ಬೆಂಗಳೂರು- ಏ.12: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಚುನಾವಣೆಯ ವಿರುದ್ದ ಸಲ್ಲಿಸಿದ್ದ ತಕರಾರು ಅರ್ಜಿ ಏ.11ರಂದು ವಜಾಗೊಂಡ ಹಿನ್ನಲೆಯಲ್ಲಿ ಇಂದು ಏ.12 ರಂದು ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಘೋಷಣೆ ಮಾಡುತ್ತಿರುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಗಳಾದ ಸು.ತ.ರಾಮೇಗೌಡ ತಿಳಿಸಿದರು.
ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಮಾತನಾಡಿ, ಚುನಾವಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಬಾರದೆಂದು ನಾವು ಮೊದಲೇ ಕಾನೂನಿನ ಸಲಹೆ ಪಡೆದು ಚುನಾವಣಾ ನೀತಿ ಸಂಹಿತೆಯಂತೆ ಶಿಸ್ತು ಬದ್ದವಾಗಿ ನಡೆಸಿದ್ದೆವು ಎಂದರು.
ಚುನಾವಣೆ ನಡೆಸಲು ಫೆ.27ಕ್ಕೆ ಸಮ್ಮತಿಸಿದ ಹೈಕೋಟ್ ಮುಂದಿನ ಆದೇಶ ನೀಡುವವರೆಗೆ ಪಲಿತಾಂಶ ಪ್ರಕಟಿಸದಂತೆ ಸೂಚನೆಯನ್ನು (ಫೆ.25) ನೀಡಿತ್ತು. ಅದಕ್ಕಾಗಿ ಫಲಿತಾಂಶ ತಡೆಹಿಡಿಯಲಾಗಿತ್ತು. ಈಗ ಅಧಿಕೃತವಾಗಿ ಪ್ರಕಟ ಮಾಡಲಾಗುತ್ತಿದೆ ಎಂದರು.
ನ್ಯಾಯಸಮ್ಮತವಾಗಿ ಚುನಾವಣೆ ನಡೆದಿರುವುದು ನ್ಯಾಯಾಲಯದ ಗಮನಕ್ಕೆ ಬಂದಿರುವುದರಿಂದ ಈಗ ಎಲ್ಲವೂ ಸುಸೂತ್ರವಾಗಿ ಮುಗಿಯುತ್ತಿರುವುದು ಸಂತಸ ತಂದಿದೆ ಎಂದರು.
ಚುನಾವಣಾಧಿಕಾರಿಗಳಿಂದ ರಾಜ್ಯ ಅಧ್ಯಕ್ಷ ಸ್ಥಾನದ ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿದ ಶಿವಾನಂದ ತಗಡೂರು ಅವರು, ಸುಮಾರು ತೊಂಬತ್ತು ವರ್ಷ ಇತಿಹಾಸ ಹೊಂದಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಏಳುವರೆ ಸಾವಿರಕ್ಕಿಂತ ಹೆಚ್ಚು ಸದಸ್ಯರ ಬಲ ಹೊಂದಿರುವ ರಾಜ್ಯದ ಏಕೈಕ ಬೃಹತ್ ಸಂಘಟನೆಯಾಗಿದ್ದು ದೊಡ್ಡ ಪತ್ರಿಕೆ ಹಾಗೂ ಸಣ್ಣ ಪತ್ರಿಕೆ ಸಮೂಹದ ಬೃಹದಾಕಾರದ ಹೆಮ್ಮರವಾಗಿ ಬೆಳೆದು ಎಲ್ಲ ಸದಸ್ಯರಿಗೂ ಆಶ್ರಯ ನೀಡುತ್ತಿದೆ. ಈ ಸಂಘದಲ್ಲಿ ಸದಸ್ಯರಾಗುವುದು ಹೆಮ್ಮೆಯ ಸಂಗತಿ ಎಂದರು.
ಸಂಘದ ಸಂಸ್ಥಾಪಕರಾದ ಮಾನ್ಯ ಡಿ.ವಿ.ಗುಂಡಪ್ಪ ನವರನ್ನೊಳಗೊಂಡು ಅನೇಕ ಹಿರಿಯರು ಹಾಕಿಕೊಟ್ಟ ಬುನಾದಿ, ನಾವು ತೆಗೆದುಕೊಂಡ ನಿಲುವು ,ಸಾಗುತ್ತಿರುವ ದಾರಿ ಕೆಲವರಿಗೆ ಇಷ್ಟವಾಗದೆ ವಿರೋಧಿ ನಿಲುವು ತೆಗೆದುಕೊಂಡು ಅರ್ಥವಿಲ್ಲದ ತಕರಾರು ಹುಡುಕಿ ಸಲ್ಲದ ಆರೋಪ ಮಾಡುವ ಮೂಲಕ ಸಂಘಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಿದರು. ನಮ್ಮೊಳಗಿದ್ದು ಹೀಗೆ ಕುತಂತ್ರ ನಡೆಸಿದ್ದು ನೋವಿನ ಸಂಗತಿ ಎಂದು ಬೇಸರಿಸಿದರು.
ಚುನಾವಣಾ ತಕರಾರು ಎತ್ತಿದ್ದವರಿಗೆ ಈಗ ಹೈಕೋರ್ಟ್ ನೀಡಿದ ತೀರ್ಪು, ಸರಿಯಾದ ಉತ್ತರವಾಗಿದ್ದು, ನ್ಯಾಯಕ್ಕೆ ಜಯ ಸಿಕ್ಕಿದೆ ಎಂದರು.
ಚುನಾವಣಾ ನಡೆಸುವ ಸಲುವಾಗಿ ಕಾರ್ಮಿಕ ಇಲಾಖೆಯ ಸಲಹೆ ಪಡೆದಿದ್ದೇವೆ. ಚುನಾವಣೆ ಸಹ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ನಡೆದಿದೆ. ಎಲ್ಲವನ್ನೂ ಪಾರದರ್ಶಕವಾಗಿ ನಿಭಾಯಿಸಿದ್ದರೂ ಸಂಘಕ್ಕೆ ಕುತಂತ್ರದಿಂದ ಕಪ್ಪು ಚುಕ್ಕೆ ಬಳಿಯಲು ಕೆಲವರು ಮುಂದಾಗಿದ್ದು ಬೇಸರದ ಸಂಗತಿ ಎಂದರು. ಚುನಾವಣೆಗೆ ಸಹಕಾರ ನೀಡಿದ ಎಲ್ಲಾ ಸದಸ್ಯರು ಪದಾಧಿಕಾರಿಗಳನ್ನು ಅಭಿನಂದಿಸಿದರು.
ರಾಜ್ಯ ಸಹಾಯಕ ಚುನಾವಣಾಧಿಕಾರಿಯಾದ ಎಸ್.ರವಿಕುಮಾರ್ ಮಾತನಾಡಿ, ಪ್ರಸ್ತುತ ನಡೆದ ಚುನಾವಣೆ ಯಿಂದ ಪತ್ರಕರ್ತರ ನಿಜಗುಣ ಬಯಲಾಗಿದೆ. ಇಂತಹವರನ್ನು ಸದಸ್ಯರ ನೊಂದಣಿ ಸಮಯದಲ್ಲಿ ಗುರುತಿಸಿ ದೂರ ಇಡುವ ಮೂಲಕ ಸಂಘದಲ್ಲಿನ ತೊಡಕು ನಿವಾರಿಸಿ ಪತ್ರಕರ್ತರಾದ ನಾವು ಒಗ್ಗಟ್ಟು ಪ್ರದರ್ಶಿಸಬೇಕೆಂದರು.
ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಬೆಳಗಾವಿಯ ಪುಂಡಲೀಕ ಭೀ.ಬಾಳೋಜಿ, ಕಲುಬುರ್ಗಿಯ ಭವಾನಿ ಸಿಂಗ್ ಠಾಕೂರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಮತ್ತು ಕಾರ್ಯದರ್ಶಿಗಳಾದ ರಾಮನಗರ--ಮಂಡ್ಯ ದ ಮತ್ತಿಕೆರೆ ಜಯರಾಂ, ಮಂಡ್ಯದ ಸೋಮಶೇಖರ ಕೆರಕೋಡು, ಹಾವೇರಿಯ ನಿಂಗಪ್ಪ ಚಾವಡಿ ಇವರಿಗೆ ಚುನಾವಣಾಧಿಕಾರಿ ಸು.ತ ರಾಮೇಗೌಡ
ಪ್ರಮಾಣ ನೀಡಿ ನಂತರ ಅಧಿಕಾರದ ಪ್ರಮಾಣ ವಚನ ಬೋಧಿಸಿದರು.
ಚುನಾವಣಾ ಸಮಯದಲ್ಲಿ ರಾಜ್ಯ ಸಂಘದ ಜೊತೆಯಲ್ಲಿ ಕೈ ಜೋಡಿಸಿ ಸಹಕರಿಸಿದ್ದನ್ನು ಸ್ಮರಿಸಿ ಹಿರಿಯ ಪತ್ರಕರ್ತ ವಾಸುದೇವ ಹೊಳ್ಳ ಅವರನ್ನು ಅಧ್ಯಕ್ಷರಾದ ಶಿವಾನಂದ ತಗಡೂರು ಸನ್ಮಾನಿಸಿದರು ಈ ಸಂದರ್ಭದಲ್ಲಿ.ರಾಜ್ಯ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು ಜೊತೆಗಿದ್ದು ಅಭಿನಂದಿಸಿದರು.

0 Comments