ಶಿವಮೊಗ್ಗ, ಮಾ.04: ನಾಳೆಯಿಂದ ಮಾರ್ಚ್ 15ರವರೆಗೆ 10 ದಿನಗಳ ಕಾಲ ಆಗುಂಬೆ ಘಾಟ್ ರಸ್ತೆಯನ್ನು ಬಂದ್ ಮಾಡಲಾಗುತ್ತಿದೆ. ವಿವಿಧ ದುರಸ್ಥಿ ಕಾಮಗಾರಿಗಳ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ಈ ಹಿನ್ನಲೆಯಲ್ಲಿ ವಾಹನ ಸವಾರರು ಆಗುಂಬೆ ಘಾಟ್ ರಸ್ತೆಯನ್ನು ಬಿಟ್ಟು ಪರ್ಯಾಯ ಮಾರ್ಗದ ಮೂಲಕ ಸಾಗುವಂತೆ ಜಿಲ್ಲಾಡಳಿತ ವತಿಯಿಂದ ಸೂಚಿಸಲಾಗಿದೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟಿಯಲ್ಲಿ (33.00 ರಿಂದ 51.60 ರವರೆಗೆ) ನಿಯತಕಾಲಿಕ ದುರಸ್ತಿ ಹಿನ್ನೆಲೆಯಲ್ಲಿ ಮಾ.05 ರಿಂದ 15 ರವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 7 ಗಂಟೆವರೆಗೆ ಕೆಳಕಂಡ ಪರ್ಯಾಯ ಮಾರ್ಗಗಳಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿ ಆದೇಶಿಸಿದ್ದಾರೆ.
ಪ್ರಸ್ತುತ ಸಂಚರಿಸುತ್ತಿರುವ ಮಾರ್ಗ ರಾಷ್ಟ್ರೀಯ ಹೆದ್ದಾರಿ 169ಎ ಆಗುಂಬೆ ಘಾಟ್, ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಉಡುಪಿ-ಮ0ಗಳೂರು ಆಗಿದ್ದು, ಇದಕ್ಕೆ ಪರ್ಯಾಯ ಮಾರ್ಗವಾಗಿ ಲಘುವಾಹನಗಳು-ಶಿವಮೊಗ್ಗ-ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಮಾಳಾ ಘಾಟ್-ಕಾರ್ಕಳ-ಉಡುಪಿ (ಎನ್ಹೆಚ್ 169) ಮುಖಾಂತರ ಚಲಿಸುವುದು. ಹಾಗೂ ಭಾರೀ ವಾಹನಗಳು-ಶಿವಮೊಗ್ಗ-ಆಯನೂರು-ಆನಂದಪುರ-ಸಾಗರ-ಹೊನ್ನಾವರ (ಎನ್ಹೆಚ್ 69 ಅಥವಾ ಎನ್ಹೆಚ್ 206) ಮುಖಾಂತರ ಚಲಿಸಬೇಕೆಂದು ಆದೇಶಿಸಲಾಗಿದೆ.
Varthajala, Daily, Bengaluru
0 Comments