ್.ಪಿ.ಭೋಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ರೈತರು ಆಧುನಿಕ ಬೇಸಾಯ ಕ್ರಮಗಳನ್ನು ಅನುಸರಿಸಿ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು,ಮೆಣಸಿನಕಾಯಿ ಸಮಗ್ರ ಕೀಟ ನಿರ್ವಹಣೆಗೆ ಯಾವ ರೀತಿಯ ಕ್ರಮಗಳನ್ನ ಅನುಸರಿಸಬೇಕು. ಮೆಣಸಿನಕಾಯಿ ವ್ಯಾಪಾರಕ್ಕೆ ಮತ್ತು ಮೌಲ್ಯವರ್ಧನೆಗೆ ವಿಫುಲ ಅವಕಾಶಗಳು,ರಫ್ತು ಉತ್ತೇಜನ ಹಾಗೂ ಅವಕಾಶಗಳ ಕುರಿತು ರೈತರಿಗೆ ತಿಳಿಸಿಕೊಡುವ ಉದ್ದೇಶದಿಂದ ಈ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.

ಕಳೆದ ವರ್ಷ ನಮ್ಮ ಜಿಲ್ಲೆಯಲ್ಲಿ 66 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆದು 1.50ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷಿಸಲಾಗಿತ್ತು;ಆದ್ರೇ ಹವಾಮಾನ ವೈಪರಿತ್ಯದಿಂದ ಬೆಳೆ ನಷ್ಟವಾಯಿತು. ಹಿಂದಿನ ವರ್ಷಗಳಲ್ಲಿ 35ರಿಂದ 40 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿರುವುದನ್ನು ವಿವರಿಸಿದ ಅವರು ಬಳ್ಳಾರಿ ಮೆಣಸಿನಕಾಯಿ ರಾಜ್ಯ,ದೇಶವನ್ನಷ್ಟೇ ಅಲ್ಲದೇ ಬೇರೆ ಬೇರೆ ದೇಶಗಳಿಗೆ ರಫ್ತುಮಾಡಲಾಗುತ್ತಿರುವುದನ್ನು ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಜೆ.ಲಿಂಗಮೂರ್ತಿ, ಬುಡಾ ಅಧ್ಯಕ್ಷ ಪಿ.ಪಾಲನ್ನ, ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಪಿ.ಜಿ.ಚಿದಾನಂದಪ್ಪ, ಎಪಿಎಂಸಿ ಅಧ್ಯಕ್ಷ ಉಮೇಶ, ಕಲಬುರಗಿ ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ, ಹಿರಿಯ ಸಹಾಯಕ ನಿರ್ದೇಶಕ ಎಚ್.ಕೆ.ಯೋಗೇಶ್ವರ ಮತ್ತಿತರರು ಇದ್ದರು.

ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ ಯಾದಗಿರಿ ಕೆವಿಕೆಯ ಹಿರಿಯ ವಿಜ್ಞಾನಿಗಳಾದ ಡಾ.ಜಯಪ್ರಕಾಶ್ ನಾರಾಯಣ ಅವರು ಮೆಣಸಿನಕಾಯಿ ಬೆಳೆಯ ಆಧುನಿಕ ಬೇಸಾಯ ಕ್ರಮಗಳು ಕುರಿತು, ಹೂವಿನಹಡಗಲಿಯ ಸಸ್ಯ ಕೀಟ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಹನುಮಂತಪ್ಪ ಶ್ರೀಹರಿ ಅವರು ಮೆಣಸಿನಕಾಯಿ ಸಮಗ್ರ ಕೀಟ ನಿರ್ವಹಣೆ ಕ್ರಮಗಳು ಕುರಿತು, ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಸಸ್ಯ ರೋಗ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ರಾಘವೇಂದ್ರ ಆಚಾರ್ ಅವರು ಮೆಣಿಸಿನಕಾಯಿ ಬೆಳೆಯಲ್ಲಿ ಸಮಗ್ರ ರೋಗ ನಿರ್ವಹಣೆ ಕ್ರಮಗಳು ಕುರಿತು, ಅಖಿಲ ಭಾರತ ಸಲಹೆಗಾರರಾದ ಯೋಗೀಶ್ ಅಪ್ಪಾಜಯ್ಯ ಅವರು ಮೆಣಸಿನಕಾಯಿ ವ್ಯಾಪಾರಕ್ಕೆ ಮತ್ತು ಮೌಲ್ಯವರ್ಧನೆ ವಿಫುಲ ಅವಕಾಶಗಳ ಕುರಿತು, ಈ ನಿಟ್ಟಿನಲ್ಲಿ ರೈತ ಉತ್ಪಾದ ಕಂಪನಿಗಳು ಸ್ವ-ಸಹಾಯ ಸಂಘಗಳು ಮತ್ತು ಪ್ರಗತಿಪರ ಕೃಷಿಕರ ಪಾತ್ರ ಒಂದು ಜಾಗೃತಿ ಕರೆ ಕುರಿತು, ರಮೇಶ್ ಗೋಪಾಲ್ ಅವರು ರಫ್ತು ಉತ್ತೇಜನ ಹಾಗೂ ಅವಕಾಶಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಪ್ರಗತಿಪರ ರೈತರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.




 


Post a Comment

0 Comments

Ad Code

Responsive Advertisement