ವಿಜಯ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಬಸವರಾಜ್ ಬೊಮ್ಮಾಯಿ ಆಡಳಿತದಲ್ಲಿ ಕರ್ನಾಟಕ ಸುವರ್ಣಯುಗ ಕಂಡಿದೆ ಎಂದಿದ್ದಾರೆ. ಇದು ಹಾಸ್ಯಾಸ್ಪದ ಮಾತ್ರವಲ್ಲ ಪರಿಸ್ಥಿತಿಯ ವ್ಯಂಗ್ಯ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಘಟಕದ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಟೀಕಿಸಿದ್ದಾರೆ.
ಯಡಿಯೂರಪ್ಪನವರನ್ನು ಬಲವಂತವಾಗಿ ಕೆಳಗಿಳಿಸಿದ ಬಿಜೆಪಿ ಹೈಕಮಾಂಡ್ ತನ್ನ ತಾಳಕ್ಕೆ ಕುಣಿಯುವ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ ನಂತರ ರಾಜ್ಯದ ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ.
ಅತ್ಯಂತ ದುರ್ಬಲ ಗೃಹ ಸಚಿವರಿಂದಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮಾನ ಹರಾಜು ಆಗಿದೆ.
ಮೈಸೂರಿನಲ್ಲಿ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿಗರು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿ ಅಪಹಾಸ್ಯಕ್ಕೆ ಗುರಿಯಾದ ಗೃಹಮಂತ್ರಿ ಅರಗ ಜ್ಞಾನೆಂದ್ರ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೊಲೆಯೊಂದರ ಸಂದರ್ಭದಲ್ಲಿ ದಲಿತ ವ್ಯಕ್ತಿಯನ್ನು ಉರ್ದು ಬರಲಿಲ್ಲ ಎನ್ನುವ ಕಾರಣಕ್ಕೆ ಚುಚ್ಚಿ ಚುಚ್ಚಿ ಮುಸ್ಲಿಮರು ಕೊಲೆ ಮಾಡಿದರು ಎಂಬ ಬಾಲಿಶ ಹೇಳಿಕೆ ಅವರ ಸಾಮರ್ಥ್ಯಕ್ಕೆ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.
ಇನ್ನು ಈ ಹಿಜಾಬ್ ಸೇರಿದಂತೆ ಹಲಾಲ್ ಕಟ್, ಜಟಕಾ ಕಟ್, ದೇವಾಲಯಗಳ ಬಳಿ ಮುಸ್ಲಿಮರ ವ್ಯಾಪಾರ ನಿರ್ಬಂಧ, ಬಜರಂಗದಳದ ಹರ್ಷನ ಕೊಲೆ, ಹುಬ್ಬಳ್ಳಿಯಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಮೇಲೆ ನಡೆದ ದೌರ್ಜನ್ಯ ಹಾಗೂ ಹುಬ್ಬಳ್ಳಿ ಗಲಭೆಯು ಸೇರಿದಂತೆ ಬಸವರಾಜ್ ಬೊಮ್ಮಾಯಿ ಆಡಳಿತದಲ್ಲಿ ಸಮಾಜಘಾತಕ ಶಕ್ತಿಗಳು ಹಾಗೂ ನೈತಿಕ ಪೊಲೀಸರ ಪುಂಡಾಟಿಕೆಯಿಂದ ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ.
ಈ ಎಲ್ಲಾ ಘಟನೆಗಳಲ್ಲಿ ರಾಜ್ಯದ ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿ, ಅಸಹಾಯಕತೆಯಿಂದ ವರ್ತಿಸಿದ್ದು ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ.
ಇನ್ನು ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ರಾಜ್ಯಾದ್ಯಂತ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಎರಡು ತಿಂಗಳುಗಳ ಕಾಲ ಪ್ರತಿಭಟನೆ ಧರಣಿ ನಡೆಸಿದರು. ಇದರಿಂದ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ನಿಂತಿತ್ತು.
ಇನ್ನು ಕೋರೋನ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ದುಡಿದ 6463 ಕೊರೋನ ವಾರಿಯರ್ಸ್ ಗಳನ್ನು ನಿರ್ಧಾಕ್ಷಿಣ್ಯವಾಗಿ ಕೆಲಸದಿಂದ ತೆಗೆದಿದ್ದು ಅವರು ಬೀದಿಗೆ ಬಿದ್ದಿದ್ದಾರೆ.
ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಜನಸಾಮಾನ್ಯರನ್ನು ಬಾಧಿಸುತ್ತಿದೆ.
ಇನ್ನು ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನಡೆದ ಸಬ್ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯಲ್ಲಿ ದೊಡ್ಡ ಭ್ರಷ್ಟಾಚಾರವೇ ನಡೆದುಹೋಗಿದೆ.
ಹಾಗೆಯೇ ಗುತ್ತಿಗೆಯಲ್ಲಿ 40 ಪರ್ಸೆಂಟ್ ಕಮಿಷನ್ ವಿಚಾರ ಸ್ವತಃ ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲನನ್ನು ಬಲಿತೆಗೆದುಕೊಂಡು ಸಚಿವ ಈಶ್ವರಪ್ಪ ರಾಜಿನಾಮೆ ನೀಡಿದ್ದಾರೆ.
ಬಿಬಿಎಂಪಿಯಲ್ಲಿ ಶೇಕಡ 50% ಕಮಿಷನ್ ಹಾಗೂ ಮಠಗಳಿಗೆ ನೀಡಿರುವ ಅನುದಾನದಲ್ಲಿ ಶೇಕಡ 30ರಷ್ಟು ಕಮಿಷನ್ ಆರೋಪ ಸರ್ಕಾರದಲ್ಲಿ ಭ್ರಷ್ಟಾಚಾರ ತಾರಕಕ್ಕೇರಿರುವುದನ್ನು ಸಾಬೀತು ಮಾಡಿದೆ.
ಭ್ರಷ್ಟಾಚಾರ, ಕೋಮು ಗಲಭೆ, ಸ್ವಜನಪಕ್ಷಪಾತದಿಂದ ಕೂಡಿದ ಆಡಳಿತವನ್ನೇ ರಾಜ್ಯದ ಜನ ಸುವರ್ಣಯುಗ ಎಂದುಕೊಳ್ಳಬೇಕೆ ? ಅಥವಾ ಬಿಜೆಪಿ ಆಡಳಿತವೇ ಇಂತಹುದೇ ಎಂಬ ಪ್ರಶ್ನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಉತ್ತರ ನೀಡಲಿ ಎಂದು ಬಿಎಸ್ಪಿ ಆಗ್ರಹಿಸುತ್ತದೆ ಎಂದಿದ್ದಾರೆ.

0 Comments