ನಗರದಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕೆಲವೆಡೆ ಮನೆಗಳಿಗೆ ನೀರು ನುಗ್ಗಿರುತ್ತದೆ. ಈ ಸಂಬಂಧ ಸಮಸ್ಯೆ ಆಗಿರುವ ಪ್ರದೇಶಗಳಿಗೆ ಕೂಡಲೆ ಭೇಟಿ ನೀಡಿ ಇರುವ ಸಮಸ್ಯೆ ಬಗೆಹರಿಸಬೇಕು. ಜೊತೆಗೆ ಮನೆಗಳಿಗೆ ನೀರು ನುಗ್ಗಿರುವ ಕಡೆ ಸಂಬಂಧಪಟ್ಟ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಸಂಬಂಧಿಸಿದಂತೆ ಇಂದು ವರ್ಚುವಲ್ ಸಭೆ ನಡೆಸಿದ ಅವರು, ನಗರದ ವಿದ್ಯಾಪೀಠದಲ್ಲಿ ನಿನ್ನೆ ರಾತ್ರಿ ಸುಮಾರು 73 ಮಿ.ಮೀ. ಮಳೆಯಾದ ಪರಿಣಾಮ ಕಾಮಾಕ್ಯ ಚಿತ್ರಮಂದಿರದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 80 ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿ ಮಾನ್ಯ ಆಡಳಿತಗಾರರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಈ ಪೈಕಿ ಸ್ಥಳದಲ್ಲಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ವಿಭಾಗೀಯ ನಿಯಂತ್ರಣ ಕೊಠಡಿಗಳನ್ನು ಕೂಡಲೆ ಪ್ರಾರಂಭಿಸಿ:
ಪಾಲಿಕೆ ವ್ಯಾಪ್ತಿಯಲ್ಲಿ 9 ಶಾಶ್ವತ ನಿಯಂತ್ರಣ ಕೊಠಡಿಗಳಿದ್ದು, ಮಳೆಗಾಲದ ವೇಳೆ 63 ತಾತ್ಕಾಲಿಕ ಕೊಠಡಿಗಳನ್ನು ಸ್ಥಾಪಿಸಿಕೊಳ್ಳಲಾಗುತ್ತದೆ. ಈ ಪೈಕಿ ವಿಭಾಗೀಯ ಮಟ್ಟದಲ್ಲಿ ಅಗತ್ಯಕ್ಕೆ ಅನುಗುಣವಾಗಿ ವಿಭಾಗೀಯ ಮಟ್ಟದಲ್ಲಿ ಕೂಡಲೆ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿ. ಜೊತೆಗೆ ಮರಗಳನ್ನು ತೆರವುಗೊಳಿಸುವ ಸಲುವಾಗಿ 21 ತಂಡಗಳಿದ್ದು, ರಾತ್ರಿ ವೇಳೆ 8 ತಂಡಗಳು ಹಾಗೂ ಉಳಿದ 13 ತಂಡಗಳನ್ನು ಹಗಲಿನ ವೇಳೆ ನಿಯೋಜನೆ ಮಾಡಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೊಮ್ಮನಹಳ್ಳಿ ವಲಯದ ಉತ್ತರಹಳ್ಳಿ ಭಾಗದಲ್ಲಿ ಸುಮಾರು 150 ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯ ನಿವಾಸಿಗಳಿಗೆ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ. ಕಂದಾಯ ಮತ್ತು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಮೂಲಕ ಮನೆಗಳಿಗೆ ನೀರು ನುಗ್ಗಿರುವ ಸಂಬಂಧ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಬೊಮ್ಮನಹಳ್ಳಿ ವಲಯ ಮುಖ್ಯ ಇಂಜಿನಿಯರ್ ರವರು ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಿದರು.
ಆರ್.ಆರ್. ನಗರ ವಲಯದ ಪ್ರಮೋದ ಲೇಔಟ್, ಮಲ್ಲತಹಳ್ಳಿ, ಪೂರ್ವ ವಲಯದ ಗಾಲ್ಫ್ ಕ್ಲಬ್ ಹಾಗೂ ಮಹದೇವಪುರ ವಲಯದ ದೊಡ್ಡಾನೆಕುಂದಿಯಲ್ಲಿ ಮಳೆಯಿಂದಾಗಿ ಜಲಾವೃತಗೊಂಡಿದ್ದ ಪ್ರದೇಶದಲ್ಲಿ ನೀರನ್ನು ತೆರವುಗೊಳಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.
ಮಾನ್ಯ ಆಡಳಿತಗಾರರು ಹಾಗೂ ಮುಖ್ಯ ಆಯುಕ್ತರು ರವರಿಂದ ಕಾಮಾಕ್ಯ ಸ್ಥಳಕ್ಕೆ ಮಧ್ಯರಾತ್ರಿ ಭೇಟಿ ನೀಡಿ ಪರಿಶೀಲನೆ:
ದಕ್ಷಿಣ ವಲಯದ ವಿದ್ಯಾಪೀಠ ಕಾಮಾಕ್ಯ ಚಿತ್ರಮಂದಿರದ ಹತ್ತಿರ ನಿನ್ನೆ ರಾತ್ರಿ ಸುಮಾರು 73 ಮಿ.ಮೀ. ಮಳೆಯಾದ ಪರಿಣಾಮ, ಬೃಹತ್ ನೀರುಗಾಲುವೆಯಿಂದ ಮಳೆ ನೀರು ಸುತ್ತಮುತ್ತಲಿನ ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಈ ಸಂಬಂಧ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಮಾನ್ಯ ಆಡಳಿತಗಾರರಾದ ಶ್ರೀ ರಾಕೇಶ್ ಸಿಂಗ್, ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ಹಾಗೂ ಇನ್ನಿತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ತುರ್ತು ಕಾರ್ಯ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಬೃಹತ್ ನೀರುಗಾಲುವೆಯಿಂದ ಮಳೆನೀರು ಹಿಮ್ಮುಖವಾಗಿ ಹರಿದು ಗಣೇಶ್ ಮಂದಿರ ವಾರ್ಡ್ ನ ಸುಮಾರು 20 ಮನೆಗಳಿಗೆ ಮೂರು ಅಡಿಯಷ್ಟು ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ಇದಲ್ಲದೆ ಚಿಕ್ಕಲಸಂದ್ರ ವಾರ್ಡ್ ನಲ್ಲಿ ಸುಮಾರು 30 ಮನೆಗಳಿಗೆ ನೀರು ನುಗ್ಗಿದ್ದು, ಪಾಲಿಕೆಯ ಸಿಬ್ಬಂದಿ, ಪೌರಕಾರ್ಮಿಕರ ತಂಡವು ಶಿಲ್ಟ್ ಮತ್ತು ಟ್ರ್ಯಾಕ್ಟರ್ ಮೂಲಕ ಮನೆಗೆ ನುಗ್ಗಿರುವ ಹಾಗೂ ರಸ್ತೆ ಮೇಲೆ ನಿಂತಿರುವ ಕೊಳಚೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ತಾತ್ಕಾಲಿಕವಾಗಿ ಊಟ, ನೀರಿನ ವ್ಯವಸ್ಥೆ ಮಾಡಲಾಗಿದ್ದು, ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು ಹಾಳಾಗಿರುವ ಸಂಬಂಧ ಕಂದಾಯ ಮತ್ತು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಂದ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದೆ.
ನಗರದಲ್ಲಿ ಯಾವ ಭಾಗದಲ್ಲಿ ಎಷ್ಟು ಮಿ.ಮೀ. ಮಳೆ:
ವಿದ್ಯಾಪೀಠದಲ್ಲಿ 73 ಮಿ.ಮೀ., ಸಂಪಂಗಿರಾಮನಗರ 42 ಮಿ.ಮೀ., ವಿ.ವಿ.ಪುರ 45 ಮಿ.ಮೀ., ಬೊಮ್ಮನಹಳ್ಳಿ 42 ಮಿ.ಮೀ., ಬೆಳ್ಳಂದೂರು 40 ಎಂ.ಎಂ., ಅಂಜನಾಪುರ 36 ಎಂ.ಎಂ., ಗಾಳಿ ಆಂಜನೇಯ ದೇವಸ್ಥಾನ 37 ಮಿ.ಮೀ., ಆರ್.ಆರ್.ನಗರ ಮತ್ತು ಕೋರಮಂಗಲ ತಲಾ 34 ಮಿ.ಮೀ., ಬಿಇಎಂ.ಎಲ್ ಬಡಾವಣೆ 31 ಮಿ.ಮೀ. ಮಳೆಯಾಗಿದೆ.
ನಗರದಲ್ಲಿ ನಿನ್ನೆ ಮರ ಬಿದ್ದಿರುವ ಬಗ್ಗೆ 10, ಮನೆಗೆ ನೀರು ನುಗ್ಗಿರುವ ಬಗ್ಗೆ 10 ಹಾಗೂ ಮೋರಿ ಬ್ಲಾಕ್ ಆಗಿರುವ ಬಗ್ಗೆ 3 ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಬಿಬಿಎಂಪಿ ವತಿಯಿಂದ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ.
.jpeg)

.jpeg)
.jpeg)

.jpeg)

0 Comments