ಬೆಂಗಳೂರು: ಕಳೆದ 75 ವರ್ಷಗಳಿಂದ ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಜೆಡಿಎಸ್ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಐದೇ ವರ್ಷದಲ್ಲಿ ಸರಿಪಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಜನತೆಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಅಲ್ಲದೇ; ಇದೇ ತಿಂಗಳ 16ರಿಂದ ಪಕ್ಷದ ಮಹತ್ವಾಕಾಂಕ್ಷೆ ಕಾರ್ಯಕ್ರಮವಾದ ಜನತಾ ಜಲಧಾರೆ ಗಂಗಾ ರಥಯಾತ್ರೆಯನ್ನು ಆರಂಭ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು.
ಈಗಾಗಲೇ 15 ಗಂಗಾ ರಥಗಳು ಸಿದ್ಧ ಆಗಿವೆ. ಈ ತಿಂಗಳ 12ರಂದು ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಈ ರಥಗಳಿಗೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಹಸಿರು ನಿಶಾನೆ ತೋರಲಿದ್ದಾರೆ ಮತ್ತು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಅಷ್ಟೂ ರಥಗಳು ಹನುಮ ಜಯಂತಿ ದಿನವಾದ ಈ ತಿಂಗಳ 16ರ ದಿನಕ್ಕೆ ಜಲ ಸಂಗ್ರಹ ಮಾಡುವ ನಿಗದಿತ ಸ್ಥಳಗಳನ್ನು ತಲುಪಲಿವೆ. ಆ ಪುಣ್ಯದಿನವೇ ಹದಿನೈದು ಕಡೆಗಳಲ್ಲಿ ಜಲ ಸಂಗ್ರಹ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಕಳೆದ 75 ವರ್ಷಗಳಿಂದ ಕನ್ನಡಿಗರು ನೀರಾವರಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ನಮಗೆ ಅನ್ಯಾಯ ಮಾಡುತ್ತಲೇ ಇದೆ. ಜತೆಗೆ, ಅಕ್ಕಪಕ್ಕದ ರಾಜ್ಯಗಳಿಂದ ದೌರ್ಜನ್ಯಕ್ಕೆ ತುತ್ತಾಗಿದ್ದೇವೆ. ಇದೆಲ್ಲಕ್ಕೂ ಚರಮ ಗೀತೆ ಹಾಡುವ ಉದ್ದೇಶದಿಂದ ನಮ್ಮ ಪಕ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಲಧಾರೆ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಎಲ್ಲ ಜಿಲ್ಲೆಗಳಿಗೂ ಜಲ ಸಮಾನತೆ ಹಾಗೂ ಜಲ ಸಂಪನ್ಮೂಲಗಳ ಸದ್ಬಳಕೆ ನಿಟ್ಟಿನಲ್ಲಿ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಎಲ್ಲಾ ನೀರಾವರಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಕನ್ನಡಿಗರದ್ದೇ ಆದ ಸರ್ಕಾರ ತರಬೇಕು ಎಂಬ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಅದೇ ಉದ್ದೇಶವನ್ನು ಜಲಧಾರೆ ಹೊಂದಿದೆ. ಕೊರೊನ ಆತಂಕ ಕಡಿಮೆಯಾಗಿದೆ. ಹಾಗಾಗಿ ಹಲವಾರು ತಿಂಗಳಿಂದ ಪ್ರಾರಂಭ ಮಾಡಬೇಕಿದ್ದ ಕಾರ್ಯಕ್ರಮಕ್ಕೆ ಈಗ ಚಾಲನೆ ನೀಡುತ್ತಿದ್ದೇವೆ ಎಂದರು ಅವರು.
ಒಟ್ಟು 15 ತಂಡಗಳು:
ಹದಿನೈದು ಗಂಗಾ ರಥಗಳ ಜತೆಗೆ ಹದಿನೈದು ಕ್ರಿಯಾಶೀಲ ತಂಡಗಳು ಇರುತ್ತವೆ. ರಥಗಳು ಸಾಗುವ ಆಯಾ ಮಾರ್ಗದ ಎಲ್ಲ ಚಟುವಟಿಕೆಗಳ ನಿರ್ವಹಣೆ ಈ ತಂಡಗಳದ್ದು. ಈ ತಂಡಗಳ ನೇತೃತ್ವವನ್ನು ಆಯಾ ಭಾಗದ ನಮ್ಮ ಶಾಸಕರು, ಪಕ್ಷದ ಜಿಲ್ಲಾ ಅಧ್ಯಕ್ಷರು, ಇನ್ನಿತರೆ ಎಲ್ಲ ನಾಯಕರು ವಹಿಸುತ್ತಾರೆ ಎಂದು ಅವರು ತಿಳಿಸಿದರು.
ಮೇ 8ರಂದು ಬೆಂಗಳೂರು ನಗರಕ್ಕೆ ಎಲ್ಲಾ ರಥಗಳು ಜಲ ಸಂಗ್ರಹ ಮಾಡಿಕೊಂಡು ವಾಪಸ್ ಬರುತ್ತವೆ. ನಂತರ ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡಿ ನೀರಾವರಿ ಯೋಜನೆಗಳ ಜಾರಿ ಬಗ್ಗೆ ಸಂಕಲ್ಪ ಮಾಡುತ್ತೇವೆ. ಅದೇ ದಿನ ಆ ರಥಗಳ ನೀರನ್ನು ಒಂದು ಬ್ರಹ್ಮ ಕಲಶಕ್ಕೆ ತುಂಬಿ ಪೂಜಿಸಿ ನಂತರ ಅಂದೇ ಜೆಪಿ ಭವನದಲ್ಲಿ ಆ ಕಳಸ ಪ್ರತಿಷ್ಟಾಪನೆ ಮಾಡುತ್ತೇವೆ. ಆ ಕಲಶಕ್ಕೆ ಮುಂದಿನ ಚುನಾವಣೆವರೆಗೆ, ನಮ್ಮ ಸಂಪ್ರದಾಯದಂತೆ ನಿತ್ಯ ಗಂಗಾ ಪೂಜೆ ನಡೆಯಲಿದೆ ಎಂದು ಕುಮರಸ್ವಾಮಿ ಅವರು ಹೇಳಿದರು.
ಪೂರ್ವ ಸಿದ್ಧತಾ ಸಭೆ:
ಇದಕ್ಕೂ ಮುನ್ನ ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಲಧಾರೆ ಕಾರ್ಯಕ್ರಮದ ಅಂತಿಮ ಸಿದ್ಧತೆಯ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನ ಮಂತ್ರಿಗಳು, ರಾಜ್ಯಕ್ಕೆ ಆಗುತ್ತಿರುವ ಜಲ ಅನ್ಯಾಯವನ್ನು ಎಲ್ಲರಿಗೂ ಕಣ್ಣಿಗೆ ಕಟ್ಟಿದಂತೆ ವಿವರಿಸಿದರು.
ಜಲಧಾರೆ ಅತ್ಯುತ್ತಮ ಕಾರ್ಯಕ್ರಮ ಆಗಿದ್ದು, ಅದನ್ನು ಎಲ್ಲರೂ ಒಟ್ಟಾಗಿ ಯಶಸ್ವಿ ಮಾಡಬೇಕು ಎಂದು ಸೂಚನೆ ನೀಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು, ಜಲಧಾರೆ ಕಾರ್ಯಕ್ರಮದ ರೀತಿ ರಿವಾಜುಗಳು, ಧಾರ್ಮಿಕ ವಿಧಿ ವಿಧಾನಗಳು, ಜಲ ಸಂಗ್ರಹ, ಮೆರವಣಿಗೆ ಕಲಾ ತಂಡಗಳು, ಮಂಗಳ ವಾದ್ಯಗಳ ಮೇಳ ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ನೀಡಿದರು.
ಜತೆಗೆ, ದೇವೇಗೌಡರು ಮುಖ್ಯಮಂತ್ರಿ ಆಗಿ, ಪ್ರಧಾನಮಂತ್ರಿಯಾಗಿ ರಾಜ್ಯಕ್ಕೆ ನೀಡಿರುವ ನೀರಾವರಿ ಕೊಡುಗೆಗಳು, ಹಾಗೂ ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿ ಕೊಟ್ಟಿರುವ ಕೊಡುಗೆಗಳ ಬಗ್ಗೆ ಜನರಿಗೆ ಉತ್ತಮ ರೀತಿಯಲ್ಲಿ ಮಾಹಿತಿ ಕೊಡಬೇಕು ಎಂದು ನಿರ್ದೇಶನ ನೀಡಿದರು.
ಈ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಶೆಂಪೂರ್ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು. 2023ರ ಚುನಾವಣೆಯ ಸಂಭವನೀಯ ಅಭ್ಯರ್ಥಿಗಳು ಹಾಜರಿದ್ದರು.
0 Comments