ಬೆಂಗಳೂರು, ಮಾ.18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುವ ಬೆಂಗಳೂರು ಐತಿಹಾಸಿಕ ಕರಗ ಉತ್ಸವ-2022 ಸಂಬಂಧ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರ ಅಧ್ಯಕ್ಷತೆಯಲ್ಲಿ ಪಾಲಿಕೆ ಕೇಂದ್ರ ಕಛೇರಿಯ ಸಭಾಂಗಣ-01ರಲ್ಲಿ ಇಂದು ಪೂರ್ವಭಾವಿ ಸಿದ್ದತಾ ಸಭೆ ನಡೆಯಿತು.
ಮಾನ್ಯ ಶಾಸಕರಾದ ಶ್ರೀ ಉದಯ್ ಬಿ. ಗರುಡಾಚಾರ್ ರವರು ಮಾತನಾಡಿ, ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವವು ಪುರಾನತವಾದ ಹಾಗೂ ಪ್ರಸಿದ್ಧವಾದ ಹಬ್ಬವಾಗಿದೆ. ಕೋವಿಡ್ ಸೋಂಕಿನಿಂದ ಕಳೆದ ಎರಡು ವರ್ಷಗಳಿಂದ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗದೆ ಸರಳವಾಗಿ ಆಚರಿಸಲಾಗಿತ್ತು. ಇದೀಗ ಕೋವಿಡ್ ಸೋಂಕು ಕಡಿಮೆಯಿದ್ದು, ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಎಲ್ಲರೂ ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಂಡು ಯಾವುದೇ ಅಡಚಣೆಯಾಗದಂತೆ ಸುವ್ಯವಸ್ಥಿತವಾಗಿ ನಡೆಯಬೇಕು ಎಂದು ತಿಳಿಸಿದರು.
ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪಿ.ಆರ್. ರಮೇಶ್ ರವರು ಮಾತನಾಡಿ, ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವ ಆಚರಣೆ ಮಾಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದೆ. ಕಳೆದ ಎರಡು ವರ್ಷ ಕರಗ ಉತ್ಸವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿ ಕೋವಿಡ್ ಸೋಂಕು ನಿಯಂತ್ರಣಲ್ಲಿದ್ದು, ವಿಜೃಂಭಣೆಯಿಂದ ಆಚರಣೆ ಮಾಡಬೇಕು ಎಂದು ಹೇಳಿದರು.
ಕರಗ ಉತ್ಸವವು ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯಗಳ ವ್ಯಾಪ್ತಿಯಲ್ಲಿ ನಡೆಯಲಿದ್ದು, ಕರಗ ಹೋಗಿ ಬರುವ ಎಲ್ಲಾ ರಸ್ತೆಗಳು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡಬೇಕು. ಸಂಪಂಗಿ ರಾಮನಗರದ ಕಲ್ಯಾಣಿಯ ಸುತ್ತಲು ಸ್ವಚ್ಛಗೊಳಿಸಬೇಕು. ಬೀದಿ ದೀಪಗಳ ಅಳವಡಿಕೆ, ಜಲಮಂಡಳಿಯಿಂದ ಸಮರ್ಪಕ ನೀರಿನ ವ್ಯವಸ್ಥೆ, ಒಳಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡಬೇಕು. ಕರಗದ ಉತ್ಸವದ ಪ್ರಕ್ರಿಯೆಯು ಏಪ್ರಿಲ್ 8 ರಿಂದ ಪ್ರಾರಂಭವಾಗಿ ಏಪ್ರಿಲ್ 18ಕ್ಕೆ ಮುಗಿಯಲಿದ್ದು, ಪಾಲಿಕೆಯಿಂದ ನೀಡಬೇಕಿರುವ ಅನುದಾನವನ್ನು ಕೂಡಲೆ ಬಿಡುಗಡೆಗೊಳಿಸಿ ಕರಗ ಉತ್ಸವವು ಸರಿಯಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.
ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ಮಾತನಾಡಿ, ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ಈ ಸಂಬಂಧ ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವವು ಏಪ್ರಿಲ್ 8 ರಿಂದ ಪ್ರಾರಂಭವಾಗಲಿದ್ದು, ಏಪ್ರಿಲ್ 16 ರಂದು ನಡೆಯುವ ಕರಗ ಶಕ್ತ್ಯೋತ್ಸವ ನಡೆಯುವ ದಿನವಾಗಿದೆ. ಸದರಿ ಕರಗ ಉತ್ಸವವು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯುವ ಸಮಯದಲ್ಲಿ ಅತಿ ಗಣ್ಯರು ಭಾಗವಹಿಸಲಿದ್ದಾರೆ. ಜೊತೆಗೆ ನಗರದ ಸುತ್ತಮುತ್ತಲಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಲಿದ್ದು, ಅದಕ್ಕೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಪಾಲಿಕೆ, ಜಿಲ್ಲಾಧಿಕಾರಿ, ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವುದೇ ಅಡಚಣೆಯಾಗದಂತೆ ಕರಗ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಶ್ರೀ ಜೆ.ಮಂಜುನಾಥ್ ರವರು ಮಾತನಾಡಿ, ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವವನ್ನು ಸುಸೂತ್ರವಾಗಿ ನಡೆಯಲು ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಏಪ್ರಿಲ್ 8 ರಿಂದ ರಥೋತ್ಸವದ ಮೂಲಕ ಕರಗ ಉತ್ಸವ ಪ್ರಾರಂಭವಾಗಲಿದ್ದು, ಏಪ್ರಿಲ್ 18 ರಂದು ವಸಂತೋತ್ಸವ ಧ್ವಜಾರೋಹಣದ ಮೂಲಕ ಕರಗ ಮಹೋತ್ಸವ ಮುಕ್ತಾಯವಾಗಲಿದೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ಕರಗ ಉತ್ಸವ ನಡೆಯದಿರುವ ಕಾರಣ, ಈ ಬಾರಿ ನಡೆಯುವ ಕರಗ ಉತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬರಲಿದ್ದಾರೆ. ಕೋವಿಡ್ ಸೋಂಕು ಇರುವುದರಿಂದ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು, ಪ್ರತಿದಿನ ಸ್ವಚ್ಚತೆ ಮಾಡಬೇಕು, ಸಂಚಾರಿ ಶೌಚಾಲಯ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್, ಬೀದಿ ದೀಪಗಳ ಅಳವಡಿಕೆ, ರಸ್ತೆ ದುರಸ್ತಿಕಾರ್ಯ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ಸರಿಯಾಗಿ ಆಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಶ್ರೀ ರಂಗಪ್ಪ, ಶ್ರೀಮತಿ ತುಳಸಿ ಮದ್ದಿನೇನಿ, ಜಂಟಿ ಆಯುಕ್ತರಾದ ಶಿಲ್ಪಾ, ಶ್ರೀನಿವಾಸ್, ಜಗದೀಶ್ ನಾಯ್ಕ್, ಉಪ ಆಯುಕ್ತರಾದ ಯೋಗೇಶ್, ಮುಜರಾಯಿ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ದೇವಸ್ಥಾನದ ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Varthajala, Daily, Bengaluru
0 Comments