ಸಾರ್ವಜನಿಕ ಹೊಣೆಗಾರಿಕೆ ನಿರ್ವಹಣೆ(ಸಿ.ಎಸ್.ಆರ್.) ಅಡಿಯಲ್ಲಿ ಕರ್ನಾಟಕ ಬ್ಯಾಂಕ್ ಲಿ. ನವರು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಧುನಿಕ ಕಂಪ್ಯೂಟರ್ ಗಳು(12) ಹಾಗೂ ಪ್ರಿಂಟರ್ ಗಳನ್ನು(3) ಕೊಡುಗೆಯಾಗಿ ನೀಡಿದ್ದಾರೆ. ಇಂದು(19-4-2022) ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ನಾಗರಾಜ ಐತಾಳ್ ಅವರು ಪರಿಷತ್ತಿಗೆ ಭೇಟಿ ನೀಡಿ ರೂ. 17,48,146-00 (ಹದಿನೇಳು ಲಕ್ಷದ ನಲವತ್ತೆಂಟು ಸಾವಿರದ ನೂರ ನಲವತ್ತಾರು) ಮೊತ್ತದ ಡಿಡಿ ಯನ್ನು ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ಹಸ್ತಾಂತರಿಸಿದರು.
ಡಿ.ಡಿ. ಸ್ವೀಕರಿಸಿ ಮಾತನಾಡಿದ ನಾಡೋಜ ಡಾ. ಮಹೇಶ ಜೋಶಿ ಅವರು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಬ್ಯಾಂಕ್ ಲಿ., ಇವುಗಳು ಕನ್ನಡ ನಾಡಿನ ಎರಡು ಹೆಮ್ಮೆಯ ಸಂಸ್ಥೆಗಳಾಗಿವೆ. ಪರಿಷತ್ತು ಕನಿಷ್ಠ ಒಂದು ಕೋಟಿ ಸದಸ್ಯತ್ವ ನೋಂದಣಿಯ ಗುರಿಯನ್ನು ಹೊಂದಿದ್ದು, ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಜನಸಾಮಾನ್ಯರಿಗೂ ಪರಿಷತ್ತನ್ನು ತಲುಪುವಂತಹ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಎಲ್ಲ ಕಾರ್ಯಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಂಪ್ಯೂಟರ್ ಗಳ ಅವಶ್ಯಕತೆ ಇದ್ದು, ಸಿ.ಎಸ್.ಆರ್. ಅಡಿಯಲ್ಲಿ ಅತ್ಯಾಧುನಿಕ ಕಂಪ್ಯೂಟರ್ ಹಾಗೂ ಪ್ರಿಂಟರ್ ಗಳನ್ನು ನೀಡಬೇಕೆಂದು ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಹಾಬಲೇಶ್ವರ ಎಂ.ಎಸ್. ಅವರಿಗೆ ಪತ್ರ ಬರೆದಿದ್ದೆ. ತಕ್ಷಣವೇ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಇವುಗಳನ್ನು ಖರೀದಿಸಲು ಒಪ್ಪಿಗೆ ನೀಡಿದ್ದರು. ಅದರಂತೆ ಪರಿಷತ್ತಿನ ಕೇಂದ್ರ ಕಚೇರಿಗೆ ಹೊಸ ಕಂಪ್ಯೂಟರ್ ಗಳನ್ನು, ಪ್ರಿಂಟರ್ ಗಳನ್ನು ಖರೀದಿಸಿ, ಕಾರ್ಯನಿರ್ವಹಿಸಲಾಗುತ್ತಿದೆ. ಕನ್ನಡ-ಕನ್ನಡಿಗ-ಕರ್ನಾಟಕ ಹಿತರಕ್ಷಣೆಯ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಷತ್ತಿನ ಹಾದಿಯಲ್ಲಿಯೇ ಕರ್ನಾಟಕ ಬ್ಯಾಂಕ್ ಸಹ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಬ್ಯಾಂಕಿನ ಈ ಸಾಮಾಜಿಕ ಜವಾಬ್ದಾರಿಗಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕರ್ನಾಟಕ ಬ್ಯಾಂಕಿನ ಸಹಕಾರ ಪರಿಷತ್ತಿನೊಂದಿಗೆ ನಿರಂತರವಾಗಿರಲಿ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ. ಪ್ರಧಾನ ಗುರುದತ್ತ, ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್ ಪಾಂಡು ಹಾಗೂ ಕರ್ನಾಟಕ ಬ್ಯಾಂಕಿನ ಚಾಮರಾಜಪೇಟೆ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕರುಗಳಾದ ಶ್ರೀ ರವಿ ಪಿ, ಶ್ರೀ ಕುಮಾರಸ್ವಾಮಿ ಅವರುಗಳು ಉಪಸ್ಥಿತರಿದ್ದರು.
- ಶ್ರೀನಾಥ್ ಜೆ.
ಮಾಧ್ಯಮ ಸಲಹೆಗಾರರು

0 Comments