ಬೆಂಗಳೂರು, ಮಾ.23: ಸುಸ್ಥಿರ ಅಭಿವೃದ್ಧಿ ಗುರಿ (ಎಸ್ಡಿಜಿ) ಗಳನ್ನು ಸಾಧಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ನಿರ್ಣಾಯಕವಾದುದು ಮತ್ತು ಈ ನಿಟ್ಟಿನಲ್ಲಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ದೊಡ್ಡ ಪಾತ್ರವನ್ನು ವಹಿಸಬೇಕು ಎಂದು ಉಪರಾಷ್ಟ್ರಪತಿ ಶ್ರೀ ಎಂ ವೆಂಕಯ್ಯ ನಾಯ್ಡು ಅವರು ಕರೆಕೊಟ್ಟಿದ್ದಾರೆ.
ಅವರು ಇಂದು ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘದ ವಾರ್ಷಿಕ ಸಭೆಯನ್ನು ವರ್ಚುವಲ್ ಮಾದರಿಯಲ್ಲಿ ಉದ್ಘಾಟಿಸಿ ಮತ್ತು 'ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ಸುಸ್ಥಿರ ಗುರಿಗಳನ್ನು ಸಾಧಿಸುವುದು' ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಿ, ಪ್ರಾಥಮಿಕ, ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ನೆರವಾಗುವ ಅಭ್ಯಾಸಗಳನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಸಂಶೋಧನೆ, ನೀತಿ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಕಾರ್ಯತಂತ್ರಗಳ ಜಾಗೃತಿ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಾಗರಿಕ ಸಮಾಜದೊಂದಿಗೆ ತೊಡಗಿಸಿಕೊಳ್ಳುವಿಕೆಯಂತಹ ವಿಧಾನಗಳ ಮೂಲಕ ಹಲವಾರು ರೀತಿಯಲ್ಲಿ ಕೊಡುಗೆ ನೀಡಬಹುದು ಎಂದು ಅವರು ಹೇಳಿದರು.
17 ಎಸ್ಡಿಜಿಗಳನ್ನು ಒಳಗೊಂಡಿರುವ ಸುಸ್ಥಿರ ಅಭಿವೃದ್ಧಿ ಕುರಿತ ವಿಶ್ವಸಂಸ್ಥೆಯ ಕಾರ್ಯಸೂಚಿ-2030 ಅನ್ನು ಉಲ್ಲೇಖಿಸಿದ ಅವರು, 2021 ರಲ್ಲಿ ಎಸ್ಡಿಜಿ ಸೂಚ್ಯಂಕದಲ್ಲಿ ಭಾರತವು 120 ನೇ ಸ್ಥಾನದಲ್ಲಿತ್ತು ಎಂದು ಹೇಳಿದರು. ವಿವಿಧ ಎಸ್ಡಿಜಿಗಳನ್ನು ಸಾಧಿಸುವಲ್ಲಿ ಬಡತನ ಮತ್ತು ಅನಕ್ಷರತೆಯಂತಹ ಸವಾಲುಗಳನ್ನು ಗೆಲ್ಲುವ ಅಗತ್ಯವನ್ನು ಒತ್ತಿಹೇಳಿದ ಅವರು, ನಾಗರಿಕ ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರು ಈ ಬಗ್ಗೆ ಸಂಘಟಿತ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಸುಮಾರು 1050 ವಿಶ್ವವಿದ್ಯಾನಿಲಯಗಳು, 10,000 ಕ್ಕೂ ಹೆಚ್ಚು ವೃತ್ತಿಪರ ತಾಂತ್ರಿಕ ಸಂಸ್ಥೆಗಳು ಮತ್ತು 42,343 ಕಾಲೇಜುಗಳನ್ನು ಹೊಂದಿರುವ ಭಾರತದ ಉನ್ನತ ಶಿಕ್ಷಣ ಕ್ಷೇತ್ರವು ವಿಶ್ವದ ಮೂರನೇ ಅತಿದೊಡ್ಡ ಕ್ಷೇತ್ರವಾಗಿದೆ ಎಂದ ಉಪರಾಷ್ಟ್ರಪತಿಯವರು, ಇವರೆಲ್ಲರೂ ಗುರಿಗಳ ಸಾಧನೆಗೆ ಕೊಡುಗೆ ನೀಡಿದರೆ, ಅದು ಒಟ್ಟಾರೆ ವಿಶ್ವ ಪರಿಸ್ಥಿತಿಯ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಜ್ಞಾನ ಸೃಷ್ಟಿ, ಅನ್ವಯ ಮತ್ತು ಅದನ್ನು ಪ್ರಪಂಚಕ್ಕೆ ಪಸರಿಸುವಲ್ಲಿ ಭಾರತದ ಅದ್ಭುತ ಗತಕಾಲವನ್ನು ಸ್ಮರಿಸಿದ ಅವರು, ನಮ್ಮ ಜ್ಞಾನ ವ್ಯವಸ್ಥೆಗಳು ಮತ್ತು ಸಂಸ್ಕೃತಿಯ ಬಹುಮುಖತೆ ಹಾಗೂ ಅವುಗಳ ನಿರಂತರ ಮಹತ್ವವು ಅವುಗಳನ್ನು ಶಾಶ್ವತವಾಗಿಸುತ್ತದೆ ಎಂದು ಹೇಳಿದರು. ಖಾಸಗಿ ವಲಯದ ವಿಶ್ವವಿದ್ಯಾಲಯಗಳು ಸೇರಿದಂತೆ ಎಲ್ಲಾ ಭಾರತೀಯ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಉತ್ಕೃಷ್ಟತೆಗೆ ಶ್ರಮಿಸಬೇಕು ಮತ್ತು ಭಾರತವನ್ನು ಮತ್ತೆ ‘ವಿಶ್ವಗುರು’ ಮಾಡಬೇಕೆಂದು ಅವರು ಕರೆಕೊಟ್ಟರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ದೂರದೃಷ್ಟಿಯ ದಾಖಲೆಯಾಗಿದೆ ಎಂದ ಉಪರಾಷ್ಟ್ರಪತಿಯವರು, ಪುಸ್ತಕ ಮತ್ತು ಮನಸ್ಸಿನಲ್ಲಿ ಅದರ ಅನುಷ್ಠಾನವು ಎಸ್ ಡಿ ಜಿ ಕಾರ್ಯಸೂಚಿಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ಭಾರತದ ವಿಶ್ವವಿದ್ಯಾನಿಲಯಗಳು ವಿಶ್ವದ ಅಗ್ರ 10 ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾನ ಪಡೆಯಬೇಕೆಂಬ ತಮ್ಮ "ಗಾಢವಾದ ಆಶಯವನ್ನು" ವ್ಯಕ್ತಪಡಿಸಿದ ಶ್ರೀ ನಾಯ್ಡು, ಎಲ್ಲಾ ವಿಶ್ವವಿದ್ಯಾನಿಲಯಗಳು ಶಿಕ್ಷಣಕ್ಕೆ ಸಮಾನ ಪ್ರವೇಶವನ್ನು ಖಾತ್ರಿಪಡಿಸುವುದರೊಂದಿಗೆ ಸಂಶೋಧನೆ, ಜ್ಞಾನ ಸೃಷ್ಟಿ ಸೇರಿದಂತೆ ಉನ್ನತ ಮಟ್ಟದ ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಲು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹ್ಲೋಟ್, ಎಐಯು ಅಧ್ಯಕ್ಷ ಕರ್ನಲ್ ಡಾ ಜಿ ತಿರುವಾಸಗಂ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಎಐಯು ಪ್ರಧಾನ ಕಾರ್ಯದರ್ಶಿ ಡಾ.ಪಂಕಜ್ ಮಿತ್ತಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Varthajala, Daily, Bengaluru
0 Comments