Ticker

6/recent/ticker-posts

Ad Code

Responsive Advertisement

ಆರೋಗ್ಯ ಇಲಾಖೆ ಭ್ರಷ್ಟಾಚಾರ: ಸುಧಾಕರ್‌ ರಾಜೀನಾಮೆಗೆ ಎಎಪಿ ಆಗ್ರಹ

ಆರೋಗ್ಯ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರವಾಗುತ್ತಿದೆ ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿಕೆಯನ್ನು ಆಮ್‌ ಆದ್ಮಿ ಪಾರ್ಟಿ ಬೆಂಬಲಿಸಿದ್ದು, ಸಚಿವ ಸುಧಾಕರ್‌ರಿಂದ ರಾಜೀನಾಮೆ ಪಡೆದು ಹಗರಣಗಳ ಕುರಿತು ಸಮಗ್ರ ನ್ಯಾಯಾಂಗ ತನಿಖೆ ಮಾಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಬೆಂಗಳೂರು ಅಧ್ಯಕ್ಷ ಮೋಹನ್‌ ದಾಸರಿ, “ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿರುವ ಸಾಲುಸಾಲು ಹಗರಣಗಳ ವಿರುದ್ಧ ಧ್ವನಿ ಎತ್ತಿರುವ ಕೆಂಪಣ್ಣರವರಿಗೆ ಎಎಪಿಯ ಸಂಪೂರ್ಣ ಬೆಂಬಲವಿದೆ. ಆರೋಗ್ಯ ಸಚಿವ ಸುಧಾಕರ್ರವರ ಅಣತಿಯಂತೆ, ಬಯೋ ಕೆಮಿಸ್ಟ್ರಿ ಮತ್ತು ಹೆಮಟೋಲಜಿ ಉಪಕರಣಗಳ ಗುತ್ತಿಗೆಯನ್ನು ಸಚಿವರ ಆಪ್ತ ಕಂಪನಿಗೆ ನೀಡಲಾಗಿದೆ. ದಿನಾಂಕ 23.09.2020ರಂದು ನೀಡಲಾದ KDL/EQPT/ TND/LE-3  ಭಾಗ HAE/103/2020-21 (IND-720) ಹಾಗೂ KDL/EQPT/ Re-TND/LE-5 ಭಾಗ HA/104/2020-21 (IND-721) ಸಂಖ್ಯೆಯ ಟೆಂಡರ್‌ನಲ್ಲಿ ಅಕ್ರವಾಗಿದೆ. ಈ ಬಗ್ಗೆ ಈ ಕಳೆದ ವರ್ಷವೇ ನಾವು ದಾಖಲೆ ಬಿಡುಗಡೆ ಮಾಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.

“ಒಂದು ಅಲ್ಪಾವಧಿ ಗುತ್ತಿಗೆಯನ್ನು ರದ್ದು ಮಾಡಿ ರೀಟೆಂಡರ್ ಮಾಡುವಾಗ, ಟೆಂಡರ್ ಸ್ಪೆಸಿಫಿಕೇಶನ್ ಬದಲಿಸಲು ಅವಕಾಶವಿಲ್ಲ. ಆದರೂ ಬದಲಾವಣೆ ಮಾಡಿದ್ದಾರೆ. ಟೆಂಡನ್‌ನಲ್ಲಿ ಕೇವಲ ಒಂದೇ ಬಿಡ್ ಬಂದಿದ್ದರೂ ಅದನ್ನು ಆಯ್ಕೆ ಸಮಿತಿ ಹೇಗೆ ಪರಿಗಣಿಸಿದೆ? ಸಿಸ್ಮೆಕ್ಸ್‌ ಎಂಬ ಕಂಪನಿಯಿಂದ ತ್ರೀ ಪಾರ್ಟ್‌ ಹೆಮಟಾಲಜಿ ಸೆಲ್ ಕೌಂಟರ್ ಉಪಕರಣವನ್ನು ದೆಹಲಿ ಸರ್ಕಾರವು 1,80,540 ರೂಪಾಯಿಗೆ, ಹಿಮಾಚಲ ಪ್ರದೇಶ ಸರ್ಕಾರವು 1,30,000 ರೂಪಾಯಿಗೆ ಮತ್ತು ದೆಹಲಿಯ ಮುನಿಸಿಪಾಲಿಟಿ 1,44,000 ರೂಪಾಯಿಗೆ ಖರೀದಿಸಿದೆ. ಆದರೆ ನಮ್ಮ ಕರ್ನಾಟಕ ಸರ್ಕಾವು ಅದೇ ಉಪಕರಣಕ್ಕೆ ಬರೋಬ್ಬರಿ 2,96,180 ರೂಪಾಯಿ ನೀಡಿ ಖರೀದಿಸಿದೆ. ಒಟ್ಟು 1195 ಉಪಕರಣ ಖರೀದಿಸಲು 19.85 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಅದೇ ರೀತಿ ಫೈವ್‌ ಪಾರ್ಟ್‌ ಹೆಮಟಾಲಜಿ ಸೆಲ್ ಕೌಂಟರ್ಗಳನ್ನು ಸಿಸ್ಮೆಕ್ಸ್‌ ಕಂಪನಿಯು ಕೇರಳ ಸರ್ಕಾರಕ್ಕೆ 4.60 ಲಕ್ಷ ರೂಪಾಯಿಗೆ ನೀಡಿದೆ. ಆದರೆ ಕರ್ನಾಟಕ ಸರ್ಕಾರವು ಅದೇ ಕಂಪನಿಯಿಂದ 8.35 ಲಕ್ಷ ರೂಪಾಯಿಯಂತೆ ಖರೀದಿಸಿದೆ. ಒಟ್ಟು 165 ಈ ಉಪಕರಣಗಳ ಖರೀದಿಯಿಂದಾಗಿ 6.18 ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಿದೆ” ಎಂದು ಮೋಹನ್‌ ದಾಸರಿ ಆರೋಪಿಸಿದರು.

ಎಎಪಿಯ ಬೆಂಗಳೂರು ನಗರ ಉಪಾಧ್ಯಕ್ಷರಾದ ಸುರೇಶ್‌ ರಾಥೋಡ್‌ ಮಾತನಾಡಿ, “ಸುಧಾಕರ್‌ರವರು ರಾಜ್ಯ ಸಚಿವ ಸಂಪುಟದಲ್ಲಿರುವ ಅತಿ ಭ್ರಷ್ಟ ಸಚಿವ. ಮಾಧ್ಯಮಗಳಲ್ಲೂ ಆರೋಗ್ಯ ಇಲಾಖೆಯ ಸಾಲುಸಾಲು ಹಗರಣಗಳು ವದರಿಯಾಗುತ್ತಿವೆ. ಆದರೂ ಅವರ ವಿರುದ್ಧ ಮುಖ್ಯಮಂತ್ರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತ” ಎಂದು ಹೇಳಿದರು.

ಎಎಪಿಯ ವಕ್ತಾರರಾದ ಉಷಾ ಮೋಹನ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement