ಬೆಂಗಳೂರು, ಮಾ.02: ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 110 ಹಳ್ಳಿಗಳಿಗೆ ಸಂಬಂಧಿಸಿದ ರಸ್ತೆಗಳ ಪುನಶ್ಚೇತನ ಕಾರ್ಯ ತ್ವರಿತವಾಗಿ ನಡೆಯುತ್ತಿದ್ದು, ಅದಕ್ಕೆ ಮತ್ತಷ್ಟು ವೇಗ ನೀಡಲು ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಲಹಂಕ ವಿಧಾನಸಭಾ ಕ್ಷೇತ್ರ ಅಟ್ಟೂರು ವಾರ್ಡ್ ವ್ಯಾಪ್ತಿಯ ಅನಂತಪುರ, ಎ.ಎಂ.ಎಸ್ ಲೇಔಟ್ ವ್ಯಾಪ್ತಿಯಲ್ಲಿ ರಸ್ತೆ ಪುನಶ್ಚೇತನ ಕಾರ್ಯ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ನಗರದಲ್ಲಿರುವ ರಸ್ತೆಗಳು ವಾಹನ ಸಂಚಾರಕ್ಕೆ ಸುಗಮ ರೀತಿಯಲ್ಲಿರಬೇಕು. ಈ ಪೈಕಿ ಪ್ರಮುಖ ರಸ್ತೆಗಳಲ್ಲಿ ಡಾಂಬರೀಕರಣ ಹಾಗೂ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ರಸ್ತೆ ಪುನಶ್ಚೇತನ ಕಾರ್ಯ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲಮಂಡಳಿಯಿಂದ ಕುಡಿಯುವ ನೀರು, ಒಳ ಚರಂಡಿ ಕೆಲಸ ಪೂರ್ಣಗೊಂಡು ಪಾಲಿಕೆಯಿಂದ ರಸ್ತೆ ಪುನಶ್ಚೇತನ ಕಾರ್ಯ ಪ್ರಾರಂಭಿಸುವ ಕಡೆ ಪಾದಚಾರಿ ಮಾರ್ಗ ಸೇರಿದಂತೆ ಗುಣಮಟ್ಟದ ರಸ್ತೆ ನಿರ್ಮಣ ಮಾಡಬೇಕು. ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಪಾಲಕ ಇಂಜಿನಿಯರ್ ಸುಧಾಕರ್ ರೆಡ್ಡಿ ಮಾತನಾಡಿ, ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 110 ಹಳ್ಳಿಗಳ ಪೈಕಿ 8 ಹಳ್ಳಿ(ಅನಂತಪುರ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ, ಕೆಂಚೇನಹಳ್ಳಿ, ಹಾರೋಹಳ್ಳಿ, ನಾಗೇನಹಳ್ಳಿ, ವಡೆರಪುರ, ಗೋವಿಂದಪುರ)ಗಳು ಬರಲಿದ್ದು, ವಡೆರಪುರ, ಗೋವಿಂದಪುರ ಹೊರತುಪಡಿಸಿ ಉಳಿದೆಲ್ಲಾ ಹಳ್ಳಿಗಳಲ್ಲಿ ರಸ್ತೆ ಪುನಶ್ಚೇತನ ಕಾರ್ಯ ನಡೆಯುತ್ತಿದೆ.
ಅದರಂತೆ ಜಲಮಂಡಳಿ ಇಲಾಖೆಯಿಂದ ಕುಡಿಯುವ ನೀರು, ಒಳಚರಂಡಿ ಕೆಲಸಕ್ಕಾಗಿ 151 ಕಿ.ಮೀ ಅಗೆದಿದ್ದು, ಅದರಲ್ಲಿ ಪಾಲಿಕೆ ಈಗಾಗಲೇ 60 ಕಿ.ಮೀ ರಸ್ತೆ ಪುನಶ್ಚೇತನ ಕಾರ್ಯ ಮಾಡಿದೆ. ಉಳಿದ 91 ಕಿ.ಮೀ ರಸ್ತೆ ಪುನಶ್ಚೇತನ ಕಾರ್ಯ ಬಾಕಿಯಿದ್ದು, ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಿದರು.
ಪಾಲಿಕೆಯ ಕೆಲಸಕ್ಕೆ ಅಭಿನಂದನೆ:
ಅಟ್ಟೂರು ವಾರ್ಡ್ ವ್ಯಾಪ್ತಿಯ ಎ.ಎಂ.ಎಸ್ ಲೇಔಟ್ ನಲ್ಲಿ ಬರುವ ಎಲ್ಲಾ ಕ್ರಾಸ್ ರಸ್ತೆಗಳಿಗಲ್ಲಿಯೂ ಪಾದಚಾರಿ ಮಾರ್ಗ ಸೇರಿದಂತೆ ಡಾಂಬರೀಕರಣ ಮಾಡಲಾಗಿದೆ. ಇದಕ್ಕೆ, ಸ್ಥಳೀಯ ನಿವಾಸಿಯಾದ ಬೆಳ್ಳಾವೆಯವರು ಪಾಲಿಕೆಯು ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿದ್ದು, ಪಾಲಿಕೆ ಮಾಡಿರುವ ಕೆಲಸಕ್ಕೆ ಅಭಿನಂದನೆ ವ್ಯಕ್ತಪಡಿಸಿದರು.
ಈ ವೇಳೆ ವಲಯ ಜಂಟಿ ಆಯುಕ್ತರಾದ ಪೂರ್ಣಿಮಾ, ವಲಯ ಮುಖ್ಯ ಇಂಜಿನಿಯರ್ ರಂಗನಾಥ್ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
Varthajala daily, Bengaluru
0 Comments