ಮೈಸೂರು, ಏ.6: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ ಎಂದು ಸರ್ಕಾರಕ್ಕೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಮನವಿ ಮಾಡಿದ್ದಾರೆ.
ಇಂದು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 20 ನಿಮಿಷದ ಪ್ರ ವಾಸಕ್ಕೆ ರೋಪ್ ವೇ ಯಾಕೆ? ಬೆಟ್ಟಕ್ಕೆ ಕಾರಿನಲ್ಲಿ ,ಬೈಕ್ ನಲ್ಲಿ ಹೋಗೋಕೆ 20 ನಿಮಿಷ ಸಾಕು. ಮೆಟ್ಟಿಲು ಮಾರ್ಗವಾಗಿ ಹೋಗಲು 30 ನಿಮಿಷ ಸಾಕು. ಹೀಗಿರುವಾಗ ರೋಪ್ ವೇ ಅವಶ್ಯಕತೆಯಿಲ್ಲ ಎಂದು ಹೇಳಿದರು. ಚಾಮುಂಡಿ ಬೆಟ್ಟದ ಪ್ರಾಕೃತಿಕ ಸೌಂದರ್ಯದ ಸಂರಕ್ಷಣೆ ಆಗಬೇಕು. ಬೆಟ್ಟದ ಮೇಲೆ ಟೌನ್ ಶಿಪ್ ನಿರ್ಮಾಣ ಆಗೋದು ಬೇಡ. ಮೂಲ ನಿವಾಸಿಗಳನ್ನು ಬಿಟ್ಟರೆ ಅನ್ಯರ ವಾಸ್ತವ್ಯಕ್ಕೆ ಅವಕಾಶ ನೀಡಬಾರದು. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸೂಕ್ತ ನಿರ್ಬಂಧ ವಿಧಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಲ್ಯಾನ್ಸೌ÷್ಡನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆ ಕೆಡವಬಾರದು. ಹೀಗೆ ಕಟ್ಟಡಗಳನ್ನು ಕೆಡವುದರಿಂದ ಮೈಸೂರಿನ ಪಾರಂಪರಿಕ ಮೌಲ್ಯಕ್ಕೆ ಧಕ್ಕೆ ಆಗುತ್ತದೆ. ಎರಡೂ ಕಟ್ಟಡಗಳ ನವೀಕರಣ ಯಥಾಸ್ಥಿತಿಯಲ್ಲಿ ನವೀಕರಣ ಮಾಡಲು ನಾವು ಸಿದ್ದರಿದ್ದೇವೆ ಎಂದರು. ಇದೇ ಕಾರಣಕ್ಕೆ ಜಗನ್ಮೋಹನ ಅರಮನೆ,ರಾಜೇಂದ್ರ ವಿಲಾಸ ಅರಮನೆ ಯಥಾಸ್ಥಿತಿಯಲ್ಲಿ ನವೀಕರಣ ಮಾಡಿದ್ದೇವೆ. ಪಾರಂಪರಿಕ ಕಟ್ಟಡಗಳ ವಿಚಾರದಲ್ಲಿ ಸರ್ಕಾರ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
Varthajala daily, Bengaluru

0 Comments