ಬೆಂಗಳೂರು, ಏ.13: ದೇಶದ ಇಂಧನ ದರ ಏರಿಕೆ ಒಂದು ಕಡೆಯಾದರೆ, ಮತ್ತೊಂದು ಕಡೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯೂ ಗಗನಕ್ಕೆ ಏರುತ್ತಿದೆ.
ಇದರಿಂದ ಜನಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ಇತ್ತ ರಾಜಧಾನಿ ಬೆಂಗಳೂರಿಗರ ಜೀವನಾಡಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಏರಿಕೆಯಾಗಲಿದ್ದು ಬಿಎಂಟಿಸಿ ಬಸ್‌ನಲ್ಲಿ ಓಡಾಡುವ ಜನರಿಗೆ ಶಾಕ್ ತಟ್ಟಲಿದೆ ಎಂದು ತಿಳಿದುಬಂದಿದೆ. ಬಸ್ ಪ್ರಯಾಣ ದರ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿದೆ. ಎರಡನೆ ಬಾರಿ ರಾಜ್ಯ ಸರ್ಕಾರಕ್ಕೆ ಈಗಾಗಲೆ ಪ್ರಸ್ತಾವನೆ ಸಲ್ಲಿಸಿದ್ದು, ಮೊದಲ ಬಾರಿ ಶೇ.20ರಷ್ಟು ಬಸ್ ಟಿಕೆಟ್ ದರ ಏರಿಕೆಗೆ ಪ್ರಸ್ತಾಪಿಸಿತ್ತು. ಈಗ 2ನೇ ಪ್ರಸ್ತಾವನೆಯಲ್ಲಿ ಶೇ.35ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ. ಕಳೆದ ವಾರವಷ್ಟೇ ಬಿಎಂಟಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು ಎಂಬುದು ಗಮನರ್ಹ. ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಒಪ್ಪಿದರೆ ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆಯನ್ನು ತಳ್ಳ್ಳಿಹಾಕುವಂತಿಲ್ಲ. ಟಿಕೆಟ್ ದರ ಶೇ.35ರಷ್ಟು ದರ ಏರಿಕೆ ಅಸಾಧ್ಯ, ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಟಿಕೆಟ್ ದರ ಏರಿಕೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿಗಳು ಒಪ್ಪಿದರೆ ಜನರ ಜೇಬಿಗೆ ಕತ್ತರಿ ಬೀಳುವುದಂತು ಖಡಾಖಂಡಿತ. ಈ ಬಾರಿ ಬಸ್ ದರ ಏರಿಸದಿದ್ದರೆ ಬಸ್ ಓಡಿಸುವುದು ಕಷ್ಟ ಎಂದು ಸಿಎಂ ಬೊಮ್ಮಾಯಿಯವರಿಗೆ ಬಿಎಂಟಿಸಿ ಸಂಸ್ಥೆ ಮನವರಿಕೆ ಮಾಡಿಕೊಟ್ಟಿದೆ ಎಂಬುದು ತಿಳಿದುಬಂದಿದೆ. ಸದ್ಯ ಈ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬಿಎಂಟಿಸಿ ಬಸ್ ದರ ಶೇ.35ರಷ್ಟು ಏರಿಕೆಯಾದರೆ ಸ್ಟೇಜ್ ವೈಸ್ ದರವೂ ಹೆಚ್ಚಾಗಲಿದೆ. ಆರಂಭಿಕ ದರ ಈಗ 5 ರೂ. ಇದ್ದು, ಶೇ.35 ಹೆಚ್ಚಾದ ನಂತರ 6.75 ಪೈಸೆ ಆಗಲಿದೆ. ಈ ವೇಳೆ ಚಿಲ್ಲರೆ ಸಮಸ್ಯೆ ಒಡ್ಡಿ ಬಿಎಂಟಿಸಿ 7 ರೂ.ಗೆ ಹೆಚ್ಚಳ ಮಾಡಬಹುದು. ಇನ್ನು ಇದೇ ವೇಳೆ 10 ರೂ. ಇರುವ ದರ 13 ರೂ. 15 ಇರುವ ದರ 20 ರೂ. ಹೀಗೆ ಏರಿಕೆ ಆಗಲಿದೆ. ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಪ್ರಸ್ತಾವನೆ ಜಾರಿಗೆ ಬಂದರೆ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಖಾತರಿ.
Varthajala daily, Bengaluru

0 Comments