Ticker

6/recent/ticker-posts

Ad Code

Responsive Advertisement

ಬೆಲೆ ಏರಿಕೆ ವಿರುದ್ಧ ಜೆಡಿಎಸ್ ಬೃಹತ್ ಪ್ರತಿಭಟನೆ

ಬೆಂಗಳೂರು, ಏ.08: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳ ನಿರಂತರ ಏರಿಕೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.




ಬೆಲೆಗಳ ಏರಿಕೆ ವಿರೋಧಿಸಿ ಫ್ರೀಡಂ ಪಾರ್ಕಿನಲ್ಲಿ ಬೆಂಗಳೂರು ಮಹಾನಗರ ಜಾತ್ಯತೀತ ಜನತಾದಳ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

ಮುಂದುವರೆದು ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; ಬೆಲೆ ಏರಿಕೆ ವಿರುದ್ಧ ಪ್ರತಿಭಟನಾ ಮೆರವಣಿಗೆ ಮಾಡಲು ಅವಕಾಶ ಕೊಡದ ರಾಜ್ಯ ಸರ್ಕಾರ, ಶೋಭಾಯಾತ್ರೆಗೆ ಅವಕಾಶ ನೀಡಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ, ಇದರ ಬಗ್ಗೆ ತುಟಿ ಬಿಚ್ಚದ ಮುಖ್ಯಮಂತ್ರಿಗಳು, ಧರ್ಮಗಳ ನಡುವೆ ಯುದ್ಧಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಏರಿಕೆ ವಿರುದ್ಧ ಇಂದು ನಗರದಲ್ಲಿ ನಮ್ಮ ಪಕ್ಷದಿಂದ ಪ್ರತಿಭಟನಾ ಮೆರವಣಿಗೆ ನಡೆಯಬೇಕಿತ್ತು. ಜತೆಗೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರವನ್ನು ಮಾಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಬದಲಿಗೆ ಆಡಳಿತಾರೂಢ ಬಿಜೆಪಿ ತನಗೆ ಬೇಕಾದ ಸಂಘಟನೆಗಳು ಇಷ್ಟ ಬಂದಾಗಲೆಲ್ಲ ಹಮ್ಮಿಕೊಳ್ಳುವ ಶೋಭಾಯಾತ್ರೆಗೆ ಅವಕಾಶ ನೀಡುತ್ತಾರೆ ಎಂದು ಕಿಡಿಕಾರಿದರು.

ಇಂದು ದಿನಬಳಕೆ ವಸ್ತುಗಳು ಗಗನಕ್ಕೆ ಏರುತ್ತಿವೆ. ಹೀಗಾಗಿ ಪಕ್ಷದವತಿಯಿಂದ ಕೇಂದ್ರ, ರಾಜ್ಯ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಉಜ್ವಲ ಸ್ಕೀಂನಡಿ ಗ್ಯಾಸ್ ಸಿಲಿಡಂರ್ ಮೂರು ತಿಂಗಳು ಉಚಿತವಾಗಿ ಕೊಡ್ತೀವಿ ಅಂದ್ರು. ಈಗ ಗ್ಯಾಸ್ ಸಿಲಿಂಡರ್ ಬೆಲ ಎಷ್ಟಾಗಿದೆ ಗೊತ್ತಾ? 1000 ರೂಪಾಯಿ ದಾಟಿದೆ ಎಂದು ಕುಮಾರಸ್ವಾಮಿ ಅವರು ವಿವರಿಸಿ ಹೇಳಿದರು.

ರಾಜ್ಯದಲ್ಲಿ ಈ ರೀತಿ ಬೆಲೆ ಏರಿಕೆ ಆಗುತ್ತಿದ್ದರೆ ಯಾವ ಬಡ ಕುಟುಂಬ ಮನೆ ಕಟ್ಟಲು ಸಾಧ್ಯ. ಕಬ್ಬಿಣದ ಬೆಲೆ ಟನ್ ಗೆ ಒಂದು ಲಕ್ಷ ರೂಪಾಯಿ ದಾಟಿದೆ. ಸಿಮೆಂಟ್ ಬೆಲೆಯಲ್ಲಿ ಚೀಲಕ್ಕೆ 500 ರುಪಯಿವರೆಗೂ ಮುಟ್ಟಿದೆ. ಹೀಗೆಲ್ಲ ಆದರೆ ಸಾಮಾನ್ಯ ಜನ ಬದುಕುವುದು ಹೇಗೆ? ಎಂದು ಪ್ರಶ್ನೆ ಮಾಡಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ಮಾತನಾಡಿದರು, ಶಾಸಕ ದಾಸರಹಳ್ಳಿ ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಅವರೂ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು, ಅಲ್ಲದೆ ಪಕ್ಷದ ಎಲ್ಲ ಶಾಸಕರು, ಮಾಜಿ ಶಾಸಕರು, ಹಿರಿಯ-ಕಿರಿಯ ನಾಯಕರು, ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Post a Comment

0 Comments

Ad Code

Responsive Advertisement