ಮಾನ್ಯ ಡಾ. ಬಿ. ಆರ್. ಅಂಬೇಡ್ಕರ್ ಅವರು ನಮಗೆ ಕೊಟ್ಟ ಸಂವಿಧಾನದ ದೆಸೆಯಿಂದ ಇವತ್ತು ಪರಿಶಿಷ್ಟರು ಹಾಗೂ ಹಿಂದುಳಿದವರಿಗೆ ವಾಕ್ ಸ್ವಾತಂತ್ರ‍್ಯವಿದೆ. ಆದರೆ ಈಗಿನ ದಿನಗಳಲ್ಲಿ ಪರಿಶಿಷ್ಟರಿಗೆ ವಾಕ್ ಸ್ವಾತಂತ್ರ‍್ಯಕ್ಕಿ0ತ ಹೆಚ್ಚು ಹಿಂದುಳಿದವರ ಕೂಗನ್ನು ಕೇಳಿಸಿಕೊಳ್ಳುವ ಕಿವಿಗಳ ಅಗತ್ಯವಿದೆ. ಅವರ ಧ್ವನಿಯನ್ನು ಸರ್ಕಾರಕ್ಕೆ ನಿರಂತರ ತಲುಪಿಸಲು ಹೆಚ್ಚಿನ ದಾರಿಗಳು ಬೇಕಿವೆ.
ದಲಿತ, ಪರಿಶಿಷ್ಟ ಹಾಗೂ ಹಿಂದುಳಿದವರ ಆಶೋತ್ತರಗಳಿಗೆ ಸ್ಪಂದಿಸಲು ನಾನು ಈಗಾಗಲೇ ವೈಯಕ್ತಿಕವಾಗಿ ಸಿಗುತ್ತಿದ್ದೇನೆ. ಆದರೆ ಈ ವ್ಯವಸ್ಥೆಗೆ ತನ್ನದೇ ಆದ ಮಿತಿಗಳಿವೆ. ದೂರದ ಊರುಗಳಲ್ಲಿ ಇರುವವರು ತಮ್ಮ ಕೆಲಸ ಬಿಟ್ಟು ನನ್ನ ಭೇಟಿಗೆ ಬರುವುದು ಸಾಧ್ಯವಾಗುವುದಿಲ್ಲ.
ಕೆಲವೊಮ್ಮೆ ನಾನೇ ಅವರ ಬಳಿ ಹೋಗುವಷ್ಟು ಕಾಲ ಕಾದು ಕೂರುವುದು ಸಮಸ್ಯೆಯಲ್ಲಿ ಸಿಲುಕಿದವರಿಗೆ ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭಗಳಲ್ಲೆಲ್ಲ ಜನ ನನ್ನ ನೇರ ಸಂಪರ್ಕ ಪಡೆಯಲು ಡಿಜಿಟಲ್ ಮಾಧ್ಯಮ ಹಾಗು ಸಾಮಾಜಿಕ ಜಾಲಗಳಲ್ಲಿನ ನನ್ನ ಖಾತೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿನಮ್ರಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇನೆ.
ದೀನ, ದಲಿತ, ಹಿಂದುಳಿದ ಸಮಾಜ ಆಡಳಿತದ ಜತೆಗೆ ಸೇರಿಕೊಂಡಾಗ ಮಾತ್ರ ಮೇಲು-ಕೀಳಿನ ತಾರತಮ್ಯವಿಲ್ಲದ ಭಾರತ ನಿರ್ಮಾಣ ಸಾಧ್ಯ ಎಂಬುದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ದೃಷ್ಟಿಕೋನವಾಗಿತ್ತು. ಹಿಂದುಳಿದ ಜನರ ಧ್ವನಿಯಾಗಲು ಅಂಬೇಡ್ಕರ್ ಅವರು 1920ರಲ್ಲಿ ಮೂಕ್ನಾಯಕ್ ಎಂಬ ಪತ್ರಿಕೆ ಸ್ಥಾಪಿಸಿದ್ದರು.
ಅವರ ಮೂಕ್ನಾಯಕ್ ಪ್ರೇರಣೆಯನ್ನು ಈಗಿನ ಕಾಲಕ್ಕೆ ಹೊಂದಿಸಿ ಮೂಕ ಜನರ ಕೂಗಿಗೆ ಧ್ವನಿಯಾಗುವುದು ನನ್ನ ಆಶಯ. ಈಗಿನ ಡಿಜಿಟಲ್ ಯುಗದಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಸುವ ಸ್ವಾತಂತ್ರ‍್ಯವಿದೆ ಎಂಬುದು ನಿಜ.
ಆದರೆ ಸ್ಥಾಪಿತ ಹಿತಾಸಕ್ತಿಗಳು ತಮ್ಮ ಅನುಕೂಲಕ್ಕೆ ಬೇಕಾಗಿ ಉಂಟು ಮಾಡುವ ಗದ್ದಲದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರ ಧ್ವನಿ ಮರೆಯಾಗುತ್ತಿದೆ. ಹಾಗಾಗಿ ನಾನು ಅವರ ಆಶೋತ್ತರಗಳನ್ನು ಡಿಜಿಟಲ್ ಮಾಧ್ಯಮಗಳಾದ ಫೇಸ್ಬುಕ್, ಟ್ವಿಟ್ಟರ್ ಮೂಲಕವೂ ಕೇಳಿ ಅದನ್ನು ಆಡಳಿತದಲ್ಲಿ ಒಳಗೊಳಿಸುವ ಕಾರ್ಯಕ್ರಮ ಹಾಕಿಕೊಂಡಿದ್ದೇನೆ.
Varthajala daily, Bengaluru

0 Comments